ಬುಧವಾರ, ಆಗಸ್ಟ್ 5, 2020
20 °C

‘6 ಟು 6’ ತಂಡದ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘6 ಟು 6’ ತಂಡದ ಸವಾಲು

ಶ್ರೀನಿವಾಸ ಶಿಡ್ಲಘಟ್ಟ ನಿರ್ದೇಶನದ ಸಿನಿಮಾ ‘6 ಟು 6’ ಶುಕ್ರವಾರ ತೆರೆಗೆ ಬರುತ್ತಿದೆ. ಆದರೆ, ಸುದ್ದಿ ಇರುವುದು ಈ ಸಿನಿಮಾ ತೆರೆಗೆ ಬರುತ್ತಿದೆ ಎಂಬುದರಲ್ಲಷ್ಟೇ ಅಲ್ಲ. ಈ ಸಿನಿಮಾ ತಂಡವು ವೀಕ್ಷಕರಿಗೆ ಒಂದು ಚಾಲೆಂಜ್‌ ಇಟ್ಟಿದೆ. ಸುದ್ದಿ ಅಲ್ಲಿದೆ!

ವ್ಯೋಮ ಕ್ರಿಯೇಟಿವ್‌ ಸ್ಟುಡಿಯೋಸ್‌ ಜೊತೆಯಾಗಿ ‘6 ಟು 6’ ಚಿತ್ರತಂಡವು ಒಂದು ದೃಶ್ಯಾವಳಿ ಸಿದ್ಧಪಡಿಸಿದೆ. ‘ಈ ಸಿನಿಮಾದಲ್ಲಿ ಒಂದು ಹಾರರ್‌ ಅಂಶ ಇದೆ. ಅದನ್ನು ಬಳಸಿಕೊಂಡು ಈ ದೃಶ್ಯಾವಳಿ ಸಿದ್ಧಪಡಿಸಲಾಗಿದೆ. ಇಯರ್‌ ಫೋನ್‌ ಹಾಕಿಕೊಂಡು ಈ ದೃಶ್ಯಾವಳಿ ವೀಕ್ಷಿಸಿದರೆ ಅಂದು ರಾತ್ರಿ ಆ ವ್ಯಕ್ತಿಯ ಕನಸಿನಲ್ಲಿ ಭೂತ ಖಂಡಿತವಾಗಿಯೂ ಬರುತ್ತದೆ’ ಎಂಬುದು ವ್ಯೋಮ ಸಂಸ್ಥೆಯ ಭರತ್ ಹೇಳುವ ಮಾತು.

‘ವ್ಯೋಮ’ ಎನ್ನುವುದು ಕನ್ನಡ ಸಿನಿಮಾಗಳ ಮಾರ್ಕೆಟಿಂಗ್‌ಗೆ ಇರುವ ಸಂಸ್ಥೆ. ‘ಭೂತ ಬರಿಸುವ ದೃಶ್ಯಾವಳಿಯು ಮನಸ್ಸನ್ನು ಹಾಳುಮಾಡುವಂತೆ ಇಲ್ಲ. ಹಾಗಾಗಿ ಇದನ್ನು ವೀಕ್ಷಿಸುವದರಿಂದ ಅಪಾಯವೇನೂ ಇಲ್ಲ’ ಎನ್ನುತ್ತಾರೆ ಭರತ್. ಅವರು ಈ ಎಲ್ಲ ಮಾಹಿತಿಗಳನ್ನು ನೀಡಿದ್ದು ಸಿನಿಮಾ ಬಗ್ಗೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ.

ಅಂದಹಾಗೆ, ಈ ಸಿನಿಮಾ ವೀಕ್ಷಿಸಲು 66 ಕಾರಣಗಳು ಇವೆ ಎನ್ನುವ ಪ್ರೋಮೊ ಕೂಡ ಸಿದ್ಧಪಡಿಸಲಾಗಿದೆಯಂತೆ. ಇದನ್ನು ಡಿಜಿಟಲ್ ಮಾಧ್ಯಮಗಳ ಮೂಲಕ ವೀಕ್ಷಕರಿಗೆ ತಲು‍ಪಿಸಲಾಗುತ್ತಿದೆಯಂತೆ.

‘ಈ ಸಿನಿಮಾದ ಕಥೆ ವೀಕ್ಷಕರನ್ನು ಕಾಡುತ್ತದೆ. ಚಿತ್ರ ವೀಕ್ಷಣೆ ಆರಂಭವಾಗುತ್ತಿದ್ದಂತೆಯೇ, ಮಲೆನಾಡಿನ ಕಂಪು ಸಿಗುತ್ತದೆ’ ಎಂದು ಚಿತ್ರತಂಡ ಹೇಳಿಕೊಂಡಿದೆ.

ಗಾಯಕಿಯಾಗಿ ಹಲವು ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಾನಸಾ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಗೆಯೇ ಚಿತ್ರದ ರೀರೆಕಾರ್ಡಿಂಗ್‌ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ. ‘ಸಂಗೀತ ಬಹಳ ಚೆನ್ನಾಗಿ ಮೂಡಿ ಬಂದಿದೆ. ಚಿತ್ರದ ಸಂಭಾಷಣೆ ಕೂಡ ಚೆನ್ನಾಗಿದೆ. ಮಲೆನಾಡಿನ ಸೌಂದರ್ಯವನ್ನು ಬಹಳ ಚೆನ್ನಾಗಿ ತೋರಿಸಿದ್ದಾರೆ’ ಎನ್ನುವುದು ಈ ಚಿತ್ರದ ಬಗ್ಗೆ ನಾಯಕ ನಟ ತಾರಖ್ ಪೊನ್ನಪ್ಪ ಆಡುವ ಮಾತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.