ದಿನೇಶ್‌ ಗುಂಡೂರಾವ್‌ ವಿರುದ್ಧ ಪ್ರತಿಭಟನೆ

7

ದಿನೇಶ್‌ ಗುಂಡೂರಾವ್‌ ವಿರುದ್ಧ ಪ್ರತಿಭಟನೆ

Published:
Updated:

ಚಾಮರಾಜನಗರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ನಗರದಲ್ಲಿ ಭಾನುವಾರ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪಕ್ಷದ ಜಿಲ್ಲಾ ಕಚೇರಿಯಿಂದ ಮೆರವಣಿಗೆ ಆರಂಭಿಸಿದ ಕಾರ್ಯಕ ರ್ತರು ಹಾಗೂ ಮುಖಂಡರು ವೀರಭದ್ರೇಶ್ವರಸ್ವಾಮಿ ದೇವಸ್ಥಾನ, ಮಾರಿಗುಡಿ ದೇವಸ್ಥಾನ, ಪಟ್ಟಣ ಠಾಣೆ ಮುಂಭಾಗದ ರಸ್ತೆ, ಚಾಮರಾಜೇಶ್ವರ ದೇವಸ್ಥಾನದ ರಸ್ತೆ ಮೂಲಕ ಭುವನೇಶ್ವರಿ ವೃತ್ತಕ್ಕೆ ತಲುಪಿ ದಿನೇಶ್ ಗುಂಡೂರಾವ್ ಅವರ ಭಾವಚಿತ್ರವನ್ನು ಸುಟ್ಟುಹಾಕಿ ಘೋಷಣೆ ಕೂಗಿದರು.

ದಿನೇಶ್‌ ಹೇಳಿಕೆ ಅವರ ಬೌದ್ಧಿಕ ದಿವಾಳಿತನಕ್ಕೆ ದ್ಯೋತಕ. ಉತ್ತರ ಪ್ರದೇಶದಲ್ಲಿ ನಡೆದ ಘಟನೆಗೆ ಯೋಗಿ ಆದಿತ್ಯನಾಥ್ ಅವರು 2 ಎಸ್‌ಐಟಿ ತನಿಖಾ ತಂಡಗಳನ್ನು ರಚಿಸಿ, ಸಿಬಿಐ ತನಿಖೆಗೂ ವಹಿಸಿದ್ದಾರೆ. ಇದನ್ನು ಅರಿಯದ  ದಿನೇಶ್ ಅವಹೇಳನಕಾರಿಯಾಗಿ ಮಾತನಾಡಿರುವುದು ಅವರ ಅಜ್ಞಾನವನ್ನು ಪ್ರದರ್ಶಿಸುತ್ತದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಸಚಿವರಾಗಿದ್ದ ಎಚ್.ವೈ.ಮೇಟಿ ಅವರ ಲೈಂಗಿಕ ಪ್ರಕರಣ ಸಮಾಜದ ಮುಂದೆ ಇನ್ನೂ ಹಸಿರಾಗಿದೆ. ಆದರೆ, ಸರ್ಕಾರ ಅವರಿಗೆ ಕ್ಲೀನ್‌ ಚಿಟ್ ಕೊಟ್ಟಿರುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

22 ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿರುವುದು, ನಂದಿತಾ, ಸೌಜನ್ಯ, ವಿದ್ವತ್ ಪ್ರಕರಣಗಳಲ್ಲಿ ಕಾಂಗ್ರೆಸ್ ನಡೆದುಕೊಂಡ ರೀತಿಯನ್ನು ದಿನೇಶ್ ಏಕೆ ಟೀಕಿಸಲಿಲ್ಲ ಎಂದು ಅವರು ಪ್ರಶ್ನಿಸಿದರು.

ಪಕ್ಷದ ಜಿಲ್ಲಾ  ಪ್ರಧಾನಕಾರ್ಯ ದರ್ಶಿಗಳಾದ ನೂರೊಂದು ಶೆಟ್ಟಿ, ಶಾಂತಮೂರ್ತಿ, ನಾಗೇಂದ್ರಸ್ವಾಮಿ, ಎಸ್‌.ಟಿ.ಮೋರ್ಚಾದ ಕೆಲ್ಲಂಬಲ್ಲಿ ಸೋಮನಾಯಕ, ಮುಖಂಡರಾದ ಸುಂದರ್‌ರಾಜ್, ಎಚ್.ಎಂ.ಬಸವಣ್ಣ, ಚಂದ್ರಶೇಖರ್, ವೀರೇಂದ್ರ, ಆರ್.ಪುರುಷೋತ್ತಮ್, ಎಸ್.ಕಿರಣ್, ಮಧು ಹಾಜರಿದ್ದರು.

ಆಕ್ರೋಶ

ಗುಂಡ್ಲುಪೇಟೆ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್ ಅವರ ವಿರುದ್ಧ ಭಾನುವಾರ ಬಿಜೆಪಿ ಯುವ ಮೋರ್ಚಾ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಮತ್ತು ಚಾಮರಾಜ ನಗರ ಜಿಲ್ಲಾ ಸಹಕಾರ ಕೇಂದ್ರದ ಎದುರಿನ ಮುಖ್ಯರಸ್ತೆಯಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಗುಂಡೂರಾವ್ ವಿರುದ್ಧ ಘೋಷಣೆಗಳನ್ನು ಕೂಗಿ, ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.

‘ಶನಿವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ  ದಿನೇಶ್ ಗುಂಡುರಾವ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ನಾಥ ಪಂಥಕ್ಕೆ ಸೇರಿದ ಯೋಗಿ ಆದಿತ್ಯಾನಾಥ ಅವರ ವಿರುದ್ಧ ತೀರ ಕೆಳಮಟ್ಟದ ಪದಗಳನ್ನು ಬಳಕೆ ಮಾಡಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ರಾಜ್ಯದ ಮಾಜಿ ಮುಖ್ಯಮಂತ್ರಿಯ ಮಗನಾಗಿ, ಜವಾಬ್ದಾರಿಯುತ ಸ್ಥಾನದಲ್ಲಿದ್ದು ಕೇವಲ ಪ್ರಚಾರಕ್ಕಾಗಿ ಈ ರೀತಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಘಟಕದ ಅಧ್ಯಕ್ಷ ಪ್ರಣಯ್, ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಂ.ನಂದೀಶ್, ಜಿಲ್ಲಾ ಘಟಕದ ಕಾರ್ಯದರ್ಶಿ ಮಹದೇವಸ್ವಾಮಿ, ಶಿವಪುರ ಮಂಜು, ಸುರೇಶ್, ಜಗಪ್ಪ, ಆನಂದ್, ಪ್ರವೀಣ್, ನಿಂಗರಾಜನಾಯ್ಕ್ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry