ಕಾಂಗ್ರೆಸ್‌ ಬೀದಿರಂಪ, ಬಿಜೆಪಿ ಬೇಗುದಿ!

7
ಅಭ್ಯರ್ಥಿ ಪಟ್ಟಿ ಬಿಡುಗಡೆ ಬೆನ್ನ ಹಿಂದೆಯೇ ಬಾಗಲಕೋಟೆ ಜಿಲ್ಲೆಯಲ್ಲಿ ಅಸಮಾಧಾನ ಸ್ಫೋಟ

ಕಾಂಗ್ರೆಸ್‌ ಬೀದಿರಂಪ, ಬಿಜೆಪಿ ಬೇಗುದಿ!

Published:
Updated:

ಬಾಗಲಕೋಟೆ: ಕಾಂಗ್ರೆಸ್–ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೊರ ಬರುತ್ತಿದ್ದಂತೆಯೇ ಜಿಲ್ಲೆಯಲ್ಲಿ ಟಿಕೆಟ್ ವಂಚಿತರ ಬೇಗುದಿ ಹೆಚ್ಚಿದೆ. ಕಾಂಗ್ರೆಸ್‌ನಲ್ಲಿ ಹಾದಿ–ಬೀದಿ ರಂಪವಾದರೆ, ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ. ಬೆಂಬಲಿಗರ ಆಕ್ರೋಶ ಸ್ಥಳೀಯ ನಾಯಕರ ಮೇಲೆ ತಿರುಗಿದೆ.

ಬಾದಾಮಿ ಮರುಕಳಿಸಿದ ಇತಿಹಾಸ: ಬಾದಾಮಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿಚಾರದಲ್ಲಿ 2013ರ ಚುನಾವಣೆ ವೇಳೆಯಲ್ಲಿದ್ದ ಸನ್ನಿವೇಶವೇ ಪುನರಾವರ್ತೆಯಾಗಿದೆ. ಆಗಲೂ ಡಾ.ದೇವರಾಜ ಪಾಟೀಲ ಅವರಿಗೆ ಟಿಕೆಟ್ ದೊರಕಿತ್ತು. ಆದರೆ ಬಿ.ಬಿ.ಚಿಮ್ಮನಕಟ್ಟಿ ಬೆಂಬಲಿಗರ ಪ್ರತಿಭಟನೆಗೆ ಹೈಕಮಾಂಡ್‌ ಮಣಿದಿತ್ತು. ಕೊನೆಯ ಗಳಿಗೆಯಲ್ಲಿ ‘ಬಿ’ಫಾರಂ ಚಿಮ್ಮನಕಟ್ಟಿ ಕೈಗೆ ಬದಲಾಗಿತ್ತು. ಈ ಬಾರಿಯೂ ಅದು ಮರುಕಳಿಸಿದೆ. ಸ್ಥಳೀಯ ನಾಯಕರ ಮಧ್ಯಸ್ಥಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಾಸಕ ಬಿ.ಬಿ.ಚಿಮ್ಮನಕಟ್ಟಿ ‘ತ್ಯಾಗ’ ಮಾಡಿದ್ದ ಟಿಕೆಟ್ ಈಗ ಡಾ.ದೇವರಾಜ ಪಾಟೀಲರ ಕೈಗೆ ಬಂದಿದೆ. ಸಿದ್ದರಾಮಯ್ಯ ಬಿಟ್ಟು ಬೇರೆಯವರಿಗೆ ಟಿಕೆಟ್‌ ಕೊಟ್ಟಿರುವುದನ್ನು ಒಪ್ಪುವುದಿಲ್ಲ ಎಂದು ಚಿಮ್ಮನಕಟ್ಟಿ ರಚ್ಚೆ ಹಿಡಿದಿದ್ದಾರೆ. ಬೀದಿಗಿಳಿದಿರುವ ಬೆಂಬಲಿಗರು, ಕ್ಷೇತ್ರದಿಂದ ಹೊರಗಿನವರಾದ ಪಾಟೀಲರನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಚಿಮ್ಮನಕಟ್ಟಿಗೆ ಟಿಕೆಟ್ ಕೊಡಲಿ, ಇಲ್ಲದಿದ್ದರೆ ಸ್ಥಳೀಯರಿಗೆ ಮಣೆ ಹಾಕಲಿ ಎಂದು ಹೇಳುತ್ತಿದ್ದಾರೆ. ‘ಕಳೆದ ಬಾರಿ ಮಾಡಿದ್ದ ತ್ಯಾಗಕ್ಕೆ ಈ ಬಾರಿ ಪ್ರತಿಫಲ ಸಿಕ್ಕಿದೆ’ ಎಂಬುದು ದೇವರಾಜ ಪಾಟೀಲ ಬೆಂಬಲಿಗರ ಅಭಿಮತ.

ಬಿಜೆಪಿಗೆ ಮುಧೋಳ ಕೊಡುಗೆ: ಜಿಲ್ಲಾ ಉಸ್ತುವಾರಿ ಸಚಿವರಿಗೆ ಟಿಕೆಟ್ ನಿರಾಕರಿಸಿ ಚುನಾವಣೆಗೆ ಮುನ್ನವೇ ಹೈಕಮಾಂಡ್‌ ಬಿಜೆಪಿಗೆ ‘ಉಡುಗೊರೆ’ ನೀಡಿದೆ ಎಂಬುದು ಆರ್.ಬಿ.ತಿಮ್ಮಾಪುರ ಬೆಂಬಲಿಗರ ಅಳಲು.ಇದೀಗ ಅವರ ಆಕ್ರೋಶದ ಕಿಚ್ಚು ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲರ ಕಡೆ ತಿರುಗಿದೆ. ಅವರೊಂದಿಗಿನ ಬಿರುಕು ತಿಮ್ಮಾಪುರ ಹಿನ್ನಡೆಗೆ ಕಾರಣವಾಗಿದೆ ಎಂಬುದು ಬೆಂಬಲಿಗರ ಆರೋಪ.

‘ತಿಮ್ಮಾಪುರ ಈ ಬಾರಿ ಟಿಕೆಟ್ ನನಗೆ ಎಂಬ ವಿಶ್ವಾಸದಲ್ಲಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ಬೆಂಬಲವೂ ಅವರ ಬೆನ್ನಿಗಿತ್ತು. ಆದರೆ ಟಿಕೆಟ್‌ ಹಂಚಿಕೆ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರ ಗುಂಪಿನೊಂದಿಗಿನ ತಿಕ್ಕಾಟ ಒಂದಷ್ಟು ಕೊಡು–ಕೊಳ್ಳುವಿಕೆಗೆ ಕಾರಣಯಿತು. ಈ ವೇಳೆ ತಿಮ್ಮಾಪುರಗೆ ಟಿಕೆಟ್ ತಪ್ಪಿ, ಎಸ್.ಆರ್.ಪಾಟೀಲರ ಆಪ್ತ ಸತೀಶ ಬಂಡಿವಡ್ಡರ ಪಾಲಾಯಿತು’ ಎಂಬುದು ಕಾಂಗ್ರೆಸ್ ಮುಖಂಡರೊಬ್ಬರ ಅಭಿಮತ.

‘ಸಚಿವರಾದ ನಂತರ ತಿಮ್ಮಾಪುರ ಕ್ಷೇತ್ರದಲ್ಲಿ ಬಲಿಷ್ಠರಾಗಿದ್ದರು. ಹಳೆಯ ಮುಖಂಡರು, ಕಾರ್ಯಕರ್ತರೊಂದಿಗೆ ಮತ್ತೆ ಒಡನಾಟ ಬೆಳೆದಿತ್ತು. ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಲ್ಲಿ ಗುರುತಿಸಿಕೊಂಡ ಕಾರಣಕ್ಕೆ ನಿರ್ಲಕ್ಷ್ಯಕ್ಕೀಡಾಗಿದ್ದ ಬಿಜೆಪಿ ಮುಖಂಡರನ್ನು ಪಕ್ಷಕ್ಕೆ ಕರೆ ತಂದಿದ್ದರು. ಅವರಿಗೆ ಟಿಕೆಟ್‌ ತಪ್ಪಿದ್ದು, ಗದಾಯುದ್ಧಕ್ಕೆ ಭರ್ಜರಿ ತಾಲೀಮು ನಡೆಸಿದ್ದ ಜಟ್ಟಿಯನ್ನು ಕಣದಿಂದಲೇ ನಿವೃತ್ತಿ ಮಾಡಿಸಿದಂತಾಗಿದೆ’ ಎಂದು ಮಾರ್ಮಿಕವಾಗಿ ಹೇಳುತ್ತಾರೆ.

ಮೇಟಿ ಮಾತು ತಪ್ಪಿದರೇ?: ‘ಬಾಗಲಕೋಟೆ ಕ್ಷೇತ್ರದಿಂದ ಮುಂದಿನ ಬಾರಿ ನಿಮಗೆ ಟಿಕೆಟ್. ಈ ಬಾರಿ ನನ್ನ ಬೆಂಬಲಿಸಿ ಎಂದು ಹೇಳಿದ್ದ ಶಾಸಕ ಎಚ್.ವೈ.ಮೇಟಿ ಮಾತು ತಪ್ಪಿದ್ದಾರೆ’ ಎಂಬುದು ಮಾಜಿ ಶಾಸಕ ಪಿ.ಎಚ್.ಪೂಜಾರ ಬೆಂಬಲಿಗರ ಆಕ್ರೋಶದ ಮಾತು.ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪ್ರಸಂಗದಿಂದಾಗಿ ಈ ಬಾರಿ ಮೇಟಿ ಅವರಿಗೆ ಪಕ್ಷ ‘ಬಿ’ ಫಾರಂ ಕೊಡುವುದಿಲ್ಲ. ಬದಲಿಗೆ ಪೂಜಾರ ಅವರಿಗೆ ಸಿಗಲಿದೆ ಎಂದು ಹೇಳಲಾಗಿತ್ತು. ಬೆಂಗಳೂರಿನಿಂದ ಮಂಗಳವಾರ ಹಿಂತಿರುಗಲಿರುವ ಪೂಜಾರ, ಬೆಂಬಲಿಗರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿಯಲ್ಲೂ ಬೇಗುದಿ..

ಹುನಗುಂದ ಕ್ಷೇತ್ರದಿಂದ ಪಕ್ಷ ಮತ್ತೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ಮನ್ನಣೆ ನೀಡಿದೆ. ಟಿಕೆಟ್ ಬಯಸಿದ್ದ ಎಸ್.ಆರ್.ನವಲಿಹಿರೇಮಠ ಏಪ್ರಿಲ್‌ 18ರಂದು ಕ್ಷೇತ್ರಕ್ಕೆ ಬಂದು ಬೆಂಬಲಿಗರೊಂದಿಗೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಆಪ್ತರೊಬ್ಬರು ಹೇಳುತ್ತಾರೆ. ಜಮಖಂಡಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳ ಟಿಕೆಟ್ ವಂಚಿತರ ಅತೃಪ್ತಿ ಸ್ಫೋಟಗೊಂಡಿದೆ. ಶಾಸಕ ಸಿದ್ದು ನ್ಯಾಮಗೌಡ ಅವರಿಗೆ ಮತ್ತೆ ಟಿಕೆಟ್ ನೀಡಿರುವ ಕಾರಣಕ್ಕೆ ಮುನಿಸಿಕೊಂಡಿರುವ ಕಾಂಗ್ರೆಸ್ ಮುಖಂಡರಾದ ಶ್ರೀಶೈಲ ದಳವಾಯಿ, ಸುಶಿಲ್‌ಕುಮಾರ ಬೆಳಗಲಿ, ಬಹಿರಂಗ ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಟಿಕೆಟ್ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಪಾಲಾದ ಕಾರಣ ಉದ್ಯಮಿ ಸಂಗಮೇಶ ನಿರಾಣಿ ಬೆಂಬಲಿಗರು ಬೀದಿಗಿಳಿದಿದ್ದಾರೆ. ಕಾಂಗ್ರೆಸ್–ಬಿಜೆಪಿ ಅತೃಪ್ತರ ಬಣಗಳೆರಡೂ ಸೇರಿ ‘ಒಮ್ಮತದ ಅಭ್ಯರ್ಥಿ’ ಕಣಕ್ಕಿಳಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

**

ಸ್ಥಳೀಯ ನಾಯಕರೊಬ್ಬರ ಷಡ್ಯಂತ್ರದಿಂದ ಟಿಕೆಟ್ ತಪ್ಪಿದೆ. ಹಿಂದಿನ ಎರಡು ಚುನಾವಣೆಗಳಲ್ಲಿ ನನ್ನ ವಿರುದ್ಧ ಕೆಲಸ ಮಾಡಿದ್ದರು. ಈ ಬಾರಿ ಟಿಕೆಟ್ ತಪ್ಪಿಸಿದರು – ಆರ್.ಬಿ.ತಿಮ್ಮಾಪುರ, ಜಿಲ್ಲಾ ಉಸ್ತುವಾರಿ ಸಚಿವ.

**

ಸಿಎಂಗೋಸ್ಕರ ಬೇಕಿದ್ದರೆ ಟಿಕೆಟ್‌ ತ್ಯಾಗ ಮಾಡುತ್ತಿದ್ದೆ. ಬೇರೆಯವರಿಗೇಕೆ ಬಿಟ್ಟುಕೊಡಲಿ. ಕಳೆದ ಬಾರಿ ಕೊನೆಯ ಗಳಿಗೆಯಲ್ಲಿ ಬಿ ಫಾರಂ ನನಗೆ ಸಿಕ್ಕಿತ್ತು. ಈ ಬಾರಿಯೂ ಹಾಗೇ ಆಗಲಿದೆ – ಬಿ.ಬಿ.ಚಿಮ್ಮನಕಟ್ಟಿ, ಬಾದಾಮಿ ಶಾಸಕ.

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry