ಭಾನುವಾರ, ಡಿಸೆಂಬರ್ 15, 2019
19 °C
ಸಿರಿಯಾದಲ್ಲಿ ಈಚೆಗೆ ನಡೆದ ರಾಸಾಯನಿಕ ದಾಳಿ

ಸ್ವತಂತ್ರ ತನಿಖೆಗೆ ವಿಶ್ವಸಂಸ್ಥೆಗೆ ಮನವಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಸ್ವತಂತ್ರ ತನಿಖೆಗೆ ವಿಶ್ವಸಂಸ್ಥೆಗೆ ಮನವಿ

ವಿಶ್ವಸಂಸ್ಥೆ: ಸಿರಿಯಾದಲ್ಲಿ ಈಚೆಗೆ ನಡೆದ ರಾಸಾಯನಿಕ ದಾಳಿಯ ಕುರಿತು ಸ್ವತಂತ್ರ ತನಿಖೆ ಆಗಬೇಕೆಂದು ಅಮೆರಿಕ, ಫ್ರಾನ್ಸ್‌ ಮತ್ತು ಬ್ರಿಟನ್‌ ವಿಶ್ವಸಂಸ್ಥೆಗೆ ಮನವಿ ಮಾಡಿವೆ.

ಈ ಕುರಿತು ಜಂಟಿ ಕರಡು ನಿರ್ಣಯ ಮಂಡಿಸಿರುವ ಈ ರಾಷ್ಟ್ರಗಳು, ಸಿರಿಯಾದಲ್ಲಿ ಮಾನವೀಯತೆ ಆಧಾರದಲ್ಲಿ ನೆರವು ನೀಡುವುದು, ಕದನವಿರಾಮ ಜಾರಿಗೊಳಿಸುವುದು, ವಿಶ್ವಸಂಸ್ಥೆಯ ಶಾಂತಿ ಮಾತುಕತೆಯಲ್ಲಿ ಸಿರಿಯಾ ಭಾಗವಹಿಸಬೇಕು ಎಂಬ ಬೇಡಿಕೆಗಳನ್ನು ಇರಿಸಿವೆ.

ಈಚೆಗೆ ಕ್ಷಿಪಣಿ ದಾಳಿ ನಡೆಸಿದ ನಂತರ ಸಿರಿಯಾದಲ್ಲಿ ಶಾಂತಿ ಪುನರ್‌ಸ್ಥಾಪನೆ ಕುರಿತು ಪಾಶ್ಚಿಮಾತ್ಯ ರಾಷ್ಟ್ರಗಳ ನಿಲುವನ್ನು ಈ ಮನವಿ ಬಿಂಬಿಸುತ್ತಿದೆ.

ಕಳೆದ ಏಪ್ರಿಲ್‌ನಲ್ಲಿ ಸಿರಿಯಾದ ಖಾನ್‌ ಶೀಖನ್‌ನಲ್ಲಿ ಸರಿನ್‌ ಎಂಬ ರಾಸಾಯನಿಕ ಬಳಸಿ ನಡೆಸಿದ್ದ ದಾಳಿಯ ಕುರಿತು ವಿಶ್ವಸಂಸ್ಥೆ ನಡೆಸುತ್ತಿದ್ದ ತನಿಖೆಗೆ ರಷ್ಯಾ ಮೂರು ಬಾರಿ ತನ್ನ ವಿಟೊ ಅಧಿಕಾರ ಬಳಸಿ ಅಡ್ಡಿಪಡಿಸಿತ್ತು. ಇದರ ನಂತರ ವಿಶ್ವಸಂಸ್ಥೆಯು ತನಿಖೆಯ ಹೊಣೆಯನ್ನು ರಾಸಾಯನಿಕ ಅಸ್ತ್ರಗಳ ನಿರ್ಬಂಧ ಸಂಸ್ಥೆಗೆ (ಒಪಿಸಿಡಬ್ಲು) ವಹಿಸಿ, 30 ದಿನದೊಳಗೆ ವರದಿ ಸಲ್ಲಿಸುವಂತೆ ತಿಳಿಸಿತ್ತು.

ರಷ್ಯಾದ ಖಂಡನಾ ನಿರ್ಣಯ ತಿರಸ್ಕೃತ: ಸಿರಿಯಾ ಮೇಲಿನ ದಾಳಿಯನ್ನು ಮತ್ತು ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್‌ ದೇಶಗಳ ಯುದ್ಧೋತ್ಸಾಹವನ್ನು ಖಂಡಿಸಲು ರಷ್ಯಾದ ಮನವಿ ಮೇರೆಗೆ ಭದ್ರತಾ ಮಂಡಳಿಯು ತುರ್ತು ಸಭೆ ಕರೆದಿತ್ತು. ಆದರೆ, ರಷ್ಯಾದ ಖಂಡನಾ ನಿರ್ಣಯ ಭಾರಿ ಬಹುಮತದೊಂದಿಗೆ ತಿರಸ್ಕೃತಗೊಂಡಿದೆ.

ಟ್ರಂಪ್‌ ಸಮರ್ಥನೆ: ‘ಗುರಿ ಮುಟ್ಟಲಾಗಿದೆ’ ಎಂದು ಟ್ವೀಟ್‌ ಮಾಡುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಸಿರಿಯಾ ಮೇಲಿನ ಕ್ಷಿಪಣಿ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ.

‘ಸಿರಿಯಾ ಮೇಲೆ ಸಮರ್ಥವಾಗಿ ದಾಳಿ ಮಾಡಲಾಯಿತು. ಗುರಿ ತಲುಪಲಾಗಿದೆ ಎಂದು ನಾನು

ಬಳಸಿದ ನುಡಿಗಟ್ಟನ್ನು ಸುಳ್ಳು ಸುದ್ದಿ ಹಬ್ಬಿಸುವ ಮಾಧ್ಯಮಗಳು ಅನರ್ಥಗೊಳಿಸಬಹುದು’ ಎಂದು ಟ್ವಿಟರ್‌ನಲ್ಲಿ ಹೇಳಿದ್ದಾರೆ.

‘ಮಾಧ್ಯಮಗಳು ಈ ದಾಳಿಯನ್ನು ಖಂಡಿಸುತ್ತವೆ ಎಂದು ಗೊತ್ತಿದೆ. ಆದರೆ ಇದೊಂದು ಅಸಾಧಾರಣ ಮಿಲಿಟರಿ ನುಡಿಗಟ್ಟು. ಇದನ್ನು ಮತ್ತೆ ಬಳಸಲೇಬೇಕಿತ್ತು’ ಎಂದಿದ್ದಾರೆ.

ಇರಾಕ್‌ ಯುದ್ಧದ ಸಂದರ್ಭದಲ್ಲಿ ಅಮೆರಿಕದ ಆಗಿನ ಅಧ್ಯಕ್ಷ ಜಾರ್ಜ್‌ ಡಬ್ಲ್ಯು. ಬುಷ್‌ ಈ ನುಡಿಗಟ್ಟು ಬಳಸಿದ್ದರು.

ತನಿಖೆ ಆರಂಭ: ಡೌಮಾ ಸಮೀಪದ ಪ್ರದೇಶಗಳಲ್ಲಿ ನಡೆದಿದೆ ಎನ್ನಲಾದ ರಾಸಾಯನಿಕ ದಾಳಿ ಕುರಿತು ಒಪಿಸಿಡಬ್ಲ್ಯು ರಾಸಾಯನಿಕ ಪರೀಕ್ಷಾಧಿಕಾರಿಗಳು ಭಾನುವಾರ ತನಿಖೆ ಆರಂಭಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಬಿಕ್ಕಟ್ಟು ಪರಿಹಾರಕ್ಕೆ ಸಹಕರಿಸಲಿ’

ಬೈರೂತ್‌ (ಎಪಿ):
ಸಿರಿಯಾದಲ್ಲಿನ ರಾಜಕೀಯ ಬಿಕ್ಕಟ್ಟು ಬಗೆಹರಿಸಲು ರಷ್ಯಾ ಆಸಕ್ತಿ ವಹಿಸಬೇಕು ಎಂದು ಫ್ರಾನ್ಸ್‌ ಆಗ್ರಹಿಸಿದೆ.

ಅಮೆರಿಕ, ಫ್ರಾನ್ಸ್‌ ಮತ್ತು ಇಂಗ್ಲೆಂಡ್‌ ದೇಶಗಳು ಸಿರಿಯಾ ಮೇಲೆ ಕ್ಷಿಪಣಿ ದಾಳಿ ನಡೆಸಿದ ನಂತರ ಫ್ರಾನ್ಸ್‌ ಈ ಆಗ್ರಹ ಮಾಡಿದೆ.

‘ಸಿರಿಯಾದ ರಾಜಕೀಯ ಬಿಕ್ಕಟ್ಟು ಬಗೆಹರಿಸಲು ನಾವೆಲ್ಲ ಕೈಜೋಡಿಸಬೇಕಿದೆ’ ಎಂದು ಫ್ರಾನ್ಸ್‌ನ ವಿದೇಶಾಂಗ ಸಚಿವ ಜೀನ್–ವೆಸ್‌ ಲೆ ಡ್ರಯಾನ್‌ ಸಂದರ್ಶವೊಂದರಲ್ಲಿ ತಿಳಿಸಿದ್ದಾರೆ.

ಸಿರಿಯಾದ ಮೇಲೆ ಶುಕ್ರವಾರ ಕ್ಷಿಪಣಿ ದಾಳಿ ನಡೆಸುವ ಮುನ್ನ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮೇಕ್ರನ್‌ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಜತೆ ಮಾತನಾಡಿದ್ದರು. ಇವರಿಬ್ಬರೂ ನಿರಂತರ ಸಂಪರ್ಕದಲ್ಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಬಿಕ್ಕಟ್ಟು ಉಲ್ಬಣಗೊಂಡಿರುವ ಪ್ರದೇಶಗಳಲ್ಲಿ ರಾಸಾಯನಿಕ ದಾಳಿ ನಡೆಸಿ, 40 ಮಂದಿ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿ, ಸಿರಿಯಾ ಮೇಲೆ ಈಚೆಗೆ ಕ್ಷಿಪಣಿ ದಾಳಿ ನಡೆದಿತ್ತು.

ಪ್ರತಿಕ್ರಿಯಿಸಿ (+)