ಮಂಗಳವಾರ, ಏಪ್ರಿಲ್ 20, 2021
29 °C

ಮಾವು ರಫ್ತು ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾವು ರಫ್ತು ಹೇಗೆ?

ಹ.ನ. ಗೋಪಿನಾಥ್

ಹಣ್ಣುಗಳ ರಾಜನೆಂದೇ ಪರಿಗಣಿಸಲಾಗುವ ಮಾವನ್ನು ತಾಜಾ ಇಲ್ಲವೆ ಸಂಸ್ಕರಿಸಿದ ರೂಪದಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ವೈವಿಧ್ಯಮಯ ತಳಿ, ವಿವಿಧ ಗಾತ್ರ, ಸುವಾಸನೆ ಹಾಗೂ ರುಚಿಯಿಂದ ಕೂಡಿದ ಹಣ್ಣುಗಳಿಂದಾಗಿ ಮಾವು ಎಲ್ಲರಿಗೂ ಅಚ್ಚುಮೆಚ್ಚು.

ವಿಸ್ತಾರ ಹಾಗೂ ಉತ್ಪಾದನೆಯಲ್ಲಿ ದೇಶದಲ್ಲಿಯೇ ಈ ಹಣ್ಣು ಅಗ್ರಸ್ಥಾನದಲ್ಲಿ ಇದೆ. ರಾಜ್ಯದಲ್ಲಿ ಮಾವಿನ ಸ್ಥಾನ ಇತರೆಲ್ಲ ಹಣ್ಣುಗಳಿಗಿಂತ ಹೆಚ್ಚಿನದು. ನಮ್ಮಲ್ಲಿ ಮಾವನ್ನು ಸುಮಾರು 1,45,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಹಣ್ಣುಗಳ ಉತ್ಪಾದನೆ ಏರು ಹಂಗಾಮಿನಲ್ಲಿ 9 ಲಕ್ಷ ಟನ್‍ಗಳಷ್ಟು ಇರುತ್ತದೆ. ರಾಜ್ಯದಲ್ಲಿ ಬೆಳೆಯಲಾಗುತ್ತಿರುವ ಮಾವಿನ ತಳಿಗಳಲ್ಲಿ ಬಾದಾಮಿ (40%), ತೋತಾಪುರಿ (20%), ಬಂಗನ್‍ಪಲ್ಲಿ (10%) ನೀಲಂ (10%), ರಸಪುರಿ (5%) ಮಲ್ಲಿಕಾ (2%) ಮುಖ್ಯವಾದವು. ಶೇ 13ರಷ್ಟು ಇತರ ತಳಿಗಳನ್ನು ಬೆಳೆಯಲಾಗುತ್ತದೆ. ಸುಮಾರು 60 ಸಾವಿರ ರೈತರು ಮಾವಿನ ಕೃಷಿಯಲ್ಲಿ ನೇರವಾಗಿ ಪಾಲ್ಗೊಂಡಿರುತ್ತಾರೆ.

ವಿದೇಶಗಳಲ್ಲಿ ಭಾರತೀಯ ಮಾವಿಗೆ ಹೆಚ್ಚಿನ ಬೇಡಿಕೆ ಇದ್ದರೂ ಕೆಲವೊಂದು ಮೂಲಭೂತ ಸಿದ್ಧತೆ/ಕೊರತೆಗಳ ಕಾರಣಗಳಿಂದಾಗಿ ಈ ಹಣ್ಣಿನ ರಫ್ತು ಇಲ್ಲಿಯವರೆಗೆ ಹೆಚ್ಚಿನ ಪ್ರಗತಿ ಸಾಧಿಸಿಲ್ಲ. ಆದರೆ, ಈಗ ಕೇಂದ್ರ ಸರ್ಕಾರದ ಅಪೆಡಾ ಸಂಸ್ಥೆ, ರಾಜ್ಯದ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ (ಕೆಪೆಕ್), ತೋಟಗಾರಿಕೆ ಇಲಾಖೆ ಹಾಗೂ ಇತರ ಸಂಸ್ಥೆಗಳು ಜಂಟಿಯಾಗಿ ಮಾವಿನ ಹಣ್ಣಿನ ರಫ್ತು ಸಂವರ್ಧನೆಗೆ ಚಾಲನೆ ನೀಡುತ್ತಿವೆ.

ಮಾವಿನ ಹಣ್ಣಿನ ಬೆಳೆಗಾರರಿಗೆ ಅಗತ್ಯ ರಫ್ತು ಮಾಹಿತಿ ನೀಡುವುದ ರಿಂದ ಹಾಗೂ ರಫ್ತು ಸಂಪರ್ಕಗಳನ್ನು ದೊರಕಿಸುವುದರಿಂದ ಮಾವಿನ ಹಣ್ಣುಗಳ ರಫ್ತನ್ನು ಸಾಧಿಸುವ ಉತ್ತಮ ಅವಕಾಶಗಳು ರಾಜ್ಯದಲ್ಲಿವೆ.

ಮಾವಿನ ಹಣ್ಣಿನ ಬೇಸಾಯದಲ್ಲಿ ಕೋಲಾರ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ಸಾವಿರಾರು ರೈತರು ತಮ್ಮನ್ನು ತೊಡಗಿಸಿಕೊಂಡಿದ್ದು, ಆಧುನಿಕ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ. ಮಾವು ರಫ್ತು ಮಾಡುವ ಉದ್ದಿಮೆದಾರರನ್ನು ರೈತರಿಗೆ ಸಂಪರ್ಕಿಸುವ ಕೆಲಸ ಬರದಿಂದ ಸಾಗುತ್ತಿದೆ.

ನಮ್ಮ ರಾಜ್ಯದಲ್ಲಿ ರಫ್ತು ಯೋಗ್ಯ ಮಾವಿನ ತಳಿಗಳು ಏಪ್ರಿಲ್ -ಮೇ ತಿಂಗಳಲ್ಲಿಯೇ ಹಣ್ಣಿಗೆ ಬರುತ್ತದೆ. ಆಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಣ್ಣು ಪೂರೈಸಲು ಹೆಚ್ಚಿನ ಪೈಪೋಟಿ ಇಲ್ಲದ ಕಾರಣ ಇದೊಂದು ಅಪೂರ್ವ ಅವಕಾಶ. ಮಾವಿನ ಹಣ್ಣುಗಳನ್ನು ರಫ್ತು ಮಾಡುವುದರಿಂದ ರೈತರಿಗೆ ಹೆಚ್ಚಿನ ಆದಾಯ ಲಭ್ಯವಿರುವುದರ ಜೊತೆಗೆ ಆಂತರಿಕ ಮಾರುಕಟ್ಟೆಯಲ್ಲಿ ಬೆಲೆ ಕುಸಿಯದಂತೆ ನೋಡಿಕೊಳ್ಳಲು ಸಾಧ್ಯ.ಮಾವಿನ ಬೇಡಿಕೆ ಇರುವ ದೇಶಗಳು: ನೆದರ್ಲೆಂಡ್, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್ (ಯುರೋಪ್‌), ದುಬೈ, ಕುವೈತ್, ಯುಎಇ (ಮಧ್ಯಪ್ರಾಚ್ಯ), ಸಿಂಗಪುರ, ಜಪಾನ್ (ಪೂರ್ವಾತ್ಯ).

ಯುರೋಪ್ ಮಾರುಕಟ್ಟೆ: 20 ವರ್ಷ ಗಳಿಂದೀಚೆಗೆ ಯುರೋಪ್ ದೇಶಗಳಲ್ಲಿ ಮಾವಿನ ಬೇಡಿಕೆ ಹೆಚ್ಚಾಗುತ್ತಲಿದ್ದು, ಆಮದು ಪ್ರಮಾಣ ಸಹ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲಿದೆ. ಪ್ರತಿವರ್ಷ ಸುಮಾರು 70 ಸಾವಿರ ಟನ್‍ಗಳಿಗಿಂತ ಹೆಚ್ಚು ಮಾವಿನ ಹಣ್ಣು ರಫ್ತಾಗುತ್ತಲಿದೆ. ಬ್ರೆಜಿಲ್, ಅಮೆರಿಕ, ದಕ್ಷಿಣ ಆಫ್ರಿಕಾ, ಐವರಿ ಕೋಸ್ಟ್, ಇಸ್ರೇಲ್, ಮೆಕ್ಸಿಕೊ, ಪೆರು, ಪಾಕಿಸ್ತಾನ ಹಾಗೂ ಭಾರತ ದೇಶಗಳಿಂದ ಅಲ್ಲಿಗೆ ಹಣ್ಣು ಆಮದಾಗುತ್ತಿದೆ. ಪ್ರಸಕ್ತ ಯೂರೋಪಿನ ಒಟ್ಟು ಆಮದಿನಲ್ಲಿ ಭಾರತದ ಪಾಲು ಶೇಕಡ 4ರಷ್ಟು ಮಾತ್ರ. ಇಲ್ಲಿ ಭಾರತದ ಅಲ್ಫಾನ್ಸೊ (ಬಾದಾಮಿ) ಮತ್ತು ಬಂಗನ್‍ಪಲ್ಲಿ, ತೋತಾಪುರಿ ಮಾವಿನ ಹಣ್ಣಿಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ (ಕ್ರಮವಾಗಿ 90%, 8%, 2%).

ರಫ್ತು ಮಾಡುವ ಪ್ರತಿ ಕೆ.ಜಿ. ಹಣ್ಣಿಗೆ ಜರ್ಮನಿಯಲ್ಲಿ ₹350, ಫ್ರಾನ್ಸ್‌ ₹275, ಇಂಗ್ಲೆಂಡ್‌ ₹270, ನೆದರ್ಲೆಂಡ್‌ ನಲ್ಲಿ ₹250ರಷ್ಟು ಬೆಲೆ ಇದೆ. ಮಧ್ಯಪ್ರಾಚ್ಯ ದೇಶಗಳ ಆಮದು ಬೇಡಿಕೆಯನ್ನು ಹೆಚ್ಚಾಗಿ ಪಾಕಿಸ್ತಾನ ಹಾಗೂ ಸ್ವಲ್ಪಮಟ್ಟಿಗೆ ಭಾರತ ದೇಶಗಳು ಪೂರೈಸುತ್ತಿವೆ. ರಫ್ತು ಮಾಡುವ ಪ್ರತಿ ಕೆ.ಜಿ. ಬಾದಾಮಿ ಹಣ್ಣಿಗೆ ₹ 250, ದಶೇರಿ ₹200, ನಫೇದ, ಚಾಸಾ ಹಣ್ಣಿಗೆ ₹200ರಷ್ಟು ಬೆಲೆಯಿದೆ.

ರಫ್ತುಯೋಗ್ಯ ಹಣ್ಣುಗಳ ಗುಣಲಕ್ಷಣಗಳು

ಹಣ್ಣುಗಳು ತಳಿಗನುಗುಣವಾಗಿ ಸರಾಸರಿ ಈ ಕೆಳಗಿನ ತೂಕ ಹೊಂದಿರಬೇಕು.

ಅಲ್ಫಾನ್ಸೊ – 200-250 ಗ್ರಾಂ.

ಬಂಗನ್‍ಪಲ್ಲಿ – 250-350 ಗ್ರಾಂ.

ಮಲ್ಲಿಕಾ – 300-400 ಗ್ರಾಂ.

ತೋತಾಪುರಿ – 300-400 ಗ್ರಾಂ.

ಬಣ್ಣ: ಹಣ್ಣು ಮಾಗಿದಾಗ ತಳಿಗನುಗುಣವಾದ ಗಾಢ ವರ್ಣ ಹೊಂದಿರಬೇಕು. ಬಾದಾಮಿಯಲ್ಲಿ ಹಳದಿ ವರ್ಣದ ಹಿನ್ನೆಲೆ ಯಲ್ಲಿ ಕೆಂಪುವರ್ಣ ಸಂಚಯವಾಗಿದ್ದರೆ ಹೆಚ್ಚಿನ ಆದ್ಯತೆ. ಹಣ್ಣು ಪೂರ್ಣ ಪ್ರಮಾಣದಲ್ಲಿ ಮಾಗಿದ್ದು, ಧೃಡವಾಗಿರಬೇಕು, ಸಿಪ್ಪೆ ಮೇಲೆ ನಿರಿಗೆಗಳು ಇರಬಾರದು. ಪಕ್ವತೆ ಮಿತಿ ದಾಟಿರಬಾರದು.

ನೋಟ: ಹಣ್ಣುಗಳು ಆಕರ್ಷಕವಾಗಿರಬೇಕು, ಸಿಪ್ಪೆ ಗಳ ಮೇಲೆ ರೋಗರುಜಿನ, ಕೀಟಗಳ ಬಾಧೆಯ ಕಲೆ, ಸೂರ್ಯನ ಉರಿತ, ಸೋನೆಯ ಕಲೆ, ಕೊಳೆತದ ಚಿಹ್ನೆ, ಕಂದು ವರ್ಣದ ಲೆಂಟಿಸೆಲ್‍ಗಳಿಂದ ಮುಕ್ತವಾಗಿರಬೇಕು.

ರುಚಿ: ಹಣ್ಣುಗಳು ತಳಿಗನುಗುಣವಾಗಿ ನಿರ್ದಿಷ್ಟ ರುಚಿ ಹಾಗೂ ಮಧುರ ಸುವಾಸನೆ ಹೊಂದಿರಬೇಕು, ತಿರುಳು ರುಚಿಭರಿತ ಆಗಿರಬೇಕು, ನಾರಿನ ಅಂಶ ಇರಬಾರದು, ಸ್ಪಾಂಜಿ ಟಿಶ್ಯೂ, ಹಣ್ಣಿನ ಹುಳಗಳು ಹಾಗೂ ಅವುಗಳ ಮೊಟ್ಟೆಗಳಿಂದ ಮುಕ್ತವಾಗಿರಬೇಕು, ಓಟೆ ಕೊರಕದ ಹಾವಳಿಯಿಂದ ಮುಕ್ತವಾಗಿರಬೇಕು.

ಹಣ್ಣುಗಳ ಹೊರಮೈ ಯಾವುದೇ ರಾಸಾಯನಿಕಗಳ ಸಿಂಪಡಣೆಯ ಕಲೆಗಳಿಂದ ಮುಕ್ತವಾಗಿರಬೇಕು. ನಿರ್ದಿಷ್ಟ ಮಟ್ಟಕ್ಕಿಂತ ಕಡಿಮೆ ಪ್ರಮಾಣದಲ್ಲಿ ರಾಸಾಯನಿಕಗಳ ಉಪಸ್ಥಿತಿ ಇರಬೇಕು ಅಥವಾ ರಾಸಾಯನಿಕಗಳಿಂದ ಸಂಪೂರ್ಣ ಮುಕ್ತವಾಗಿರಬೇಕು. ಸಾವಯವ ಪದ್ಧತಿ ಯಿಂದ ಉತ್ಪಾದಿಸುವ ಮಾವುಗಳಿಗೆ ಅತ್ಯಂತ ಹೆಚ್ಚಿನ ಬೇಡಿಕೆ ಇದೆ.

**

ಕೀಟ–ರೋಗಗಳ ನಿಯಂತ್ರಣ ಕ್ರಮ:

ರಾಸಾಯನಿಕ ಔಷಧಿಗಳ ಸಿಂಪರಣೆ ಮಿತಪ್ರಮಾಣದಲ್ಲಿ ಇರಬೇಕು. ಹೆಚ್ಚು ವಿಷಕಾರಿಯಾದ ಹಾಗೂ ನಿಷೇಧಿಸಲ್ಪಟ್ಟ ಔಷಧಿಗಳನ್ನು ಬಳಸಬಾರದು. ರಾಸಾಯನಿಕಗಳ ಸಿಂಪಡಣೆಯನ್ನು ಹೂವು ಹಾಗೂ ಕಾಯಿ ಕಚ್ಚುವ ಹಂತಕ್ಕೆ ಮಾತ್ರ ಸೀಮಿತಗೊಳಿಸಬೇಕು.

ಈ ಬಗ್ಗೆ ಕೆಲವು ಕ್ರಮಗಳನ್ನು ರೈತರು ಪಾಲಿಸಿದರೆ ಉತ್ತಮ ಫಲಿತಾಂಶ ಕಂಡುಬರುತ್ತದೆ.

ಮೊದಲ ಸಿಂಪಡಣೆ: (ಹೂ ಬಿಡುವ ಮೊದಲು) ನವೆಂಬರ್ ತಿಂಗಳಲ್ಲಿ – ಕ್ಲೋರೊ ಪೈರಿಪಾಸ- 2ಮಿಲಿ/ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. ಇದರಿಂದ ಹೂ ಬಿಡುವ ಮೊದಲು ರಸ ಹೀರುವ ಕೀಟಗಳ ಸಂಖ್ಯೆ/ಬಾಧೆ ನಿಯಂತ್ರಿಸಲು ಸಾಧ್ಯ.

ಎರಡನೇ ಸಿಂಪರಣೆ: (ಹೂ ಬಿಟ್ಟಾಗ) ಡಿಸೆಂಬರ್ ಮಧ್ಯಭಾಗ– ಜನವರಿ ಮೊದಲ ವಾರದಲ್ಲಿ ಸೆವಿನ್ 3 ಗ್ರಾಂ/ ಪ್ರತಿ ಲೀಟರ್ ನೀರಿನಲ್ಲಿ ಸೇರಿಸಿ ಸಿಂಪಡಿಸಬೇಕು. ಡೈಥೇನ್ ಎಂ 45-2ಗ್ರಾಂ/ ಪ್ರತಿ ಲೀಟರ್‌ ನೀರಿಗೆ ಮಿಶ್ರಣ ಮಾಡಿ ಬಳಸಿದರೆ ಜಿಗಿಹುಳು, ಥ್ರಿಪ್ಸ್, ಕಂಬಳಿಹುಳು ಮತ್ತು ಅಂತ್ರ್ಯಾಕೋಸ್, ಹೂ ತೆನೆ ಕೊಳೆಯುವ ರೋಗ ನಿಯಂತ್ರಣ ಸಾಧ್ಯ.

ಮೂರನೇ ಸಿಂಪರಣೆ: (ಪೂರ್ಣ ಪ್ರಮಾಣದಲ್ಲಿ ಬಿಟ್ಟಾಗ ಜನವರಿ ಮಧ್ಯಬಾಗ) ನೀರಿನಲ್ಲಿ ಕರಗುವ ಗಂಧಕ-2 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಇದರಿಂದ ಈ ಹಂತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಬೂದಿರೋಗವನ್ನು ನಿಯಂತ್ರಿಸಲು ಸಾಧ್ಯ. (ಜಿಗಿ ಹುಳುಗಳ ಬಾಧೆ ಈ ಹಂತದಲ್ಲಿ ಮುಂದುವರಿದಿದ್ದರೆ ಸೆವಿನ್ ಅನ್ನು ಗಂಧಕದಲ್ಲಿ ಬೆರೆಸಿ ಸಿಂಪಡಿಸಬಹುದು)

ನಾಲ್ಕನೆ ಸಿಂಪರಣೆ: (ಜನವರಿ ಕೊನೆ ಅಥವಾ ಫೆಬ್ರುವರಿ ಮೊದಲ ವಾರದಲ್ಲಿ) ಕಾಯಿ ಕಚ್ಚಿದ ಹಂತ – ಈ ಹಂತದಲ್ಲಿ ಚಿಕ್ಕ ಕಾಯಿಗಳನ್ನು ಬೂದಿರೋಗದಿಂದ ರಕ್ಷಿಸಲು ಅವಶ್ಯಕತೆ ಕಂಡು ಬಂದರೆ ಮಾತ್ರ ನೀರಿನಲ್ಲಿ ಕರಗುವ ಗಂಧಕವನ್ನು ಮೇಲೆ ತಿಳಿಸಿದ ಪ್ರಮಾಣದಲ್ಲಿ ಸಿಂಪಡಿಸಬಹುದು.

ವಿ.ಸೂ: ಯಾವುದೇ ಹಂತದಲ್ಲೂ ಸಸ್ಯಾಂತರ್ಗತ ಕೀಟ/ರೋಗ ನಿವಾರಕ ಔಷಧಗಳನ್ನು ಬಳಸಬಾರದು.

ಉದಾ: ಬೆವಿನ್ಟೆನ್, ರಿಡೋ ಮಿಲ್, ಅಲಯೇಟ್, ಬೆಲೆಟಾನ್, ಕೆರಾಥೇನ್, ಮೊನೋಕ್ರೊಟೊಪಾಸ್, ಡಿಮೆಕ್ರಾನ್, ಮೆಟಾಸಿಸ್ಟಾಕ್ಸ್ ಇತ್ಯಾದಿಗಳನ್ನು ಸಿಂಪಡಿಸಬಾರದು. ಏಕೆಂದರೆ ಇವುಗಳ ವಿಷದ ಅಂಶವು ನಂತರ ಕಾಯಿ ಮತ್ತು ಹಣ್ಣುಗಳಲ್ಲಿ ಉಳಿದು ರಫ್ತಿಗೆ ಅರ್ಹತೆ ಇಲ್ಲದಂತಾಗುತ್ತದೆ.

***

ಕೊಯ್ಲು, ಕೊಯ್ಲೋತ್ತರ ನಿರ್ವಹಣೆ

ಕೊಯ್ಲು ಹಂತ: ರಫ್ತಿಗಾಗಿ ಬಲಿತ ಮಾವಿನ ಕಾಯಿಗಳನ್ನು ರೈತರು ತಳಿಗನುಗುಣವಾಗಿ ಕೊಯ್ಲು ಮಾಡಬೇಕಾಗುತ್ತದೆ.

ಬಾದಾಮಿ: ಕಾಯಿ ಕಚ್ಚಿದ ನಂತರ 110 ದಿನಗಳ ಅವಧಿ

ಬಂಗನ್‍ಪಲ್ಲಿ: ಕಾಯಿ ಕಚ್ಚಿದ ನಂತರ 115-120 ದಿನಗಳ ಅವಧಿ

ಮಲ್ಲಿಕಾ: ಕಾಯಿ ಕಚ್ಚಿದ ನಂತರ 115-120 ದಿನಗಳ ಅವಧಿ

ತೋತಾಪುರಿ: ಕಾಯಿ ಕಚ್ಚಿದ ನಂತರ 130-145 ದಿನಗಳ ಅವಧಿ

ಕಟಾವು ವಿಧಾನ: ರಫ್ತಿಗಾಗಿ ಬಲಿತ ಕಾಯಿಗಳನ್ನು ಕೊಯ್ಯುವಾಗ ಸೋನೆ (ರಸ) ಕಾಯಿಗಳ ಮೇಲೆ ಇಳಿಯದಂತೆ ಎಚ್ಚರಿಕೆ ವಹಿಸಬೇಕು. 1 ಸೆಂ.ಮೀ. ಉದ್ದದ ತೊಟ್ಟನ್ನು ಬಿಟ್ಟು ಕತ್ತರಿಸಿದರೆ ಸೋನೆ ಇಳಿಯುವುದನ್ನು ತಪ್ಪಿಸಬಹುದಾಗಿರುತ್ತದೆ. ಚಿಕ್ಕ ವಯಸ್ಸಿನ ಮರಗಳಲ್ಲಿ ಗಿಡದ ಎತ್ತರ ಕಡಿಮೆ ಇದ್ದಾಗ ಇದು ಸಾಧ್ಯ. ಇದು ಸಾಧ್ಯವಿಲ್ಲದಾಗ ಹಣ್ಣುಗಳನ್ನು ಕಿತ್ತ ತಕ್ಷಣ ಸೋನೆಯನ್ನು ಒರೆಸಿ ತೊಟ್ಟಿನ ಭಾಗವನ್ನು ಕೆಳಮುಖವಾಗಿ ಇಡಬೇಕು. ಆಗ ಸೋನೆ ಕೆಳಮುಖವಾಗಿ ಬಸಿದು ಹೋಗುತ್ತದೆ.

ವಿಂಗಡಣೆ: ಹಣ್ಣುಗಳನ್ನು ಅವುಗಳ ಗಾತ್ರಕ್ಕನುಗುಣವಾಗಿ ವಿಂಗಡಿಸಬೇಕಾಗುತ್ತದೆ. ಯುರೋಪ್ ಮಾರುಕಟ್ಟೆಗೆ ಕಳಿಸಬೇಕಾದಲ್ಲಿ ಹಣ್ಣಿನ ಗಾತ್ರವನ್ನು ಅನುಸರಿಸಿ ಎ.ಬಿ.ಸಿ. ಗುಂಪುಗಳನ್ನಾಗಿ ವಿಂಗಡಿಸಬೇಕಾಗುತ್ತದೆ.

ಹಣ್ಣುಗಳು ಒಂದಕ್ಕೊಂದು ತಾಗದಂತೆ ತೆಳುವಾದ ಕಾಗದದಿಂದ ಕಂಪಾರ್ಟ್‌ಮೆಂಟ್ ಮತ್ತು ಹಣ್ಣುಗಳಿಗೆ ಕುಷನ್ ಸ್ಲೀವ್ ಅಳವಡಿಸಬೇಕಾಗುತ್ತದೆ ಅಥವಾ ಪೇಪರ್ ಗ್ರೇಡ್‍ಗಳನ್ನು ಸಹ ಹಾಕುವುದರ ಮೂಲಕ ಹಣ್ಣುಗಳ ನಡುವಿನ ಘರ್ಷಣೆ ತಪ್ಪಿಸಬಹುದು.

ಪ್ರೀ ಕೂಲಿಂಗ್: ಸೀಲ್ ಮಾಡಿದ ರಟ್ಟಿನ ಡಬ್ಬಗಳನ್ನು 13 ಸಿ ಉಷ್ಣಾಂಶವಿರುವ ಮತ್ತು ಶೇ 85 ರಿಂದ 90 ತೇವಾಂಶ ಭರಿತ ಶೀತಲಗೃಹದಲ್ಲಿ ಪ್ರೀ ಕೂಲಿಂಗ್‍ಗೆ ಒಳಪಡಿಸಬೇಕಾಗುತ್ತದೆ. ಇದಕ್ಕೆ ಸಾಮಾನ್ಯವಾಗಿ 4 ರಿಂದ 6 ಗಂಟೆ ತಗಲುತ್ತದೆ. ತಣ್ಣನೆಯ ಗಾಳಿ ಬಿಡುವುದರ ಮೂಲಕ ಇದನ್ನು ಸಾಧಿಸಲಾಗುತ್ತದೆ.

ಡಬ್ಬಗಳನ್ನು ಒಟ್ಟುಗೂಡಿಸುವಿಕೆ: ಪ್ರೀ ಕೋಲ್ಡ್ ಡಬ್ಬಗಳನ್ನು ಇನ್ನೂ ದೊಡ್ಡದಾದ ಸೂಚಿತ ಅಳತೆಯ 110 ಸೆಂ.ಮೀ. 80 ಸೆಂ.ಮೀ, 13 ಸೆಂ.ಮಿ ಅಳತೆಯ ಕಟ್ಟಿಗೆಯ ಡಬ್ಬಗಳಲ್ಲಿ ಸೇರಿಸಲಾಗುತ್ತದೆ. ನಂತರ ಇವುಗಳನ್ನು ಕಂಟೇನರ್‌ಗಳಲ್ಲಿ ಜೋಡಿಸಲಾಗುತ್ತದೆ. ಈ ಕಂಟೇನರ್‌ಗಳಲ್ಲಿನ ಉಷ್ಣಾಂಶ 12.5 ಡಿಗ್ರಿ ಸೆಲ್ಸಿಯೆಸ್ ಇರುತ್ತದೆ.

ಪ್ರೀ ಕೂಲಿಂಗ್ ಮತ್ತು ಪ್ಯಾಲಟೈಜೇಷನ್ ಕ್ರಮಗಳು ಮತ್ತು ಕಂಟೇನರ್‌ಗಳಲ್ಲಿ ಸೇರಿಸುವುದು ಹಣ್ಣುಗಳನ್ನು ಸಮುದ್ರದ (ಹಡಗಿನ) ಮೂಲಕ ರಫ್ತು ಮಾಡುವಲ್ಲಿ ಮಾತ್ರ ಪಾಲಿಸಬೇಕಾಗುತ್ತದೆ.

ವಿಮಾನಗಳ ಮೂಲಕ ರಫ್ತು ಮಾಡುವುದಿದ್ದಲ್ಲಿ ರಟ್ಟಿನ ಕಾರ್ಡ್‍ಬೋರ್ಡ್ ಡಬ್ಬಗಳನ್ನು ನೇರವಾಗಿ ಸರಕು ಸಾಗಾಣಿಕೆಗಳಲ್ಲಿ ತುಂಬಿ ಸಾಕಾಣಿಕೆ ಮಾಡಲಾಗುತ್ತದೆ.

ಕೆಪೆಕ್‌ ಸಂಪರ್ಕಕ್ಕೆ: 080–22271194, 22243082.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.