ಭಾನುವಾರ, ಡಿಸೆಂಬರ್ 15, 2019
25 °C
ಅಮಾವಾಸ್ಯೆ: ವಿಶೇಷ ಪೂಜೆ, ವಿವಿಧ ಸೇವೆಗಳ ಮೂಲಕ ಹರಕೆ ತೀರಿಸಿದ ಭಕ್ತರು

ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಸಾಗರ

ಮಲೆ ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ಬೆಟ್ಟದಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು. ಸೋಮವಾರ ನಸುಕಿನಿಂದಲೇ ಮಲೆಮಹದೇಶ್ವರ ಸ್ವಾಮಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಬಳಿಕ, ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ಅಮಾವಾಸ್ಯೆ ಹಿನ್ನೆಲೆಯಲ್ಲಿ ರಾಜ್ಯದ ಹಾಗೂ ತಮಿಳುನಾಡಿನ ಸಹಸ್ರಾರು ಭಕ್ತರು ಬಂದು ಹರಕೆ ಹಾಗೂ ಕಾಣಿಕೆಯನ್ನು ಅರ್ಪಿಸಿದರು. ರುದ್ರಾಕ್ಷಿ ಮಂಟಪ, ಹುಲಿವಾಹನ, ಬಸವವಾಹನಗಳ ಸೇವೆ, ಉರುಳು ಸೇವೆ ಹಾಗೂ ಪಂಜಿನ ಸೇವೆಯನ್ನು ಮಾಡಿದರು.

ಪ್ರಾಧಿಕಾರದ ವತಿಯಿಂದ ಭಕ್ತರಿಗೆ ಎರಡು ದಿನಗಳ ಕಾಲ ನಿರಂತರ ಅನ್ನ ದಾಸೋಹ ಸೇವೆ, ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿತ್ತು.

ನೆರಳಿನ ವ್ಯವಸ್ಥೆಗೆ ಮನವಿ: ‘ದೇವರ ದರ್ಶನ ಪಡೆಯಲು ಉರಿ ಬಿಸಿಲಿನಲ್ಲೇ ಸರದಿಯಲ್ಲಿ ನಿಲ್ಲಬೇಕಾಗಿದೆ. ಅಲ್ಲದೇ, ನೆಲಕ್ಕೆ ಕಾಂಕ್ರೀಟ್‌ ಹಾಕಿರುವುದರಿಂದ ಕೆಂಡದ ಮೇಲೆ ನಿಂತಂತೆ ಆಗುತ್ತದೆ. ಆದ್ದರಿಂದ ಸಣ್ಣ ಮಕ್ಕಳನ್ನು ಹೊತ್ತು ನಿಲ್ಲಬೇಕಾದ ಪರಿಸ್ಥಿತಿ ಇದ್ದು, ಶಾಶ್ವತ ನೆರಳಿನ ಸೌಲಭ್ಯ ಕಲ್ಪಿಸಬೇಕು’ ಎಂದು ತಮಿಳುನಾಡಿನ ಮಾರಿಯಪ್ಪನ್  ಮನವಿ ಮಾಡಿದರು.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದು, ಈ ಮಾರ್ಗದಲ್ಲಿ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಒಂದು ಬಸ್ ಮಾತ್ರ ಬಿಡಲಾಗಿದೆ. ಆದ್ದರಿಂದ ಭಕ್ತರು ಆಟೊ, ಗೂಡ್ಸ್‌ ವಾಹನಗಳ ಮೊರೆ ಹೋಗಬೇಕಾಯಿತು.

 

ಪ್ರತಿಕ್ರಿಯಿಸಿ (+)