ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಬಿಡಲ್ಲ; ಹಾಲಪ್ಪ ಬೆಂಬಲಿಸುವುದಿಲ್ಲ

ಸಾಗರ: ಬೆಂಬಲಿಗರ ಸಭೆಯಲ್ಲಿ ಗೋಪಾಲಕೃಷ್ಣ ಬೇಳೂರು ಸ್ಪಷ್ಟನೆ
Last Updated 18 ಏಪ್ರಿಲ್ 2018, 10:50 IST
ಅಕ್ಷರ ಗಾತ್ರ

ಸಾಗರ: ‘ಕಾಂಗ್ರೆಸ್‌ ಅಥವಾ ಜೆಡಿಎಸ್‌ ಸೇರುವ ಚಿಂತನೆ ಇಲ್ಲ. ಬಿಜೆಪಿ ಬಿಡಲ್ಲ. ಆದರೆ, ಯಾವುದೇ ಕಾರಣಕ್ಕೂ ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಅವರನ್ನು ಬೆಂಬಲಿಸುವುದಿಲ್ಲ’ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಸ್ಪಷ್ಟಪಡಿಸಿದರು.

ಇಲ್ಲಿನ ರಾಘವೇಶ್ವರ ಸಭಾಭವನದಲ್ಲಿ ಮಂಗಳವಾರ ನಡೆದ ತಮ್ಮ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ‘ರಾತ್ರಿ ಬೆಂಗಳೂರಿಗೆ ತೆರಳುತ್ತಿದ್ದೇನೆ. ಸಾಗರ ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿದಂತೆ ನಿರ್ಧಾರವನ್ನು ಪುನರ್‌ ಪರಿಶೀಲಿಸುವಂತೆ ಬಿಜೆಪಿ ವರಿಷ್ಠರಲ್ಲಿ ಮನವಿ ಮಾಡುತ್ತೇನೆ. ಆ ಬಳಿಕವೇ ನನ್ನ ಮುಂದಿನ ರಾಜಕೀಯ ನಡೆ ಕುರಿತು ತೀರ್ಮಾನಿಸುತ್ತೇನೆ’ ಎಂದರು.

‘ಕೆಲ ದಿನಗಳ ಹಿಂದೆ ಹರತಾಳು ಗ್ರಾಮದಲ್ಲಿ ಹಾಲಪ್ಪ ನಡೆಸಿದ ಬೆಂಬಲಿಗರ ಸಭೆಯಲ್ಲಿ ಯಡಿಯೂರಪ್ಪ ಅವರು ಹೇಳಿದರೂ ನನ್ನನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು. ಈಗ ಹಾಲಪ್ಪ ಅವರಿಗೆ ಪಕ್ಷದ ಟಿಕೆಟ್‌ ನೀಡಲಾಗಿದೆ. ಹೀಗಿರುವಾಗ ಅವರನ್ನು ನಾನು ಹೇಗೆ ಬೆಂಬಲಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಬಿಜೆಪಿ ವರಿಷ್ಠರು ನಡೆಸಿದ ಸಮೀಕ್ಷೆಯಲ್ಲಿ ಸಾಗರ ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿ ನಾನೇ ಎಂಬುದು ಸ್ಪಷ್ಟವಾಗಿದ್ದರೂ ನನಗೆ ಟಿಕೆಟ್ ನಿರಾಕರಿಸಲಾಗಿದೆ. ಯಾವ ಕಾರಣಕ್ಕಾಗಿ ನನಗೆ ಟಿಕೆಟ್‌ ನೀಡಿಲ್ಲ ಎಂಬುದನ್ನು ಬಿಜೆಪಿ ಮುಖಂಡರೇ ಕ್ಷೇತ್ರದ ಕಾರ್ಯಕರ್ತರಿಗೆ ತಿಳಿಸಬೇಕು. ಎರಡು ಬಾರಿ ಕ್ಷೇತ್ರದ ಶಾಸಕನಾಗಿದ್ದೇನೆ. ಐದು ವರ್ಷಗಳಿಂದ ಪಕ್ಷದ ಸಂಘಟನೆಗಾಗಿ ಅವಿರತವಾಗಿ ಶ್ರಮಿಸಿದ್ದೇ ನನಗೆ ಮುಳುವಾಯಿತೆ’ ಎಂದು ಅವರು ನೋವಿನಿಂದ ನುಡಿದರು.

‘ಅಧಿಕಾರ ಇದ್ದಾಗ ಯಾವತ್ತೂ ದ್ವೇಷ ಅಥವಾ ದಬ್ಬಾಳಿಕೆಯ ರಾಜಕಾರಣ ಮಾಡಿಲ್ಲ. ನನ್ನ ಸಹೋದರನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಬಿಜೆಪಿಗೆ ಕರೆತಂದು ಸ್ನೇಹ ಸಂಪಾದಿಸಿದ್ದೇನೆ. ಎಲ್ಲಾ ಜಾತಿ, ಧರ್ಮದವರು ಒಂದಾಗಿ ಬಾಳ್ವೆ ನಡೆಸುವ ವಾತಾವರಣವನ್ನು ಕ್ಷೇತ್ರದಲ್ಲಿ ಸೃಷ್ಟಿಸಿದ್ದೇನೆ. ಯಡಿಯೂರಪ್ಪ ಅವರು ಕೆಜೆಪಿ ಸ್ಥಾಪಿಸಿದಾಗ ಅವರ ಜೊತೆ ಹೋಗದೆ ಇರುವುದೇ ತಪ್ಪಾಯಿತೆ’ ಎಂದು ಪ್ರಶ್ನಿಸಿದರು.

‘ಎಸ್‌.ಬಂಗಾರಪ್ಪ ನನ್ನ ರಾಜಕೀಯ ಗುರು. ಅವರ ವಿರುದ್ಧ ನಾನು ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಪರವಾಗಿ ಸಂಸತ್‌ ಚುನಾವಣೆಯಲ್ಲಿ ಪ್ರಚಾರ ಮಾಡಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ಕಳೆದುಕೊಳ್ಳುವ ಸಂದರ್ಭದಲ್ಲಿ ರಾಜಭವನಕ್ಕೆ ನುಗ್ಗಿ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿದವನು ನಾನು. ಇದನ್ನೆಲ್ಲಾ ಪಕ್ಷದ ಮುಖಂಡರು ಮರೆಯಬಾರದಿತ್ತು’ ಎಂದು ಸ್ಮರಿಸಿದರು.

‘ನನ್ನ ಕ್ಷೇತ್ರದಲ್ಲಿ ಟಿಕೆಟ್‌ ನೀಡಿ ಎಂದು ಕೇಳಿದ್ದೆ ಹೊರತು ಪಕ್ಕದ ಕ್ಷೇತ್ರದ ಟಿಕೆಟ್‌ ಕೇಳಿರಲಿಲ್ಲ. ಆದರೆ, ಇಡೀ ರಾಜ್ಯವೇ ತಲೆತಗ್ಗಿಸುವಂತಹ ಕೃತ್ಯದಲ್ಲಿ ತೊಡಗಿದ್ದ ವ್ಯಕ್ತಿಗೆ ಬಿಜೆಪಿ ಸಾಗರದಲ್ಲಿ ಟಿಕೆಟ್‌ ನೀಡಿದೆ. ಅದರ ಬದಲು ಬೇರೆ ಯಾವುದೇ ವ್ಯಕ್ತಿಗೆ ಟಿಕೆಟ್‌ ನೀಡಿದ್ದರೆ ನಾನು ಅವರ ಪರವಾಗಿ ಕೆಲಸ ಮಾಡುತ್ತಿದ್ದೆ’ ಎಂದು ಹೇಳಿದರು.

‘ಬಿಜೆಪಿ ಗಡಿಮಾರಮ್ಮ ಇದ್ದಂತೆ ಎಂದು ಹೇಳಿದ್ದ ಕುಮಾರ್‌ ಬಂಗಾರಪ್ಪ ಅವರಿಗೆ ಸೊರಬ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಾಲಪ್ಪ ಅವರು ಕೆಜೆಪಿಯಲ್ಲಿದ್ದರೂ ಸಾಗರ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಯಾಗಿದ್ದ ಬಿ.ಆರ್‌.ಜಯಂತ್‌ ಅವರ ಪರವಾಗಿ ಕೆಲಸ ಮಾಡುವ ಬದಲು ಕಾಂಗ್ರೆಸ್‌ನ ಕಾಗೋಡು ತಿಮ್ಮಪ್ಪ ಅವರಿಗೆ ನೆರವು ನೀಡಿದ್ದರು. ಕಳೆದ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಆವಿನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭೀಮನೇರಿ ಶಿವಪ್ಪ ಅವರು ಸೋಲಲು ಕಾರಣರಾದವರು ಇದೇ ಹಾಲಪ್ಪ’ ಎಂದು ಆರೋಪಿಸಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಭೀಮನೇರಿ ಶಿವಪ್ಪ ಮಾತನಾಡಿ, ‘ಸ್ಥಳೀಯ ಬಿಜೆಪಿ ಮುಖಂಡ ಟಿ.ಡಿ.ಮೇಘರಾಜ್‌ ಅವರ ಮಾತು ಕೇಳಿ ಯಡಿಯೂರಪ್ಪ ಅವರು ಹಾಲಪ್ಪ ಅವರಿಗೆ ಟಿಕೆಟ್‌ ನೀಡಿದ್ದಾರೆ. ಈ ಮೂಲಕ ಮೇಘರಾಜ್‌ ಅವರು ಹಾಲಿಗೆ ಹುಳಿ ಹಿಂಡುವ ಕೆಲಸ ಮಾಡಿದ್ದಾರೆ. ಈಗಲೂ ಕಾಲ ಮಿಂಚಿಲ್ಲ. ಬಿಜೆಪಿ ವರಿಷ್ಠರು ತಮ್ಮ ನಿರ್ಧಾರವನ್ನು ಬದಲಿಸಿ ಬೇಳೂರಿಗೆ ಟಿಕೆಟ್‌ ನೀಡಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಆರ್‌.ಸಿ.ಮಂಜಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯ ಕಲಸೆ ಚಂದ್ರಪ್ಪ, ಸೋಮಶೇಖರ್‌ ಲ್ಯಾವಿಗೆರೆ, ಬಿಜೆಪಿ ಮುಖಂಡರಾದ ಶ್ರೀನಿವಾಸ್‌ ಮೇಸ್ತ್ರಿ, ಶರಾವತಿ ಸಿ.ರಾವ್‌, ಇಂದೂಧರ ಗೌಡ, ನಾರಾಯಣ ಮೂರ್ತಿ ಕಾನುಗೋಡು, ವಿ.ಶಂಕರ್‌, ಗಣಪತಿ, ಕೆ.ವಿ. ಪ್ರವೀಣ್‌ಕುಮಾರ್‌, ಸುಧೀಂದ್ರ ಪಂಡಿತ್‌, ರವೀಶ್‌ಕುಮಾರ್‌, ಕಸ್ತೂರಿ ನಾಗರಾಜ್‌ ಮಾತನಾಡಿದರು. ಸಂತೋಷ್‌ ಶೇಟ್‌ ಕಾರ್ಯಕ್ರಮವನ್ನು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT