ಗುರುವಾರ , ಮೇ 28, 2020
27 °C

ಎನ್ನೊಳಗೆ ನೀನಡಗಿ...

ಡಿ.ಪಿ. ಪ್ರಕಾಶ್ Updated:

ಅಕ್ಷರ ಗಾತ್ರ : | |

ಎನ್ನೊಳಗೆ ನೀನಡಗಿ...

ಪ್ರಕೃತಿಯ ಅದ್ಭುತ ಸೃಷ್ಟಿ ಮನುಷ್ಯ. ಸ್ವ೦ತಿಕೆಯಿಂದ ಯೋಚಿಸುವ ಹಾಗೂ ಸರಿ- ತಪ್ಪು ಯಾವುದೆ೦ಬುದನ್ನು ನಿರ್ಧರಿಸುವ ಶಕ್ತಿಯಿರುವುದರಿ೦ದಲೇ ಜಗದ ಜೀವರಾಶಿಯಲ್ಲಿ ಶ್ರೇಷ್ಠ ಸ್ಥಾನಮಾನ ಪಡೆದವನು. ಸೃಷ್ಟಿಯ ಅವಿಭಾಜ್ಯ ಅ೦ಗವಾಗಿದ್ದು, ಅದನ್ನು ನೈಜ ದೃಷ್ಟಿಯಿಂದ ನೋಡಿ, ಅನುಭವಿಸಿ, ಅದರ ರಹಸ್ಯವನ್ನರಿಯುವ ಅದ್ಭುತ ಶಕ್ತಿಯೂ ಆತನಿಗಿದೆ. ಅಂಧಾನುಕರಣೆಗೆ ದಾಸನಾಗದೆ ವಿವೇಚನಾ ಶಕ್ತಿಯಿ೦ದ ಮನಸ್ಸನ್ನು ಕಾಯ್ದುಕೊ೦ಡರೆ ಮಾತ್ರ ಈ ಅನ್ವೇಷಣೆ ಸಾಧ್ಯ. ವಿಜ್ಞಾನ ಮತ್ತು ತ೦ತ್ರಜ್ಞಾನದ ಜೊತೆಗೆ ವೈಜ್ಞಾನಿಕ ಮನೋಭಾವದಿ೦ದ ಬದುಕುವುದು ಹೇಗೆ ಎಂಬುದು ಈ ಯುಗದ ಮುಖ್ಯ ಪ್ರಶ್ನೆ. ಅವೈಜ್ಞಾನಿಕ ಹಾಗೂ ಅತಾರ್ಕಿಕ ನ೦ಬಿಕೆಗಳ ಜಾಲಕ್ಕೆ ಸಿಲುಕದೆ ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಇಂದಿನ ಒ೦ದು ಬಹು ದೊಡ್ಡ ಸವಾಲು.

ಹಲವು ವಿರೋಧಾಭಾಸದ ನ೦ಬಿಕೆಗಳಿ೦ದ ಮುತ್ತಿಕೊ೦ಡಿರುವ ನಮ್ಮ ನಾಗರಿಕತೆಯು ಸಹಜತೆಯ ಹಾದಿಯಲ್ಲಿ ಹೆಜ್ಜೆ ಹಾಕಲು ಹೆಣಗುತ್ತಿದೆ. ಸ್ವ೦ತಿಕೆ ಕಳೆದುಕೊ೦ಡಿರುವ ಬದುಕುಗಳು ಪೂರ್ವಗ್ರಹಪೀಡಿತ ನ೦ಬಿಕೆಗಳಿ೦ದ ಅಸಹಜ ಹಾದಿ ಹಿಡಿದಿವೆ. ಆತ್ಮವಿಶ್ವಾಸ ಇಲ್ಲದಾಗಿ ಒ೦ದು ರೀತಿಯ ಅನೂಹ್ಯ ಭಯದ ಅಡಿ ಹೂತು ಹೋಗುತ್ತಿವೆ. ಪರಿಣಾಮವಾಗಿ ನಮ್ಮ ಜೀವನ ನಿಸರ್ಗಮುಖಿಯಾಗಿರದೆ ಹೇರಲ್ಪಟ್ಟ ಹುಸಿ ನ೦ಬಿಕೆಗಳಲ್ಲಿ ಬ೦ಧಿತವಾಗಿದೆ. ಇ೦ಥ ಘಳಿಗೆಯಲ್ಲಿ ನಮಗೆ ಎದುರಾಗುವ ಪ್ರಶ್ನೆ– ಸರ್ವ ಸ್ವತ೦ತ್ರವಾಗಿ ಸ್ವಚ್ಛ, ನಿರಾಳ ಬದುಕನ್ನು ಕಟ್ಟಿಕೊಳ್ಳುವುದು ಹೇಗೆ ಎಂಬುದು. ಮಾನಸಿಕ ಗುಲಾಮಗಿರಿಯಿಂದ ಇಂದಿಗೂ ನರಳುತ್ತಿರುವ ಮಾನವ ಕುಲಕ್ಕೆ ಒ೦ದು ಮಾದರಿ ಜೀವನದ ಸಾಧ್ಯತೆಯನ್ನು ತೋರಿಸಿದ ಬಸವಣ್ಣನವರ ವಿಚಾರಗಳಲ್ಲಿ ಈ ಪ್ರಶ್ನೆಗೆ ಸಮರ್ಪಕವಾದ, ಸಾರ್ವಕಾಲಿಕವಾದ ಉತ್ತರವಿದೆ.

ಮಾನಸಿಕ ಗಟ್ಟಿತನವಿದ್ದರೆ ಮಾತ್ರ ಜೀವನವನ್ನು ಸರಳವಾಗಿ, ಸಹಜವಾಗಿ ಹಾಗೂ...

ಅರ್ಥವತ್ತಾಗಿ ಬದುಕಲು ಸಾಧ್ಯ ಎ೦ಬುದು ಬಸವಣ್ಣನವರ ನಿಲುವು. ಅವರು ಜೀವನವನ್ನು ಕಾಲ ಮತ್ತು ನಿಸರ್ಗದ ನೆಲೆಗಟ್ಟಿನಲ್ಲಿ ಸಹಜವಾಗಿ ಅರಳಲು ಬಿಡುತ್ತಾರೆ. ವಾಸ್ತವದ ಭೂಮಿಕೆಯ ಮೇಲೆ ಪ್ರತಿಯೊ೦ದು ಸ೦ಗತಿಯನ್ನು ಪರಿಭಾವಿಸುತ್ತಾರೆ. ಬದುಕಿನ ಬದಲಾವಣೆಗಳನ್ನು ಸಹಜವಾಗಿ ಸ್ವೀಕರಿಸುತ್ತಾರೆ. ಮನಸ್ಸನ್ನು ಸರ್ವ ಸ್ವತ೦ತ್ರವಾಗಿರುವ೦ತೆ ನೋಡಿಕೊಳ್ಳುತ್ತಾರೆ. ನ೦ಬಿಕೆ, ತೀರ್ಮಾನ ಹಾಗೂ ಕ್ರಿಯೆಗಳಲ್ಲೆಲ್ಲಾ ವೈಚಾರಿಕ ಮನೋಭಾವ ಉಳಿಸಿಕೊಳ್ಳುತ್ತಾರೆ. ಅವು ಸಹಜ ಗುಣಗಳೆ೦ಬ೦ತೆ ತಮ್ಮ ವ್ಯಕ್ತಿತ್ವದಲ್ಲಿ ತು೦ಬಿಕೊಳ್ಳುತ್ತಾರೆ. ನಿಸರ್ಗದೊ೦ದಿಗೆ ಒಡನಾಡುವ ಅವರ ಮನಸ್ಸು ಯಾವುದೇ ಅವೈಜ್ಞಾನಿಕ ನ೦ಬಿಕೆಗಳಿಗೆ ಅ೦ಟಿಕೊಳ್ಳುವುದಿಲ್ಲ. ಇ೦ತಹ ಆ೦ತರಿಕ ಗಟ್ಟಿತನವೇ ಬಸವಣ್ಣನವರ ವ್ಯಕ್ತಿತ್ವದ ಮೂಲ ಶಕ್ತಿ. ಅದೇ ಅವರ ಬದುಕಿನ ಅತ್ಯಮೂಲ್ಯ ಬ೦ಡವಾಳ. ಇದು ಸಹಜ ಬದುಕನ್ನು ಭಗ್ನಗೊಳಿಸುವ ಯಾವುದೇ ಶಕ್ತಿಯನ್ನು ಬಗ್ಗುಬಡಿಯುವ ಸಾಧನವೂ ಹೌದು. ಜೀವನದ ಧ್ಯೇಯಗಳನ್ನು ಪಲ್ಲಟಗೊಳಿಸುವ ಆಮಿಷಗಳನ್ನು ಅವರು ಸ೦ಭಾಳಿಸಿದ ರೀತಿ ಜಗತ್ತಿನಲ್ಲಿ ಇ೦ದಿಗೂ ಕಾಣಸಿಗುವ ಒ೦ದು ಸು೦ದರ ಹಾಗೂ ಅತಿ ವಿಶಿಷ್ಟ ಜೀವನಶೈಲಿ. ಬಸವಣ್ಣನವರ ಈ ವಚನ ಗಮನಿಸಿ:

ಬ್ರಹ್ಮ ಪದವಿಯನೊಲ್ಲೆ, ವಿಷ್ಣು ಪದವಿಯನೊಲ್ಲೆ

ರುದ್ರ ಪದವಿಯನೊಲ್ಲೆ, ನಾನು

ಮತ್ತಾವ ಪದವಿಯನೊಲ್ಲೆನಯ್ಯಾ, ಕೂಡಲಸಂಗಮದೇವಾ,

ನಿಮ್ಮ ಸದ್ಭಕ್ತರ ಪಾದವನರಿದಿಪ್ಪ ಮಹಾಪದವಿಯ ಕರುಣಿಸಯ್ಯಾ.

ಬ್ರಹ್ಮ ಪದವಿ, ವಿಷ್ಣು ಪದವಿ ಮತ್ತು ರುದ್ರ ಪದವಿ - ಮನುಷ್ಯನ ಊಹೆಗೂ ನಿಲುಕದ ಪದವಿಗಳು. ಜಗತ್ತನ್ನು ಸೃಷ್ಟಿಸುವ, ಅದನ್ನು ನಿರ್ವಹಿಸುವ ಹಾಗೂ ಲಯಗೊಳಿಸುವ ಪರಮ ಶಕ್ತಿ ಇರುವುದು ಈ ಮೂರು ದೇವತೆಗಳಿಗೆ ಎಂಬುದು ಜನಸಾಮಾನ್ಯರ ನಂಬಿಕೆ. ಅಂಥ ಪದವಿಗಳಾವವೂ ತಮಗೆ ಬೇಡವೆನ್ನುವ ಬಸವಣ್ಣನವರಿಗೆ ಅಂತಃಸತ್ವವೇ ಬದುಕಿನ ದಿಕ್ಸೂಚಿ. ಕಾಲನ ಗತಿಯಲ್ಲಿ ಅವಸಾನ ಹೊ೦ದುವಂಥ ಪದವಿ, ಅಂತಸ್ತು, ಸಿರಿ ಸ೦ಪತ್ತುಗಳು ಅವರನ್ನು ಆಕರ್ಷಿಸುವ ಸ೦ಗತಿಗಳೇ ಅಲ್ಲ. ಹೀಗಾಗಿ ಇವುಗಳಿಗಾಗಿ ಹಪಹಪಿಸುವಲ್ಲಿ ಯಾವ ಅರ್ಥವೂ ಇಲ್ಲ. ಜೀವನಕ್ಕೆ ಯಾವುದು ಬೇಕು ಯಾವುದು ಬೇಡ ಎ೦ಬುದನ್ನು ನಿರ್ಧರಿಸುವ ಆ೦ತರಿಕ ಸ್ವಾತ೦ತ್ರ್ಯದಲ್ಲೇ ಊರ್ಧ್ವಮುಖಿ ಬೆಳವಣಿಗೆ ಇದೆ. ಆದ್ದರಿಂದಲೇ, ‘ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯಾ. ಇದ ನೆಚ್ಚಿ ಕೆಡಬೇಡ’ ಎನ್ನುತ್ತಾರೆ. ಬದುಕಿಗೆ ಬೇಕಿರುವುದೇನು ಎಂಬ ಸ್ಪಷ್ಟತೆ ಇರುವುದರಿಂದಲೇ ಯಾವ ಮುಲಾಜಿಲ್ಲದೆ ಯಾವುದೇ ಬಗೆಯ ಪದವಿ- ಸಿರಿ- ಸ೦ಪತ್ತು ಬೇಡವೆನ್ನುತ್ತಾರೆ. ಹೇಗೆ ಮೇಲೇರಿಸುತ್ತವೆಯೋ ಹಾಗೇ ಕೆಳಗಿಳಿಸುವ ಅವುಗಳ ಹಿಂದೆ ಬಿದ್ದಲ್ಲಿ ಬದುಕು ನರಕವಾಗುತ್ತದೆ ಎಂದು ಎಚ್ಚರಿಸುತ್ತಾರೆ.

ಹಾಗಾದರೆ ಬದುಕಿನ ನಿಜವಾದ ಮೌಲ್ಯ ಎಲ್ಲಿದೆ? ವಚನದ ಕೊನೆಗೆ ಹೇಳುವ 'ನಿಮ್ಮ ಸದ್ಭಕ್ತರ ಪಾದವನರಿದಿಪ್ಪ ಮಹಾಪದವಿಯ ಕರುಣಿಸಯ್ಯಾ' ಎನ್ನುವಲ್ಲಿ ಶರಣರ ಜ್ಞಾನವನ್ನು ಅರಿಯುವುದರಲ್ಲಿ, ಅರಿತು ಆಚರಿಸುವುದರಲ್ಲಿ ಸಾರ್ಥಕ ಬದುಕಿನ ದಾರಿಯಿದೆ(ಇಲ್ಲಿ ಪಾದ ಎಂದರೆ ಜ್ಞಾನ). ಮನುಷ್ಯನಲ್ಲಿ ಆ೦ತರಿಕ ಸ್ವಾತ೦ತ್ರ್ಯ ಬೆಳೆಸಲು ಶರಣರ ವಚನಗಳು ಹೆಗಲು ಶಕ್ತಿಯಾಗಿ ನಿಲ್ಲುತ್ತವೆ. ವಚನಗಳ ಮೂಲಶೃತಿ ಹಿಡಿದರೆ ಜೀವನದ ಉದಾತ್ತೀಕರಣದ ಮಾರ್ಗ ಗೋಚರಿಸುತ್ತದೆ ಎ೦ಬುದನ್ನು ಪರೋಕ್ಷವಾಗಿ ತಿಳಿಸುತ್ತಾರೆ. ಹೀಗೆ ಶರಣರ ಸ೦ಗ, ಶರಣರ ಜೊತೆಗಿನ ಮುಕ್ತ ಸಂವಾದಗಳು ವಿವಿಧ ಸಾಧ್ಯತೆಗಳನ್ನು ತೆರೆದಿಡುವ ಮಾರ್ಗಗಳಾದವು. ಈ ವಚನದಲ್ಲಿ ಅ೦ದಿನ ಅನುಭವ ಮ೦ಟಪದ ಜ೦ಗಮ ಶಕ್ತಿಯ (ಚೈತನ್ಯ ಶಕ್ತಿ) ಸಾರ್ಥಕತೆಯನ್ನು ಸ್ಪಷ್ಟವಾಗಿ ಕಾಣಬಹುದು. ಅನುಭವ ಮ೦ಟಪದಲ್ಲಿ ಜರುಗಿದ ಚರ್ಚೆಗಳು ಆ೦ತರಿಕ ಸ್ವಾತ೦ತ್ರ್ಯ ಕಾಪಾಡಲು ಪೂರಕವಾಗಿದ್ದವು. ಆದ್ದರಿ೦ದಲೇ ಚನ್ನಬಸವಣ್ಣನವರು ಹೇಳುತ್ತಾರೆ:

ಪಾತಾಳದಗ್ಘವಣಿಯ ನೇಣಿಲ್ಲದೆ ತೆಗೆಯಬಹುದೆ? ಸೋಪಾನದ ಬಲದಿಂದಲ್ಲದೆ? ಶಬ್ದ ಸೋಪಾನವ ಕಟ್ಟಿ ನಡೆಯಿಸಿದರು ಪುರಾತರು, ದೇವಲೋಕಕ್ಕೆ ಬಟ್ಟೆ ಕಾಣಿರೋ.

ಮರ್ತ್ಯರ ಮನದ ಮೈಲಿಗೆಯ ಕಳೆಯಲೆಂದು ಗೀತ ಮಾತೆಂಬ ಜ್ಯೋತಿಯ ಬೆಳಗಿ ಕೊಟ್ಟರು, ಕೂಡಲ ಚೆನ್ನಸಂಗನ ಶರಣರು.

ಶರಣರ ಅನುಭಾವದ ಮೂಸೆಯಲ್ಲಿ ಅರಳಿದ ವಚನಗಳು ಶಬ್ದ ಸೋಪಾನದಂತೆ! ಅಂದರೆ ಶಬ್ದಗಳಲ್ಲಿ ಕಟ್ಟಿದ ಮೆಟ್ಟಿಲುಗಳು! ಇವು ಒಳಮನಸ್ಸನ್ನು ಜಾಗೃತಗೊಳಿಸಿ ಅರಿವಿನ ಶಕ್ತಿ ಹೆಚ್ಚಿಸುತ್ತವೆ. ಈ ಅರಿವಿನಲ್ಲಿ ಪ್ರಗತಿ ಇದೆ. ವ್ಯಕ್ತಿತ್ವದ ವಿಕಾಸವಿದೆ. ಇದೇ ನಮ್ಮನ್ನು ಮೇಲೆತ್ತುವ ಜಾಗೃತ ಶಕ್ತಿ! ಅಂತರಂಗದ ಕಣ್ಣು ತೆರೆಸುವ ದಿವ್ಯ ದೀಪ್ತಿ! ಆದುದರಿಂದಲೇ ನಮ್ಮ ಅಂತರಾತ್ಮದ ದೇವಲೋಕಕ್ಕೆ ಹಾಕಿದ ರಹದಾರಿ ಶರಣರ ಸೂಳ್ನುಡಿಗಳು. ಬೌದ್ಧಿಕ ಸ್ವಾತಂತ್ರ್ಯಕ್ಕೆ ಸಂಪೂರ್ಣ ಒತ್ತು ನೀಡಿದ ಶರಣರು ಆಲೋಚನೆಯ ಹೊಸ ದಿಗಂತಗಳನ್ನು ತೆರೆದು ತೋರಿದರು. ಜೀವನದ ಅತ್ಯಂತ ಕಠಿಣ ಸನ್ನಿವೇಶಗಳಲ್ಲಿಯೂ ಅವರು ಪರದಾಡದೇ ದಿಟ್ಟತನದಿಂದ ಬದುಕಲು ಸಾಧ್ಯವಾಯಿತು. ಅಂತೆಯೇ ಅವರ ವಚನಗಳ ಸಾಲು ಸಾಲಿನಲ್ಲೂ ಬದುಕನ್ನು ವಾಸ್ತವದ ನೆಲೆಯಲ್ಲಿ ಗ್ರಹಿಸುವ ಧ್ಯಾನವಿದೆ.

ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬಾರದೆಂಬುದೇ ಬಸವಣ್ಣನವರ ನಿಲುವಾಗಿತ್ತು. ಇದೇ ಅವರು ಹಾಕಿದ ಆಂತರಿಕ ಸ್ವಾತಂತ್ರ್ಯದ ಅಡಿಪಾಯ. ಬುದ್ಧ ಕೂಡ ‘ಪ್ರಶ್ನಿಸದೆ ಏನನ್ನೂ ಒಪ್ಪಬೇಡ, ನಾನು ಹೇಳಿದ್ದನ್ನು ಸಹಿತ’ ಎಂದು ತನ್ನ ಕೊನೆಯಲ್ಲಿ ಭಿಕ್ಕುಗಳಿಗೆ ಹೇಳಿದ್ದರು. ಹಾಗೆ ನಿರ್ಭಿಡೆಯಿಂದ ಪ್ರಶ್ನಿಸುವುದನ್ನು ಕಲಿಸಿದರು ಬಸವಣ್ಣ. ಯಾವುದಕ್ಕೆ ಧರ್ಮದ ಹೊದಿಕೆ ಹಾಕಿ ಪ್ರಶ್ನಾತೀತವೆಂದು ಹಣೆಪಟ್ಟಿ ಕಟ್ಟಲಾಗಿತ್ತೋ ಅದೆಲ್ಲವನ್ನೂ ಒರೆಗೆ ಹಚ್ಚಿ ನೋಡುವ ಧೈರ್ಯ ತುಂಬಿದರು. ‘ಹೊಲೆಯೊಳಗೆ ಹುಟ್ಟಿ ಕುಲವನರಸುವರೇ?’, ‘ಕರ್ಣದೊಳಗೆ ಜನಿಸಿದವರುಂಟೆ ಜಗದೊಳಗೆ?’, ‘ದಯವಿಲ್ಲದ ಧರ್ಮವದೇವುದಯ್ಯ?’, ‘ಶಾಸ್ತ್ರ ಘನವೆಂಬೆನೆ? ಕರ್ಮವ ಭಜಿಸುತ್ತಿದೆ…’, ‘ಬತ್ತುವ ಜಲವ, ಒಣಗುವ ಮರವ ನೆಚ್ಚಿದವರು ನಿಮ್ಮನೆತ್ತಬಲ್ಲರು?’, ‘...ಸಮಾಜದ ವ್ಯವಸ್ಥೆಯನ್ನು ಹಾಳುಗೆಡವಿದ ಸಂಪ್ರದಾಯಗಳನ್ನು, ಧರ್ಮದ ಹೆಸರಿನಲ್ಲಡಗಿದ ಕ್ರೌರ್ಯವನ್ನು, ದೇವರ ಹಿಂದೆ ಅವಿತ ಮೂಢನಂಬಿಕೆಗಳನ್ನು ನಿರ್ದಾಕ್ಷಿಣ್ಯವಾಗಿ, ನಿರ್ಭೀತಿಯಿಂದ ಖಂಡಿಸಿದರು. ಆ ಮೂಲಕ ವೈಚಾರಿಕತೆಗೆ ಚಾಲನೆ ಕೊಟ್ಟರು. ಆಂತರಿಕ ಸ್ವಾತಂತ್ರ್ಯಕ್ಕೆ ಮುನ್ನುಡಿ ಬರೆದರು.

ಮನುಷ್ಯನಲ್ಲಿ ಅಡಗಿದ ಆಷಾಢಭೂತಿತನವನ್ನು ಕೂಡ ಅವರ ವೈಚಾರಿಕ ಮನಸ್ಸು ಪ್ರಶ್ನಿಸದೆ ಬಿಡಲಿಲ್ಲ. ‘ತನ್ನ ವಿಚಾರಿಸಲೊಲ್ಲದು, ಇದಿರ ವಿಚಾರಿಸಹೋಹುದೀ ಮನವು’, ‘ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ’, ‘ಮತಿಗೆಟ್ಟೆನು ಮನದ ವಿಕಾರದಿಂದ’, ‘ಕಾಯವಿಕಾರ ಕಾಡಿಹುದಯ್ಯ’, ‘ಸಂಸಾರ ಸಂಗವ ಬಿಡದು ನೋಡೆನ್ನ ಮನವು’… ಹೀಗೆ ಬಸವಣ್ಣನವರು ಮನುಷ್ಯನ ಸಹಜತೆಯನ್ನು ತಮ್ಮ ಆತ್ಮಾವಲೋಕನದ ಮೂಲಕ ಬಿಚ್ಚಿಡುವ ಬಗೆಯೇ ಅನನ್ಯ. ಯಾವ ಸೋಗಲಾಡಿತನಕ್ಕೂ ಅವರಲ್ಲಿ ಆಸ್ಪದವಿರಲಿಲ್ಲ. ಆಗಲೇ ಮನಸ್ಸು ನಗ್ನವಾಗುವುದು. ನಿಸರ್ಗಕ್ಕೆ ಹತ್ತಿರವಾಗುವುದು.

ಈ ಜಗತ್ತನ್ನು ಅನುಭವಿಸಲು ಹೇಗೆ ಅಸಹಜ ನಂಬಿಕೆಗಳಿಂದ ಹೊರತಾದ ಪ್ರಾಂಜಲ ಮನಸ್ಸಿರಬೇಕೋ ಹಾಗೆಯೇ ಪರಮಾತ್ಮನ ಅಸ್ತಿತ್ವವನ್ನು ಅರಿಯಲು ಮನಸ್ಸು ಪೂರ್ವಕಲ್ಪಿತ ನಂಬಿಕೆಗಳಿಂದ ಬಿಡುಗಡೆ ಹೊಂದಿರಬೇಕು. ಬಸವಣ್ಣನವರ ಮನಸ್ಸು ಪರಮಾತ್ಮನ ಅಸ್ತಿತ್ವವನ್ನು ಗ್ರಹಿಸುವ ರೀತಿ ಹೀಗಿದೆ:

ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯಾ

ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯಾ

ನೀನು ಜಗಕೆ ಬಲ್ಲಿದನು, ಆನು ನಿನಗೆ ಬಲ್ಲಿದನು ಕಂಡಯ್ಯಾ

ಕರಿಯು ಕನ್ನಡಿಯೊಳಗಡಗಿದಂತಯ್ಯಾ,

ಎನ್ನೊಳಗೆ ನೀನಡಗಿದೆ ಕೂಡಲಸಂಗಮದೇವಾ.

ಯಾವ ಮನಸ್ಸು ಸ್ವತಂತ್ರವಾಗಿ ಯೋಚಿಸಲು ಸಾಧ್ಯವಿಲ್ಲವೋ ಅದು ಈ ಸೃಷ್ಟಿಯ ಸತ್ಯವನ್ನರಿಯಲು ಸಾಧ್ಯವಿಲ್ಲ. ಜಗತ್ತನ್ನು ಪರಮಾತ್ಮನ ಶಕ್ತಿಯು ಆವರಿಸಿದ್ದರೆ, ಪರಮಾತ್ಮನನ್ನು ಸುತ್ತಿಕೊ೦ಡಿರುವುದು ನನ್ನ ಮನ ಎನ್ನುತ್ತಾರೆ! ಈ ಮಾತು ಸಮಷ್ಟಿಯ ಜೊತೆಗಿನ ಮಾನವ ಸಂಬಂಧವನ್ನು ಸಹಜ ನೆಲೆಗಟ್ಟಿನಲ್ಲಿ ತ೦ದು ನಿಲ್ಲಿಸುತ್ತದೆ. ಮನುಷ್ಯ ಮತ್ತು ದೇವರ ಸಂಬಂಧವನ್ನು ಸಮಷ್ಟಿಯ ರೂಪದಲ್ಲಿ ಇಷ್ಟು ಸಹಜವಾಗಿ ನೋಡುವ, ಅಂತೆಯೇ ಪರಿಭಾವಿಸುವ ಶಕ್ತಿ ಇರುವುದು ಮುಕ್ತ ಮನಸ್ಸಿಗೆ ಮಾತ್ರ. ತಪ್ಪು ನಂಬಿಕೆಗಳ ಬಂಧನದಲ್ಲಿ ಬುದ್ಧಿ ಸಿಲುಕಿದಲ್ಲಿ ಜೀವ- ಜಗತ್ತಿನ ಸ್ಪಷ್ಟತೆ ಸಿಗದು. ಆಗಲೇ ನೂರೆಂಟು ನ೦ಬಿಕೆಗಳಲ್ಲಿ ನಲುಗುವ ಮನಸ್ಸು ನಾನಾ ಅವಾ೦ತರಗಳಿಗೆ ಬಲಿಯಾಗುತ್ತದೆ. ಅನೇಕ ತಪ್ಪು ಕಲ್ಪನೆಗಳ ಜಾಲದಲ್ಲಿ ವಿವೇಚನಾ ಬುದ್ಧಿಯನ್ನೇ ಕಳೆದುಕೊಳ್ಳುತ್ತದೆ. 'ಕರಿಯು ಕನ್ನಡಿಯೊಳಡಗಿದ೦ತಯ್ಯಾ ಎನ್ನೊಳಗೆ ನೀನಡಗಿದೆ' ಎನ್ನುವಲ್ಲಿ ದೇಹವನ್ನೇ ದೇಗುಲ ಮಾಡಿದರು. ಅದನ್ನೇ ಆತ್ಯ೦ತಿಕ ಸತ್ಯವನ್ನರಿಯುವ ತಪೋ ಮ೦ದಿರವನ್ನಾಗಿಸಿದರು. ಬಹಿರ್ಮುಖವಾಗಿ ಹರಿದು ಎಲ್ಲೋ ಕಳೆದು ಹೋಗುವ ಭಾವನೆ ಹಾಗೂ ಆಲೋಚನೆಗಳಿಗೆ ಅ೦ತರ್ಮುಖೀಯ ದಿಶೆ ನೀಡಿದರು. ವ್ಯಷ್ಟಿ- ಸಮಷ್ಟಿಯ ನೇರ ಸಮೀಕರಣದ ಸಮಸ್ಥಿತಿಯಲ್ಲಿ ಬದುಕನ್ನು ನಿಲ್ಲಿಸಿದರು. ಆ ಮೂಲಕ ಆ೦ತರಿಕ ಸ್ವಾತ೦ತ್ರ್ಯಕ್ಕೆ ವಿಶಿಷ್ಟ ಆಯಾಮ ಕೊಟ್ಟರು.

ಪ್ರಕೃತಿದತ್ತವಾದ ಸತ್ಯದರ್ಶನವನ್ನು ಅನುಭವಿಸಲು ಅಸತ್ಯದ ಭ್ರಮೆಗಳಿಂದ ಹೊರಬರಬೇಕು. ಇಲ್ಲವಾದರೆ ಗುಲಾಮಗಿರಿಯಲ್ಲಿ ನಿಂತು ಬಿಡುವ ಮನಸ್ಸು ಕಾಲದೊಂದಿಗೆ ಚಲಿಸುವುದನ್ನೇ ಮರೆತುಬಿಡುತ್ತದೆ. ಇಂತಹ ಸ್ಥಿತಿಯನ್ನು ಮಾರ್ಟಿನ್ ಲೂಥರ್ ಕಿಂಗ್ ಹೀಗೆ ಹೇಳುತ್ತಾರೆ: ‘ಮಾನವನ ಪ್ರಗತಿ ಅನಿವಾರ್ಯವೆಂಬ ಗಾಲಿಗಳ ಮೇಲೆ ಉರುಳುವುದಿಲ್ಲ. ಪರಮಾತ್ಮನ ಜೊತೆಗೂಡಿ ದಣಿವರಿಯದಂತೆ ಶ್ರಮಿಸುವ ವ್ಯಕ್ತಿಗಳಿಂದ ಸಾಧ್ಯವಾಗುತ್ತದೆ. ಇಂತಹ ಪರಿಶ್ರಮವಿಲ್ಲದಿದ್ದರೆ ವೇಳೆಯೂ ಜಡತ್ವದ ಜೊತೆಗಾರನಾಗಿಬಿಡುತ್ತದೆ.’ ಬಸವಣ್ಣನವರ ದಣಿವರಿಯದ ಶ್ರಮದಿಂದಾಗಿ ಸ್ವತಂತ್ರ ವಿಚಾರಧಾರೆಯ ಮೇಲೆ, ಅನುಭಾವದ ನೆಲೆಯಲ್ಲಿ ಒಂದು ದೊಡ್ಡ ಪ್ರಜ್ಞಾ ವಲಯವೇ ಹುಟ್ಟಿಕೊಂಡಿತು. ಈ ಕಾರಣದಿಂದಾಗಿ ಸಮಾಜ ಚಲನಶೀಲವಾಯಿತು. ಹಿಂಬಾಲಕ ಗುಣಕ್ಕೆ ಕಡಿವಾಣ ಬಿದ್ದಿತು. ಪ್ರಶ್ನಿಸುವ ಶಕ್ತಿ ಬೆಳೆಯಿತು. ಸತ್ಯಾಸತ್ಯತೆಗಳನ್ನು ಒರೆಗೆ ಹಚ್ಚಿ ನೋಡಲು ಅನುವಾಯಿತು. ‘ಭಕ್ತಿಯೆಂಬ ತತ್ವ ತಲೆಗೇರಿ ಕೈಲಾಸದ ಬಟ್ಟೆಯ ಹತ್ತುವ ವ್ಯರ್ಥರ ಕಂಡು ಎನ್ನ ಮನ ನಾಚಿತ್ತು, ಕೈಲಾಸವೆಂಬುದೇನೋ ಪೃಥ್ವಿಯ ಮೇಲೊಂದು ಮೊರಡಿ…’ ಎಂದು ಕಾಲ್ಪನಿಕ ಕೈಲಾಸಕ್ಕಾಗಿ ಇಹದ ಬದುಕನ್ನು ನಿರ್ಲಕ್ಷಿಸುವ ಮನುಷ್ಯನನ್ನು ಬಸವಣ್ಣನವರು ಛೇಡಿಸುತ್ತಾರೆ. ಮನಸ್ಸು ಸ್ವತಂತ್ರವಾಗಿ ಯೋಚಿಸುವಂತೆ ಪ್ರೇರೇಪಿಸುತ್ತಾರೆ.

‘ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯಾ, ರಾಶಿಕೂಟ ಋಣ ಸಂಬಂಧವುಂಟೆಂದು ಹೇಳಿರಯ್ಯಾ’ ಎಂದು ಮನಸ್ಸನ್ನು ಸಶಕ್ತಗೊಳಿಸುತ್ತಾರೆ. ಅಬ್ರಹಾಂ ಲಿಂಕನ್ ತನ್ನ ಮಗನ ಮುಖ್ಯೋಪಾಧ್ಯಾಯರಿಗೆ ಪತ್ರ ಬರೆದು ಏನನ್ನು ತನ್ನ ಮಗನಿಗೆ ಕಲಿಸಬೇಕೆಂದು ಕೇಳಿಕೊಳ್ಳುವಾಗ, ‘ಎಲ್ಲರನ್ನೂ ಸೆಳೆಯುವ ಗುಂಪನ್ನು ಹಿಂಬಾಲಿಸದಂತೆ ನನ್ನ ಮಗನನ್ನು ಸಶಕ್ತಗೊಳಿಸಲು ಪ್ರಯತ್ನಿಸಿ’ ಎಂದು ಬರೆದುದನ್ನು ಜ್ಞಾಪಿಸಿಕೊಳ್ಳಬಹುದು. ಆಂತರಿಕ ಸ್ವಾತಂತ್ರ್ಯದ ಮಹತ್ವ ಲಿಂಕನ್ನರಿಗೆ ಚೆನ್ನಾಗಿ ತಿಳಿದಿತ್ತು.

‘ಕೇವಲ ಎರಡು ಸಂಗತಿಗಳಿಗೆ ಮಾತ್ರ ಎಲ್ಲೆ ಇಲ್ಲ- ಒಂದು ವಿಶ್ವ, ಇನ್ನೊಂದು ಮನುಷ್ಯನ ಮೂರ್ಖತನ. ಆದರೆ ವಿಶ್ವದ ಅನಂತತೆಯ ಬಗ್ಗೆ ನನಗಿನ್ನೂ ನಂಬಿಕೆಯಿಲ್ಲ…’ ಎನ್ನುವ ಮೂಲಕ ಮನುಷ್ಯನ ಮೂರ್ಖತನದ ಅಗಾಧತೆ ಬೆಚ್ಚಿ ಬೀಳಿಸುವಂಥದೆಂದು ಸೂಚಿಸುತ್ತಾರೆ ಆಲ್ಬರ್ಟ್ ಐನ್‌ಸ್ಟೀನ್. ಕಂಡ ಕಂಡದ್ದನ್ನೆಲ್ಲ ದೇವರೆಂದು ಪೂಜಿಸುವ, ಪ್ರಾರ್ಥಿಸುವ ಮನುಷ್ಯನ ಮನಸ್ಥಿತಿಯನ್ನು ಗಮನಿಸಿದಾಗ ಐನ್‌ಸ್ಟೀನ್ ಅವರ ಮಾತು ವೇದ್ಯವಾಗುತ್ತದೆ. ಸ್ವತಂತ್ರವಾಗಿ ಯೋಚಿಸುವ ಇರಾದೆ ಇಲ್ಲದಿರುವುದರಿಂದಲೇ ನಮ್ಮಲ್ಲಿ ಕೋಟ್ಯಾನುಕೋಟಿ ದೇವತೆಗಳ ದಂಡೇ ಇದೆ.

ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ, ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೋ!

ಕೊಳಗ ದೈವ, ಗಿಣ್ಣಿಲು ದೈವ ಕಾಣಿರೋ! ದೈವ ದೈವವೆಂದು ಕಾಲಿಡಲಿಂಬಿಲ್ಲ, ಕೂಡಲಸಂಗಮದೇವ.

ಅತಾರ್ಕಿಕ ನ೦ಬಿಕೆಗಳ ವಿಡ೦ಬನೆಯೊ೦ದಿಗೆ ಸಹಜವಾಗಿ ಚಿ೦ತಿಸುವ ದಿಶೆಯಲ್ಲಿ ಬಸವಣ್ಣನವರು ನಿರ್ದೇಶಿಸುತ್ತಾರೆ. ಈ ರೀತಿಯ ವಿಡ೦ಬನೆಯೇ ಆ೦ತರಿಕ ಸ್ವಾತ೦ತ್ರ್ಯದ ಮೊದಲ ಹೆಜ್ಜೆ. ಐನ್‌ಸ್ಟೀನ್ ಹೇಳುತ್ತಾರೆ: ‘ಒಬ್ಬ ವ್ಯಕ್ತಿಯ ಆಧ್ಯಾತ್ಮಿಕ ಬೆಳವಣಿಗೆ ಕೇವಲ ಆ೦ತರಿಕ ಸ್ವಾತ೦ತ್ರ್ಯದ ಮೂಲಕ ಸಾಧ್ಯ. ಇದರಿಂದಲೇ ವೈಚಾರಿಕ ತಳಹದಿಯಿಲ್ಲದ ತತ್ವಜ್ಞಾನ, ನಿರ೦ಕುಶ ಪ್ರಭುತ್ವ ಹಾಗೂ ಸಾಮಾಜಿಕ ಪೂರ್ವಗ್ರಹ ಪೀಡಿತ ಮನೋಭಾವಗಳ ಕಪಿಮುಷ್ಟಿಯಿ೦ದ ಮನಸ್ಸಿಗೆ ಬಿಡುಗಡೆ ಸಿಗುತ್ತದೆ’. ಮನಸ್ಸನ್ನು ಗುಲಾಮಗಿರಿಯಿ೦ದ ಮುಕ್ತಿಗೊಳಿಸುವುದೇ ಬಸವಣ್ಣನವರ ಉದ್ದೇಶವೂ ಆಗಿತ್ತು.

ಐನ್‌ಸ್ಟೀನ್ ಮು೦ದುವರಿದು ಹೇಳುತ್ತಾರೆ, ‘ಇ೦ತಹ ಸ್ವಾತ೦ತ್ರ್ಯವೇ ಒಬ್ಬ ವ್ಯಕ್ತಿಗೆ ಪ್ರಕೃತಿಯು ನೀಡುವ ಅತ್ಯಮೂಲ್ಯ ಕೊಡುಗೆ’ ಎ೦ದು. ಆದ್ದರಿ೦ದಲೇ ಬಸವಣ್ಣನವರ ಆಂದೋಲನ ಪ್ರಕೃತಿಯ ಆ೦ತರ್ಯವನ್ನು ಪ್ರವೇಶಿಸಲು ಹಾಗೂ ಕಳೆದುಹೋಗಿದ್ದ ಸಹಜ ಬದುಕನ್ನು ಮತ್ತೆ ಕಂಡುಕೊಳ್ಳಲು ನೆರವಾಯಿತು.

ಬಸವಣ್ಣನವರು ನೇರವಾಗಿ ಸರ್ವ ಸಮಸ್ಯೆಯ ಮೂಲವಾದ ಮನಸ್ಸಿನ ಸುಧಾರಣೆಗೆ ನಿಲ್ಲುತ್ತಾರೆ. ಮನಸ್ಸಿಗೆ ಇಲಾಜು ದೊರೆತಲ್ಲಿ ಮತ್ತೆಲ್ಲವೂ ಸುಧಾರಿಸುತ್ತದೆ ಎನ್ನುವ ಅವರ ನಂಬಿಕೆ ಬಹುಶಃ ಮಾನವ ಇತಿಹಾಸದಲ್ಲಿನ ಒ೦ದು ಗುರುತರವಾದ ಮೈಲಿಗಲ್ಲು. ಇ೦ತಹ ನಿರ್ಧಾರದಿಂದಲೇ ಮಾನವ ಸ೦ಪನ್ಮೂಲದ ಸ೦ವರ್ಧನೆ ಪ್ರಾರ೦ಭ ಎ೦ಬುದನ್ನು ಅನೇಕ ಆಧುನಿಕ ಚಿ೦ತಕರು ಪ್ರತಿಪಾದಿಸಿದ್ದಾರೆ.

1890ರಲ್ಲೇ ‘ದಿ ಪ್ರಿನ್ಸಿಪಲ್ಸ್ ಆಫ್ ಇಕನಾಮಿಕ್ಸ್’ ಪುಸ್ತಕ ಬರೆದ ಖ್ಯಾತ ಅರ್ಥಶಾಸ್ತ್ರಜ್ಞ ಆಲ್ಫ್ರೆಡ್ ಮಾರ್ಶಲ್ ಹೇಳುತ್ತಾರೆ, ‘ದಿ ಮೋಸ್ಟ್ ವ್ಯಾಲ್ಯುಯೇಬಲ್ ಆಫ್ ಆಲ್ ಕ್ಯಾಪಿಟಲ್ ಈಸ್ ದಟ್ ಇನ್ವೆಸ್ಟೆಡ್ ಇನ್ ಹ್ಯೂಮನ್ ಬೀಯಿಂಗ್ಸ್’ (ಅತ್ಯಮೂಲ್ಯವಾದ ಬಂಡವಾಳವೆಂದರೆ ಮನುಷ್ಯನಲ್ಲಿ ಹೂಡಿದ ಬಂಡವಾಳ) ಎ೦ದು. ಈ ಜಗತ್ತಿನಲ್ಲಿ ನಡೆದ ಅತ್ಯಮೂಲ್ಯ ಬ೦ಡವಾಳ ಹೂಡಿಕೆ ಎ೦ದರೆ 12ನೇ ಶತಮಾನದಲ್ಲಿ ಬಸವಣ್ಣನವರು ಸಮಾಜಕ್ಕೆ ನೀಡಿದ ಆ೦ತರಿಕ ಸ್ವಾತ೦ತ್ರ್ಯ. ಈ ಬ೦ಡವಾಳವೇ ನಾಗರಿಕತೆಗೆ ಒ೦ದು ಹೊಸ ದಿಕ್ಕನ್ನು ನೀಡಿತು, ಮತ್ತು ಗ್ರಹಣ ಹಿಡಿದಿದ್ದ ವ್ಯವಸ್ಥೆಯನ್ನು ಮುರಿದು ಒ೦ದು ಪರ್ಯಾಯ ವ್ಯವಸ್ಥೆಯನ್ನೇ ಕಟ್ಟಲು ಸಾಧ್ಯವಾಯಿತು.

ಇ೦ದು ನಮ್ಮ ಮು೦ದೆ ದಾರಿತಪ್ಪಿಸುವ ಅನೇಕ ಆಚರಣೆಗಳು ತಲೆಯೆತ್ತಿವೆ. ಧರ್ಮದ ಹೆಸರಿನಲ್ಲಿ ಹಲವಾರು ಕ೦ದಾಚಾರಗಳು ನಮ್ಮನ್ನು ಯಾಮಾರಿಸಲು ಕಾಯುತ್ತಿವೆ. ಸಾಮಾಜಿಕ ಜಾಲತಾಣಗಳನ್ನಂತೂ ವ್ಯಾಪಕವಾಗಿ ಆವರಿಸಿರುವ ಇವು ಮನಸ್ಸನ್ನು ಅತಾರ್ಕಿಕ ಹಾಗೂ ಅವೈಜ್ಞಾನಿಕ ನ೦ಬಿಕೆಗಳಿಗೆ ಬಲಿಕೊಡಲು ಸದಾ ಹೊಸ ಹೊಸ ಯೋಜನೆಗಳನ್ನು ಹೊಸೆಯುತ್ತಿರುತ್ತವೆ.

ಬೇಕಾದ್ದನ್ನು ಅಪ್ಪಿಕೊಂಡು, ಬೇಡದ್ದನ್ನು ತಿರಸ್ಕರಿಸುವ ಮಾನಸಿಕ ದೃಢತೆ ನಮಗೆ ಇದ್ದಲ್ಲಿ ಜಾರಿ ಬೀಳುವ ಅಪಾಯಗಳಿರುವುದಿಲ್ಲ. ಇಂದು ಕುಟು೦ಬಗಳನ್ನು ಕಾಡುತ್ತಿರುವ ಕೊಳ್ಳುಬಾಕ ಸ೦ಸ್ಕೃತಿಯಿ೦ದ ರಕ್ಷಿಸಿಕೊಳ್ಳಲಿಕ್ಕೂ ಬಸವಣ್ಣನವರು ಪ್ರತಿಪಾದಿಸುವ ಆ೦ತರಿಕ ಸ್ವಾತ೦ತ್ರ್ಯವನ್ನು ಮೈಗೂಡಿಸಿಕೊಳ್ಳಬೇಕು. ಆಗಲೇ ನಮ್ಮ ರಾಷ್ಟ್ರದ ಮಾನವ ಸ೦ಪನ್ಮೂಲಕ್ಕೆ ಹೊಸ ಆಯಾಮ ದೊರಕುತ್ತದೆ. ಈ ಕಾರಣದಿ೦ದಲೇ ಆ೦ತರಿಕ ಸ್ವಾತ೦ತ್ರ್ಯ ಜಗತ್ತಿನ ಯಾವುದೇ ನಾಗರಿಕತೆಗೆ ನಮ್ಮ ರಾಷ್ಟ್ರವು ರಫ್ತು ಮಾಡಬಹುದಾದ ಮಹತ್ತರವಾದ ಆಧ್ಯಾತ್ಮಿಕ ಸರಕು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.