ಮನವಿ ಪರಿಗಣಿಸಲು ನಿರ್ದೇಶನ

6
ಲಿಂಗ ಪರಿವರ್ತನೆ ಪ್ರಕರಣ–ದಾಖಲೆ ಬದಲಿಗೆ ಕೋರಿಕೆ

ಮನವಿ ಪರಿಗಣಿಸಲು ನಿರ್ದೇಶನ

Published:
Updated:
ಮನವಿ ಪರಿಗಣಿಸಲು ನಿರ್ದೇಶನ

ಬೆಂಗಳೂರು: ಹುಡುಗನೊಬ್ಬ ಹುಡುಗಿಯಾಗಿ ಲಿಂಗ ಪರಿವರ್ತಿಸಿಕೊಂಡಿರುವ ಪ್ರಕರಣದಲ್ಲಿ ‘ಅರ್ಜಿದಾರಳ’ ಶೈಕ್ಷಣಿಕ ದಾಖಲೆಗಳಲ್ಲಿ ಹುಡುಗಿ ಎಂದು ತಿದ್ದುವುದಕ್ಕೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿ, ಪಿ.ಯು ಮಂಡಳಿ, ಮಂಗಳೂರು ವಿಶ್ವವಿದ್ಯಾಲಯ ಮತ್ತು ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ವಿಭಾಗದ ನಿರ್ದೇಶನಾಲಯಕ್ಕೆ ನಿರ್ದೇಶನ ನೀಡಲಾಗಿದೆ.

‘ಅರ್ಜಿದಾರ ಮಹಿಳೆ ಸಲ್ಲಿಸುವ ದಾಖಲೆಗಳನ್ನು ಮೂರು ತಿಂಗಳಿನಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯ ಪೀಠ ಗುರುವಾರ ಆದೇಶಿಸಿದೆ.

ಅರ್ಜಿದಾರರ ಪರ ವಕೀಲೆ ಜಯ್ನಾ ಕೊಠಾರಿ ವಾದ ಮಂಡಿಸಿ‘ ‘ಶೈಕ್ಷಣಿಕ ದಾಖಲೆಗಳಲ್ಲಿ ಬದಲಾವಣೆ ಮಾಡಿಕೊಡುವಂತೆ ಕೇಳಿದರೂ ನೀಡುತ್ತಿಲ್ಲ. ಆದ್ದರಿಂದ ಈ ಕುರಿತು ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶಿಸಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲೆ ಪ್ರಮೋದಿನಿ ಕಿಶನ್‌, ‘ಅರ್ಜಿದಾರರು ಸಲ್ಲಿಸುವ ದಾಖಲೆಗಳನ್ನು ಪರಿಶೀಲಿಸಿ ಅವರ ಮನವಿಯನ್ನು ಪರಿಗಣಿಸಲಾಗುವುದು’ ಎಂದು ತಿಳಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿ ವಿಲೇವಾರಿ ಮಾಡಿದೆ.

ನಗರದ 39 ವರ್ಷದ ಮಹಿಳೆಯೊಬ್ಬರು (ಈ ಮೊದಲು ಹುಡುಗನಾಗಿದ್ದರು. ನಂತರ ಶಸ್ತ್ರಚಿಕಿತ್ಸೆಯ ಮೂಲಕ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾರೆ) ಈ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರು ಕಾನೂನು ಸ್ನಾತಕೋತ್ತರ ಪದವೀಧರರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry