ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯ ಧರ್ಮದ ಸ್ಥಾಪನೆಗೆ ಕ್ರಮ

Last Updated 19 ಏಪ್ರಿಲ್ 2018, 10:43 IST
ಅಕ್ಷರ ಗಾತ್ರ

ಕನಕಪುರ: ಜಾತಿ ವ್ಯವಸ್ಥೆಯಿಂದ ಗಬ್ಬು ನಾರುತ್ತಿದ್ದ ಸಮಾಜವನ್ನು ಬದಲಾಯಿಸಿ ಮನುಷ್ಯ ಧರ್ಮವನ್ನು ಜಗತ್ತಿಗೆ ಸಾರಿದವರು ಜಗಜ್ಯೋತಿ ಬಸವಣ್ಣನವರು. ವಿಶ್ವಮಟ್ಟದಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಟಿ.ಎಸ್‌. ಶಿವರಾಮ್‌ ಹೇಳಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬುಧವಾರ ನಡೆದ ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜವು ಒಂದೊಂದು ಕಾಲಘಟ್ಟದಲ್ಲಿ ಬದಲಾಗುತ್ತಾ ಬಂದಿದೆ. ಒಂದೊಂದು ದೇಶದಲ್ಲೂ ಸಮಾಜ ಸುಧಾರಕರು ಇದ್ದಾರೆ. ಅದೇ ರೀತಿ ನಮ್ಮ ನಾಡಿನಲ್ಲೂ ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್‌ ಅವರು ಹುಟ್ಟಿದ್ದೇ ಸಮಾಜದ ಸುಧಾರಣೆಗಾಗಿ. ಇಂತಹ ಮಹಾತ್ಮರ ಜಯಂತಿಯನ್ನು ನಾವು ಆಚರಣೆ ಮಾಡಿದರೆ ಸಾಲದು. ಅವರು ಕೊಟ್ಟಿರುವ ಸಂದೇಶವನ್ನು ಸತ್ಯಮಾರ್ಗದಲ್ಲಿ ನಡೆದು ತೋರಿಸಬೇಕು ಎಂದರು.

ಸಮಾಜದಲ್ಲಿನ ಕಟು ಸತ್ಯವನ್ನು ಯಾರು ಅರ್ಥ ಮಾಡಿಕೊಳ್ಳುತ್ತಿಲ್ಲ, ಹಸಿದ ವ್ಯಕ್ತಿಯನ್ನು ದೂರ ತಳ್ಳುತ್ತೇವೆ. ಬಡವ ಶ್ರೀಮಂತನೆಂಬ ಭೇದ ಎಣಿಸುತ್ತೇವೆ. ಶುದ್ದ ಅಶುದ್ಧವೆಂದು ಭಾವಿಸುತ್ತೇವೆ. ಜಾತಿಯಲ್ಲಿ ಮೇಲೂ ಕೀಳೂ ಎಂದು ವಿಂಗಡಿಸುತ್ತೇವೆ. ಇದಾವುದು ಜಗತ್ತಿನ ಸೃಷ್ಟಿಯಲ್ಲಿ ಇಲ್ಲ ಎಂದರು.

‘ಎಲ್ಲವನ್ನು ನಾವು ಮಾಡಿಕೊಂಡಿದ್ದೇವೆ. ಅದನ್ನೇ ಈ ಮಹಾ ಪುರುಷರು ಜಗತ್ತಿಗೆ ಸಾರಿ ಹೇಳಿದ್ದಾರೆ ಎಂದರು.

ಅರ್ಬನ್ ಬ್ಯಾಂಕಿನ ಕ್ಯಾಷಿಯರ್ ರವೀಂದ್ರ, ವೀರಶೈವ ತರುಣ ಸಂಘದ ಹೋಟೆಲ್‌ ಮಹೇಶ್‌ ಬಸವಣ್ಣನವರ ಕುರಿತು ಮಾತನಾಡಿದರು. ವೀರಶೈವ ಲಿಂಗಾಯತ ಸಮುದಾಯದ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

ಶಿರಸ್ತೇದಾರ್‌ ಶಿವಾನಂದ, ಚುನಾವಣಾ ಸಹಾಯಕ ಭಾಸ್ಕರ್‌ ಆರೂಡಿ ಉಪಸ್ಥಿತರಿದ್ದರು. ತಾಲ್ಲೂಕಿನ ಹೋಬಳಿ ಕೇಂದ್ರಗಳು ಸೇರಿದಂತೆ ಎಲ್ಲ ಸರ್ಕಾರಿ ಕಚೇರಿ ಹಾಗೂ ಶಾಲೆಗಳಲ್ಲಿ ಸಂಘ ಸಂಸ್ಥೆಗಳಲ್ಲಿ ಬಸವಣ್ಣನವರ ಜಯಂತಿ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT