ಶನಿವಾರ, ಡಿಸೆಂಬರ್ 14, 2019
20 °C
ದಲಿತರ ಮನ ಗೆಲ್ಲಲು ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಂದ ನಾನಾ ಕಸರತ್ತು

ಕಾರ್ಮಿಕರಿಗೆ ಅನ್ನದಾನ, ಅಂಬೇಡ್ಕರ್‌ ಗುಣಗಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಮಿಕರಿಗೆ ಅನ್ನದಾನ, ಅಂಬೇಡ್ಕರ್‌ ಗುಣಗಾನ

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸಿರುವ ಬೆನ್ನಲ್ಲೇ ಅಂಬೇಡ್ಕರ್ ಜಯಂತಿ ದಿನ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ದಲಿತರ ಮನ ಗೆಲ್ಲಲು ನಾನಾ ಕಸರತ್ತು ನಡೆಸಿದರು.

ಬಿಜೆಪಿ ಮುಖಂಡರು ದಲಿತ ಕಾಲೊನಿಗಳಿಗೆ ಭೇಟಿ ನೀಡಿ, ಪೌರಕಾರ್ಮಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಿದರೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಹುರಿಯಾಳುಗಳು ಅಂಬೇಡ್ಕರ್‌ ಗುಣಗಾನದಲ್ಲಿ ನಿರತರಾಗಿದ್ದರು. ವಿಧಾನಸೌಧದ ಮುಂಭಾಗದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಮಾಲಾರ್ಪಣೆ ಮಾಡಿದರು. ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಪಾಲ್ಗೊಂಡು ಅಂಬೇಡ್ಕರ್ ಕೊಡುಗೆಗಳನ್ನು ಹಾಡಿ ಹೊಗಳಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಡಾಲರ್ಸ್ ಕಾಲೊನಿಯ ನಿವಾಸದಲ್ಲಿ ಪೌರಕಾರ್ಮಿಕರಿಗೆ ಭೋಜನಕೂಟ ಏರ್ಪಡಿಸಲಾಗಿತ್ತು. 20 ‍ಪೌರಕಾರ್ಮಿಕರಿಗೆ ಖುದ್ದು ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಊಟ ಬಡಿಸಿ, ಉಪಚರಿಸಿದರು. ನಾಲ್ಕು ತಿಂಗಳಿನಿಂದ ವೇತನ ಪಾವತಿಯಾಗದ ವಿಚಾರವನ್ನು ಪೌರ ಕಾರ್ಮಿಕರು ಯಡಿಯೂರಪ್ಪ ಅವರ ಗಮನಕ್ಕೆ  ತಂದರು.

ಕಾಲೊನಿಯಲ್ಲಿ ಸಂವಾದ: ನೆಲಮಂಗಲ ತಾಲ್ಲೂಕಿನ ಮೈಲನಹಳ್ಳಿಯ ದಲಿತ ಕಾಲೊನಿಗೆ ಯಡಿಯೂರಪ್ಪ ಭೇಟಿ ನೀಡಿದರು. ದಲಿತ ದಂಪತಿ ಮಾರುತಿ–ಮಂಜುಳಾ ಆರತಿ ಮಾಡುವುದರ ಮೂಲಕ ಮನೆಗೆ ಬರಮಾಡಿಕೊಂಡರು.

ದಂಪತಿಗಳ ಕುಶಲೋಪರಿ ವಿಚಾರಿಸಿದ ಅವರು, ಮಂಜುಳಾ ಬಡಿಸಿದ ಉಪ್ಪಿಟ್ಟು, ಬೋಂಡ, ಇಡ್ಲಿ ಸ್ವೀಕರಿಸಿದರು. ನಂತರ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ವೇದಿಕೆ ಏರಿದ ಯಡಿಯೂರಪ್ಪ ಬಹಿರಂಗ ಭಾಷಣ ಮಾಡಿದರು.

‘ಪ್ರಪಂಚಕ್ಕೆ ಮಾದರಿಯಾದ ಸಂವಿಧಾನವನ್ನು ಅಂಬೇಡ್ಕರ್‌ ನೀಡಿದ್ದಾರೆ. ಅದನ್ನು ಗೌರವಿಸಿ, ಸಂವಿಧಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ’ ಎಂದರು.

‘ಸಂವಿಧಾನ ಬದಲಿಸಲು ಅಧಿಕಾರಕ್ಕೆ ಬಂದಿದ್ದೇವೆ ಎಂದು ಸಚಿವ ಅನಂತಕುಮಾರ ಹೆಗಡೆ ಹೇಳಿಕೆ ನೀಡಿದ್ದಾರೆ. ನಿಮ್ಮನ್ನು ನಂಬುವುದು ಹೇಗೆ’ ಎಂದು ಯೋಜನಾ ಪ್ರಾಧಿಕಾರದ ಸದಸ್ಯ ಅಂಜನಾಮೂರ್ತಿ ಪ್ರಶ್ನಿಸಿದರು. ‘ಹೆಗಡೆ ಅವರದ್ದು ವೈಯಕ್ತಿಕ ಅಭಿಪ್ರಾಯವಾಗಿದ್ದು ಅದನ್ನು ಬಿಜೆಪಿ ಖಂಡಿಸುತ್ತದೆ ಮತ್ತು ಅವರನ್ನು ಕರೆಸಿಕೊಂಡು ತಪ್ಪು ತಿದ್ದಿಕೊಳ್ಳಲು ಹೇಳಿದ್ದೇನೆ’ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದರು.

**

‘ಸಾಮಾಜಿಕ ನ್ಯಾಯದ ಹರಿಕಾರ’

‘ಸಮಾಜದಲ್ಲಿ ಬೇರೂರಿದ್ದ ಅನಿಷ್ಟ ಕಟ್ಟುಪಾಡುಗಳ ನಡುವೆಯೂ ಸಾಧನೆ ಮಾಡಿ ಅಂಬೇಡ್ಕರ್ ಚಿರಸ್ಮರಣೀಯರಾಗಿದ್ದಾರೆ’ ಎಂದು ವಿಶ್ರಾಂತ ಕುಲಪತಿ ಪ್ರೊ.ಲಲಿತ್ ಮೋಹನ್ ಪಟ್ನಾಯಕ್ ಹೇಳಿದರು.

ನಗರದ ಅಂಬೇಡ್ಕರ್‌ ತಾಂತ್ರಿಕ ಕಾಲೇಜಿನಲ್ಲಿ ನಡೆದ ‘ಅಂಬೇಡ್ಕರ್‌ ಅವರ 127ನೇ ಜನ್ಮ ದಿನಾಚರಣೆ’ ಹಾಗೂ ರಾಷ್ಟ್ರಮಟ್ಟದ ‘ತಾಂತ್ರಿಕ ವಸ್ತು ಪ್ರದರ್ಶನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಮಂದಿ ಸೂಕ್ತ ಮಾರ್ಗದರ್ಶನ ಮಾಡುವ ಮೂಲಕ ದಲಿತರ ಉದ್ಧಾರಕ್ಕಾಗಿ ಪಣ ತೊಟ್ಟು ಅಂಬೇಡ್ಕರ್‌ ಅವರ ಕನಸನ್ನು ಸಾಕಾಗೊಳಿಸಬೇಕು’ ಎಂದು ರೇಷ್ಮೆಸಹಕಾರ ಸಂಘದ ಜಂಟಿ ಕುಲಸಚಿವ ಎಸ್.ಎಚ್. ಸಂತೋಷ್ ಕುಮಾರ್ ತಿಳಿಸಿದರು.

ತಾಂತ್ರಿಕ ವಸ್ತು ಪ್ರದರ್ಶನದಲ್ಲಿ ಅಂಬೇಡ್ಕರ್ ಕಾಲೇಜಿನ ವಿದ್ಯಾರ್ಥಿಗಳು ಮೊದಲನೆ ಬಹುಮಾನ ಪಡೆದು ಬೀಗಿದರೆ, ಗುಬ್ಬಿಯ ಚನ್ನಬಸವೇಶ್ವರ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಹಾಗೂ ಬಿಎಂಎಸ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ಕ್ರಮವಾಗಿ ಎರಡನೆ ಹಾಗೂ ಮೂರನೇ ಬಹುಮಾನ ಪಡೆದು ಸಂಭ್ರಮಿಸಿದರು.

ಪ್ರತಿಕ್ರಿಯಿಸಿ (+)