ಮಂಗಳವಾರ, ಜೂನ್ 15, 2021
25 °C

ಪಕ್ಷಿಯ ಹಾಡು, ರಾಜನ ಪಾಡು

ಡಿ.ಎನ್. ಶ್ರೀನಾಥ್ Updated:

ಅಕ್ಷರ ಗಾತ್ರ : | |

ಪಕ್ಷಿಯ ಹಾಡು, ರಾಜನ ಪಾಡು

ಒಂದು ಪಕ್ಷಿ. ಒಮ್ಮೆ ಅದು ರಾಜನ ಅರಮನೆಗೆ ಹಾರಿ ಬಂತು. ಅಲ್ಲಿ ಅದಕ್ಕೆ ಬಟ್ಟೆಯಿಂದ ಮಾಡಿದ್ದ ಒಂದು ಗೊಂಬೆ ಸಿಕ್ಕಿತು. ಅದು ರಾಜನ ಗೊಂಬೆಯನ್ನು ತೆಗೆದುಕೊಂಡು ಹಾಡಿತು-

ರಾಜನ ಅರಮನೆಯಲ್ಲಿ ಸಿಕ್ಕಿತು ನನಗೊಂದು ಗೊಂಬೆ

ರಾಜನ ಅರಮನೆಯಲ್ಲಿ ಸಿಕ್ಕಿತು ನನಗೊಂದು ಗೊಂಬೆ

ರಾಜ ಪಕ್ಷಿಯ ಹಾಡನ್ನು ಕೇಳಿ ರೇಗಿ ಹೇಳಿದ, ‘ಪಕ್ಷಿಯಿಂದ ಗೊಂಬೆಯನ್ನು ಕಸಿದುಕೊಳ್ಳಿ.’

ಪಕ್ಷಿಯ ಕೈಯಿಂದ ಸೈನಿಕರು ಗೊಂಬೆಯನ್ನು ಕಸಿದುಕೊಂಡರು. ಆಗ ಪಕ್ಷಿ ಹಾಡಿತು-

ಹಸಿವಾಯಿತು ರಾಜನಿಗೆ, ಕಸಿದ ನನ್ನ ಗೊಂಬೆಯನ್ನು

ಹಸಿವಾಯಿತು ರಾಜನಿಗೆ, ಕಸಿದ ನನ್ನ ಗೊಂಬೆಯನ್ನು

ತಾನು ದುರಾಸೆಯವನು ಎಂಬ ಭಾವನೆ ಇತರರಿಗೆ ಬರಬಹುದು ಎಂದು ಆಲೋಚಿಸಿದ ರಾಜ, ತನ್ನ ಸೈನಿಕರಿಗೆ ಹೇಳಿದ: ‘ಪಕ್ಷಿಗೆ ಗೊಂಬೆಯನ್ನು ಮರಳಿ ಕೊಡಿ.’

ಸೈನಿಕರು ಗೊಂಬೆಯನ್ನು ಪಕ್ಷಿಗೆ ಮರಳಿ ಕೊಟ್ಟಾಗ, ಪಕ್ಷಿ ಹಾಡಿತು-

ರಾಜ ಹೆದರಿದ ನನಗೆ

ಮರಳಿ ಕೊಟ್ಟ ಗೊಂಬೆಯನು

ರಾಜ ಹೆದರಿದ ನನಗೆ

ಮರಳಿ ಕೊಟ್ಟ ಗೊಂಬೆಯನು

ರಾಜನಿಗೆ ಈಗ ಎಷ್ಟು ಸಿಟ್ಟು ಬಂತೆಂದರೆ, ಅವನು ಆ ಪಕ್ಷಿಯನ್ನು ಕೊಂದು ಹಾಕಿದ. ಅದನ್ನು ತುಂಡು-ತುಂಡು ಮಾಡಿ ಆದೇಶಿಸಿದ, ‘ಈ ತುಂಡುಗಳ ಮೇಲೆ ಅರಿಶಿನ, ಉಪ್ಪು ಮತ್ತು ಮೆಣಸಿನ ಪುಡಿ ಹಾಕಿ. ನಾನಿದನ್ನು ತಿನ್ನುತ್ತೇನೆ.’ ರಾಜನ ಮಾತನ್ನು ಕೇಳಿ ಪಕ್ಷಿ ಹಾಡಿತು-

ನಾನಿಂದು ಕೆಂಪು-ಹಳದಿಯಾದೆ,

ನಾನು ಕೆಂಪು-ಹಳದಿಯಾದೆ

ನಾನಿಂದು ಕೆಂಪು-ಹಳದಿಯಾದೆ,

ನಾನು ಕೆಂಪು-ಹಳದಿಯಾದೆ.

ರಾಜ ಹೇಳಿದ, ‘ಅರೇ, ಇನ್ನೂ ಈ ಪಕ್ಷಿ ಜೀವಂತವಾಗಿದೆ, ಇದಕ್ಕೆ ಒಗ್ಗರಣೆ ಹಾಕಿ, ಹುರಿಯಿರಿ. ಇದು ಹಾಡುವುದನ್ನು ನಿಲ್ಲಿಸುವಂತೆ ಮಾಡಿ.’ ರಾಜನ ಮಾತನ್ನು ಕೇಳಿ ಪಕ್ಷಿ ಹಾಡಿತು-

ನಾನಿಂದು ಸೊಂಯ್-ಸೊಂಯ್ ಎಂದು ಬೆಂದೆ

ಸೊಂಯ್-ಸೊಂಯ್ ಎಂದು ಬೆಂದೆ

ನಾನಿಂದು ಸೊಂಯ್-ಸೊಂಯ್ ಎಂದು ಬೆಂದೆ

ಸೊಂಯ್-ಸೊಂಯ್ ಎಂದು ಬೆಂದೆ.

ರಾಜನ ಸಿಟ್ಟು ನೆತ್ತಿಗೇರಿತು; ಆ ಸಿಟ್ಟಿನ ಭರದಲ್ಲಿ ಪಕ್ಷಿಯನ್ನು ತಿನ್ನಲಾರಂಭಿಸಿದ. ಪಕ್ಷಿ ರಾಜನ ಗಂಟಲಿನಲ್ಲಿ ಹೋಗುವಾಗ ಹಾಡಿತು-

ನಾನಿಂದು ಹೋದೆ ಸಣ್ಣ ಓಣಿಯಲಿ

ನಾನು ಹೋದೆ ಸಣ್ಣ ಓಣಿಯಲಿ

ನಾನಿಂದು ಹೋದೆ ಸಣ್ಣ ಓಣಿಯಲಿ

ನಾನು ಹೋದೆ ಸಣ್ಣ ಓಣಿಯಲಿ

ರಾಜ ತನ್ನ ಸೈನಿಕರಿಗೆ ಹೇಳಿದ, ‘ಈಗ ಇದು ನನ್ನ ಹೊಟ್ಟೆಗೆ ಹೋಗಲಿ, ಆಮೇಲೆ ಇದು ಹೇಗೆ ಹಾಡುತ್ತದೆ, ನೋಡೋಣ?’ ಪಕ್ಷಿ ರಾಜನ ಹೊಟ್ಟೆಯೊಳಗೆ ಹೋಯಿತು, ಆದರೆ ಅದು ಅಲ್ಲಿಂದಲೂ ಹಾಡಿತು-

ನಾನಿಂದು ಹೋದೆ ರಾಜನ ಅರಮನೆಗೆ

ನಾನು ಹೋದೆ ರಾಜನ ಅರಮನೆಗೆ

ನಾನಿಂದು ಹೋದೆ ರಾಜನ ಅರಮನೆಗೆ

ನಾನು ಹೋದೆ ರಾಜನ ಅರಮನೆಗೆ.

ರಾಜ ಸಿಟ್ಟಿನಿಂದ ಬೆಂಕಿಯಾದ. ಅವನು ಸೈನಿಕರನ್ನು ತನ್ನ ಸುತ್ತಮುತ್ತ ನಿಲ್ಲಿಸಿ ಆದೇಶಿಸಿದ, ‘ಈ ಪಕ್ಷಿ ನನ್ನ ಬಾಯಿಯಿಂದ ಹೊರ ಬಂದಾಗ, ಪಕ್ಷಿಯನ್ನು ಕೊಂದು ಹಾಕಿ.’ ನಂತರ ರಾಜ ಕೆಳಗೆ ಕೂತ, ಸೈನಿಕರು ಕತ್ತಿ ಹಿಡಿದು ರಾಜನನ್ನು ಸುತ್ತುವರೆದು ನಿಂತರು. ಈ ನಡುವೆ ಪಕ್ಷಿ ಹೊರ ಬಂದು ರಾಜನ ಬೆನ್ನಿನ ಮೇಲೆ ಕೂತಿತು. ಸೈನಿಕರು ಪಕ್ಷಿಯನ್ನು ಕತ್ತಿಯಿಂದ ಕತ್ತರಿಸಲು ಹೋದಾಗ, ಪಕ್ಷಿ ಪುರ್‍ರನೆ ಹಾರಿ ಹೋಯಿತು. ಕತ್ತಿಯ ಹೊಡೆತ ರಾಜನ ಬೆನ್ನಿಗೆ ಬಿತ್ತು, ಅವನ ಬೆನ್ನು ತುಂಡಾಯಿತು.

ಪಕ್ಷಿ ಹಾರಿ ಮರದ ಮೇಲೆ ಹೋಗಿ ಕೂತು ಹಾಡಿತು-

ನನಗೇನೂ ಆಗಲಿಲ್ಲ

ರಾಜನ ಬೆನ್ನು ತುಂಡಾಯಿತು

ನನಗೇನೂ ಆಗಲಿಲ್ಲ

ರಾಜನ ಬೆನ್ನು ತುಂಡಾಯಿತು

ನಂತರ ಪಕ್ಷಿ ಆ ರಾಜ್ಯದಿಂದ ದೂರದ ಕಾಡಿಗೆ ಹಾರಿ ಹೋಯಿತು.

(ಹಿಂದಿಯಿಂದ) 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.