ಸೋಮವಾರ, ಜುಲೈ 13, 2020
25 °C

ಯೋಗಪ್ರಿಯೆ ರೆಜಿನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯೋಗಪ್ರಿಯೆ ರೆಜಿನಾ

ರೆಜಿನಾ ಕ್ಯಾಸ್ಸಂದ್ರ ತೆಲುಗು, ತಮಿಳು ಚಿತ್ರರಂಗದಲ್ಲಿ ಚಿರಪರಿಚಿತ ನಟಿ. 2005ರಲ್ಲಿ ‘ಕಂದ ನಾ ಮುದಾಳ್‌’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು ರೆಜಿನಾ. ಸುಬ್ರಹ್ಮಣ್ಯಂ ಫಾರ್‌ ಸೇಲ್‌, ರಾರಾ ಕೃಷ್ಣಯ್ಯ ಮೊದಲಾದ ಚಿತ್ರಗಳಲ್ಲಿ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದರು. ಆರೋಗ್ಯ ಹಾಗೂ ಫಿಟ್‌ನೆಸ್‌ಗಾಗಿ ವ್ಯಾಯಾಮ, ಡಯೆಟ್‌ ತಪ್ಪಿಸುವುದಿಲ್ಲ.

‘ನಾನು ನೆಪ ಹೇಳಿ ವ್ಯಾಯಾಮ ತಪ್ಪಿಸಿಕೊಳ್ಳುವವರ ಸಾಲಿಗೆ ಸೇರುವುದಿಲ್ಲ, ಕೋಚ್‌ ಮಾತಿನಂತೆ ನಿತ್ಯ ವರ್ಕ್‌ಔಟ್‌ ಮಾಡುತ್ತೇನೆ. ನಾನು ಪ್ರತಿದಿನ ಕಠಿಣ ತರಬೇತಿ ಪಡೆಯುತ್ತೇನೆ. ನನ್ನ ತರಬೇತಿ ಬದಲಾಗುತ್ತಿರುತ್ತದೆ. ಒಂದು ದಿನ ಸೊಂಟದ ಮೇಲಿನ ಭಾಗಗಳಿಗೆ, ಮತ್ತೊಂದು ದಿನ ತೊಡೆ ಹಾಗೂ ಕಾಲಿನ ವರ್ಕ್‌ಔಟ್‌ ಮಾಡುತ್ತೇನೆ. ಇದಲ್ಲದೇ ಬಿಡುವು ಸಿಕ್ಕಾಗ ಮನೆ ಪಕ್ಕದ ಉದ್ಯಾನಗಳಲ್ಲಿ ಓಡುತ್ತೇನೆ. ಹಸಿರಿನಲ್ಲಿ ಓಡುವುದೇ ಖುಷಿ’ ಎಂದು ಹೇಳುತ್ತಾರೆ.

ರೆಜಿನಾ ಯೋಗಪ್ರಿಯೆ. ಸಿನಿಮಾ ಕ್ಷೇತ್ರಕ್ಕೆ ಬರುವ ಮೊದಲು ದಿನಕ್ಕೆ ಎರಡು ತಾಸು ಯೋಗ ಮಾಡುತ್ತಿದ್ದಾರಂತೆ. ಆದರೆ ಈಗ ಚಿತ್ರೀಕರಣದ ನಡುವೆ ಹೆಚ್ಚು ಬಿಡುವು ಸಿಗುವುದಿಲ್ಲವಾದ ಕಾರಣ ಯೋಗಾಭ್ಯಾಸದ ಅವಧಿ ಕಡಿಮೆಯಾಗಿದೆ. ಏಕಾಗ್ರತೆ ವೃದ್ಧಿಸಲು ನೆರವಾಗುವ ಯೋಗಾಸನಗಳಿಗೆ ಹೆಚ್ಚು ಒತ್ತು ಕೊಡುತ್ತಾರೆ. ನನಗೆ ‍ಪ್ರತಿದಿನ ಯೋಗ ಮಾಡಲು ಇಷ್ಟ ಎಂಬುದು ರೆಜಿನಾ ಮಾತು.

ಚಿತ್ರೀಕರಣ ಅಥವಾ ವಿರಾಮವಿಲ್ಲದೆ ಒಂದು ದಿನ ವ್ಯಾಯಾಮ ಅಥವಾ ವರ್ಕ್‌ಔಟ್‌ ತಪ್ಪಿಸಿದರೆ, ಅದರ ಮರುದಿನ ಯಾವುದೇ ಕಾರಣಕ್ಕೂ ರೆಜಿನಾ ತಪ್ಪಿಸುವುದಿಲ್ಲ. ವಾರಕ್ಕೆ 4 ಬಾರಿಯಾದರೂ ದೇಹ ದಂಡಿಸಿ ವರ್ಕ್‌ಔಟ್‌ ಮಾಡಬೇಕು ಎಂಬುದು ರೆಜಿನಾ ಗುರಿ.

‘ಫಿಟ್‌ನೆಸ್‌ಗಾಗಿ ಕಠಿಣ ತರಬೇತಿಯಷ್ಟೇ ಡಯೆಟ್‌ ಕೂಡ ಮುಖ್ಯ’ ಎಂಬುದನ್ನು ರೆಜಿನಾ ನಂಬುತ್ತಾರೆ.

‘ಬೆಳಿಗ್ಗೆ ಒಂದು ಗ್ಲಾಸ್‌ ನೀರಿನೊಂದಿಗೆ ನನ್ನ ದಿನ ಆರಂಭವಾಗುತ್ತದೆ. ನಂತರ ಮಸಾಲಾ ಟೀ ಅಥವಾ ಕಾಫಿ ಕುಡಿಯುತ್ತೇನೆ. ಬೆಳಗಿನ ಪಾನೀಯಗಳು ದಿನವಿಡೀ ನನ್ನ ಉತ್ಸಾಹ ಕಾಪಾಡುತ್ತವೆ. ನನ್ನ ಕಂಠದ ಆರೋಗ್ಯಕ್ಕೆ ಉತ್ತಮ ಎಂದು ನಂಬಿದ್ದೇನೆ. ಉಪಹಾರ ಸೇವಿಸಿಯೇ ಕೆಲಸಕ್ಕೆ ಹೊರಡುತ್ತೇನೆ. ತಿಂಡಿ ಹಾಗೂ ಊಟದ ನಡುವೆ ಒಣಹಣ್ಣುಗಳು ಹಾಗೂ ಎಳನೀರು ಸೇವಿಸುತ್ತೇನೆ. ಏನಾದರೂ ತಿಂದ ಬಳಿಕ ಬಳಿಕ ಒಂದು ತಾಸು ಏನೂ ತಿನ್ನದೇ ಇರುವುದು ನನ್ನ ನಿಯಮ. ನಾನು ಪಕ್ಕಾ ಸಸ್ಯಾಹಾರಿ. ಊಟದಲ್ಲಿ ತರಕಾರಿಗಳಿಗೆ ಹೆಚ್ಚು ಒತ್ತು ಕೊಡುತ್ತೇನೆ. ಗ್ರಿಲ್ಡ್‌ ಸಲಾಡ್‌, ಪನ್ನೀರ್‌ ಟಿಕ್ಕಾ ಅಂದ್ರೆ ನನಗಿಷ್ಟ. ಎಣ್ಣೆಯಿಂದ ಮಾಡಿದ ಪದಾರ್ಥಗಳು ಹಾಗೂ ಬಾಯಿಗೆ ರುಚಿಯೆನಿಸುವ ಪದಾರ್ಥಗಳನ್ನೂ ನಾನು ತಿನ್ನುವುದಿಲ್ಲ’ ಎನ್ನುತ್ತಾಳೆ ಈ ಸುಂದರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.