ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ಕಗ್ಗಂಟು

7
ಅಶೋಕ ಖೇಣಿ ಕ್ಷೇತ್ರ ಬದಲು ಸಾಧ್ಯತೆ: ಭೀಮಸೇನರಾವ್ ಶಿಂಧೆ ಅತಂತ್ರ!

ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ಕಗ್ಗಂಟು

Published:
Updated:

ಬೀದರ್‌: ಕಾಂಗ್ರೆಸ್‌ ಟಿಕೆಟ್‌ ಘೋಷಣೆ ವಿಳಂಬವಾಗುತ್ತಿರುವುದು ಆಕಾಂಕ್ಷಿಗಳಲ್ಲಿ ದುಗುಡ ಹೆಚ್ಚಿಸಿದೆ. ಶಾಸಕ ಅಶೋಕ ಖೇಣಿ ಹಾಗೂ ನಿವೃತ್ತ ಕೆಎಎಸ್‌ ಅಧಿಕಾರಿ ಭೀಮಸೇನರಾವ್‌ ಶಿಂಧೆ ಕಾಂಗ್ರೆಸ್‌ ಸೇರಿದ ಮೇಲೆ ಗೊಂದಲ ಹೆಚ್ಚಾಗಿದ್ದು, ಟಿಕೆಟ್‌ ಹಂಚಿಕೆ ಕುರಿತು ನಾಯಕರಲ್ಲೂ ಗೊಂದಲ ಮನೆಮಾಡಿದೆ.

ಭಾಲ್ಕಿ ಕ್ಷೇತ್ರದ ಟಿಕೆಟ್‌ ಸಚಿವ ಈಶ್ವರ ಖಂಡ್ರೆ, ಹುಮನಾಬಾದ್‌ ಕ್ಷೇತ್ರದ ಟಿಕೆಟ್‌ ಶಾಸಕ ರಾಜಶೇಖರ ಪಾಟೀಲ ಹಾಗೂ ಬೀದರ್‌ ಕ್ಷೇತ್ರದ ಟಿಕೆಟ್‌ ಶಾಸಕ ರಹೀಂ ಖಾನ್‌ ಅವರಿಗೆ ಎನ್ನುವುದು ಸ್ಪಷ್ಟವಾಗಿದೆ. ಆದರೆ, ಬೀದರ್‌ ದಕ್ಷಿಣ ಹಾಗೂ ಔರಾದ್ ಕ್ಷೇತ್ರದ ಟಿಕೆಟ್‌ ಹಂಚಿಕೆಯ ವಿಷಯದಲ್ಲಿ ಭಿನ್ನಾಭಿಪ್ರಾಯ ಅಧಿಕವಾಗಿದೆ. ಕಾಂಗ್ರೆಸ್‌ನ ಮೂಲ ಕಾರ್ಯಕರ್ತರು ಅಶೋಕ ಖೇಣಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಹಾಗೂ ಸಂಸದ ಮಲ್ಲಿಕಾರ್ಜುನ ಖರ್ಗೆ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಅಳಿಯ ಚಂದ್ರಾಸಿಂಗ್‌ ಅವರ ಬೆನ್ನಿಗೆ ನಿಂತಿರುವ ಕಾರಣ ಟಿಕೆಟ್‌ ಯಾರಿಗೆ ದೊರೆಯಲಿದೆ ಎನ್ನುವುದು ಕುತೂಹಲ ಕೆರಳಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕ ಅಶೋಕ ಖೇಣಿ ಅವರಿಗೆ ಬೀದರ್‌ ದಕ್ಷಿಣ ಕ್ಷೇತ್ರದ ಟಿಕೆಟ್‌ ಕೊಡಬೇಕು ಎಂದು ಒತ್ತಡ ಹಾಕಿದರೆ, ಮಲ್ಲಿಕಾರ್ಜುನ ಖರ್ಗೆ ಅವರು ಎಂಟು ವರ್ಷಗಳಿಂದ ಕ್ಷೇತ್ರದಲ್ಲಿ ಸಂಚರಿಸಿ ಪಕ್ಷವನ್ನು ಸಂಘಟಿಸಿರುವ ಚಂದ್ರಾಸಿಂಗ್‌ ಅವರಿಗೆ ಟಿಕೆಟ್‌ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಬೀದರ್‌ ದಕ್ಷಿಣ, ಬಸವಕಲ್ಯಾಣ ಹಾಗೂ ಔರಾದ್‌ ಕ್ಷೇತ್ರದ ಆಕಾಂಕ್ಷಿಗಳು ಸಿದ್ದರಾಮಯ್ಯ ಆಪ್ತರೇ ಇರುವ ಕಾರಣ ಒಬ್ಬರ ಹೆಸರನ್ನು ಕೈಬಿಡಬೇಕು. ಅವರನ್ನು ವಿಧಾನ ಪರಿಷತ್ತಿಗೆ ನೇಮಕ ಮಾಡಬೇಕು ಎನ್ನುವ ಸಲಹೆಯನ್ನು ಮುಖಂಡರು ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಚಂದ್ರಾಸಿಂಗ್‌ ಅವರಿಗೆ ಬೀದರ್‌ ದಕ್ಷಿಣ ಟಿಕೆಟ್‌ ಬಿಟ್ಟುಕೊಟ್ಟು ಅಶೋಕ ಖೇಣಿ ಅವರನ್ನು ಬಸವಕಲ್ಯಾಣ ಕ್ಷೇತ್ರದಿಂದ ಕಣಕ್ಕೆ ಇಳಿಸುವುದು ಸೂಕ್ತ. ಇದರಿಂದ ಬಿಜೆಪಿಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಅವರನ್ನು ಸುಲಭವಾಗಿ ಮಣಿಸಲು ಸಾಧ್ಯವಾಗಲಿದೆ. ಕಾಂಗ್ರೆಸ್‌ ಟಿಕೆಟ್‌ ಪ್ರಬಲ ಆಕಾಂಕ್ಷಿ ಬಿ.ನಾರಾಯಣರಾವ್‌ ಅವರಿಗೆ ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡುವುದು ಒಳ್ಳೆಯದು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ ಎಂದು ಹೇಳಲಾಗಿದೆ.

‘ಭೀಮಸೇನರಾವ್‌ ಶಿಂಧೆ ಅವರನ್ನು ಔರಾದ್‌ ಕ್ಷೇತ್ರದಿಂದ ಕಣಕ್ಕಿಳಿಸದಂತೆ ಸ್ಥಳೀಯ ಕಾರ್ಯಕರ್ತರು ಒತ್ತಡ ಹಾಕಿದ್ದಾರೆ. ಸ್ಥಳೀಯರಿಗೆ ಟಿಕೆಟ್‌ ನೀಡಿದರೆ ಮಾತ್ರ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುವ ಕುರಿತು ಕೆಲವರು ಬೆದರಿಕೆ ಹಾಕಿರುವ ಕಾರಣ ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ ಪುತ್ರ ಸಂಜಯ ಸೂರ್ಯವಂಶಿ ಅವರ ಹೆಸರು ಕೇಳಿ ಬರುತ್ತಿದೆ. ಕಾಂಗ್ರೆಸ್‌ ಪಕ್ಷದಲ್ಲಿರುವ ಎಡಪಂಥೀಯ ಮುಖಂಡರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಸ್ಥಳೀಯರು ಎನ್ನುವ ಕಾರಣಕ್ಕೆ ಲಕ್ಷ್ಮಣರಾವ್‌ ಸೋರಳ್ಳಿಕರ್‌ ಹೆಸರೂ ಪ್ರಸ್ತಾಪವಾಗಿದೆ’ ಎಂದು ಕಾಂಗ್ರೆಸ್‌ ಮುಖಂಡರು ಹೇಳಿದ್ದಾರೆ.

2009ರ ಲೋಕಸಭೆ ಚುನಾವಣೆಯಲ್ಲಿ ಧರ್ಮಸಿಂಗ್‌ ಅವರಿಗೆ ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಅತಿ ಹೆಚ್ಚು ಮತಗಳು ಬಂದಿದ್ದವು. ಆಗ ಧರ್ಮಸಿಂಗ್‌ ಚುನಾಯಿತರಾಗಿದ್ದರು. 2014ರಲ್ಲಿ ಧರ್ಮಸಿಂಗ್‌ ಪರಾಭವಗೊಂಡಿದ್ದರೂ ಕಾಂಗ್ರೆಸ್‌ಗೆ ಈ ಕ್ಷೇತ್ರದಲ್ಲಿ ಅಧಿಕ ಮತಗಳು ದೊರೆತಿದ್ದವು. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಚಂದ್ರಾಸಿಂಗ್‌ಗೆ ಟಿಕೆಟ್‌ ಕೊಡಲು ಕಾಂಗ್ರೆಸ್‌ ವರಿಷ್ಠರು ಒಲವು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

‘ಪಕ್ಷ ನನಗೆ ಟಿಕೆಟ್‌ ಕೊಡುವ ಭರವಸೆ ಇದೆ. ಟಿಕೆಟ್‌ ಕೊಡದಿದ್ದರೂ ಬಂಡಾಯ ಏಳುವುದಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದಲ್ಲಿ ಮುಂದುವರಿಯುವೆ. ಪಕ್ಷದ ವರಿಷ್ಠರು ಉನ್ನತ ಹುದ್ದೆ ಕೊಡುವ ಆತ್ಮವಿಶ್ವಾಸ ಇದೆ. ಇಷ್ಟು ಬಿಟ್ಟು ಹೆಚ್ಚು ವಿವರಣೆ ನೀಡಲಾರೆ’ ಎಂದು ಬಿ.ನಾರಾಯಣರಾವ್‌ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry