ಬಂಡಾಯ ಎದುರಿಸುವ ಸಾಮರ್ಥ್ಯ ಬಿಜೆಪಿಗಿದೆ

7
ಸಾಗರ: : ಬಿಜೆಪಿ ಮುಖಂಡ ಹರತಾಳು ಹಾಲಪ್ಪ

ಬಂಡಾಯ ಎದುರಿಸುವ ಸಾಮರ್ಥ್ಯ ಬಿಜೆಪಿಗಿದೆ

Published:
Updated:
ಬಂಡಾಯ ಎದುರಿಸುವ ಸಾಮರ್ಥ್ಯ ಬಿಜೆಪಿಗಿದೆ

ಸಾಗರ:  ಬರಲಿರುವ ವಿಧಾನಸಭೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಬಿಜೆಪಿ ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ. ಯಾವುದೇ ರೀತಿಯ ಬಂಡಾಯ ಕಾಣಿಸಿಕೊಂಡರೂ ಅದನ್ನು ಎದುರಿಸುವ ಸಾಮರ್ಥ್ಯ ಪಕ್ಷಕ್ಕೆ ಇದೆ ಎಂದು ಸಾಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಹೇಳಿದರು.

ಇಲ್ಲಿನ ವೆಂಕಟರಮಣ ದೇವಸ್ಥಾನದ ರಸ್ತೆಯಲ್ಲಿ ಗುರುವಾರ ಆರಂಭಗೊಂಡ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ಈ ಕ್ಷೇತ್ರದಲ್ಲಿ ಪಕ್ಷ ನಡೆಸಿದ ಸಮೀಕ್ಷೆ ಗೋಪಾಲಕೃಷ್ಣ ಅವರ ಪರವಾಗಿ ಬಂದಿತ್ತು ಎನ್ನುವುದು ಕೇವಲ ಊಹಾಪೋಹವಷ್ಟೆ’ ಎಂದು ಸ್ಪಷ್ಟಪಡಿಸಿದರು.

‘ಗೋಪಾಲಕೃಷ್ಣ ಬೇಳೂರು ಅವರು ಎರಡು ಬಾರಿ ಶಾಸಕರಾದಾಗ ವಿಧಾನಸಭೆಯಲ್ಲಿ ಎಷ್ಟು ಹೊತ್ತು ಮಾತನಾಡಿದ್ದಾರೆ ಎನ್ನುವುದನ್ನು ಜನರಿಗೆ ತಿಳಿಸಬೇಕು. ಸದನದಲ್ಲಿ ಅವರು ಐದು ನಿಮಿಷ ಮಾತನಾಡಿದ ದಾಖಲೆ ಇದ್ದರೆ ಈಗಲೂ ಸಾಗರ ಕ್ಷೇತ್ರದ ಸ್ಥಾನವನ್ನು ಅವರಿಗೆ ಬಿಟ್ಟು ಕೊಡುತ್ತೇನೆ’ ಎಂದು ಸವಾಲು ಹಾಕಿದರು.

‘ಈ ಹಿಂದೆ ಬಿಜೆಪಿಯಿಂದ ಶಾಸಕರಾಗಿದ್ದವರು ಸದನದಲ್ಲಿ ಯಾವ ರೀತಿ ತಮ್ಮ ಸಾಮರ್ಥ್ಯವನ್ನು ಪ್ರಕಟಪಡಿಸಿದ್ದಾರೆ ಎನ್ನುವುದು ಟಿಕೆಟ್‌ ನೀಡುವಾಗ ಪ್ರಮುಖವಾಗಿ ಪರಿಗಣಿಸಲಾಗಿದೆ. ಬಂಗಾರಪ್ಪ ತಮ್ಮ ರಾಜಕೀಯ ಗುರು ಎಂದು ಹೇಳುವ ಬೇಳೂರು ಬಂಗಾರಪ್ಪ ಅವರು ನಿಧನರಾದಾಗ ಸದನದಲ್ಲಿ ಅವರಿಗೆ ಸಂತಾಪ ಸೂಚಿಸಿ ಮಾತನಾಡುವ ಸೌಜನ್ಯ ತೋರಿಲ್ಲ. ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ನಾನು ಬಿಜೆಪಿಯಿಂದ ಶಾಸಕನಾಗಿದ್ದಾಗ ಹಲವು ಪ್ರಮುಖ ವಿಷಯಗಳ ಬಗ್ಗೆ ಸದನದ ಗಮನ ಸೆಳೆದಿದ್ದೇನೆ. ಪಶ್ಚಿಮಘಟ್ಟ ಪ್ರದೇಶವನ್ನು ಯುನೆಸ್ಕೊ ಸಂಸ್ಥೆಗೆ ನೀಡುವ ಕುರಿತು ವಿರೋಧ ಸೂಚಿಸಿ ಖಾಸಗಿ ನಿರ್ಣಯ ಮಂಡಿಸಿದ ದಾಖಲೆ ನನ್ನ ಬಳಿ ಇದೆ. ಇಂತಹ ಅಂಶಗಳು ನನಗೆ ಟಿಕೆಟ್‌ ದೊರಕಲು ಸಹಕಾರಿ’ ಎಂದು ತಿಳಿಸಿದರು.

‘ನಾನು ಮೂರನೇ ದರ್ಜೆಯ ರಾಜಕಾರಣವನ್ನು ಯಾವತ್ತೂ ಮಾಡಿಲ್ಲ. ಆದರೆ ನನ್ನನ್ನು ಮೂರನೇ ದರ್ಜೆಗೆ ಇಳಿಸುವ ಷಡ್ಯಂತ್ರ ನಡೆದಿತ್ತು. ನ್ಯಾಯಾಲಯದ ಮೂಲಕ ಅಂತಹ ಆರೋಪಗಳಿಂದ ಮುಕ್ತನಾಗಿದ್ದೇನೆ. ಹೀಗಿದ್ದೂ ಮತ್ತೆ ಯಾರಾದರೂ ಅಂತಹ ಆರೋಪ ಮಾಡಿದರೆ ಅಂತಹವರ ವಿರುದ್ಧ ನ್ಯಾಯಾಲಯ ಮತ್ತು ದೇವಾಲಯ ಎರಡರ ಮೊರೆ ಹೋಗುತ್ತೇನೆ’ ಎಂದು ಹೇಳಿದರು.

‘ಕಳೆದ ವಾರ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದೇ ನನ್ನ ಗುರಿ ಎಂದು ಅವರನ್ನು ಹಾಡಿ ಹೊಗಳುತ್ತಿದ್ದ ಬೇಳೂರು ಈಗ ಟಿಕೆಟ್‌ ದೊರಕಲಿಲ್ಲ ಎನ್ನುವ ಕಾರಣಕ್ಕೆ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇಷ್ಟಾಗಿಯೂ ಅವರ ಬಂಡಾಯವನ್ನು ಶಮನ ಮಾಡುವಲ್ಲಿ ಕೆ.ಎಸ್‌.ಈಶ್ವರಪ್ಪ ಸೇರಿದಂತೆ ಪಕ್ಷದ ಹಲವು ಮುಖಂಡರ ಜೊತೆ ಚರ್ಚೆ ನಡೆಸಿದ್ದೇನೆ’ ಎಂದು ತಿಳಿಸಿದರು.

‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿ ಬಿ.ಆರ್‌.ಜಯಂತ್‌ ವಿರುದ್ಧ ಕೆಲಸ ಮಾಡಿದ್ದೆ ಎನ್ನುವುದು ಸುಳ್ಳು ಆರೋಪ. ಕಳೆದ ಬಾರಿ ಈ ಕ್ಷೇತ್ರದಲ್ಲಿ ಕಾಗೋಡು ತಿಮ್ಮಪ್ಪ ಅವರ ಪರ ಅಲೆ ಇತ್ತು. ಹೀಗಾಗಿ ಅವರ ಗೆಲುವನ್ನು ತಡೆಯಲು ಸಾಧ್ಯವಾಗಲಿಲ್ಲ. ಕಾಗೋಡು ತಿಮ್ಮಪ್ಪ ಅಭಿವೃದ್ಧಿ ಪರ ರಾಜಕಾರಣಿಯಾದರೂ ಈಗ ಅವರು ಸಾಕಷ್ಟು ದಣಿದಿದ್ದಾರೆ. ಅವರ ಜೀವ ಮಾಗಿದೆ. ಇನ್ನೂ ಎಷ್ಟು ವರ್ಷ ಅವರಿಂದಲೆ ‘ಕೂಲಿ’ ಮಾಡಿಸುವುದು’ ಎಂದು ಪ್ರಶ್ನಿಸಿದರು.

‘ಏ.20ರಂದು ಬೆಳಿಗ್ಗೆ 10ಕ್ಕೆ ಗಣಪತಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಆಗಮಿಸಿ ಮಧ್ಯಾಹ್ನ 12.20ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ಈಗ್ಗೆ ಮೂರು ದಿನಗಳ ಹಿಂದೆಯೆ ಪಕ್ಷ ನನಗೆ ‘ಬಿ’ ಫಾರಂ ನೀಡಿದೆ. ನಾಮಪತ್ರ ಸಲ್ಲಿಸಿದ ನಂತರ ಗಣಪತಿ ಬ್ಯಾಂಕ್‌ ಎದುರಿನ ವೃತ್ತದಲ್ಲಿ ಬಹಿರಂಗ ಸಭೆ ನಡೆಯಲಿದೆ ’ ಎಂದು ತಿಳಿಸಿದರು.

‘ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಅಭಿವೃದ್ಧಿ ವಿಷಯವೆ ಪ್ರಮುಖ ಕಾರ್ಯಸೂಚಿಯಾಗಲಿದೆ. ಸಾಗರ ನಗರದಲ್ಲಿ ರಿಂಗ್‌ ರೋಡ್‌ ನಿರ್ಮಾಣ, ಗಣಪತಿ ಕೆರೆ ಅಭಿವೃದ್ಧಿಗೊಳಿಸಿ ಸುತ್ತಲೂ ವಾಕಿಂಗ್‌ ಟ್ರ್ಯಾಕ್‌ ನಿರ್ಮಿಸಲು ಒತ್ತು ನೀಡಲಾಗುವುದು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನೂರು ದಿನಗಳೊಳಗೆ ಸಾಗರಕ್ಕೆ ರಂಗಮಂದಿರ ಮಂಜೂರು ಮಾಡಿಸುತ್ತೇನೆ’ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಡಿ.ಮೇಘರಾಜ್‌ ಮಾತನಾಡಿ, ‘ಯಡಿಯೂರಪ್ಪ ಅವರು ನನ್ನ ಮಾತು ಕೇಳಿ ಹಾಲಪ್ಪ ಅವರಿಗೆ ಟಿಕೆಟ್‌ ನೀಡಿದ್ದಾರೆ ಎಂದು ಬೇಳೂರು ಬೆಂಬಲಿಗರು ದೂರುತ್ತಿರುವುದರಲ್ಲಿ ಅರ್ಥವಿಲ್ಲ. ಯಾವುದೇ ಒಬ್ಬ ವ್ಯಕ್ತಿಯ ಮಾತು ಕೇಳಿ ಒಂದು ಕ್ಷೇತ್ರದ ಟಿಕೆಟ್‌ ನೀಡುವಷ್ಟು ಬಿಜೆಪಿ ದುರ್ಬಲವಾಗಿಲ್ಲ’ ಎಂದರು.

ನಿಮ್ಮ ಮನೆ ಎದುರು ಪೊಲೀಸ್‌ ಕಾವಲು ಹಾಕಬೇಕಾದ ಪರಿಸ್ಥಿತಿ ಯಾಕೆ ನಿರ್ಮಾಣವಾಯಿತು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಹಿಂದೆ ಕಾಂಗ್ರೆಸ್‌ ಪಕ್ಷ ತೋಳ್ಬಲದ ರಾಜಕಾರಣ ನಡೆಸಿದ ಕಾರಣಕ್ಕೆ ಕ್ಷೇತ್ರದ ಜನ ಬೇಳೂರು ಅವರನ್ನು ಬೆಂಬಲಿಸಿದ್ದಾರೆ. ಆದರೆ ಈಗ ಅದೇ ತೋಳ್ಬಲದ ಮೂಲಕ ಆಡಳಿತ ನಡೆಸಬಹುದು ಎಂಬ ಮಾನಸಿಕತೆ ಬೇಳೂರು ಬೆಂಬಲಿಗರಿಗೆ ಬರಬಾರದಿತ್ತು’ ಎಂದು ಹೇಳಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಸನ್ನ ಕೆರೆಕೈ, ತಾಲ್ಲೂಕು ಪಂಚಾಯ್ತಿ ಸದಸ್ಯ ರಘುಪತಿ ಭಟ್‌, ಪಕ್ಷದ ಪ್ರಮುಖರುಗಳಾದ ಕೆ.ಆರ್‌.ಗಣೇಶ್‌ಪ್ರಸಾದ್, ಆರ್.ಎಸ್‌.ಗಿರಿ, ಎಂ.ಕೆ.ತಿಮ್ಮಪ್ಪ, ಕುಸುಮಾ ಸುಬ್ಬಣ್ಣ, ಗಣೇಶ್‌ ಗಟ್ಟಿ, ಎಂ.ಕೆ.ದ್ಯಾವಪ್ಪ, ಶಿವಾನಂದ ಬಿಳಗಿ, ಶ್ರೀಕಂಠಗೌಡ, ಬಿ.ಎಚ್‌.ರಾಘವೇಂದ್ರ, ವಿ.ಮಹೇಶ್‌, ರಾಜೇಂದ್ರ ಆವಿನಹಳ್ಳಿ, ಲಕ್ಷ್ಮಣ್‌ ಮಾಗಡಿ, ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry