ಶುಕ್ರವಾರ, ಡಿಸೆಂಬರ್ 13, 2019
19 °C

‘ಕೃಷ್ಣ ತುಳಸಿ’ಯ ಪರಿಮಳ

ಕೆ.ಎಚ್. ಓಬಳೇಶ್ Updated:

ಅಕ್ಷರ ಗಾತ್ರ : | |

‘ಕೃಷ್ಣ ತುಳಸಿ’ಯ ಪರಿಮಳ

‘ಕೃಷ್ಣ ತುಳಸಿ’ ಚಿತ್ರದ ಮೂಲಕ ಏನನ್ನು ಹೇಳಲು ಹೊರಟಿದ್ದೀರಿ.

ಇದು ನವಿರಾದ ಪ್ರೇಮಕಥೆ. ನಾನು ಅಂಧ ಪ್ರವಾಸಿ ಗೈಡ್‌ ಆಗಿ ನಟಿಸಿರುವುದೇ ವಿಶೇಷ. ಇದು ಯಾವುದೇ ಚಿತ್ರದ ರಿಮೇಕ್ ಅಲ್ಲ. ನಿರ್ದೇಶಕರ ಕಲ್ಪನೆಯಲ್ಲಿ ಮೂಡಿರುವ ಅದ್ಭುತ ದೃಶ್ಯಕಾವ್ಯ. ಕಥೆಯೇ ಚಿತ್ರದ ಜೀವಾಳ. ಸಂಗೀತ ಮತ್ತು ಕ್ಯಾಮೆರಾ ಕೆಲಸವೂ ಅದ್ಭುತವಾಗಿದೆ. ಕಿರಣ್‌ ರವೀಂದ್ರನಾಥ್‌ ಸಂಯೋಜನೆಯ ಹಾಡುಗಳು ಕೇಳಲು ಹಿತವಾಗಿವೆ. ಹರ್ಮನ್‌ ಮಲ್ಲಿಕ್‌ ಹಾಡಿರುವ ಹಾಡಿನ ಬಗ್ಗೆ ನಟ ಸುದೀಪ್‌ ಅವರ ಮೆಚ್ಚುಗೆ ಸಿಕ್ಕಿದೆ. ಇದು ಖುಷಿಯ ವಿಚಾರಗಳಲ್ಲಿ ಒಂದಾಗಿದೆ.

ಪಾತ್ರಕ್ಕೆ ಹೇಗೆ ಸಿದ್ಧತೆ ಮಾಡಿಕೊಂಡಿರಿ?

ನಾನು ಹಲವು ವರ್ಷದ ಹಿಂದೆ ‘ಮಹಾಕಾಲ’ ನಾಟಕದಲ್ಲಿ ಧೃತರಾಷ್ಟ್ರನ ಪಾತ್ರ ಮಾಡಿದ್ದೆ. ಇದರ ನಿರ್ದೇಶಕರು ಜೋಸೆಫ್‌. ಆ ವೇಳೆ ಪಾತ್ರಕ್ಕಾಗಿ ಸಾಕಷ್ಟು ತಾಲೀಮು ಮಾಡಿದ್ದೆ. ಅದು ಈಗ ಅನುಕೂಲಕ್ಕೆ ಬಂತು. ರಂಗಸಜ್ಜಿಕೆ ಮತ್ತು ಕ್ಯಾಮೆರಾ ಮುಂದಿನ ನಟನೆಯಲ್ಲಿ ಸಾಕಷ್ಟು ವ್ಯತ್ಯಾಸ ಉಂಟು. ‘ಬೆಳಕು’ ಅಂಧ ಮಕ್ಕಳ ಸಂಸ್ಥೆಗೆ ಭೇಟಿ ನೀಡಿದ್ದೆ. ಅಲ್ಲಿ ಸಾಕಷ್ಟು ಕಲಿತೆ. ಇದು ನಟನೆಗೆ ಸಹಕಾರಿಯಾಯಿತು.

ನಟನೆ ವೇಳೆ ಎದುರಾದ ಸವಾಲುಗಳೇನು?

‘ನಾನು ಅವನಲ್ಲ ಅವಳು’ ಚಿತ್ರದ ಬಳಿಕ ನನಗೆ ಬಹುವಾಗಿ ಕಾಡಿದ ಪಾತ್ರ ಇದು. ಈ ಪಾತ್ರದ ನಿರ್ವಹಣೆ ನಿಜಕ್ಕೂ ನನಗೆ ಸವಾಲಾಗಿತ್ತು. ಸಹಜವಾಗಿ ವಸ್ತುಗಳು ನಮ್ಮ ಕಣ್ಣಿಗೆ ಕಾಣುತ್ತವೆ. ಆದರೆ, ಕಾಣದೆ ಇರುವ ವಸ್ತುಗಳನ್ನು ಕಲ್ಪಿಸಿಕೊಂಡು ನಟಿಸುವುದು ಕಷ್ಟಕರ. ಚಿತ್ರದಲ್ಲಿ ಒಂದೇ ಕಡೆ ಕುಳಿತು ಸಂಭಾಷಣೆ ಒಪ್ಪಿಸಿಲ್ಲ. ಪ್ರಾಚ್ಯವಸ್ತು ಇಲಾಖೆಯಲ್ಲಿ ಚಿತ್ರೀಕರಣ ಮಾಡಲಾಯಿತು. ಅಲ್ಲಿರುವ ಎಲ್ಲ ವಸ್ತುಗಳು ಅಮೂಲ್ಯ. ನನ್ನೊಂದಿಗೆ ನಾಯಕಿ, ಕ್ಯಾಮೆರಾ ಇರುತ್ತಿತ್ತು. ಅಪರೂಪದ ವಸ್ತುಗಳಿಗೆ ಯಾವುದೇ ಧಕ್ಕೆಯಾಗದಂತೆ ನಟಿಸಬೇಕಿತ್ತು.ಸಂಚಾರಿ ವಿಜಯ್

ನಿರ್ದೇಶಕ ಸುಕೇಶ್‌ ನಾಯಕ್‌ ಅವರೊಂದಿಗೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಸುಕೇಶ್‌ ಮೂಲತಃ ಮೈಮ್‌ ಕಲಾವಿದ. ಅವರಿಗೆ ನಟನೆಯ ಸೂಕ್ಷ್ಮತೆಯ ಅರಿವಿದೆ. ಸಣ್ಣ ತಪ್ಪಾದರೂ ಬಹುಬೇಗ ಪತ್ತೆ ಹಚ್ಚುತ್ತಿದ್ದರು. ತಾವು ಇಚ್ಛಿಸಿದ ರೀತಿಯಲ್ಲಿಯೇ ದೃಶ್ಯ ಬರಬೇಕೆಂಬುದು ಅವರ ಹಂಬಲ. ಇದರಿಂದ ಚಿತ್ರೀಕರಣದ ಮೊದಲ ಮೂರು ದಿನ ಕಷ್ಟವಾಗಿತ್ತು. ಇದನ್ನು ಅವರಿಗೂ ಹೇಳಿದೆ. ಅವರೂ ಒಪ್ಪಿಕೊಂಡರು. ಹಾಗಾಗಿ, ಚಿತ್ರ ಚೆನ್ನಾಗಿ ಮೂಡಿಬಂದಿದೆ.

ಚಿತ್ರದಲ್ಲಿ ಯುವಜನರಿಗೆ ಸಂದೇಶ ಇದೆಯೇ?

ಪ್ರೀತಿ, ಪ್ರೇಮ ಕುರಿತು ಬರುವ ಚಿತ್ರಗಳಿಗೆ ಮೌಲ್ಯ ಕಡಿಮೆಯಾಗುವುದಿಲ್ಲ. ಯುವಜನರಿಗೆ ಚಿತ್ರದಲ್ಲಿ ಸಂದೇಶ ಇದೆ. ಚಿತ್ರದ ಮೊದಲಾರ್ಧ ಪ್ರೀತಿ, ಕಚಗುಳಿಯಲ್ಲಿ ಸಾಗಲಿದೆ. ದ್ವಿತೀಯಾರ್ಧದಲ್ಲಿ ಕಥೆ ಭಿನ್ನ ಜಾಡಿನಲ್ಲಿ ಚಲಿಸಲಿದೆ. ಪ್ರೇಕ್ಷಕರ ಹೃದಯ ತಟ್ಟಲಿದೆ ಎನ್ನುವುದು ನನ್ನ ನಂಬಿಕೆ.

ನಿಮ್ಮ ಮುಂದಿನ ಚಿತ್ರಗಳ ಬಗ್ಗೆ ಹೇಳಿ?

‘ಮೇಲೊಬ್ಬ ಮಾಯಾವಿ’ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ‘6ನೇ ಮೈಲಿ’ ಬಿಡುಗಡೆಗೆ ಸಿದ್ಧವಾಗಿದೆ. ‘ಪಾದರಸ’ದಲ್ಲಿ ನನ್ನದು ಭಿನ್ನವಾದ ಪಾತ್ರ. ಸ್ಕಿಜೋಫ್ರೇನಿಯಾ ಕಾಯಿಲೆ ಕುರಿತ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಸಿನಿಮಾದಲ್ಲಿ ನಟಿಸಿದ್ದೇನೆ. ಜನರು ಇಷ್ಟಪಟ್ಟರೆ ಮಾತ್ರ ನನ್ನ ಪ್ರಯತ್ನಕ್ಕೂ ಫಲ ಸಿಗಲಿದೆ.

ಪ್ರತಿಕ್ರಿಯಿಸಿ (+)