ಮಂಗಳವಾರ, ಆಗಸ್ಟ್ 11, 2020
26 °C

ಹೆಚ್ಚು ದಿನ ಬದುಕಬೇಕೆ? ಚೆನ್ನಾಗಿ ನಿದ್ದೆ ಮಾಡಿ

ಸುಮನಾ ಕೆ. Updated:

ಅಕ್ಷರ ಗಾತ್ರ : | |

ಹೆಚ್ಚು ದಿನ ಬದುಕಬೇಕೆ? ಚೆನ್ನಾಗಿ ನಿದ್ದೆ ಮಾಡಿ

ಬಿಬಿಸಿಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸರಣಿ ಕಾರ್ಯಕ್ರಮಗಳನ್ನು ರೂಪಿಸಿ ವಿಶ್ವವ್ಯಾಪಿ ಹೆಸರಾದವರು ಮೈಕಲ್‌ ಮೋಸ್ಲಿ. ವ್ಯಾಯಾಮ, ಉಪವಾಸ, ಸತ್ವಯುತ ಆಹಾರ, ದೀರ್ಘಾವಧಿ ಬದುಕಲು ಏನು ಮಾಡಬೇಕು ಎಂಬ ವಿಷಯಗಳ ಕುರಿತು ಅವರು ರೂಪಿಸಿದ ಕಾರ್ಯಕ್ರಮಗಳು ಲಕ್ಷಾಂತರ ಜನರ ಜೀವನ ಶೈಲಿಯನ್ನೇ ಬದಲಿಸಿದವು. ‘ಮೆಟ್ರೊ’ ಪುರವಣಿಯ ಸುಮನಾ ಕೆ. ಅವರಿಗೆ ಇಮೇಲ್ ಸಂದರ್ಶನ ನೀಡಿದ ಮೋಸ್ಲಿ ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ.

ನಿಮ್ಮ ಜನಪ್ರಿಯ ಸರಣಿ ಕಾರ್ಯಕ್ರಮ ‘ಟ್ರಸ್ಟ್‌ ಮಿ ಐಯಾಮ್‌ ಡಾಕ್ಟರ್‌’ ಬಗ್ಗೆ ಹೇಳಿ...

ಈ ಕಾರ್ಯಕ್ರಮದಲ್ಲಿ ನಮ್ಮ ಆರೋಗ್ಯ ಹಾಗೂ ಫಿಟ್‌ನೆಸ್‌ ಕುರಿತ ಪ್ರಶ್ನೆಗಳಿಗೆ ಉತ್ತರ ನೀಡಲಾಗುತ್ತದೆ. ವೈದ್ಯರು ಹಾಗೂ ನಾನು ನಮ್ಮ ದೇಹದ ಮೇಲೆಯೇ ಪ್ರಯೋಗ ಮಾಡಿಕೊಳ್ಳುತ್ತೇವೆ. ವಿಶ್ವದ ಪ್ರಮುಖ ಸಂಶೋಧನಾ ಆಸ್ಪತ್ರೆಗಳಿಗೆ ಹೋಗಿ ಭವಿಷ್ಯದ ಔಷಧಿಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತೇವೆ. ವೈಜ್ಞಾನಿಕ ಸಾಕ್ಷ್ಯ ಇದ್ದಲ್ಲಿ ಮಾತ್ರ ನಮ್ಮ ಅನುಮೋದನೆ ಮುದ್ರೆಯನ್ನು ಒತ್ತುತ್ತೇವೆ.

ಬಿಬಿಸಿಯಲ್ಲಿ ನಿರ್ದೇಶಕ, ನಿರ್ಮಾಪಕ ಹಾಗೂ ಪ್ರೆಸೆಂಟರ್‌ ಆಗಿ ನಿಮ್ಮ ಅನುಭವ ಹೇಗಿದೆ?

ನಾನು ಕೆಲ ವರ್ಷಗಳಿಂದ ಬಿಬಿಸಿಯಲ್ಲಿದ್ದೇನೆ. ಪೌಷ್ಟಿಕಾಂಶ ಹಾಗೂ ವೈದ್ಯಕೀಯ ಅಧ್ಯಯನ ನನ್ನ ಪ್ರಿಯ ವಿಷಯಗಳು. ‘ಟ್ರಸ್ಟ್‌ ಮಿ ಐಯಾಮ್‌ ಡಾಕ್ಟರ್‌’ನ ಪ್ರೆಸೆಂಟರ್‌ ಆಗಿ ನಾನು ನನ್ನ ಮೇಲೆಯೇ ಪ್ರಯೋಗ ಮಾಡಿಕೊಂಡು ಒಳನೋಟಗಳನ್ನು ತಿಳಿಸಿಕೊಡುತ್ತೇನೆ. ಈ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ.

ಜೀವನದ ಸ್ಮರಣೀಯ ಸಂಗತಿ ಯಾವುದು?

‘ಟ್ರಸ್ಟ್‌ ಮಿ ಐಯಾಮ್‌ ಡಾಕ್ಟರ್‌’ಗಾಗಿ ಒಮ್ಮೆ ಲಾಡಿಹುಳು ನುಂಗಿದ್ದೆ. ಆ ಹುಳು ಹೊಟ್ಟೆಯೊಳಗೆ ಹೋಗಿ ಏನು ಮಾಡುತ್ತದೆ ಎಂಬುದನ್ನು ತಿಳಿಯಲು ಮಾತ್ರೆ ಗಾತ್ರದ ಕ್ಯಾಮೆರಾವನ್ನೂ ನುಂಗಿದ್ದೆ. ಆ ಕಾರ್ಯಕ್ರಮದ ಚಿತ್ರೀಕರಣ ಸವಾಲಿನದ್ದಾಗಿತ್ತು. ಆದರೆ ಅಂತ್ಯದಲ್ಲಿ ಪ್ರೇಕ್ಷಕರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಬಂತು. ಆಗ ನಾವು ಅನುಭವಿಸಿದ ಕಷ್ಟಕ್ಕೂ ಅರ್ಥ ಸಿಕ್ಕಿತ್ತು.

ಹಲವು ಮೂಢನಂಬಿಕೆಗಳನ್ನು ಬಯಲು ಮಾಡಿದವರು ನೀವು. ಆಗ ಜನರ ಪ್ರತಿಕ್ರಿಯೆ ಹೇಗಿರುತ್ತಿತ್ತು?

ಜನರು ಕೆಲ ವಿಚಾರಗಳ ಬಗ್ಗೆ ಅಗಾಧ ನಂಬಿಕೆ ಬೆಳೆಸಿಕೊಂಡಿರುತ್ತಾರೆ. ಕೆಲವೊಮ್ಮೆ ಅವರ ವೈಯಕ್ತಿಕ ಅನುಭವ ಹಾಗೂ ಬೇರೆಯವರ ಮಾತಿನಿಂದ ಈ ನಂಬಿಕೆ ಗಟ್ಟಿಯಾಗುತ್ತದೆ. ನಾನು ದೇಹದ ಕ್ಯಾಲೊರಿ ನಿಯಂತ್ರಣ ಮಾಡುವ ಇಂಟರ್‌ಮಿಟೆಂಟ್‌ ಉಪವಾಸದ ಬಗ್ಗೆ ಮಾತನಾಡಲಾರಂಭಿಸಿದಾಗ ಆಶ್ಚರ್ಯ ವ್ಯಕ್ತಪಡಿಸಿದ್ದರು. ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ಹಸಿವು ತಡೆಯಲಾಗುವುದಿಲ್ಲ ಎಂದರು. ಆದರೆ ಈಗ ಒಪ್ಪಿಕೊಂಡಿದ್ದಾರೆ. ಜನರು ತಾವಾಗೇ ಏನಾದರೂ ಪ್ರಯೋಗ ಮಾಡಿದಾಗ ನಂಬಿಕೆ ಬರುತ್ತದೆ. ಬಳಿಕ ಅದನ್ನು ಆಳವಡಿಸಿಕೊಳ್ಳುತ್ತಾರೆ.

ಟಿವಿ ಪ್ರೆಸೆಂಟರ್‌ ಎದುರಿಸುವ ಸವಾಲುಗಳ ಬಗ್ಗೆ ಹೇಳಿ...

ಪ್ರತಿದಿನ ಹೊಸ ಆಲೋಚನೆ, ಹೊಸ ವಿಚಾರಗಳ ಬಗ್ಗೆ ಮಾತನಾಡಲು ಸಿದ್ಧವಾಗಿರಬೇಕು. ಈ ಹಿಂದೆ ಯಾರೂ ಮಾಡಿರದಂತಹ ಕಾರ್ಯಕ್ರಮಗಳನ್ನು ಮಾಡಲು ನಾನು ಸದಾ ಬಯಸುತ್ತೇನೆ. ನನ್ನ ಆಲೋಚನೆಗೆ ನೆರವು ನೀಡುವ ಜನರನ್ನು ಪತ್ತೆ ಮಾಡುವುದೇ ಸವಾಲು.

ನಿಮ್ಮ ಪ್ರಸಿದ್ಧ ಕೃತಿ ‘ದ ಫಾಸ್ಟ್ ಡಯಟ್’ ಬಗ್ಗೆ ಹೇಳಿ...

ನಾನು ದ ಕ್ಲೆವರ್‌ ಗಟ್‌ ಡಯೆಟ್‌, ದ 8 ವೀಕ್ಸ್‌ ಬ್ಲಡ್‌ ಶುಗರ್‌ ಡಯೆಟ್‌, ದ ಫಾಸ್ಟ್‌ ಡಯೆಟ್‌, ಫಾಸ್ಟ್‌ ಎಕ್ಸರ್‌ ಸೈಸಸ್‌ ಸೇರಿದಂತೆ ಹಲವು ಕೃತಿಗಳನ್ನು ಬರೆದಿದ್ದೇನೆ. ‘ದ ಪಾಸ್ಟ್‌ ಡಯೆಟ್‌’ ನನ್ನ ಮೆಚ್ಚಿನ ಕೃತಿ. ಅದು ನನ್ನ ಜೀವನವನ್ನೇ ಬದಲಾಯಿಸಿದೆ. ಓದುಗರ ಮೇಲೂ ಪ್ರಬಾವ ಬೀರಿದೆ. ನನ್ನ ಕೃತಿಗಳನ್ನು ಓದಿದ ಬಳಿಕ ಜನರು ಏನು ತಿನ್ನಬೇಕು, ಕುಡಿಯಬೇಕು, ಎಷ್ಟು ತಿನ್ನಬೇಕು ಎನ್ನುವ ಬಗ್ಗೆ ಯೋಚಿಸುತ್ತಾರೆ. ಆರೋಗ್ಯಯುತವಾದ ಜೀವನಶೈಲಿ ರೂಢಿಸಿಕೊಳ್ಳುತ್ತಾರೆ. ಇದು ನನಗೆ ಖುಷಿಕೊಡುವ ಸಂಗತಿ.

ಯುವಜನರಿಗೆ ಕಿವಿಮಾತು?

ರಾತ್ರಿ ಚೆನ್ನಾಗಿ ನಿದ್ದೆ ಮಾಡಿ. ಸತ್ವಯುತ ಆಹಾರ ಸೇವಿಸಿ. ಸದಾ ಕ್ರಿಯಾಶೀಲರಾಗಿರಿ. ಉತ್ತಮ ನಿದ್ದೆ ದೀರ್ಘಾಯುಷ್ಯದ ಗುಟ್ಟೂ ಹೌದು. 

**

ಧೈರ್ಯವಂತ ಮೈಕಲ್‌ ಮೋಸ್ಲಿ

ಕೋಲ್ಕತ್ತದಲ್ಲಿ ಜನಿಸಿರುವ ಮೈಕಲ್‌ ಮೋಸ್ಲಿ ಅವರು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ರಾಜಕೀಯ, ತತ್ವಶಾಸ್ತ್ರ ಹಾಗೂ ಅರ್ಥಶಾಸ್ತ್ರ ಓದಿದರು. ಲಂಡನ್‌ನ ರಾಯಲ್‌ ಫ್ರೀ ಆಸ್ಪತ್ರೆಯಲ್ಲಿ ವೈದ್ಯರಾಗಿ ತರಬೇತಿ ಪಡೆದರು. ನಂತರ ಬಿಬಿಸಿಯಲ್ಲಿ ನಿರ್ದೇಶಕರಾಗಿ ಸೇರಿಕೊಂಡರು. ‘ಟ್ರಸ್ಟ್‌ ಮಿ ಐಯಾಮ್‌ ಡಾಕ್ಟರ್‌’, ‘ದ ಟ್ರುತ್‌ ಅಬೌಟ್‌ ಎಕ್ಸರೈಸ್‌’, ‘ದ ಟ್ರುತ್‌ ಅಬೌಟ್‌ ಗೆಟ್ಟಿಂಗ್‌ ಫಿಟ್‌’ ಮೈಕಲ್‌ ಮೋಸ್ಲಿ ಅವರ ಜನಪ್ರಿಯ ಸರಣಿ ಕಾರ್ಯಕ್ರಮಗಳು.

ಇದರಲ್ಲಿ ಮೈಕಲ್‌ಗೆ ಹೆಸರು ತಂದುಕೊಟ್ಟಿದ್ದು ಟ್ರಸ್ಟ್‌ ಮಿ ಐಯಾಮ್‌ ಡಾಕ್ಟರ್‌ ಕಾರ್ಯಕ್ರಮ. ಇದರಲ್ಲಿ ಆರೋಗ್ಯ ಸಂಬಂಧಿ ಪ್ರಶ್ನೆಗಳಿಗೆ ನೇರ ಉದಾಹರಣೆಗಳ ಮೂಲಕವೇ ಉತ್ತರ ಕೊಡುತ್ತಿದ್ದರು ಮೈಕಲ್‌.  ತನ್ನ ದೇಹದ ಮೇಲೆಯೇ ಪ್ರಯೋಗ ಮಾಡಿಕೊಂಡು, ಜನರೇ ತಮ್ಮ ಆರೋಗ್ಯದ ಬಗ್ಗೆ ನಿರ್ಧರಿಸಲಿ ಎಂದು ಹೇಳುತ್ತಿದ್ದರು ಮೈಕಲ್‌.

‘ತೆಂಗಿನೆಣ್ಣೆಯಲ್ಲಿ ಕೊಲೆಸ್ಟರಾಲ್‌ ಜಾಸ್ತಿಯಿದೆಯೇ? ಆರೋಗ್ಯಕ್ಕೆ ಉತ್ತಮವೇ, ಕೆಟ್ಟದ್ದೇ?’,  ‘ಇ– ಸಿಗರೇಟ್‌ ಸುರಕ್ಷವೇ?’ ‘ಪ್ಲಾಸ್ಟಿಕ್‌ ಬಾಟಲಿಗಳಿಂದ ಕ್ಯಾನ್ಸರ್‌ ಬರುತ್ತದೆಯೇ’ ಎಂಬಂತಹ ವಿಚಾರಗಳ ಬಗೆಗೆ ಇದ್ದ ಅನೇಕ ಅನುಮಾನಗಳಿಗೆ ತಮ್ಮ ಕಾರ್ಯಕ್ರಮ ಮೂಲಕ ಉತ್ತರ ನೀಡಿದ್ದಾರೆ. ಇವರು ಬರೆದಿರುವ ಮೂರು ಕೃತಿಗಳು 42 ದೇಶಗಳಲ್ಲಿ ಮಾರಾಟವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.