ಗುರುವಾರ , ಆಗಸ್ಟ್ 13, 2020
21 °C

ಗ್ಯಾಜೆಟ್‌ ಲೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ಯಾಜೆಟ್‌ ಲೋಕ

ರೇಡಿಯೊ ಸಾರಂಗ

ಎಫ್.ಎಂ. ವಿಧಾನದಲ್ಲಿ ಪ್ರಸಾರ ಮಾಡುವ ಸೀಮಿತ ವ್ಯಾಪ್ತಿಯ ಸಮುದಾಯ ರೇಡಿಯೊ ಕೇಂದ್ರಗಳು ಹಲವಾರಿವೆ. ಇವುಗಳ ಬಗ್ಗೆ ತುಂಬ ಜನರಿಗೆ ತಿಳಿದಿಲ್ಲ. ಇಂತಹ ಒಂದು ಕೇಂದ್ರ ರೇಡಿಯೊ ಸಾರಂಗ. ಇದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕನ್ನಡ, ತುಳು, ಕೊಂಕಣಿ ಮತ್ತು ಬ್ಯಾರಿ ಭಾಷೆಗಳಲ್ಲಿ ಕಾರ್ಯಕ್ರಮ ಹಾಗೂ ಕರಾವಳಿಯ ಪ್ರಖ್ಯಾತ ಯಕ್ಷಗಾನವನ್ನು ಈ ಕೇಂದ್ರ ಪ್ರಸಾರ ಮಾಡುತ್ತಿದೆ.

ನೀವು ಮಂಗಳೂರು ಮತ್ತು ಹತ್ತಿರದಲ್ಲಿರುವವರಾದರೆ 107.8 MHz ಕಂಪನಾಂಕದಲ್ಲಿ ಇದನ್ನು ಆಲಿಸಬಹುದು. ನೀವು ದೂರದಲ್ಲಿರುವವರಾದರೆ ಇದನ್ನು ಆಲಿಸಲು ನಿಮಗೀಗ ಒಂದು ಕಿರುತಂತ್ರಾಂಶ (ಆ್ಯಪ್) ಲಭ್ಯವಿದೆ. ಇದು ಬೇಕಿದ್ದಲ್ಲಿ ನೀವು ಗೂಗಲ್ ಪ್ಲೇ ಸ್ಟೋರಿನಲ್ಲಿ Radio Sarang ಎಂದು ಹುಡುಕಬೇಕು ಅಥವಾ http://bit.ly/gadgetloka325 ಜಾಲತಾಣಕ್ಕೆ ಭೇಟಿ ನೀಡಬೇಕು. ದಿನಕ್ಕೆ 16 ತಾಸು ಇದರ ಕಾರ್ಯಕ್ರಮಗಳನ್ನು ಈ ಕಿರುತಂತ್ರಾಂಶದ ಮೂಲಕ ಲೈವ್ ಸ್ಟ್ರೀಮ್ ಮಾಡಲಾಗುತ್ತಿದೆ. ಕಾರ್ಯಕ್ರಮದ ಆಡಿಯೊ ಗುಣಮಟ್ಟ ಚೆನ್ನಾಗಿದೆ. ಯಾವ ಹೊತ್ತಿಗೆ ಯಾವ ಕಾರ್ಯಕ್ರಮ ಎಂಬ ಪಟ್ಟಿಯನ್ನು ನೀಡಿದ್ದರೆ ಚೆನ್ನಾಗಿತ್ತು.

**

ಗೂಗಲ್ ಪದ

Screen notch = ಪರದೆಯ ಕಚ್ಚು

ಸ್ಮಾರ್ಟ್‌ಫೋನಿನ ಪರದೆಯ ಮೇಲ್ಭಾಗದ ಮಧ್ಯಭಾಗದಲ್ಲಿ ರುವ ಸ್ಪೀಕರ್ ಮತ್ತು ಕ್ಯಾಮೆರಾಗಳಿಗೆ ಸ್ವಲ್ಪ ಜಾಗವನ್ನು ಬಿಟ್ಟು ಉಳಿದಂತೆ ಫೋನಿನ ಮೇಲಿನ ಕೊನೆ ತನಕ ಪರದೆ ವ್ಯಾಪಿಸಿರುವುದು. ಇತ್ತೀಚೆಗೆ ಐಫೋನ್ ಇದನ್ನು ಪರಿಚಯಿಸಿತು. ಇದು ಬಹತೇಕ ಜನರಿಗೆ ಇಷ್ಟವಿಲ್ಲದಿದ್ದರೂ ಹಲವು ಆ್ಯಂಡ್ರಾಯ್ಡ್ ಫೋನ್ ತಯಾರಕರೂ ಈಗ ಇಂತಹ ಪರದೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ.**

ಪ್ರಕಾಶ ಹೂಗಾರರ ಪ್ರಶ್ನೆ: ನನ್ನ ಫೋನಿನಲ್ಲಿ ನನ್ನ ಮತ್ತು ತಂದೆಯವರ ಜಿಮೈಲ್ ಖಾತೆಗಳಿವೆ. ನನಗೆ ಅದರಲ್ಲಿ ಒಂದನ್ನು ತೆಗೆದು ಹಾಕಬೇಕಾಗಿದೆ. ಹೇಗೆ ಮಾಡಲಿ?

ಉ: ಸೆಟ್ಟಿಂಗ್ಸ್‌ನಲ್ಲಿ ಅಕೌಂಟ್ಸ್ ಎಂಬಲ್ಲಿ ಗೂಗಲ್ ಎಂದು ಆಯ್ಕೆ ಮಾಡಿ. ನಂತರ ಅದು ತೋರಿಸುವ ಗೂಗಲ್ (ಜಿಮೈಲ್) ಖಾತೆಗಳಲ್ಲಿ ತೆಗೆದು ಹಾಕಬೇಕಾದುದನ್ನು ಆಯ್ಕೆ ಮಾಡಿ. ನಂತರ ಮೇಲ್ಗಡೆ ಬಲ ಮೂಲೆಯಲ್ಲಿ ಕಾಣಿಸುವ ಮೂರು ಚುಕ್ಕಿಗಳ ಮೇಲೆ ಒತ್ತಿ. ನಂತರ Remove Account ಎಂದು ಆಯ್ಕೆ ಮಾಡಿ.

**

ಗೂಗಲ್‌ ತರ್ಲೆ

ಗೂಗಲ್‌ನವರ ಸಂಶೋಧನಾ ವಿಭಾಗದವರು ಕೃತಕ ಬುದ್ಧಿಮತ್ತೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಎಷ್ಟೇ ಗದ್ದಲದ ಸ್ಥಳದಲ್ಲಿರಲಿ, ಅವರ ತಂತ್ರಾಂಶವು ನಿಮ್ಮ ಧ್ವನಿಯನ್ನು ಪತ್ತೆ ಹಚ್ಚಬಲ್ಲುದು. ಇದೇನು ಮಹಾ, ನಮ್ಮ ಹೆಂಗಸರುಗಳಿಗೆ ಇದು ಯಾವತ್ತೋ ಗೊತ್ತಿದ್ದ ವಿದ್ಯೆ ಎನ್ನುತ್ತೀರಾ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.