ಪ್ರೇಮದ ಬಂಧಕೆ ಮಲ್ಲಿಗೆ ಗಂಧ

7

ಪ್ರೇಮದ ಬಂಧಕೆ ಮಲ್ಲಿಗೆ ಗಂಧ

Published:
Updated:
ಪ್ರೇಮದ ಬಂಧಕೆ ಮಲ್ಲಿಗೆ ಗಂಧ

ಚಿತ್ರ: ಕೃಷ್ಣ ತುಳಸಿ

ನಿರ್ಮಾಣ: ಎಂ. ನಾರಾಯಣಸ್ವಾಮಿ

ನಿರ್ದೇಶನ: ಸುಕೇಶ್‌ ನಾಯಕ್

ತಾರಾಗಣ: ಸಂಚಾರಿ ವಿಜಯ್, ಮೇಘಶ್ರೀ, ತಬಲಾ ನಾಣಿ, ಕುರಿ ಪ್ರತಾಪ್‌, ರಮೇಶ್‌ ಭಟ್‌, ಪದ್ಮಜಾ ರಾವ್

ಕೃಷ್ಣನಿಗೆ ತುಳಸಿಯ ಕಣ್ಣಲ್ಲಿ ಪ್ರಪಂಚ ನೋಡುವಾಸೆ. ಆದರೆ, ಆಕೆಯ ಜೀವನವೂ ಕತ್ತಲು. ಆಕೆಗೆ ಕೃಷ್ಣನ ಮೂಲಕ ತನ್ನ ಬದುಕಿನ ಜ್ಯೋತಿ ಬೆಳಗಿಸಬೇಕೆಂಬ ಮಹದಾಸೆ. ಬಸ್ಸಿನಲ್ಲಿ ಇಬ್ಬರಿಗೂ ಪರಿಚಯ ಬೆಳೆಯುತ್ತದೆ. ಅದು ಸದ್ದಿಲ್ಲದೆ ಪ್ರೀತಿಗೂ ತಿರುಗುತ್ತದೆ. ಒಟ್ಟಾಗಿ ಪಾನಿಪೂರಿ ಮೆದ್ದು ಹರಟೆ ಹೊಡೆಯುವಷ್ಟು ಹತ್ತಿರವಾಗುತ್ತಾರೆ. ಇಬ್ಬರು ಮಳೆಯಲ್ಲಿ ತೊಯ್ದು ಕಾಫಿ ಹೀರಲು ಹೋಟೆಲ್‌ಗೆ ಹೋಗುತ್ತಾರೆ. ಅಲ್ಲಿ ತನ್ನ ಮನದನ್ನೆಗೂ ತನ್ನಂತೆ ದೃಷ್ಟಿ ಕಾಣುವುದಿಲ್ಲ ಎನ್ನುವುದು ಅವನಿಗೆ ಗೊತ್ತಾಗುತ್ತದೆ.

ಸುಂದರವಾದ ಬದುಕು ಕಟ್ಟಿಕೊಳ್ಳಲು ದೃಷ್ಟಿ ಬೇಕಿಲ್ಲ. ಪ್ರೀತಿಯ ಶರಧಿಯಲ್ಲಿ ಪ್ರೇಮ ನೌಕೆ ಸಾಗಲು ಹೃದಯಗಳು ಗಟ್ಟಿಯಾಗಿದ್ದರೆ ಸಾಕು ಎನ್ನುವುದನ್ನು ‘ಕೃಷ್ಣ ತುಳಸಿ’ ಸಿನಿಮಾದಲ್ಲಿ ಕಟ್ಟಿದ್ದಾರೆ ನಿರ್ದೇಶಕ ಸುಕೇಶ್‌ ನಾಯಕ್. ಹಳಸಲು ಕಥೆ, ಹಾರರ್‌, ನೆತ್ತರ ಕಮಟು ವಾಸನೆ ಸೂಸುವ ಸಿನಿಮಾಗಳ ಅಬ್ಬರದ ನಡುವೆ ಅಂಧರ ಲೋಕದ ನವಿರಾದ ಪ್ರೇಮ ಕಥೆ ಅರಳಿಸಿದ್ದಾರೆ ನಿರ್ದೇಶಕರು. ಇದಕ್ಕಾಗಿ ಅವರು ಅಭಿನಂದನಾರ್ಹರು.

ದೃಷ್ಟಿ ಕಾಣದಿದ್ದರೂ ಪ್ರವಾಸಿ ಗೈಡ್ ಆದ ಕೃಷ್ಣ (ಸಂಚಾರಿ ವಿಜಯ್) ಈ ಸಿನಿಮಾದ ಕೇಂದ್ರಬಿಂದು. ಮಡಿಕೇರಿ ಅವನ ಮೂಲ ಕಾರ್ಯಸ್ಥಾನ. ಪ್ರಾಚ್ಯವಸ್ತು ಇಲಾಖೆಯಲ್ಲಿ ಉದ್ಯೋಗ ಲಭಿಸುವುದರಿಂದ ಮೈಸೂರಿಗೆ ಬರುತ್ತಾನೆ. ಅಲ್ಲಿನ ಬೆಳಕು ಅಂಧರ ಸಂಸ್ಥೆಯಲ್ಲಿಯೇ ಅವನ ವಾಸ. ಅವನ ಭಾವನೆಗಳು ತೀಕ್ಷ್ಣ. ಅವು ‘ಮಲ್ಲಿಗೆ’ ರೂಪದಲ್ಲಿ ಕವನಗಳಾಗಿ ಅರಳುತ್ತವೆ. ಗ್ರಂಥಾಲಯದಲ್ಲಿ ಸಿಕ್ಕಿದ ಈ ಬ್ರೈಲ್ ಲಿಪಿಯ ಕವನ ಸಂಕಲನಕ್ಕೆ ತುಳಸಿಯೂ(ಮೇಘಶ್ರೀ) ಮನಸೋಲುತ್ತಾಳೆ.

ಅಂಧರ ಜೀವನದ ಏರಿಳಿತ ಮತ್ತು ಬದುಕಿನ ಅರ್ಥ ಎರಡನ್ನೂ ಹೆಣೆದು ಸೊಗಸಾಗಿ ಸಿನಿಮಾ ಕಟ್ಟಲಾಗಿದೆ. ಪ್ರೇಯಸಿ ಮೂಲಕ ಬದುಕು ಕಟ್ಟಿಕೊಳ್ಳಲು ಬಯಸಿದ ಕಣ್ಣುಕಾಣದ ಪ್ರೇಮಿ ಹಾಗೂ ಕಣ್ಣಿರುವ ಪ್ರೇಮಿಯಿಂದಲೇ ತನ್ನ ಬದುಕನ್ನು ಹಸನುಗೊಳಿಸಿಕೊಳ್ಳಲು ಹೊರಟ ಪ್ರೇಯಸಿ ಜೀವನ ಸಂಗ್ರಾಮದ ಎರಡು ಧ್ರುವಗಳಾಗಿ ಕಾಣುತ್ತಾರೆ. ಆದರೆ, ಪ್ರೀತಿಯೇ ಈ ಎರಡು ಧ್ರುವಗಳ ಮೂಲ.‌

ಗಟ್ಟಿಯಾದ ಚಿತ್ರಕಥೆ, ನವಿರಾದ ನಿರೂಪಣೆ, ಪರಿಣಾಮಕಾರಿಯಾದ ಸಂಗೀತ ಈ ಚಿತ್ರದ ಮುಖ್ಯಶಕ್ತಿಗಳು. ಮೊದಲಾರ್ಧ ಪ್ರೀತಿ, ಕಚಗುಳಿಯ ನಡುವೆ ಮುಗಿದುಹೋಗುತ್ತದೆ. ದ್ವಿತೀಯಾರ್ಧದಲ್ಲಿ ಕಥೆಯಲ್ಲಿನ ಬಿಗಿತನ ಪ್ರೇಕ್ಷಕರಲ್ಲಿ ಕುತೂಹಲವನ್ನು ಇಮ್ಮಡಿಗೊಳಿಸುತ್ತದೆ. ಕಾಮಿಡಿ ಪಾತ್ರಗಳು ಹಿನ್ನೆಲೆಗೆ ಸರಿದು ಕೃಷ್ಣ, ತುಳಸಿಯ ಪ್ರೇಮ ಕಥನ ಮುನ್ನಲೆಗೆ ಬರುತ್ತದೆ. ಇದು ಒಂದೆರೆಡು ದೃಶ್ಯಗಳಿಗೆ ಸೀಮಿತವಾಗದೆ ಕಥನದ ಭಾಗವೇ ಆಗಿಹೋಗುತ್ತದೆ. ಮಲ್ಲಿಗೆ ಹೂವು ಇಬ್ಬರ ನಡುವೆ ಪ್ರೀತಿಯ ರೂಪಕವಾಗಿ ಚಿತ್ರಿತವಾಗಿದೆ.

‘ಹರಿವು’, ‘ನಾನು ಅವನಲ್ಲ ಅವಳು’ ಸಿನಿಮಾಗಳ ಬಳಿಕ ಸಂಚಾರಿ ವಿಜಯ್ ಅವರೊಳಗಿರುವ ನಟನಾ ಪ್ರತಿಭೆ ಸಾಬೀತುಪಡಿಸಲು ಈ ಚಿ‌ತ್ರದ ಪಾತ್ರ ಮತ್ತೊಮ್ಮೆ ವೇದಿಕೆ ಕಲ್ಪಿಸಿದೆ. ಅದನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ನಾಯಕಿ ಮೇಘಶ್ರೀ ಅವರದು ಅಚ್ಟುಕಟ್ಟಾದ ನಟನೆ. ತಬಲಾ ನಾಣಿ, ಕುರಿ ಪ್ರತಾಪ್‌, ರಮೇಶ್‌ ಭಟ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕಿರಣ್‌ ರವೀಂದ್ರನಾಥ್‌ ಸಂಗೀತ ಮತ್ತು ನವೀನ್ ಎಸ್‌. ಅಕ್ಷಿ ಅವರ ಛಾಯಾಗ್ರಹಣ ಸಿನಿಮಾಕ್ಕೆ ಸಮರ್ಥ ಭಿತ್ತಿ ಒದಗಿಸಿಕೊಟ್ಟಿದೆ.

ಕನ್ನಡದಲ್ಲಿ ಅಂಧರ ಬದುಕಿನ ಜೀವಂತಿಕೆ ಕಟ್ಟಿಕೊಡುವ ಸಿನಿಮಾಗಳು ಅಪರೂಪ. ‘ಕೃಷ್ಣ ತುಳಸಿ’ ಸ್ವಲ್ಪಮಟ್ಟಿಗೆ ಈ ಕೊರತೆ ನೀಗಿಸಿದೆ ಎಂದರೆ ಅತಿಶಯೋಕ್ತಿಯಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry