ವೇಶ್ಯಾವಾಟಿಕೆ: ಮಹಿಳೆಯರ ಕರೆದೊಯ್ಯುವ ವಿಚಾರಕ್ಕೆ ಕೊಲೆ

7
ಕಾಮಾಕ್ಷಿಪಾಳ್ಯ ಪೊಲೀಸರಿಂದ ಆಟೊ ಚಾಲಕರ ಬಂಧನ

ವೇಶ್ಯಾವಾಟಿಕೆ: ಮಹಿಳೆಯರ ಕರೆದೊಯ್ಯುವ ವಿಚಾರಕ್ಕೆ ಕೊಲೆ

Published:
Updated:
ವೇಶ್ಯಾವಾಟಿಕೆ: ಮಹಿಳೆಯರ ಕರೆದೊಯ್ಯುವ ವಿಚಾರಕ್ಕೆ ಕೊಲೆ

ಬೆಂಗಳೂರು: ಸಣ್ಣಕ್ಕಿಬಯಲು ಸಮೀಪದ ತೋಟದ ರಸ್ತೆಯಲ್ಲಿ ಕೋಟೇಶ್ವರ್ ರಾವ್‌ (21) ಎಂಬುವರನ್ನು ಕೊಲೆ ಮಾಡಿದ್ದ ಆರೋಪದಡಿ ಆಟೊ ಚಾಲಕರಿಬ್ಬರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಕಮಲಾನಗರದ ಸುರೇಶ್‌ ಅಲಿಯಾಸ್‌ ಎಸ್‌.ಶರತ್‌ಕುಮಾರ್ (22) ಹಾಗೂ ರಾಜಾಜಿನಗರ ಶಿವನಹಳ್ಳಿಯ ಎಲ್‌.ವಿನಯ್‌ (24) ಬಂಧಿತರು. ಇವರು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಮಹಿಳೆಯರನ್ನು ಗ್ರಾಹಕರ ಬಳಿ ಕರೆದೊಯ್ಯುವ ವಿಚಾರಕ್ಕಾಗಿ ಕೋಟೇಶ್ವರ್‌ ಜತೆ ಜಗಳ ಮಾಡಿಕೊಂಡು ಈ ಕೃತ್ಯ ಎಸಗಿದ್ದರು ಎಂದು ‍ಪೊಲೀಸರು ತಿಳಿಸಿದರು.

ಆರೋಪಿ ಸುರೇಶ್‌, ಮೃತ ಕೋಟೇಶ್ವರ್‌ರ ಬಾಲ್ಯ ಸ್ನೇಹಿತ. ಇವರಿಬ್ಬರು ಜತೆಯಾಗಿಯೇ ಓದಿದ್ದರು. ಮೆಜೆಸ್ಟಿಕ್‌ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಆಟೊ ಓಡಿಸುತ್ತಿದ್ದ ಸುರೇಶ್‌, ಕೆಲ ಮಹಿಳೆಯರ ಪರಿಚಯ ಮಾಡಿಕೊಂಡಿದ್ದ. ಅವರನ್ನು ಬಳಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ. ಅದಕ್ಕೆ ಕೆಲ ಆಟೊ ಚಾಲಕರ ಸಹಕಾರವನ್ನೂ ಪಡೆದಿದ್ದ’

‘ಮಹಿಳೆಯರನ್ನು ನಿತ್ಯವೂ ಗ್ರಾಹಕರ ಬಳಿ ಆಟೊದಲ್ಲೇ ಕರೆದೊಯ್ಯುತ್ತಿದ್ದ ಆತ, ಕೆಲಸ ಮುಗಿದ ಮೇಲೆ ವಾಪಸ್‌ ಕರೆತರುತ್ತಿದ್ದ. ಸ್ನೇಹಿತನೆಂಬ ಕಾರಣಕ್ಕೆ ಆತನ ದಂಧೆಗೆ ಕೋಟೇಶ್ವರ್‌ ಸಹ ಸಹಕಾರ ನೀಡಲಾರಂಭಿಸಿದ್ದರು. ಕೆಲ ದಿನಗಳ ನಂತರ ಕೋಟೇಶ್ವರ್‌ ಅವರೇ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಪ್ರತ್ಯೇಕವಾಗಿ ದಂಧೆ ನಡೆಸಲು ಮುಂದಾಗಿದ್ದರು. ಇತ್ತೀಚೆಗೆ ಸುರೇಶ್‌ ಕರೆದೊಯ್ಯಬೇಕಿದ್ದ ಮಹಿಳೆಯನ್ನು ಕೋಟೇಶ್ವರ್‌ ಕರೆದೊಯ್ದಿದ್ದ. ಇದೇ ವಿಚಾರವಾಗಿ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು’

ಕೋಪಗೊಂಡಿದ್ದ ಸುರೇಶ್‌ ಹಾಗೂ ಆತನ ಸಹಚರರು, ‘ದಂಧೆಯಿಂದ ಬಂದಿರುವ ಹಣ ಹಂಚಿಕೊಳ್ಳುವ ಸಂಬಂಧ ನಿನ್ನ ಜತೆ ಮಾತನಾಡಬೇಕು. ಮೆಜೆಸ್ಟಿಕ್‌ಗೆ ಬಾ’ ಎಂದು ಕೋಟೇಶ್ವರ್‌ಗೆ ಹೇಳಿದ್ದರು. ಅಲ್ಲಿಗೆ ಹೋಗಿದ್ದ ಅವರನ್ನು ಆರೋಪಿಗಳು, ಆಟೊದಲ್ಲಿ ಅಪಹರಿಸಿಕೊಂಡು ಸಣ್ಣಕ್ಕಿಬಯಲಿಗೆ ಕರೆದೊಯ್ದಿದ್ದರು.

‘ನಮ್ಮ ದಂಧೆ ಹಾಳು ಮಾಡುತ್ತಿದ್ದಿಯಾ’ ಎಂದು ಗಲಾಟೆ ಮಾಡಿದ್ದರು. ಅದೇ ವೇಳೆ, ಮಾರಕಾಸ್ತ್ರಗಳಿಂದ ಕೊಚ್ಚಿ ಕೋಟೇಶ್ವರ್‌ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಕೊಲೆ ಸಂಬಂಧ ಮೃತರ ಸಹೋದರ ಧಾರೇಶ್ವರ್‌ ದೂರು ನೀಡಿದ್ದರು. ಕೋಟೇಶ್ವರ್‌ ಅವರನ್ನು ಮೆಜೆಸ್ಟಿಕ್‌ನಿಂದ ಆರೋಪಿಗಳು ಅಪಹರಿಸಿಕೊಂಡು ಹೋದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದರ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಿದೆವು’ ಎಂದರು.

ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ, ‘ಆರು ಮಂದಿ ಸೇರಿ ಈ ಕೊಲೆ ಮಾಡಿದ್ದಾರೆ. ಸದ್ಯ ಇಬ್ಬರನ್ನು ಬಂಧಿಸಿದ್ದೇವೆ. ಉಳಿದವರ ಪತ್ತೆಗೆ ವಿಶೇಷ ತಂಡ ರಚಿಸಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry