ಒಗ್ಗೂಡುತ್ತಿರುವ ಮರಾಠರು: ಬಿಜೆಪಿ, ಕಾಂಗ್ರೆಸ್‌ ತಳಮಳ

7
ಜಿಲ್ಲೆಯ ರಾಜಕೀಯ ಪ್ರವೇಶಿಸಿದ ಪಿ.ಜಿ.ಆರ್‌.ಸಿಂಧ್ಯ: ಗ್ರಾಮೀಣ ಪ್ರದೇಶದಲ್ಲಿ ಸಮುದಾಯ ಮುಖಂಡರ ಸಭೆ

ಒಗ್ಗೂಡುತ್ತಿರುವ ಮರಾಠರು: ಬಿಜೆಪಿ, ಕಾಂಗ್ರೆಸ್‌ ತಳಮಳ

Published:
Updated:

ಬೀದರ್‌: ಜೆಡಿಎಸ್‌ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿಶ್ಚಯಿಸಿದ ನಂತರ ಜಿಲ್ಲೆಯಲ್ಲಿ ಮರಾಠರು ಒಗ್ಗೂಡಲು ಆರಂಭಿಸಿದ್ದಾರೆ. ಇದರಿಂದಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ತಳಮಳ ಶುರುವಾಗಿದೆ.

ಜಿಲ್ಲೆಯಲ್ಲಿ ಮರಾಠಾ ಸಮಾಜದ ಅಭ್ಯರ್ಥಿಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಟಿಕೆಟ್‌ ದೊರೆಯದ ಕಾರಣ ಸಮಾಜದ ಮುಖಂಡರು ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಪಿ.ಜಿ.ಆರ್.ಸಿಂಧ್ಯ ಬಸವಕಲ್ಯಾಣಕ್ಕೆ ಬಂದು ಮರಾಠರ ಸಭೆ ನಡೆಸಿದ ನಂತರ ಸಮುದಾಯದ ಮುಖಂಡರು ಗ್ರಾಮಾಂತರ ಪ್ರದೇಶಗಳಲ್ಲಿ ಅಲ್ಲಲ್ಲಿ ಸಭೆಗಳನ್ನು ನಡೆಸುತ್ತಿದ್ದಾರೆ. ಗೊಂದಲಕ್ಕೆ ಅವಕಾಶ ಕೊಡದೇ ಒಮ್ಮತದ ಅಭ್ಯರ್ಥಿಯ ಪರ ಮತ ಚಲಾಯಿಸುವುದು ಸೂಕ್ತ ಎನ್ನುವ ಅಭಿಪ್ರಾಯಕ್ಕೆ ಬರುತ್ತಿದ್ದಾರೆ.

ತಾಲ್ಲೂಕು ಮಟ್ಟದಲ್ಲಿ ಇನ್ನೂ ಎರಡು ಮೂರು ಬಾರಿ ಮರಾಠಾ ಸಮುದಾಯದ ಪ್ರಮುಖರ ಸಭೆಗಳು ನಡೆಯುವ ಸಾಧ್ಯತೆ ಇದೆ. ಕ್ಷತ್ರೀಯ ಮರಾಠಾ ಸಮಾಜದ ಮುಖಂಡರೂ ಆಗಿರುವ ಪಿ.ಜಿ.ಆರ್.ಸಿಂಧ್ಯ ಇನ್ನೊಮ್ಮೆ ಸಮಾಜದ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ತದ ನಂತರವೇ ಯಾವ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎನ್ನುವ ಕುರಿತು ದೃಢ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಪಿ.ಜಿ.ಆರ್.ಸಿಂಧ್ಯ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಸಮಾಜದ ಮುಖಂಡರೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರು. ಈಗಲೂ ಮರಾಠರು ಅವರ ಮಾತಿಗೆ ಬೆಲೆ ಕೊಡುತ್ತಾರೆ. ಬಸವಕಲ್ಯಾಣದಲ್ಲಿ ಮರಾಠರು ಸಹಜವಾಗಿಯೇ ಅವರನ್ನು ಬೆಂಬಲಿಸಬಹುದು. ಅಷ್ಟೇ ಅಲ್ಲ, ಬಸವಕಲ್ಯಾಣ ರಾಜಕೀಯ ಭಾಲ್ಕಿ ರಾಜಕೀಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಎಂದು ಮರಾಠಾ ಸಮಾಜದ ಮುಖಂಡರು ಆಡಿಕೊಳ್ಳುತ್ತಿದ್ದಾರೆ.

‘ಪ್ರಬಲ ಎದುರಾಳಿ ಕಾಂಗ್ರೆಸ್‌ನ ಈಶ್ವರ ಖಂಡ್ರೆ ಹಾಗೂ ನಂಬಿಕೆ ದ್ರೋಹ ಮಾಡಿದ ಬಿಜೆಪಿಯನ್ನು ಸೋಲಿಸುವುದು ನನ್ನ ಗುರಿಯಾಗಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹಾಗೂ ಮುಖಂಡ ಬಂಡೆಪ್ಪ ಕಾಶೆಂಪುರ ಅವರು ಜೆಡಿಎಸ್‌ಗೆ ಬರುವಂತೆ ಆಹ್ವಾನ ನೀಡಿದ್ದಾರೆ’ ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ಹೇಳುತ್ತಾರೆ.

‘ಮರಾಠಾ ಸಮಾಜದ ಪ್ರಬಲ ನಾಯಕ ಪಿ.ಜಿ.ಆರ್‌. ಸಿಂಧ್ಯ ಸಹ ನನ್ನೊಂದಿಗೆ ಮಾತನಾಡಿದ್ದಾರೆ. ನನ್ನ ಪರವಾಗಿ ಪ್ರಚಾರಕ್ಕೂ ಬರುವ ಭರವಸೆಯನ್ನೂ ಕೊಟ್ಟಿದ್ದಾರೆ. ಎರಡು ದಿನಗಳಲ್ಲಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಅವರಿಗೆ ಮಾತು ಕೊಟ್ಟಿದ್ದೇನೆ’ ಎನ್ನುತ್ತಾರೆ ಅವರು.

‘ಪ್ರಕಾಶ ಖಂಡ್ರೆ ಜೆಡಿಎಸ್‌ಗೆ ಬರುವುದು ಖಚಿತವಾಗಿದೆ. ಪಿ.ಜಿ.ಆರ್. ಸಿಂಧ್ಯ ಅವರು ಮರಾಠಾ ಸಮುದಾಯದ ಮತಗಳನ್ನು ಸೆಳೆಯುವ ವಿಶ್ವಾಸ ಇದೆ. ಮರಾಠಾ ಸಮುದಾಯ ಬಿಜೆಪಿ ಪರವಾಗಿಯೇ ಇರುತ್ತದೆ ಎನ್ನುವ ಹಣೆಪಟ್ಟಿಯನ್ನು ಈ ಬಾರಿ ಕಳಚಿಕೊಳ್ಳಬಹುದು’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಹೇಳುತ್ತಾರೆ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry