ಭಾನುವಾರ, ಡಿಸೆಂಬರ್ 15, 2019
19 °C

ಜಿಲ್ಲೆಯಾದ್ಯಂತ ಸಂವಿಧಾನ ಶಿಲ್ಪಿಯ ಗುಣಗಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲೆಯಾದ್ಯಂತ ಸಂವಿಧಾನ ಶಿಲ್ಪಿಯ ಗುಣಗಾನ

ದಾವಣಗೆರೆ: ಜಿಲ್ಲಾಡಳಿತ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಜಯಂತಿಯನ್ನು ಶನಿವಾರ ಆಚರಿಸಲಾಯಿತು. ಅಂಬೇಡ್ಕರ್ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಪುಷ್ಪನಮನ ಸಲ್ಲಿಸಿ ಅವರ ಗುಣಗಾನ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಪಾಲಿಕೆ ಆಯುಕ್ತ ಇಸ್ಲಾವುದ್ದೀನ್ ಗದ್ಯಾಳ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಂಜುಳಮ್ಮ, ತಹಶೀಲ್ದಾರ್ ಕಾಂತರಾಜು, ಚುನಾವಣಾ ತಹಶೀಲ್ದಾರ್ ಸಂತೋಷ್ ಕುಮಾರ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಂಗಪ್ಪ, ದೇವರಾಜ ಅರಸು ನಿಗಮದ ಜಿಲ್ಲಾ ವ್ಯವಸ್ಥಾಪಕಿ ರೇಷ್ಮಾ ಕೌಸರ್ ಹಾಗೂ ದಲಿತ ಮುಖಂಡರು ಉಪಸ್ಥಿತರಿದ್ದರು.

ಜೆಡಿಎಸ್‌ ಕಚೇರಿ: ಜೆಡಿಎಸ್‌ ಕಚೇರಿಯಲ್ಲೂ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ್‌ ದಾಸಕರಿಯಪ್ಪ ಮಾತನಾಡಿ, ‘ಅಂಬೇಡ್ಕರ್ ದೇಶಕಂಡ ಅದ್ಭುತ ವ್ಯಕ್ತಿ. ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

ಮುಖಂಡ ಸಿ.ಅಂಜಿನಪ್ಪ ಕಡತಿ ಮಾತನಾಡಿ, ಅಂಬೇಡ್ಕರ್ ಜಗತ್ತಿನ ಶ್ರೇಷ್ಠ ಜ್ಞಾನಿ ಎಂದು ಬಣ್ಣಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಅಂಬೇಡ್ಕರ್ ಪುತ್ಥಳಿಗೆ ಮಾಲೆ ಹಾಕಲಾಯಿತು. ಮುಖಂಡ ಆಲೂರು ನಿಂಗರಾಜ್‌ ಮಾತನಾಡಿ, ಅಂಬೇಡ್ಕರ್ ಭವನ ಕಾಮಗಾರಿಗೆ ನಿರ್ಲಕ್ಷ್ಯವಹಿಸಿದೆ. ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡ ಹೆಗ್ಗೆರೆ ರಂಗಪ್ಪ ಮಾತನಾಡಿದರು. ಯೋಗೇಶ್‌, ದಾದಾಪೀರ್, ಆಂಜನೇಯ, ಗಂಗಾಧರ ನಾಯ್ಕ, ಮಂಜುನಾಥ್, ವೆಂಕಟೇಶ್‌ ಕಣ್ಣಾಳರ್, ಮಹಮ್ಮದ್ ಗೌಸ್‌, ಹೊನ್ನಮ್ಮ ಅವರೂ ಇದ್ದರು.

ಕಾಂಗ್ರೆಸ್‌ ಪುಷ್ಪನಮನ: ನಿಜಲಿಂಗಪ್ಪ ಬಡಾವಣೆಯಲ್ಲಿರುವ ಕಾಂಗ್ರೆಸ್‌ ಕಚೇರಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ.ಶೆಟ್ಟಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಮಹಾನ್‌ ಮಾನವತಾವಾದಿ: ಅಂಬೇಡ್ಕರ್‌ ಜಾತಿ ಪದ್ಧತಿ, ಅಸ್ಪೃಶ್ಯತೆ ಹಾಗೂ ಬಡತನದ ವಿರುದ್ಧ ಹೋರಾಟಕ್ಕೆ ಜೀವನವನ್ನು ಮೀಸಲಿಟ್ಟರು ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಬಣ್ಣಿಸಿದರು.

ಕೆಪಿಸಿಸಿ ಕಾರ್ಮಿಕ ವಿಭಾಗ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗ ಹಮ್ಮಿಕೊಂಡಿದ್ದ ಅಂಬೇಡ್ಕರ್‌ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ಸ್ವಾತಂತ್ರ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಅಂಬೇಡ್ಕರ್ ಶ್ರಮಿಸಿದ್ದರು. ಅವರ ಚಿಂತನೆಗಳು ಜನಸಾಮಾನ್ಯರಿಗೆ ತಲುಪಬೇಕು ಎಂದರು.

ಶೋಷಿತ ಹಾಗೂ ತುಳಿತಕ್ಕೆ ಒಳಗಾದವರು ಹಕ್ಕುಗಳನ್ನು ಪಡೆಯಲು ಅಂಬೇಡ್ಕರ್ ಪ್ರೇರಣೆ ಹಾಗೂ ಸ್ಫೂರ್ತಿ. ಈಚೆಗೆ ಬಿಜೆಪಿ ನಾಯಕರು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಿರುವುದು, ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಲು ಯತ್ನಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ಸಭೆಯಲ್ಲಿ ಡಿ.ಬುಡ್ಡಪ್ಪ, ಆಶ್ರಫ್ ಅಲಿ, ರಹಮತ್‌ವುಲ್ಲಾ, ಸುಬಾನ್, ಅಬ್ದುಲ್ ಜಬ್ಬಾರ್, ಡಿ.ಗೌಸ್, ಮುಮ್ತಾಜ್‌ ಬೇಗಂ, ರೆಹಮತ್ ವುಲ್ಲಾ, ನವೀದ್ ಮಾತನಾಡಿದರು.

ಬಿಜೆಪಿಯಿಂದ ಸ್ವಚ್ಛ ಭಾರತ ಅಭಿಯಾನ: ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಾಂಧಿನಗರದಲ್ಲಿ ಬಿಜೆಪಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಸ್ವಚ್ಛ ಭಾರತ ಅಭಿಯಾನ ನಡೆಸಲಾಯಿತು.

ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ‘ಅಂಬೇಡ್ಕರ್ ಜಾತಿ ವ್ಯವಸ್ಥೆಯ ವಿರುದ್ಧ ದನಿ ಎತ್ತಿದ ಮಹಾನ್‌ ವ್ಯಕ್ತಿ. ಅವರು ಒಂದು ವರ್ಗಕ್ಕೆ ಸೀಮಿತರಲ್ಲ. ಅಂಬೇಡ್ಕರ್ ಅವರ ಹೆಸರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ರಾಜಕೀಯ ಮಾಡುತ್ತಿದೆ’ ಎಂದು ಟೀಕಿಸಿದರು.

ಹಿಂದೆ, ಲೋಕಸಭಾ ಚುನಾವಣೆಯಲ್ಲಿ ಅಂಬೇಡ್ಕರ್ ವಿರುದ್ಧ ಅಭ್ಯರ್ಥಿಯನ್ನು ನಿಲ್ಲಿಸಿ ಸೋಲಿಸಿದ್ದು ಕಾಂಗ್ರೆಸ್‌ ಪಕ್ಷ ಎಂದು ಲೇವಡಿ ಮಾಡಿದರು.

ಜಿಲ್ಲಾ ಎಸ್‌.ಸಿ ಮೋರ್ಚಾ ಅಧ್ಯಕ್ಷ ಎಲ್‌.ಡಿ.ಗೋಣೆಪ್ಪ, ರಾಜನಹಳ್ಳಿ ಶಿವಕುಮಾರ್, ಸೋಗಿ ಶಾಂತಕುಮಾರ್, ಪಿ.ಸಿ.ಶ್ರೀನಿವಾಸ್, ನವೀನ್‌ ಕುಮಾರ್, ಶಿವನಗೌಡ ಪಾಟೀಲ ಅವರೂ ಇದ್ದರು.

ಪ್ರತಿಕ್ರಿಯಿಸಿ (+)