ಭಾನುವಾರ, ಡಿಸೆಂಬರ್ 15, 2019
20 °C
ಉಮಾನಾಥ್‌ ಕೋಟ್ಯಾನ್‌ಗೆ ಸಿಕ್ಕಿದ ಟಿಕೆಟ್‌– ಭಿನ್ನಮತ ತೀವ್ರ

ಮೂಡುಬಿದಿರೆ ಬಿಜೆಪಿ ಕಚೇರಿಗೆ ಬೀಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡುಬಿದಿರೆ ಬಿಜೆಪಿ ಕಚೇರಿಗೆ ಬೀಗ

ಮೂಡುಬಿದಿರೆ: ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಉಮನಾಥ್ ಕೋಟ್ಯಾನ್‌ಗೆ ಟಿಕೆಟ್ ನೀಡಿದನ್ನು ವಿರೋಧಿಸಿ ಬಿಜೆಪಿ ಕಚೇರಿಗೆ ಸೋಮವಾರ ರಾತ್ರಿ ಬೀಗ ಹಾಕಲಾಗಿದೆ.

ಜಿ.ವಿ ಪೈ ರಸ್ತೆಯಲ್ಲಿರುವ ಬಿಜೆಪಿ ಚುನಾವಣಾ ಕಚೇರಿ ಕಟ್ಟಡ ಬಿಜೆಪಿ ಮುಖಂಡ ಕೆ.ಪಿ ಜಗದೀಶ್ ಅಧಿಕಾರಿ ಸ್ವಾಧೀನದಲ್ಲಿದೆ. ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಜಗದೀಶ್ ಅಧಿಕಾರಿ ಟಿಕೇಟ್‌ಗಾಗಿ ಭಾರಿ ಪ್ರಯತ್ನಪಟ್ಟರು ಹೈಕಮಾಂಡ್ ಉಮನಾಥ್ ಕೋಟ್ಯಾನ್‌ ಅವರಿಗೆ ಟಿಕೆಟ್ ನೀಡಿತ್ತು. ಇದರಿಂದ ಅಸಮಧಾನಗೊಂಡ ಜಗದೀಶ್ ಅಧಿಕಾರಿ ತನ್ನ ಸ್ವಾಧೀನದಲ್ಲಿದ್ದ ಬಿಜೆಪಿ ಕಚೇರಿ ಕಟ್ಟಡಕ್ಕೆ ಸೋಮವಾರ ರಾತ್ರಿ ಬೀಗ ಹಾಕಿದ್ದಾರೆ.

‘ಈ ದಿಢೀರ್ ಬೆಳವಣಿಗೆ ಪಕ್ಷಕ್ಕೆ ಮುಜುಗರ ಉಂಟುಮಾಡಿದೆ ಎನ್ನಲಾಗಿದ್ದು, ಪರ್ಯಾಯ ಕಚೇರಿಗೆ ಹುಡುಕಾಟ ನಡೆಯುತ್ತಿದೆ. ತನ್ಮಧ್ಯೆ ಪಕ್ಷದ ಪ್ರಮುಖರ ಸಂಪರ್ಕಕ್ಕೆ ಸಿಗದ ಜಗದೀಶ್ ಅಧಿಕಾರಿಯ ಮನವೊಲಿಕೆ ಜವಾಬ್ದಾರಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್‌ ಅವರಿಗೆ ವಹಿಸಿಕೊಡಲಾಗಿದೆ’ ಎಂದು ತಿಳಿದುಬಂದಿದೆ.

ಗೊಂದಲ ಇಲ್ಲ

ಮೂಲ್ಕಿ: ‘ಬಿಜೆಪಿಯ ಮೂಲ್ಕಿ ಮೂಡುಬಿದಿರೆ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯ ಬಗ್ಗೆ ಯಾವುದೇ ಗೊಂದಲವಿಲ್ಲ. ಎಲ್ಲರೂ ಒಟ್ಟು ಸೇರಿ ವಿಧಾನ ಸಭಾ ಕ್ಷೇತ್ರವನ್ನು ಬಿಜೆಪಿ ಪಕ್ಷ ಗೆದ್ದು ಇತಿಹಾಸ ನಿರ್ಮಿಸಲಿದೆ’ ಎಂದು ಬಿಜೆಪಿಯ ಮೂಲ್ಕಿ ಮೂಡುಬಿದಿರೆ ಕ್ಷೇತ್ರ ಅಧ್ಯಕ್ಷ ಈಶ್ವರ್ ಕಟೀಲ್ ಹೇಳಿದರು. ಕಿನ್ನಿಗೊಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು ಈ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಸದಸ್ಯ ಗಣೇಶ್ ಕಾರ್ಣಿಕ್ ಮಾತನಾಡಿ, ‘ನರೇಂದ್ರ ಮೋದಿಯವರ ಸುಭದ್ರ ಸರ್ಕಾರದಿಂದ ದೇಶದಲ್ಲಿ ಪರಿವರ್ತನೆ ಆಗುತ್ತಿದೆ.  ಕ್ಷೇತ್ರದಲ್ಲಿ 5 ಜಿಲ್ಲಾ ಪಂಚಾಯಿತಿ, 20 ತಾಲ್ಲೂಕು ಪಂಚಾಯಿತಿಗಳಲ್ಲಿ 14 ಹಾಗೂ 31 ಗ್ರಾಮ ಪಂಚಾಯಿತಿಗಳಲ್ಲಿ 21 ನ್ನು ಗೆದ್ದುಕೊಂಡು ಬಿಜೆಪಿ ಪ್ರಬಲವಾಗುತ್ತಿದೆ ಜನರು ಬಿಜೆಪಿಯನ್ನು ಈ ರೀತಿ ಸ್ವಾಗತಿಸಿ ಬಿಜೆಪಿ ಪಕ್ಷವನ್ನು ಗೆಲ್ಲಿಸುವ ಭರವಸೆ ನೀಡುತ್ತಿದ್ದಾರೆ‘ ಎಂದರು.

ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಮಾತನಾಡಿ, ‘ಪಕ್ಷದಿಂದ ಸ್ಪರ್ಥಿಸುವ ಅವಕಾಶ ಮಾಡಿಕೊಟ್ಟ ಪಕ್ಷದ ಹಿರಿಯರು, ನಾಯಕರು ಹಾಗೂ ಸಮಸ್ತ ಕಾರ್ಯಕರ್ತರಿಗೆ ನಾನು ಚಿರಋಣಿಯಾಗಿದ್ದೇನೆ. ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ಶ್ರಮಿಸಲಿದ್ದಾರೆ. ಸಾಂಘಿಕ ಪ್ರಯತ್ನ ನಮ್ಮದಾಗಿದೆ. ಪಕ್ಷ ಭೇದ ಮರೆತು ಕ್ಷೇತ್ರದ ಸಮಸ್ಯೆ ಅವಶ್ಯಕತೆಗಳನ್ನು ಅರಿತು ಯಾವುದೇ ತಾರತಮ್ಯವಿಲ್ಲದೆ ಸಂಪೂರ್ಣ ಪಾರದರ್ಶಕತೆಯಿಂದ ನಡೆದುಕೊಳ್ಳುತ್ತೇನೆ. ಕ್ಷೇತ್ರದ ಮತದಾರ ಜನರು ಗೆಲ್ಲಿಸುತ್ತಾರೆ ಎಂಬ ಧೃಡ

ವಿಶ್ವಾಸ ನನ್ನಲ್ಲಿದೆ’ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಬಾಲಕೃಷ್ಣ ಭಟ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ್, ಜಿಲ್ಲಾ ಸಮಿತಿಯ ಕೆ. ಭುವನಾಭಿರಾಮ ಉಡುಪ ಇದ್ದರು.

ಗೆಲ್ಲುವ ಕುದುರೆಗೆ ಟಿಕೆಟ್‌ ನೀಡಲಿಲ್ಲ

ಮೂಡುಬಿದಿರೆ: ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮನಾಥ್ ಕೋಟ್ಯಾನ್ ಆಯ್ಕೆ ಪಕ್ಷದೊಳಗೆ ಬಂಡಾಯಕ್ಕೆ ಕಾರಣವಾಗಿದ್ದು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಟಿಕೆಟ್‌ ಆಕಾಂಕ್ಷಿಯೂ ಆಗಿದ್ದ ಕೆ.ಪಿ ಜಗದೀಶ್ ಅಧಿಕಾರಿ ಬಿಜೆಪಿ ಅಭ್ಯರ್ಥಿ ಆಯ್ಕೆಯನ್ನು ಬಹಿರಂಗವಾಗಿ ವಿರೋಧಿಸಿದ್ದಾರೆ.

ಉಮನಾಥ್ ಕೋಟ್ಯಾನ್, ಜಗದೀಶ್ ಅಧಿಕಾರಿ ಹಾಗೂ ಸುದರ್ಶನ್ ಎಂ. ಬಿಜೆಪಿ ಟಿಕೇಟ್ ಪಡೆಯಲು ತೀವ್ರ ಪೈಪೋಟಿ ನಡೆಸಿ ಕೊನೆಗೆ ಹೈಕಮಾಂಡ್ ಉಮನಾಥ್ ಕೋಟ್ಯಾನ್‌ಗೆ ಟಿಕೆಟ್‌ ನೀಡಿತ್ತು. ಹೈಕಮಾಂಡ್ ನಿರ್ಧಾರಕ್ಕೆ ಸುದರ್ಶನ್ ಎಂ. ಸಹಮತ ವ್ಯಕ್ತಪಡಿಸಿದರೂ ಜಗದೀಶ್ ಅಧಿಕಾರಿ ಮಾತ್ರ ವಿರೋಧಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೆಲ್ಲುವ ಕುದುರೆಗೆ ಟಿಕೇಟ್ ನೀಡುವುದಾಗಿ ಭರವಸೆ ನೀಡಿದ್ದ ಪಕ್ಷದ ವರಿಷ್ಠರು ಈಗ ಮೂಡುಬಿದಿರೆಯಲ್ಲಿ ಪಕ್ಷಕ್ಕೆ ಟಿಕೆಟ್‌ ನೀಡಿದ್ದು ಸತ್ತ ಕತ್ತೆಗೆ. ಸತ್ತ ಕತ್ತೆ ಗೆಲ್ಲಲು ಸಾಧ್ಯವಿಲ್ಲ. ನಡವಳಿಕೆ ಸರಿ ಇಲ್ಲದ ಅಭ್ಯರ್ಥಿ ಪರ ಮತ ಕೇಳಲು ಮನಸ್ಸು ಒಪ್ಪುವುದಿಲ್ಲ. ಕ್ಷೇತ್ರದ ಹೊರಗಿನವರಿಗೆ ಟಿಕೆಟ್‌ ಕೊಡುವುದಿಲ್ಲ ಎಂಬ ಹೈಕಮಾಂಡ್ ತನ್ನ ನಿಲುವನ್ನು ಕೊನೆಗೆ ಬದಲಾಯಿಸಿಕೊಂಡಿದೆ ಎಂದರು.

 

ಪ್ರತಿಕ್ರಿಯಿಸಿ (+)