ಶುಕ್ರವಾರ, ಡಿಸೆಂಬರ್ 13, 2019
19 °C

ನಬಾರ್ಡ್‌ ವಹಿವಾಟು ಶೇ 7 ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಬಾರ್ಡ್‌ ವಹಿವಾಟು ಶೇ 7 ಇಳಿಕೆ

ಬೆಂಗಳೂರು: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ (ನಬಾರ್ಡ್‌) ಕರ್ನಾಟಕ ಪ್ರಾದೇಶಿಕ ಕಚೇರಿಯು 2017–18ನೇ ಹಣಕಾಸು ವರ್ಷದಲ್ಲಿ ₹ 13,859 ಕೋಟಿ ಮೊತ್ತದ ವಹಿವಾಟು ನಡೆಸಿದೆ.

‘2016–17ನೇ ಆರ್ಥಿಕ ವರ್ಷದಲ್ಲಿ ₹ 14,911 ಕೋಟಿ ಮೊತ್ತದ ವಹಿವಾಟು ನಡೆಸಿತ್ತು. ಇದಕ್ಕೆ ಹೋಲಿಸಿದರೆ 2017–18ರಲ್ಲಿ ವಹಿವಾಟು ಮೊತ್ತದಲ್ಲಿ ಶೇ 7 ರಷ್ಟು ಕಡಿಮೆ ಆಗಿದೆ’ ಎಂದು ಶುಕ್ರವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‌ನ ಚೀಫ್‌ ಜನರಲ್‌ ಮ್ಯಾನೇಜರ್‌ ಎಂ.ಐ. ಗಾಣಗಿ ಅವರು ಮಾಹಿತಿ ನೀಡಿದ್ದಾರೆ.

‘ಹಣಕಾಸು ವರ್ಷದಲ್ಲಿ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಾದ (ಎನ್‌ಬಿಎಫ್‌ಸಿ) ಉಜ್ಜೀವನ್‌, ಜನಲಕ್ಷ್ಮಿ ಮತ್ತು ದಿಶಾ, ಕಿರು ಹಣಕಾಸು ಬ್ಯಾಂಕ್‌ಗಳಾಗಿ ಬದಲಾಗಿವೆ. ಇದರಿಂದಾಗಿ ವಹಿವಾಟು ಮೊತ್ತದಲ್ಲಿ ಇಳಿಕೆಯಾಗಿದೆ’ ಎಂದು ತಿಳಿಸಿದ್ದಾರೆ.

ಮೊದಲ ಸ್ಥಾನ: ‘ಗ್ರಾಮೀಣ ಮತ್ತು ಸಹಕಾರಿ ಬ್ಯಾಂಕ್‌ಗಳಿಗೆ ಪುನರ್ಧನ (ರಿಫೈನಾನ್ಸ್‌) ಪಡೆಯುವುದರಲ್ಲಿ ಕರ್ನಾಟಕ ರಾಜ್ಯವು ಮೊದಲ ಸ್ಥಾನದಲ್ಲಿದೆ.  2017–18ರಲ್ಲಿ ₹ 2,800 ಕೋಟಿ ವಿತರಿಸಲಾಗಿದೆ. ಇದು ಉಳಿದ ರಾಜ್ಯಗಳು ನೀಡಿರುವ ಪುನರ್ಧನಕ್ಕಿಂತಲೂ ಗರಿಷ್ಠ ಮಟ್ಟದ್ದಾಗಿದೆ. 2016–17ನೇ ಹಣಕಾಸು ವರ್ಷದಲ್ಲಿ ₹ 3,000 ಕೋಟಿ ವಿತರಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಪುನರ್ಧನ ವಿತರಣೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ. ಬರಗಾಲ ಪರಿಸ್ಥಿತಿಯಿಂದಾಗಿ ಪುನರ್ಧನದಲ್ಲಿ ಇಳಿಕೆ ಕಾಣುವಂತಾಗಿದೆ’ ಎಂದು ಅವರು ವಿವರಿಸಿದ್ದಾರೆ.

‘ಕೃಷಿ ಮತ್ತು ಸಂಬಂಧಿಸಿದ ಚಟುವಟಿಕೆಗಳಿಗೆ ನೆರವು ನೀಡಲು ಬ್ಯಾಂಕ್‌ಗಳಿಗೆ ನಬಾರ್ಡ್ ನೀಡುವ ಸಾಲದ ಮೊತ್ತವು ₹ 6,430 ಕೋಟಿಗೆ ತಲುಪಿದೆ. ಇದು ನಬಾರ್ಡ್‌ ದೇಶವ್ಯಾಪಿ ನೀಡಿರುವ ಒಟ್ಟು ಸಾಲದಲ್ಲಿ ಶೇ 9ರಷ್ಟಿದೆ. 2016–17ರಲ್ಲಿ ದೇಶದಲ್ಲಿಯೇ ಅತ್ಯಂತ ಹೆಚ್ಚಿನ ಮೊತ್ತದ ₹ 7,187 ಕೋಟಿ ದೀರ್ಘಾವಧಿ ಸಾಲ ನೀಡಲಾಗಿತ್ತು’.

‘ಗ್ರಾಮೀಣ ಮತ್ತು ಸಹಕಾರಿ ಬ್ಯಾಂಕ್‌ಗಳಿಗೆ ನೀಡುವ ಬೆಳೆ ಸಾಲದ ಮೊತ್ತ ₹5,547 ಕೋಟಿಗಳಿಂದ ₹ 4,695 ಕೋಟಿಗೆ ಇಳಿಕೆಯಾಗಿದೆ. ಆರ್‌ಬಿಐನಿಂದ ಬಂದಿರುವ ಮೊತ್ತ ಕಡಿಮೆ ಇರುವುದರಿಂದ ಸಹಜವಾಗಿಯೇ ಸಾಲ ನೀಡಿಕೆಯಲ್ಲಿ ಇಳಿಕೆ ಕಂಡುಬಂದಿದೆ’ ಎಂದು ತಿಳಿಸಿದ್ದಾರೆ.

ಉಗ್ರಾಣ ನಿರ್ಮಾಣಕ್ಕೆ ನೆರವು: ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿಡಲು ಉಗ್ರಾಣ ನಿರ್ಮಾಣಕ್ಕಾಗಿ ಕರ್ನಾಟಕ ರಾಜ್ಯಕ್ಕೆ ₹ 380 ಕೋಟಿ ನೀಡಲಾಗಿದೆ. ಇದು ನಬಾರ್ಡ್‌ ದೇಶವ್ಯಾಪಿ ನೀಡಿರುವ ಒಟ್ಟು ಮೊತ್ತದ ಶೇ 40 ರಷ್ಟಿದೆ.

ಕೃಷಿ ಸಾಲ ನೀಡಿಕೆ ಹೆಚ್ಚಳ

‘ನಬಾರ್ಡ್‌ 2017–18ರಲ್ಲಿ ದೇಶದಲ್ಲಿನ ಕೃಷಿ ಚಟುವಟಿಕೆಗಳಿಗೆ ₹ 10 ಲಕ್ಷ ಸಾಲ ನೀಡುವ ಗುರಿ ಹೊಂದಲಾಗಿತ್ತು. ಆದರೆ ₹ 10.46 ಲಕ್ಷ ಕೋಟಿಗೆ ತಲುಪಿದೆ’ ಎಂದು ಬ್ಯಾಂಕ್‌ ಅಧ್ಯಕ್ಷ ಡಾ. ಹರೀಶ್‌ ಕುಮಾರ್‌ ಭನ್ವಾಲ್ ತಿಳಿಸಿದ್ದಾರೆ.

‘ಬಂಡವಾಳ ರಚನೆಗೆ ಪೂರಕವಾಗಿ, ದೀರ್ಘಕಾಲಿನ ಸಾಲ ಹೆಚ್ಚಳ ಮಾಡುವುದು, ಗ್ರಾಮೀಣ ಹಣಕಾಸು ಸಂಸ್ಥೆಗಳಿಗೆ ಬ್ಯಾಂಕಿಂಗ್ ತಂತ್ರಜ್ಞಾನ ಅಳವಡಿಕೆಗೆ ನೆರವಾಗುವುದು, ನೀರಾವರಿ ಯೋಜನೆ ವ್ಯಾಪ್ತಿ ವಿಸ್ತರಣೆಯ ಜವಾಬ್ದಾರಿಗಳನ್ನು ನಬಾರ್ಡ್‌ ನಿರ್ವಹಿಸಿದೆ’ ಎಂದು ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)