ಭಾನುವಾರ, ಡಿಸೆಂಬರ್ 15, 2019
19 °C
ಇಂದು ರಾತ್ರಿ ಮುಂಬೈನಲ್ಲಿ ಪಂದ್ಯ; ವಿರಾಟ್ ಕೊಹ್ಲಿ – ರೋಹಿತ್ ಶರ್ಮಾ ಮುಖಾಮುಖಿ

ಆರ್‌ಸಿಬಿಗೆ ಮುಂಬೈ ಇಂಡಿಯನ್ಸ್‌ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

ಆರ್‌ಸಿಬಿಗೆ ಮುಂಬೈ ಇಂಡಿಯನ್ಸ್‌ ಸವಾಲು

ಮುಂಬೈ: ಮೂರು ಪಂದ್ಯಗಳ ಪೈಕಿ ಎರಡನ್ನು ಸೋತು ನಿರಾಸೆಗೆ ಒಳಗಾಗಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಅಗ್ನಿಪರೀಕ್ಷೆಗೆ ಸಜ್ಜಾಗಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ ಮುಂಬೈ ಇಂಡಿಯನ್ಸ್‌ ವಿರುದ್ಧ ಸೆಣಸಲಿದೆ.

ಬಲಿಷ್ಠ ಬ್ಯಾಟಿಂಟ್ ಪಡೆ ಮತ್ತು ಸಮರ್ಥ ಬೌಲರ್‌ಗಳನ್ನು ಒಳಗೊಂಡಿರುವ ರಾಯಲ್ ಚಾಲೆಂಜರ್ಸ್‌ ತಂಡ ಮೊದಲ ಪಂದ್ಯದಲ್ಲೇ ಸೋತಿತ್ತು.ಕೋಲ್ಕತ್ತದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಕೆಕೆಆರ್‌ ನಾಲ್ಕು ವಿಕೆಟ್‌ಗಳಿಂದ ಗೆದ್ದಿತ್ತು.

ನಂತರ ತವರಿಗೆ ಬಂದ ಆರ್‌ಸಿಬಿ ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಿಂಗ್ಸ್ ಇಲೆವನ್‌ ಪಂಜಾಬ್ ಎದುರು ನಾಲ್ಕು ವಿಕೆಟ್‌ಗಳ ಜಯ ಸಾಧಿಸಿ ಭರವಸೆ ಮೂಡಿಸಿತ್ತು. ಆದರೆ ಭಾನುವಾರ ಚಿನ್ನಸ್ವಾಮಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ಗೆ 19 ರನ್‌ಗಳಿಂದ ಮಣಿದಿತ್ತು. ಹೀಗಾಗಿ ತಂಡ ಮತ್ತೆ ಒತ್ತಡಕ್ಕೆ ಸಿಲುಕಿದೆ.

ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಕೂಡ ಈ ಬಾರಿ ನೀರಸ ಆರಂಭ ಕಂಡಿದೆ. ತವರಿನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋತ ಈ ತಂಡ ಸನ್‌ರೈಸರ್ಸ್ ಎದುರು ಒಂದು ರನ್‌ನಿಂದ ಸೋತಿತ್ತು. ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಏಳು ವಿಕೆಟ್‌ಗಳಿಂದ ಸೋತು ‘ಹ್ಯಾಟ್ರಿಕ್‌’ ಸೋಲಿನ ಕಹಿ ಅನುಭವಿಸಿತ್ತು.

ಗೆಲುವಿನ ಲಯಕ್ಕೆ ಮರಳಲು ಯತ್ನಿಸುತ್ತಿರುವ ಈ ತಂಡ ಕೂಡ ಈಗ ಒತ್ತಡದಲ್ಲಿದ್ದು ತವರಿನ ಪ್ರೇಕ್ಷಕರಿಗೆ ಮತ್ತೊಮ್ಮೆ ನಿರಾಸೆ ಮೂಡಿಸದೇ ಇರಲು ಪ್ರಯತ್ನಿಸಲಿದೆ. ಹೀಗಾಗಿ ಮಂಗಳವಾರದ ಪಂದ್ಯ ಕುತೂಹಲ ಕೆರಳಿಸಿದೆ.

2015ರಿಂದ ಒಮ್ಮೆಯೂ ಆರ್‌ಸಿಬಿ ಎದುರು ಸೋಲದ ಮುಂಬೈ ಇಂಡಿಯನ್ಸ್‌ ಐಪಿಎಲ್‌ನಲ್ಲಿ ಈ ವರೆಗೆ ಒಟ್ಟು 23 ಬಾರಿ ಆರ್‌ಸಿಬಿಯನ್ನ ಎದುರಿಸಿದ್ದು 15 ಬಾರಿ ಗೆದ್ದಿದೆ.

ಕೊಹ್ಲಿ–ರೋಹಿತ್ ಮುಖಾಮುಖಿ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಮುಖಾಮುಖಿಯಾಗುತ್ತಿರುವುದು ಈ ಪಂದ್ಯದ ವಿಶೇಷ. ಬ್ಯಾಟಿಂಗ್ ದಿಗ್ಗಜರಾದ ಇವರಿಬ್ಬರಿಗೆ ಈ ಬಾರಿ ಐಪಿಎಲ್‌ನಲ್ಲಿ ನಿಜವಾದ ಸಾಮರ್ಥ್ಯ ತೋರಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಮಂಗಳವಾರ ಇವರ ಮೇಲೆ ಭಾರಿ ನಿರೀಕ್ಷೆ ಇದೆ.

ಆರ್‌ಸಿಬಿಯಲ್ಲಿ ಡಿವಿಲಿಯರ್ಸ್‌, ಬ್ರೆಂಡನ್ ಮೆಕ್ಲಂ, ಕ್ವಿಂಟನ್ ಡಿ ಕಾಕ್‌ ಮುಂತಾದವರಿಗೂ ನಿರೀಕ್ಷೆಗೆ ತಕ್ಕಂತೆ ಮಿಂಚಲು ಆಗಲಿಲ್ಲ. ಉಮೇಶ್ ಯಾದವ್‌ ಮತ್ತು ಯಜುವೇಂದ್ರ ಚಾಹಲ್‌ ಬೌಲಿಂಗ್‌ನಲ್ಲಿ ಮೊನಚು ಕಂಡುಕೊಂಡಿರುವುದು ತಂಡದ ಭರವಸೆ ಹೆಚ್ಚಿಸಿದೆ.

ಅತ್ಯುತ್ತಮ ಬ್ಯಾಟಿಂಗ್ ವಿಭಾಗ ಹೊಂದಿರುವ ಮುಂಬೈ ಇಂಡಿಯನ್ಸ್‌ನ ನಿರೀಕ್ಷೆಯೂ ಕೈಗೂಡಲಿಲ್ಲ. ಸಹೋದರರಾದ ಹಾರ್ದಿಕ್ ಮತ್ತು ಕೃಣಾಲ್ ಪಾಂಡ್ಯ ಅವರ ಆಲ್‌ರೌಂಡ್‌ ಆಟದ ಸೊಬಗು ಇನ್ನೂ ಅನಾವರಣಗೊಂಡಿಲ್ಲ. ಎರಡೂ ತಂಡಗಳ ಭರವಸೆಯ ಆಟಗಾರರು ಮಂಗಳವಾರ ಮಿಂಚಿದರೆ ಭಾರಿ ಪೈಪೋಟಿಗೆ ಪಂದ್ಯ ಸಾಕ್ಷಿಯಾಗಲಿದೆ.

ಪ್ರತಿಕ್ರಿಯಿಸಿ (+)