ಮಂಗಳವಾರ, ಡಿಸೆಂಬರ್ 10, 2019
26 °C
ದಾವಣಗೆರೆ: ರೈತರು, ಪ್ರಯಾಣಿಕರಿಗೆ ಮಜ್ಜಿಗೆ, ಕುಡಿಯುವ ನೀರು ವಿತರಣೆ

ನೀರಡಿಕೆ ನೀಗಿಸುವ ಸ್ವಯಂ ಸೇವಾ ಸಂಸ್ಥೆ

ವಿಜಯ ಸಿ.ಕೆಂಗಲಹಳ್ಳಿ Updated:

ಅಕ್ಷರ ಗಾತ್ರ : | |

ನೀರಡಿಕೆ ನೀಗಿಸುವ ಸ್ವಯಂ ಸೇವಾ ಸಂಸ್ಥೆ

ದಾವಣಗೆರೆ: ಜಿಲ್ಲೆಯಲ್ಲಿ ಈಗ ಕೆಂಡದಂತಹ ಬಿಸಿಲು. ವಿವಿಧ ಕೆಲಸಗಳಿಗಾಗಿ ಹಳ್ಳಿಗಳಿಂದ ನಗರಕ್ಕೆ ಬರುವ ಜನ ಬಿಸಿಲಿನ ತಾಪಕ್ಕೆ ಸವಳಿಯುತ್ತಿದ್ದಾರೆ. ನೀರಡಿಕೆ, ಆಯಾಸದಿಂದ ಹೈರಾಣಾಗುತ್ತಿದ್ದಾರೆ.

ಜನರ ಇಂಥ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಕರುಣಾ ಜೀವ ಕಲ್ಯಾಣ ಹಾಗೂ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಮುಂದಾಗಿವೆ. ಎರಡು ವರ್ಷಗಳಿಂದ ನಿರಂತರವಾಗಿ ದೇವನಗರಿಯ ದಾನಿಗಳ ನೆರವು ಪಡೆದು ಬೇಸಿಗೆಯಲ್ಲಿ ಉಚಿತವಾಗಿ ನೀರು, ಮಜ್ಜಿಗೆ ವಿತರಿಸುವ ಮೂಲಕ ರೈತರ, ಕೂಲಿಕಾರರು, ವೃದ್ಧರ ನೀರಡಿಕೆ ನಿವಾರಿಸುತ್ತಿವೆ.

ವಿವಿಧೆಡೆ ನೀರು, ಮಜ್ಜಿಗೆ ವಿತರಣೆ: ಕರುಣಾ ಜೀವ ಕಲ್ಯಾಣ ಟ್ರಸ್ಟ್ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆ, ಜಯದೇವ ಸರ್ಕಲ್, ತ್ರಿಶೂಲ್ ಲಾಡ್ಜ್ ರಸ್ತೆ, ಸರ್ಕಾರಿ ಮಹಿಳಾ ಹೆರಿಗೆ ಆಸ್ಪತ್ರೆಯಲ್ಲಿ ನಿತ್ಯ ಬೆಳಿಗ್ಗೆ 11.30ರಿಂದ ಮಧ್ಯಾಹ್ನ 1.30ರವರೆಗೆ ಉಚಿತವಾಗಿ ಸಾರ್ವಜನಿಕರಿಗೆ ನೀರು ಮಜ್ಜಿಗೆ ವಿತರಣೆ ಮಾಡುತ್ತಿದೆ.

ಒಂದು ತಿಂಗಳವರೆಗೆ ಮಜ್ಜಿಗೆ ಹಾಗೂ ವರ್ಷವಿಡೀ ನೀರು ವಿತರಿಸಲಾಗುತ್ತಿದೆ. ಎಲ್ಲಾ ವರ್ಗದ ಜನರನ್ನು ಪ್ರೀತಿಯಿಂದ ಟ್ರಸ್ಟ್ ಕಾಣುತ್ತಿದೆ. ಇದರಿಂದಾಗಿ ನಿತ್ಯ ನಗರದ ಆಸ್ಪತ್ರೆಗೆ ಬರುವ ರೋಗಿಗಳಿಗೆ, ಕಚೇರಿ ಕೆಲಸಗಳಿಗೆ ಬರುವ ರೈತರಿಗೆ, ಕೂಲಿ ಕಾರ್ಮಿಕರಿಗೆ ಅನುಕೂಲ ಆಗುತ್ತಿದೆ.

ನೀರು ವಿತರಣೆಯ ವೆಚ್ಚ: ನಾಲ್ಕು ಸಾವಿರ ಜನರಿಗೆ ನೀರು, 1,600 ಜನರಿಗೆ ಮಜ್ಜಿಗೆ ವಿತರಣೆ ಮಾಡಲಾಗುತ್ತಿದೆ. ಒಂದು ದಿನಕ್ಕೆ ₹ 5,000 ಖರ್ಚಾಗುತ್ತಿದೆ. ಈ ಸೇವೆಯ ಜೊತೆಗೆ ಮೆಡಿಕಲ್ ಸ್ಟೋರ್‌, ಲ್ಯಾಬ್‌ಗಳಿಗೆ ಬರುವ ಜನರಿಗೆ ನೀರು ತಲುಪಿಸುವ ನಿಟ್ಟಿನಲ್ಲಿ 300 ವಾಟರ್‌ ಕ್ಯಾನ್‌ ನೀಡುವ ಗುರಿ ಇದೆ. ದಾನಿಗಳು ನೆರವು ನೀಡಲು ವೀರೇಶ್ (ಮೊ: 8217641813) ಅವರನ್ನು ಸಂಪರ್ಕಿಸಬಹುದು ಎನ್ನುತ್ತಾರೆ ಟ್ರಸ್ಟ್‌ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ.

ಶುದ್ಧ ನೀರು ವಿತರಣೆ: ಇಲ್ಲಿನ ಪಿ.ಜೆ. ಬಡಾವಣೆಯ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಸತ್ಯಸಾಯಿ ಬಾಬಾ ಹೆಸರಿನ ‘ಸತ್ಯಸಾಯಿ ಗಂಗಾ’ ಯೋಜನೆಯಡಿ ಇಲ್ಲಿನ ಹಳೆ ಬಸ್‌ನಿಲ್ದಾಣದಲ್ಲಿ ಎರಡು ವರ್ಷಗಳಿಂದ ನಿರಂತರವಾಗಿ ಬೇಸಿಗೆಯಲ್ಲಿ ಮೂರು ತಿಂಗಳ ಕಾಲ ಉಚಿತವಾಗಿ ಶುದ್ಧ ನೀರನ್ನು ಸಾರ್ವಜನಿಕರಿಗೆ ವಿತರಿಸುತ್ತಿದೆ. ನಗರಕ್ಕೆ ಬರುವ ಪ್ರಯಾಣಿಕರ, ವಾಹನ ಸವಾರರ, ಚಾಲಕರ, ಹಮಾಲರ, ಮಹಿಳೆಯರ, ವೃದ್ಧರ ನೀರಡಿಕೆಯನ್ನು ನೀಗಿಸುತ್ತಿರುವುದಕ್ಕೆ ಸಂತಸವಾಗಿದೆ ಎಂದು ಸಮಿತಿಯ ಪ್ರಶಾಂತ್ ಕುರುಡೇಕರ್ ತಿಳಿಸಿದರು.

ಈ ಬಾರಿ ಮಾರ್ಚ್‌ 21ರಿಂದ ಜೂನ್ 21ರವರೆಗೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 3.30ರವೆರೆಗೆ ಶುದ್ಧ ನೀರು ವಿತರಿಸಲಾಗುತ್ತಿದೆ. 20 ಲೀಟರ್‌ನ 20 ಕ್ಯಾನ್‌ಗಳು ನಿತ್ಯ ಬೇಕಾಗುತ್ತಿದೆ. ಇದಕ್ಕೆ ತಗಲುವ ವೆಚ್ಚವನ್ನು ದಾನಿಗಳಿಂದ ಹಾಗೂ ಸಂಘದ ಸದಸ್ಯರಿಂದ ಭರಿಸಲಾಗುತ್ತಿದೆ ಎನ್ನುತ್ತಾರೆ ಸಂಸ್ಥೆಯ ಸದಸ್ಯೆ ಸುಜಾತಾ ಕೃಷ್ಣ.

‘ನೀರಿಗೆ ಪರದಾಡುವುದು ಧರ್ಮವಲ್ಲ’

‘ಇತ್ತೀಚಿನ ದಿನಗಳಲ್ಲಿ ಮಳೆಯಿಲ್ಲದೇ ಜಲಮೂಲಗಳು ಬತ್ತುತ್ತಿವೆ. ನೀರಿಗಾಗಿ ಪರಿತಪಿಸುವಂತಾಗಿದೆ. ನೀರಿಗಾಗಿ ಹೊಡೆದಾಟ, ಜಗಳಗಳು ಸಾಮಾನ್ಯವಾಗುತ್ತಿವೆ. ಜನ ನೀರಿಗಾಗಿ ಪರದಾಡುವುದು ಧರ್ಮವಲ್ಲ. ಮುಂದಿನ ದಿನಗಳಲ್ಲಿ ನಗರದ ಯಾವ ಭಾಗದಲ್ಲೂ ಜನರಿಗೆ ಕುಡಿಯುವ ನೀರಿನ ಕೊರತೆ ಉಂಟಾಗಬಾರದು. ಆ ರೀತಿಯ ವಾತಾವರಣ ನಿರ್ಮಿಸುವುದು ಸಂಸ್ಥೆಯ ಧ್ಯೇಯವಾಗಿದೆ. ಆ ನಿಟ್ಟಿನಲ್ಲಿ ಸೇವಾ ಕಾರ್ಯದ ಜೊತೆಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಹೇಳಿದರು.

**

ಹೋಟೆಲ್‌ಗೆ ಹೋಗಿ ಬರೀ ನೀರು ಕೇಳಿದರೆ ಕೊಡುವುದಿಲ್ಲ. ಇಂಥ ಸಂದರ್ಭದಲ್ಲಿ ನೀರು, ಮಜ್ಜಿಗೆ ವಿತರಿಸುತ್ತಿರುವುದು ಶ್ಲಾಘನೀಯ ಕಾರ್ಯ –ಪರಶುರಾಮ್ ಘೋರ್ಪಡೆ, ಸ್ಥಳೀಯ ನಿವಾಸಿ.

**

ಪ್ರತಿಕ್ರಿಯಿಸಿ (+)