ಸೋಮವಾರ, ಜುಲೈ 13, 2020
24 °C

ವಿವಿಧ ವಾರ್ಡ್‌ಗಳಲ್ಲಿ ಮತಯಾಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿವಿಧ ವಾರ್ಡ್‌ಗಳಲ್ಲಿ ಮತಯಾಚನೆ

ಗಂಗಾವತಿ: ಗಂಗಾವತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೋಮವಾರ ನಗರದ ವಿವಿಧ ವಾರ್ಡ್‌ಗಳಲ್ಲಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.

ವಿರೂಪಾಪುರ ತಾಂಡ, ಹಿರೇಜಂತಕಲ್, ಸರೋಜಾನಗರ, ಹಿರೇಜಂತಕಲ್ ಬೈಪಾಸ್, ಅಖಂಡೇಶ್ವರ ದೇವಸ್ಥಾನದ ಪ್ರದೇಶ, ಪ್ರಸನ್ನ ಪಂಪಾಪತಿ ದೇಗುಲದ ಸುತ್ತಲಿನ ಪ್ರದೇಶದಲ್ಲಿ ಸಂಚರಿಸಿದ ಮಾಜಿ ಶಾಸಕ ಪರಣ್ಣ, ಬಿಜೆಪಿಗೆ ಮತಹಾಕುವಂತೆ ಮತದಾರರಲ್ಲಿ ಮನವಿ ಮಾಡಿದರು.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿನ ಬಿಜೆಪಿ ಸರ್ಕಾರ ದೇಶವನ್ನು ಸದೃಢವಾಗಿ ಕಟ್ಟುವಲ್ಲಿ ನಿರತವಾಗಿದೆ. ಆದರೆ, ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯ ಸಂಪೂರ್ಣ ದಿವಾಳಿಯಾಗಿದೆ. ಸಿ.ಎಂ ಸಿದ್ದರಾಮಯ್ಯ, ಜಾತಿ ಧರ್ಮಗಳ ಮಧ್ಯೆ ವಿಷಬೀಜ ಬಿತ್ತುವ ಸಮಾಜದಲ್ಲಿ ಸಾಮರಸ್ಯ ಕದಡುವ ಕೆಲಸಕ್ಕೆ ಕೈಹಾಕಿದ್ದಾರೆ ಎಂದರು.

ಈ ಹಿಂದೆ ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ನಗರಸಭಾ ಸದಸ್ಯರಾದ ರಾಘವೇಂದ್ರ ಶೆಟ್ಟಿ, ಪರಮೇಶಪ್ಪ ಈಡಿಗ, ರಾಮಚಂದ್ರಪ್ಪ ಸೋಮವಾರ ಬಿಜೆಪಿಯ ಮತ ಪ್ರಚಾರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.

ಪ್ರಮುಖರಾದ ಜೆ. ನಾಗರಾಜ, ವೆಂಕಟೇಶ, ಶಂಕರ ನಾಯ್ಕ, ರಾಘವೇಂದ್ರ, ಮಂಜುನಾಥ ಶಿರಿಗೇರಿ, ಕರುಣಾಕರ್, ನಾಗರಾಜ ಚಳಿಗೇರಿ, ವಾರ್ಡಿನ ನಿವಾಸಿಗಳಾದ ಶರಣಪ್ಪ, ಬಸವರಾಜ, ಮಾಟಲಮಾರಿ ಹನುಮಂತಪ್ಪ, ಶರಣಪ್ಪ ಗಡ್ಡಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.