ಶುಕ್ರವಾರ, ಡಿಸೆಂಬರ್ 13, 2019
19 °C
ಸಂಸದೆ ಶೋಭಾ ಕರಂದ್ಲಾಜೆಗೆ ಕಡಿವಾಣ ಹಾಕಲು ಹೊಸ ತಂತ್ರ?

ಬಿ.ವೈ.ವಿಜಯೇಂದ್ರಗೆ ‘ಪಟ್ಟಾಭಿಷೇಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿ.ವೈ.ವಿಜಯೇಂದ್ರಗೆ ‘ಪಟ್ಟಾಭಿಷೇಕ’

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಪರವಾಗಿ ತೆರೆಯ ಹಿಂದೆ ನಿಂತು ‘ರಾಜಕೀಯ ತಂತ್ರ’ ಹೆಣೆಯುತ್ತಿದ್ದ ಅವರ ಪುತ್ರ ಬಿ.ವೈ. ವಿಜಯೇಂದ್ರ ವಿಧಾನಸಭಾ ಚುನಾವಣೆಗೆ ದಿಢೀರ್‌ ಧುಮುಕಲು ಕುಟುಂಬದವರ ತಂತ್ರಗಾರಿಕೆಯೇ ಕಾರಣ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.

ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಯಾರನ್ನು ಕಣಕ್ಕೆ ಇಳಿಸಬೇಕು ಎಂಬ ವಿಸ್ತೃತ ಚರ್ಚೆ ಪಕ್ಷದ ‘ಗರ್ಭಗುಡಿ’ಯಲ್ಲಿ ನಡೆಯುತ್ತಿದ್ದಾಗ, ವಿಜಯೇಂದ್ರ ಹೆಸರು ಪ್ರಸ್ತಾಪವೇ ಇರಲಿಲ್ಲ. ದಿನಾಂಕ ಘೋಷಣೆಯಾಗುವ ಹೊತ್ತಿನಲ್ಲಿ ಏಕಾಏಕಿ ಅವರ ಹೆಸರು ಮುನ್ನೆಲೆಗೆ ಬಂತು. ಕೂಡಲೇ ಮೈಸೂರಿನ ವರುಣಾ ಕ್ಷೇತ್ರ ಪ್ರವೇಶಿಸಿದ ವಿಜಯೇಂದ್ರ, ಪ್ರಚಾರವನ್ನೂ ಆರಂಭಿಸಿದರು. ಹುರಿಯಾಳು ಪಟ್ಟಿ ಘೋಷಣೆಯಾಗುವ ಮುನ್ನವೇ ಅಲ್ಲಿನ ವಾಸ್ತವ್ಯಕ್ಕೆ ಮನೆಯನ್ನೂ ಬಾಡಿಗೆ ಪಡೆದು ಗೃಹಪ್ರವೇಶ ಮಾಡಿದರು.

ಈ ಬೆಳವಣಿಗೆಗಳ ಹಿಂದೆ ಯಡಿಯೂರಪ್ಪ ಅವರ ಇಡೀ ಕುಟುಂಬ ಬಲವಾಗಿ ನಿಂತಿದೆ ಎನ್ನಲಾಗಿದೆ. ಅದರಲ್ಲೂ ಬಿ.ವೈ. ಅರುಣಾದೇವಿ, ಬಿ.ವೈ. ಪದ್ಮಾವತಿ, ಬಿ.ವೈ. ಉಮಾದೇವಿ ಅವರು ವಿಜಯೇಂದ್ರ ಭವಿಷ್ಯಕ್ಕೆ ‘ರಾಜಕೀಯ ಸೂರು’ ಕಲ್ಪಿಸುವ ನೇತೃತ್ವ ವಹಿಸಿದರು. ಚುನಾವಣೆ ಘೋಷಣೆಗೆ ಮುನ್ನ ಯಡಿಯೂರಪ್ಪ ಅವರನ್ನು ಕೂರಿಸಿಕೊಂಡ ಕುಟುಂಬದ ಸದಸ್ಯರು, ಈ ಕುರಿತು ಸುದೀರ್ಘ ಚರ್ಚೆ ನಡೆಸಿದರು.

‘ಶಿಕಾರಿಪುರದ ಹಾಲಿ ಶಾಸಕ ಬಿ.ವೈ. ರಾಘವೇಂದ್ರ ಈ ಹಿಂದೆ ಒಮ್ಮೆ ಸಂಸದ ಆಗಿದ್ದಾನೆ. ಮತ್ತೆ ಲೋಕಸಭೆಗೆ ಆತನೇ ಸ್ಪರ್ಧಿಸಲಿ. ಇನ್ನು ಮುಂದೆ, ವಿಜಯೇಂದ್ರನನ್ನು ಉತ್ತರಾಧಿಕಾರಿಯಾಗಿ ಬೆಳೆಸಬೇಕು. ಈ ಚುನಾವಣೆ ಅಮೂಲ್ಯ ಅವಕಾಶ. ಇದನ್ನು ಬಿಟ್ಟರೆ ಮತ್ತೆ 2023ರವರೆಗೂ ಕಾಯಬೇಕಾಗುತ್ತದೆ. ನಮ್ಮ ಕುಟುಂಬದ ರಾಜಕೀಯ ಉತ್ತರದಾಯಿತ್ವ ಅನ್ಯರ ಪಾಲಾಗಲು ಬಿಡುವುದಿಲ್ಲ. ನೀವೇ ಮುಂದೆ ನಿಂತು ವಿಜಯೇಂದ್ರ ಹಿತ ಕಾಯಬೇಕು’ ಎಂದು ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕಿದ್ದಾರೆ ಎಂದು ಮೂಲಗಳು ಹೇಳಿವೆ.

‘ಒಂದೇ ಕುಟುಂಬದ ಇಬ್ಬರಿಗೆ ಟಿಕೆಟ್ ಕೇಳುವುದು ಕಷ್ಟ’ ಎಂದು ಯಡಿಯೂರಪ್ಪ ಹೇಳಿದರೂ ಮಕ್ಕಳು ಇದಕ್ಕೆ ಸಮ್ಮತಿಸಲಿಲ್ಲ. ಹೀಗಾಗಿ, ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ ಅಥವಾ ಕಾಪು ಸಿದ್ದಲಿಂಗಸ್ವಾಮಿ ಅವರನ್ನು ಬಿಟ್ಟು ವಿಜಯೇಂದ್ರಗೆ ಟಿಕೆಟ್ ಕೊಡಿಸಲು ಯಡಿಯೂರಪ್ಪ ಮುಂದಾದರು. ಆದರೆ, ಈ ಪ್ರಯತ್ನಕ್ಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಕುಟುಂಬದ ಮೂಲಗಳು ಆಪಾದಿಸಿವೆ.

‌ಶೋಭಾಗೆ ಕಡಿವಾಣ?: ಯಡಿಯೂರಪ್ಪ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಶೋಭಾ ಕರಂದ್ಲಾಜೆ ಅವರಿಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ಕುಟುಂಬವು ಈ ತಂತ್ರ ಹೆಣೆದಿದೆ ಎಂದು ಹೇಳಲಾಗುತ್ತಿದೆ.

ಯಡಿಯೂರಪ್ಪ ಉತ್ತರಾಧಿಕಾರಿಯಂತೆ ಬಿಂಬಿಸಿಕೊಳ್ಳುವ ಹಾಗೂ ಪಕ್ಷದ ಎಲ್ಲ ಚಟುವಟಿಕೆಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಶೋಭಾ ನಡೆಯ ಬಗ್ಗೆ ಪಕ್ಷದಲ್ಲೇ ಅಸಮಾಧಾನ ಇತ್ತು. ಶೋಭಾ ಅವರನ್ನು ನಿಯಂತ್ರಿಸದೇ ಇದ್ದರೆ, ಪಕ್ಷದ ಗೆಲುವು ಕಷ್ಟ ಎಂದೂ ಅನೇಕ ನಾಯಕರು ವರಿಷ್ಠರಿಗೆ ಅಹವಾಲು ಸಲ್ಲಿಸಿದ್ದರು. ಈ ಬೆಳವಣಿಗೆಗಳನ್ನು ಅರಿತ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್‌, ರಾಜ್ಯದ ವಿವಿಧೆಡೆಗಳಲ್ಲಿ ನಡೆಯುವ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪನವರ ಬಹಿರಂಗ ಸಭೆಗಳಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಿದ್ದರು. ಇದರ ಜತೆಗೆ, ಪಕ್ಷದ ಚುನಾವಣಾ ಉಸ್ತುವಾರಿ ಸಮಿತಿ ರಚಿಸಿ, ಅಲ್ಲಿ ಸಹ ಸಂಚಾಲಕಿ ಹೊಣೆ ನೀಡಿದ್ದರು.

‘ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಯಾವುದೇ ಕಾರಣಕ್ಕೂ ಟಿಕೆಟ್ ನೀಡುವುದಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಪಾಲ್ಗೊಂಡು, ಪಕ್ಷವನ್ನು ಗೆಲ್ಲಿಸುವ ಕೆಲಸ ಮಾಡಿ’ ಎಂದು ಸೂಚಿಸಿದ್ದ ಜಾವಡೇಕರ್‌, ಶೋಭಾ ಕಾರ್ಯವ್ಯಾಪ್ತಿಯನ್ನು ಮೊಟಕುಗೊಳಿಸಿದ್ದರು.

ಮಾಧ್ಯಮಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ಹಗರಣಗಳನ್ನು ಪ್ರಸ್ತಾಪಿಸುವುದು, ಹಿಂದುತ್ವದ ವಿಚಾರಗಳನ್ನು ಮುನ್ನೆಲೆಗೆ ತಂದು ಪಕ್ಷಕ್ಕೆ ಅನುಕೂಲ ಮಾಡುವ ಕೆಲಸವನ್ನಷ್ಟೇ ಅವರಿಗೆ ವಹಿಸಿದ್ದರು.

‘ಇಷ್ಟೆಲ್ಲ ಆದ ಮೇಲೂ ಶೋಭಾ ಅವರು ರಾಜ್ಯ ರಾಜಕಾರಣಕ್ಕೆ ಮರಳುವ ಹಂಬಲ ಬಿಟ್ಟಿಲ್ಲ ಹಾಗೂ ಯಡಿಯೂರಪ್ಪ ಅವರ ಪರೋಕ್ಷ ಬೆಂಬಲವನ್ನು ಬಳಸಿಕೊಂಡು ಪಕ್ಷವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಯತ್ನವನ್ನು ಮುಂದುವರಿಸಿದ್ದಾರೆ’ ಎಂದೂ ಕೆಲವು ನಾಯಕರು ವರಿಷ್ಠರಿಗೆ ದೂರು ಸಲ್ಲಿಸಿದ್ದಾರೆ.

**

ಐವರ ಪೈಪೋಟಿ

ರಾಜ್ಯದಲ್ಲಿ ಚುನಾವಣೆ ಮುಗಿದ ಕೂಡಲೇ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ಕೂಡ ನಡೆಯಲಿದೆ. ಈ ಹುದ್ದೆಗೆ ಐವರ ಮಧ್ಯೆ ಪೈಪೋಟಿ ಇದೆ. ಲೋಕಸಭೆ ಚುನಾವಣೆ ಹೊತ್ತಿಗೆ ಯುವ ಮುಖವನ್ನು ಅಧ್ಯಕ್ಷಗಾದಿಗೆ ತರುವ ಇರಾದೆ ಪಕ್ಷದ ಪ್ರಮುಖರದ್ದಾಗಿದೆ.

ಸಂಸದ ನಳಿನ್ ಕುಮಾರ್ ಕಟೀಲು, ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಲಿಂಬಾವಳಿ, ಸಿ.ಟಿ. ರವಿ, ಶೋಭಾ ಕರಂದ್ಲಾಜೆ ಹಾಗೂ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಆಕಾಂಕ್ಷಿಗಳಾಗಿದ್ದಾರೆ.

ಪ್ರತಿಕ್ರಿಯಿಸಿ (+)