ಶನಿವಾರ, ಆಗಸ್ಟ್ 8, 2020
22 °C
ಡಾ.ಯತೀಂದ್ರ ಸಿದ್ದರಾಮಯ್ಯ ಪರ ಮತಯಾಚನೆ; ರೋಡ್‌ ಶೋ

ವರುಣಾದಲ್ಲಿ ಸಿ.ಎಂ ಮಿಂಚಿನ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರುಣಾದಲ್ಲಿ ಸಿ.ಎಂ ಮಿಂಚಿನ ಸಂಚಾರ

ಮೈಸೂರು: ಚುನಾವಣೆ ಘೋಷಣೆ ಯಾದ ದಿನದಿಂದ ಚಾಮುಂಡೇಶ್ವರಿ ಕ್ಷೇತ್ರದ ಮೇಲೆ ಗಮನ ಕೇಂದ್ರೀಕರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ತಮ್ಮ ‘ಹಳೆಯ’ ಕ್ಷೇತ್ರ ವರುಣಾದಲ್ಲಿ ಪ್ರಚಾರ ನಡೆಸಿದರು. ಪುತ್ರ ಯತೀಂದ್ರ ಪರ ಇಡೀ ದಿನ ಮತಯಾಚಿಸಿದರು.

2008 ಮತ್ತು 2013ರಲ್ಲಿ ವರುಣಾದಿಂದ ಆಯ್ಕೆಯಾಗಿದ್ದ ಸಿದ್ದರಾಮಯ್ಯ ಅವರು ಈ ಬಾರಿ ಕ್ಷೇತ್ರವನ್ನು ಪುತ್ರನಿಗೆ ಬಿಟ್ಟುಕೊಟ್ಟಿದ್ದಾರೆ. ಸೋಮವಾರ ಇಡೀ ದಿನ ಚಾಮುಂಡೇಶ್ವರಿಯಲ್ಲಿ ಪ್ರಚಾರ ನಡೆಸಿದ್ದ ಮುಖ್ಯಮಂತ್ರಿ, ಮಂಗಳವಾರ ವರುಣಾದಲ್ಲಿ ಮಿಂಚಿನ ಸಂಚಾರ ಕೈಗೊಂಡರು.

ಕೋಣನೂರು ಗ್ರಾಮದಲ್ಲಿ ಬೆಳಿಗ್ಗೆ 11ಕ್ಕೆ ಪ್ರಚಾರಕ್ಕೆ ಚಾಲನೆ ನೀಡಿದರು. ಗ್ರಾಮದ ಮುಖ್ಯರಸ್ತೆಯಲ್ಲಿ ನೆರೆದಿದ್ದ ನೂರಾರು ಬೆಂಬಲಿಗರು ಹೂವಿನ ಮಳೆಗರೆದು ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿದರು. ಕಾರಿನಿಂದ ಇಳಿದು ಪ್ರಚಾರ ಜೀಪ್‌ ಏರಿದ ಮುಖ್ಯಮಂತ್ರಿ ಕೆಲಹೊತ್ತು ಮಾತನಾಡಿದರು.

‘ನಾನು ಸತತ ಮೂರನೇ ಬಾರಿ ಇಲ್ಲಿಂದ ಸ್ಪರ್ಧಿಸಬೇಕಿತ್ತು. ಆದರೆ ಇದು ನನ್ನ ಕೊನೆಯ ಚುನಾವಣೆ. ಆದ್ದರಿಂದ ನನ್ನ ರಾಜಕೀಯ ಜೀವನ ಆರಂಭಿಸಿದ ಕ್ಷೇತ್ರದಿಂದಲೇ ಕೊನೆಯ ಚುನಾವಣೆ ಎದುರಿಸಬೇಕು ಎಂಬ ಕಾರಣ ಚಾಮುಂಡೇಶ್ವರಿಯಿಂದ ಸ್ಪರ್ಧಿಸಲು ನಿರ್ಧರಿಸಿದೆ’ ಎಂದರು.

‘ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳು ನನಗೆ ಎರಡು ಕಣ್ಣುಗಳಿದ್ದಂತೆ. ಎರಡೂ ಕ್ಷೇತ್ರಗಳ ಜನರ ಕಷ್ಟಗಳಿಗೆ ಸ್ಪಂದಿಸುತ್ತೇನೆ. ವರುಣಾದಿಂದ ನೀವೇ ಸ್ಪರ್ಧಿಸಬೇಕು, ಇಲ್ಲದಿದ್ದರೆ ಮಗನನ್ನು ನಿಲ್ಲಿಸಬೇಕು ಎಂದು ಕಾರ್ಯಕರ್ತರು ಒತ್ತಡ ಹೇರಿದ್ದರು’ ಎಂದು ಹೇಳಿದರು.

ಕೋಣನೂರಿನಿಂದ ದಾಸನೂರು ಮತ್ತು ಹನುಮಪುರಕ್ಕೆ ತೆರಳಿ ಪ್ರಚಾರ ಕೈಗೊಂಡರು. ಹನುಮಪುರದಲ್ಲಿ ಕಾಂಗ್ರೆಸ್‌ ಮುಖಂಡ ಬಸವರಾಜಪ್ಪ ಎಂಬವರ ಮನೆಗೆ ತೆರಳಿ ಯೋಗಕ್ಷೇಮ ವಿಚಾರಿಸಿದರು. ಮೊದಲ ಎರಡು ಗ್ರಾಮಗಳಲ್ಲಿ ಮುಖ್ಯಮಂತ್ರಿ ಜತೆ ಕಾಣಿಸಿಕೊಳ್ಳದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ಹನುಮಪುರದಲ್ಲಿ ಪ್ರಚಾರ ಅಭಿಯಾನವನ್ನು ಸೇರಿಕೊಂಡರು.

ಕಾರ್ಯ ಮತ್ತು ತಗಡೂರಿನಲ್ಲಿ ಮುಖ್ಯಮಂತ್ರಿಗೆ ಅದ್ದೂರಿ ಸ್ವಾಗತ ದೊರೆಯಿತು. ಕೆಲವರು ಜೀಪಿನ ಮೇಲೆ ಏರಿ ಹಾರ ಹಾಕಿದರು. ಕಾರ್ಯ ಗ್ರಾಮದಲ್ಲಿ ಸುಮಾರು ಒಂದು ಕಿ. ಮೀ.ವರೆಗೆ ರೋಡ್‌ ಶೋ ನಡೆಸಿದರು. ಬಿಸಿಲು ಲೆಕ್ಕಿಸದೆ ಮತಯಾಚನೆ ಮಾಡಿದರು. ಪ್ರಚಾರ ಜೀಪ್‌ನಲ್ಲೇ ನಿಂತುಕೊಂಡು ಎಳನೀರು ಸೇವಿಸಿದರು, ಚಹಾ ಕುಡಿದರು, ಬಿಸ್ಕತ್‌ ತಿಂದರು. ಕಾರ್ಯ ಗ್ರಾಮದಲ್ಲಿ ಪುಟ್ಟ ಮಕ್ಕಳು ಕಾಂಗ್ರೆಸ್‌ ಬಾವುಟ ಹಿಡಿದು ಬೀದಿಗಳಲ್ಲಿ ಓಡಾಡಿದರು.

ಮಧ್ಯಾಹ್ನದ ಬಳಿಕ ತಾಯೂರು, ಸುತ್ತೂರು, ಹೊಸಕೋಟೆ, ಹದಿನಾರು, ಹುಳಿಮಾವು, ಕೆಂಪಿಸಿದ್ದನಹುಂಡಿ, ತಾಂಡವಪುರ ಮತ್ತು ರಾಂಪುರದಲ್ಲಿ ಪ್ರಚಾರ ನಡೆಸಿದರು.

ಮಣ್ಣಿನ ಮಗ: ಪ್ರಚಾರ ಕೈಗೊಂಡ ಗ್ರಾಮಗಳಲ್ಲಿ ಮಾತನಾಡುವ ವೇಳೆ ಮುಖ್ಯಮಂತ್ರಿ ಪದೇ ಪದೇ ‘ನಾನು ಮಣ್ಣಿನ ಮಗ’ ಎಂಬ ಮಾತನ್ನು ಉಚ್ಚರಿಸಿದರು. ಯತೀಂದ್ರ ವಿರುದ್ಧ ಸ್ಪರ್ಧಿಸಲು ಬಯಸಿರುವ ಬಿಜೆಪಿಯ ವಿಜಯೇಂದ್ರ ಅವರ ಹೆಸರು ಹೇಳದೆಯೇ, ‘ಅವನು ಯಾರು, ಅವನು ಯಾರು’ ಎಂದು ಲೇವಡಿ ಮಾಡಿದರು.

‘ಅವನಿಗೂ ವರುಣಾ ಕ್ಷೇತ್ರಕ್ಕೂ ಏನು ಸಂಬಂಧ? ಅವರ ಮಗ, ಇವರ ಮಗ ಎಂದವರಿಗೆ ಮತ ಹಾಕುತ್ತೀರಾ’ ಎಂದು ಪ್ರಶ್ನಿಸಿದರು.

ಯುವಕ ಪೊಲೀಸ್‌ ವಶಕ್ಕೆ: ತಗಡೂರು ಗ್ರಾಮದ ಅಂಬೇಡ್ಕರ್‌ ಕಾಲೊನಿ ಮುಂದೆ ಮುಖ್ಯಮಂತ್ರಿ ವಿರುದ್ಧ ಧಿಕ್ಕಾರ ಕೂಗಲು ಮುಂದಾಗಿದ್ದ ಬಿಜೆಪಿ ಮುಖಂಡ ವಿ.ಶ್ರೀನಿವಾಸಪ್ರಸಾದ್‌ ಅವರ ಅಭಿಮಾನಿಯೊಬ್ಬನನ್ನು ದೊಡ್ಡಕವಲಂದೆ ಪೊಲೀಸರು ವಶಕ್ಕೆ ಪಡೆದುಕೊಂಡರು. ಇದನ್ನು ಪ್ರಶ್ನಿಸಿ ಬಿಜೆಪಿ ಕಾರ್ಯಕರ್ತರು ಠಾಣೆಗೆ ತೆರಳಿ ಪೊಲೀಸರ ಜತೆ ವಾಗ್ವಾದ ನಡೆಸಿದರು.

ಸಂಜೆ ಹದಿನಾರು ಗ್ರಾಮಕ್ಕೆ ಸಿದ್ದರಾಮಯ್ಯ ಬಂದಾಗ ಕಾರ್ಯ ಕರ್ತರು ಹೂವಿನ ಮಳೆಗರೆದರು.

ರಾಕೇಶ್‌ ನೆನಪು

ವರುಣಾದಲ್ಲಿ ಪ್ರಚಾರದ ವೇಳೆ ಸಿದ್ದರಾಮಯ್ಯ ಅವರು ಪುತ್ರ ರಾಕೇಶ್‌ ಅವರನ್ನು ನೆನಪಿಸಿಕೊಂಡರು. ‘ಕ್ಷೇತ್ರದ ಉಸ್ತುವಾರಿಯನ್ನು ರಾಕೇಶ್‌ ನೋಡಿಕೊಳ್ಳುತ್ತಿದ್ದ. ಅವನ ಅಕಾಲಿಕ ಮರಣದ ಕಾರಣ ಯತೀಂದ್ರ ಅನಿವಾರ್ಯವಾಗಿ ರಾಜಕೀಯಕ್ಕೆ ಬಂದಿದ್ದಾನೆ. ನನಗೆ ಎರಡು ಸಲ ಆಶೀರ್ವಾದ ಮಾಡಿದಂತೆ ಅವನಿಗೂ ಆಶೀರ್ವಾದ ಮಾಡಿ’ ಎಂದು ಸಿದ್ದರಾಮಯ್ಯ ಹೇಳಿದರು.

ಪಟಾಕಿ ಉಲ್ಟಾ: ತಪ್ಪಿದ ಅನಾಹುತ

ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲು ಕಾರ್ಯ ಗ್ರಾಮದಲ್ಲಿ ಪಟಾಕಿ ಸಿಡಿಸುವ ವೇಳೆ ಅಭಿಮಾನಿಗಳು ಎಡವಟ್ಟು ಮಾಡಿಕೊಂಡಿದ್ದಾರೆ. ಬಾಣ ಬಿರುಸನ್ನು ತಲೆಕೆಳಗಾಗಿ ಇಟ್ಟು ಬೆಂಕಿಕೊಟ್ಟಿದ್ದಾರೆ.

ಮೇಲಕ್ಕೆ ನೆಗೆದು ಗಗನದಲ್ಲಿ ಚಿತ್ತಾರ ಬಿಡಿಸಬೇಕಿದ್ದ ಪಟಾಕಿ ಅಲ್ಲೇ ಸಿಡಿದಿದೆ. ಬೆಂಕಿಯ ಕಿಡಿಗಳು ಸುತ್ತಲೂ ಹಾರಿದ್ದು, ಅಲ್ಲಿದ್ದವರು ದೂರ ಓಡಿ ಕಿಡಿಯಿಂದ ತಪ್ಪಿಸಿಕೊಂಡರು. ತೆಂಗಿನ ಗರಿಗಳಿಂದ ನಿರ್ಮಿಸಿದ್ದ ಬೇಲಿಗೆ ಕಿಡಿಯೊಂದು ತಾಗಿ ಹೊತ್ತಿ ಉರಿದಿದೆ. ತಕ್ಷಣ ಬೆಂಕಿಯನ್ನು ನಂದಿಸಲಾಯಿತು. ಸಿದ್ದರಾಮಯ್ಯ ಅವರಿದ್ದ ಪ್ರಚಾರ ಜೀಪ್‌ ಈ ವೇಳೆ ಸ್ಥಳದಿಂದ ಸುಮಾರು 100 ಮೀ. ನಷ್ಟು ದೂರದಲ್ಲಿತ್ತು.

ಸುತ್ತೂರು ಸ್ವಾಮೀಜಿ ಭೇಟಿ

ವರುಣಾ ಕ್ಷೇತ್ರದ ಸುತ್ತೂರಿಗೆ ಪ್ರಚಾರಕ್ಕೆ ತೆರಳಿದ ಸಿದ್ದರಾಮಯ್ಯ ಅವರು ಸುತ್ತೂರು ಮಠಕ್ಕೂ ಭೇಟಿ ನೀಡಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಶಿವರಾತ್ರೀಶ್ವರ ಸ್ವಾಮೀಜಿಯ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.