ನವಲಗುಂದ ಕಾಂಗ್ರೆಸ್‌ನಲ್ಲಿ ಬಂಡಾಯ ಸ್ಫೋಟ

7
ವಿನೋದ ಅಸೂಟಿಗೆ ಟಿಕೆಟ್‌ ದಕ್ಕಿದ ಹಿನ್ನೆಲೆ; ರಾಜೀನಾಮೆಗೆ ಮುಂದಾದ ಕೆ.ಎನ್‌. ಗಡ್ಡಿ

ನವಲಗುಂದ ಕಾಂಗ್ರೆಸ್‌ನಲ್ಲಿ ಬಂಡಾಯ ಸ್ಫೋಟ

Published:
Updated:

ಹುಬ್ಬಳ್ಳಿ: ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ವಿನೋದ ಅಸೂಟಿ ಅವರಿಗೆ ನವಲಗುಂದ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾದ ಹಿನ್ನೆಲೆಯಲ್ಲಿ ಆಕಾಂಕ್ಷಿಗಳಾದ ಮಾಜಿ ಸಚಿವ ಕೆ.ಎನ್‌. ಗಡ್ಡಿ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಪ್ರಕಾಶ ಅಂಗಡಿ ಬಂಡಾಯವೆದ್ದಿದ್ದಾರೆ.

ಟಿಕೆಟ್‌ ತಮಗೆ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದ ಕೆ.ಎನ್‌. ಗಡ್ಡಿ ಭಾನುವಾರ ಬೆಂಗಳೂರಿನಲ್ಲೇ ಬಿಡಾರ ಹೂಡಿದ್ದರು. ಆದರೆ, ತಮ್ಮನ್ನು ಕಡೆಗಣಿಸಿ ಯುವ ಮುಖಂಡ ವಿನೋದ ಅವರಿಗೆ ಟಿಕೆಟ್‌ ನೀಡಿದ್ದರಿಂದ ಕೆಂಡಾ ಮಂಡಲರಾಗಿರುವ ಗಡ್ಡಿ, ಸೋಮವಾರ ನವಲಗುಂದಕ್ಕೆ ಬಂದ ಬಳಿಕ ಪಕ್ಷಕ್ಕೆ

ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ತಮ್ಮ ಪತಿಗೆ ಟಿಕೆಟ್‌ ಸಿಗಲಿಲ್ಲ ಎಂಬುದನ್ನು ಅರಿತ ಗಡ್ಡಿ ಪತ್ನಿ ಅನ್ನಪೂರ್ಣಾ ಗಡ್ಡಿ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ನಿಶ್ಚಿತ ಎಂದು ಪತಿಯ ಪರವಾಗಿ ನವಲಗುಂದದ ತಮ್ಮ ಮನೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಎದುರು ಘೋಷಿಸಿದರು. ದೂರವಾಣಿಯಲ್ಲಿ ಪತ್ನಿಯನ್ನು ಸಮಾಧಾನಪಡಿಸಿದ ಕೆ.ಎನ್‌. ಗಡ್ಡಿ ಅವರು, ಇಷ್ಟು ವರ್ಷ ಪಕ್ಷಕ್ಕೆ ದುಡಿದರೂ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಟ್ಟಿಲ್ಲ. ಹೀಗಾಗಿ, ಪಕ್ಷ ತೊರೆಯುವುದು ನಿಶ್ಚಿತ ಎಂದು ಹೇಳಿದರು. ಆದರೆ ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡ ಎಂದು ಪತ್ನಿಗೆ ಹೇಳಿದರು ಎಂದು ಗೊತ್ತಾಗಿದೆ.

ಸಭೆ ನಡೆಸಿದ ಕರಿಗಾರ: ಭಾನುವಾರ ನವಲಗುಂದದಲ್ಲಿ ಸಾವಿರಕ್ಕೂ ಅಧಿಕ ಬೆಂಬಲಿಗರ ಸಭೆ ನಡೆಸಿದ ಶಿವಾನಂದ ಕರಿಗಾರ ತಮ್ಮ ಸ್ಪರ್ಧೆ ಕುರಿತು ಅಭಿಪ್ರಾಯ ಕೇಳಿದರು. ‘ಕಾಂಗ್ರೆಸ್‌ ಟಿಕೆಟ್‌ ಸಿಗಲಿ, ಬಿಡಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ’ ಎಂದು ಬೆಂಬಲಿಗರು ಹೇಳಿದ್ದರಿಂದ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಟಿಕೆಟ್‌ ಘೋಷಣೆಯಾದ ಬಳಿಕವೂ ಕರಿಗಾರ ಕ್ಷೇತ್ರದಲ್ಲಿ ಬೆಂಬಲಿಗರನ್ನು ಭೇಟಿಯಾದರು.

ಬಂಡಾಯ ಅಭ್ಯರ್ಥಿಯಾಗುವುದು ಖಚಿತ: ನವಲಗುಂದ ಕಾಂಗ್ರೆಸ್‌ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಪ್ರಕಾಶ ಅಂಗಡಿ ಪಕ್ಷದ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. 21 ವರ್ಷಗಳಿಂದ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇನೆ. ಸಾಕಷ್ಟು ಜನಪರ ಕೆಲಸ ಮಾಡಿದ್ದೇನೆ. ಆದರೂ, ನನ್ನನ್ನು ಪರಿಗಣಿಸಿಲ್ಲ. ಗಡ್ಡಿ ಅವರು 15–20 ವರ್ಷ ಕ್ಷೇತ್ರದ ಮೇಲೆ ಹಿಡಿತ ಹೊಂದಿದ್ದರು. ಈಗ ವಿನೋದ ಅಸೂಟಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸುತ್ತಾರೆ. ಹೀಗಾದರೆ, ನಾವೇನು ಮಾಡಬೇಕು? ಹೀಗಾಗಿ ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದು ಖಚಿತ ಎಂದು ಪ್ರಕಾಶ ಅಂಗಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಣ್ಣೀರು ಹಾಕಿದ್ದ ವಿನೋದ: ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ, ಕೆ.ಎನ್‌. ಗಡ್ಡಿ, ಬಿ.ಕೆ. ಮಹೇಶ್‌, ಪ್ರಕಾಶ ಅಂಗಡಿ ಅವರ ಸತತ ಲಾಬಿ ಮಧ್ಯೆಯೂ ಕುರುಬ ಸಮುದಾಯಕ್ಕೆ ಸೇರಿದ ವಿನೋದ ಅಸೂಟಿಗೆ ಟಿಕೆಟ್‌ ದಕ್ಕಿರುವುದಕ್ಕೆ ಕಾರಣ, ಯುವ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿರುವುದು, ರಾಜ್ಯ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿರುವುದು ಎನ್ನಲಾಗಿದೆ.

ಹುಬ್ಬಳ್ಳಿ ಹೊರವಲಯದ ಕುಸುಗಲ್‌ ರಸ್ತೆಯಲ್ಲಿ ಫೆಬ್ರುವರಿ 3ರಂದು ಹಮ್ಮಿಕೊಂಡಿದ್ದ ಯುವ ಸಮಾವೇಶದಲ್ಲಿ ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಅಮರೇಂದ್ರ ಸಿಂಗ್‌ ರಾಜಾ ಬ್ರಾರ್‌ ಭಾಗವಹಿಸಿದ್ದರು. ಆ ಸಭೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಅಸೂಟಿ ಸಹಜವಾಗಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಅದೇ ರಸ್ತೆಯಲ್ಲಿ ಹಾದು ಹೋಗಿದ್ದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಸಮಾವೇಶಕ್ಕೆ ಬಂದಿರಲಿಲ್ಲ. ತಾವು ನಂಬಿದವರೇ ಕೈಕೊಟ್ಟರು ಎಂದು ವಿನೋದ ಅಸೂಟಿ ಅಂದು ಕಣ್ಣೀರು ಹಾಕಿದ್ದರು. ಆದರೆ, ಈ ಶ್ರಮಕ್ಕೆ ಪ್ರತಿಫಲ ಸಿಗುತ್ತದೆ ಎಂದು ಭರವಸೆ ನೀಡಿದ್ದ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ವರಿಷ್ಠರೊಂದಿಗೆ ಮಾತನಾಡಿದ್ದರು. ಯುವಕರಿಗೆ ಅವಕಾಶ ಕೊಡಬೇಕೆಂಬ ರಾಹುಲ್‌ ಗಾಂಧಿ ಅವರ ಅಪೇಕ್ಷೆಯೂ ಟಿಕೆಟ್‌

ದಕ್ಕುವಲ್ಲಿ ಕೆಲಸ ಮಾಡಿದೆ ಎನ್ನಲಾಗಿದೆ.

ಮಠ, ಮಸೀದಿ ಸುತ್ತಿದ ನಾಲವಾಡ

ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಅವರ ವಿರುದ್ಧ ಪ್ರಬಲ ಸ್ಪರ್ಧೆ ಒಡ್ಡಲಿರುವ ಕಾಂಗ್ರೆಸ್‌ನ ಡಾ. ಮಹೇಶ ನಾಲವಾಡ ಟಿಕೆಟ್‌ ಖಚಿತವಾಗುತ್ತಿದ್ದಂತೆಯೇ ನಗರದ ಸಿದ್ಧಾರೂಢಮಠ, ಮಠದ ಪಕ್ಕದಲ್ಲಿರುವ ಫತೇಶಾವಲಿ ದರ್ಗಾ ಹಾಗೂ ಮೂರುಸಾವಿರ ಮಠಕ್ಕೆ ತೆರಳಿ ಆಶೀರ್ವಾದ ಪಡೆದರು. ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ನಾಗರಾಜ ಛಬ್ಬಿ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ಎರಡು ಹೊಸ ಮುಖಗಳಿಗೆ ಅವಕಾಶ

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಈ ಬಾರಿ ಇಬ್ಬರು ಹೊಸಬರಿಗೆ ಅವಕಾಶ ನೀಡಿದ್ದಾರೆ. ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಎಸ್‌.ಆರ್‌. ಮೋರೆ ಅವರನ್ನು ಕಡೆಗಣಿಸಿ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದ ಇಸ್ಮಾಯಿಲ್‌ ತಮಟಗಾರ ಹಾಗೂ ನವಲಗುಂದದಲ್ಲಿ ಮಾಜಿ ಸಚಿವ ಕೆ.ಎನ್. ಗಡ್ಡಿ, ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಸೇರಿದಂತೆ ಹಲವರನ್ನು ಪಕ್ಕಕ್ಕೆ ಸರಿಸಿ 30 ವರ್ಷದ ಯುವಕ ವಿನೋದ ಅಸೂಟಿ ಅವರಿಗೆ ಟಿಕೆಟ್‌ ನೀಡಿರುವುದು ಅಚ್ಚರಿ ಮೂಡಿಸಿದೆ.ನಿರೀಕ್ಷೆಯಂತೆ ಸಚಿವರಾದ ವಿನಯ ಕುಲಕರ್ಣಿ, ಸಂತೋಷ ಲಾಡ್‌, ಶಾಸಕರಾದ ಸಿ.ಎಸ್‌. ಶಿವಳ್ಳಿ ಅವರಿಗೆ ಟಿಕೆಟ್‌ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry