ಬುಧವಾರ, ಡಿಸೆಂಬರ್ 11, 2019
20 °C
ಪ್ರಯಾಣಿಕರಿಗೆ ಸೌಕರ್ಯ ಕಲ್ಪಿಸಿದ ಮಾದರಿ ಚಾಲಕ

ಆಟೊರಿಕ್ಷಾದಲ್ಲೇ ನೀರಿನ ಅರವಟಿಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಟೊರಿಕ್ಷಾದಲ್ಲೇ ನೀರಿನ ಅರವಟಿಕೆ!

ಕೂಡ್ಲಿಗಿ: ತನ್ನ ಆಟೊರಿಕ್ಷಾವನ್ನೇ ಅರವಟಿಗೆ ಮಾಡಿಕೊಂಡಿರುವ ಪಟ್ಟಣದ  ಆಟೊರಿಕ್ಷಾ ಮಾಲೀಕ ಜಿ.ಹನುಮಂತು ಪ್ರಯಾಣಿಕರ ದಾಹ ನೀಗಿಸುತ್ತಿದ್ದಾರೆ. ಅವರಿಂದ ಪ್ರಯಾಣಿಕರು ಹಾಗೂ ಇತರೆ ಚಾಲಕರ ದಾಹವೂ ತೀರುತ್ತಿದೆ.

ಅವರು ಚಾಲಕನ ಸೀಟಿನ ಪಕ್ಕದಲ್ಲಿಯೇ ಕ್ಯಾನ್ ಇಟ್ಟಿದ್ದು ಅದಕ್ಕೆ ಒಂದು ಲೋಟ ಅಳವಡಿಸಿದ್ದಾರೆ. ಪಟ್ಟಣ ಪಂಚಾಯ್ತಿಯ ಶುದ್ಧ ನೀರಿನ ಘಟಕದಲ್ಲಿ ₹ 2ಕ್ಕೆ ಒಂದು ಕ್ಯಾನ್ ನೀರು ಪಡೆದು ತರುತ್ತಾರೆ. ಪ್ರತಿ ದಿನ ಎರಡು ಕ್ಯಾನ್ ನೀರು ಖರ್ಚಾಗುತ್ತದೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಕ್ಯಾನಿನಲ್ಲಿ ನೀರು ಭರ್ತಿಯಾಗಿರುತ್ತದೆ. ಖಾಲಿಯಾದ ಬಳಿಕ ತಾವು ಸಂಚರಿಸುವ ಮಾರ್ಗದಲ್ಲೇ ಇರುವ ಶುದ್ಧ ನೀರಿನ ಘಟಕದಿಂದ ನೀರು ಭರ್ತಿ ಮಾಡಿಕೊಳ್ಳುತ್ತಾರೆ.

‘ಪಟ್ಟಣದಲ್ಲಿ ಒಮ್ಮೆ ವ್ಯಕ್ತಿಯೊಬ್ಬರನ್ನು ಅವರ ಮನೆಗೆ ಬಿಡಲು ಹೊರಟಿದ್ದೆ. ಅಗ ಆಟೊದಲ್ಲಿದ್ದ ಅತ, ಬೇಗ ಬಿಡಪ್ಪ ಬಾಯಾರಿಕೆಯಾಗಿದೆ ಮನೆಗೆ ಹೋಗಿ ಮೊದಲು ನೀರು ಕುಡಿಯಬೇಕು ಎಂದು ಹೇಳಿದರು. ಅದನ್ನು ಕೇಳಿದ ನಾನು, ಆಟೊರಿಕ್ಷಾದಲ್ಲೇ ನೀರು ಏಕೆ ಪೂರೈಸಬಾರದು ಎಂದು ಯೋಚಿಸಿದ್ದೆ’ ಎಂದು ಹನುಮಂತು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಳ ಇರುವ 20 ಲೀಟರ್ ಸಾಮರ್ಥ್ಯದ ನೀರಿನ ಕ್ಯಾನ್ ಖರೀದಿಸಿದೆ. ಅದಕ್ಕಾಗಿ ಖರ್ಚು ಮಾಡುವುದು ದಿನಕ್ಕೆ ₹ 4ರಿಂದ 6 ಮಾತ್ರ. ಆದರೆ ಬಾಯಾರಿದ ಜನ ಒಂದು ಲೋಟ ನೀರು ಕುಡಿದರೆ ಅದರಿಂದ ಸಿಗುವ ಖುಷಿಗೆ ಸಾಟಿ ಇಲ್ಲ’ ಎಂದರು.

ತಣ್ಣನೆ ನೀರು: ಆಟೊದಲ್ಲಿ ಕ್ಯಾನ್ ಇಟ್ಟರೂ ಬಿಸಿಲಿನ ಹೊಡೆತಕ್ಕೆ ನೀರು ಬಿಸಿಯಾಗುತ್ತಿತ್ತು. ಹೀಗಾಗಿ ಅದಕ್ಕೆ ಒಂದು ಗೋಣಿ ಚೀಲವನ್ನು ಸುತ್ತಿ ಒಂದಿಷ್ಟು ನೀರು ಹಾಕುತ್ತಾರೆ. ಈಗ ನೀರು ಸದಾ ತಣ್ಣಗೆ ಇರುತ್ತದೆ.

‘ಮನೆ ಮುಂದೆ ಹೋಗಿ ಕೇಳಿದರೂ ನೀರು ಕೊಡದ ಜನರ ನಡುವೆ ಹನುಮಂತು ಮಾದರಿಯಾಗಿ ನಡೆದುಕೊಂಡಿದ್ದಾರೆ’ ಎಂಬುವುದು ಪ್ರಯಾಣಿಕ ಹನಸಿ ಶಿವಣ್ಣ ಅವರ ಮೆಚ್ಚುಗೆಯ ನುಡಿ.

ಪ್ರವಾಸ: ಪ್ರತಿ ನಿತ್ಯ ತನ್ನ ಆಟೊದಲ್ಲಿ ಶಾಲೆಗಳಿಗೆ ತೆರಳುವ ಎಲ್ಲ ವಿದ್ಯಾರ್ಥಿಗಳನ್ನು ಶೈಕ್ಷಣಿಕ ವರ್ಷದ ಕೊನೆಯ ದಿನ ಪಟ್ಟಣದ ಹೊರವಲಯದ ಯಾವುದಾದರೂ ಒಂದು ಪ್ರಮುಖ ಸ್ಥಳಕ್ಕೆ ಕಿರು ಪ್ರವಾಸ ಕರೆದೊಯ್ಯುವುದು ಅವರ ಇನ್ನೊಂದ ಹವ್ಯಾಸ!

**

ಹನುಮಂತ ಇತರರಿಗೆ ಮಾದರಿಯಾಗಿದ್ದಾರೆ. ಆಟೋರಿಕ್ಷಾ ಚಾಲಕರೆಲ್ಲ ಪ್ರಯಾಣಿಕರಿಗೆ ಉಚಿತವಾಗಿ ನೀರು ಕೊಟ್ಟರೆ ಅದಕ್ಕಿಂತ ದೊಡ್ಡ ಸೇವೆ ಇನ್ನೊಂದಿಲ್ಲ – ಶಿವಮೂರ್ತಿ, ಅಧ್ಯಕ್ಷ. ತಾಲ್ಲೂಕು ಆಟೋ ಚಾಲಕರ ಸಂಘ, ಕೂಡ್ಲಿಗಿ.

**

ಎ.ಎಂ. ಸೋಮಶೇಖರಯ್ಯ.

ಪ್ರತಿಕ್ರಿಯಿಸಿ (+)