ರಾಜ್‌ ಮನೆಯ ಆತಿಥ್ಯದ ನೆನಪು

7

ರಾಜ್‌ ಮನೆಯ ಆತಿಥ್ಯದ ನೆನಪು

Published:
Updated:
ರಾಜ್‌ ಮನೆಯ ಆತಿಥ್ಯದ ನೆನಪು

ನಿರೂಪಣೆ:  

ಕನ್ನಡದ ಮೇರುನಟ ಡಾ. ರಾಜ್‌ಕುಮಾರ್‌ ಅವರು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು 50 ವರ್ಷವಾದ ಸಂದರ್ಭದಲ್ಲಿ (2005ರ ಜುಲೈ 9ರಂದು) ರಾಜ್ಯ ಸರ್ಕಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾರ್ಥಕ ಸುವರ್ಣ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ವೇಳೆ ಡಾ. ರಾಜ್‌ ಅವರು ನಡೆದು ಬಂದ ಹಾದಿಯ ಕುರಿತು ಪುಸ್ತಕ ರಚಿಸುವ ಕಾರ್ಯಕ್ಕೆ ವಾರ್ತಾ ಇಲಾಖೆ ಮುಂದಾಯಿತು. ಅದಾಗಲೇ ನಾನು ‘ಪ್ರಜಾವಾಣಿ’ಯಲ್ಲಿ 10 ವರ್ಷದಿಂದ ಸಿನಿಮಾ ‘ಚಿತ್ರಬಂಧ’ ಬರೆಯುತ್ತಿದ್ದೆ. ಅದಕ್ಕಾಗಿ ಸಿನಿಮಾ ಕ್ಷೇತ್ರದ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿದ್ದೆ. ಈ ವಿಷಯ ತಿಳಿದಿದ್ದ ಇಲಾಖೆಯ ಹಿರಿಯ ಅಧಿಕಾರಿಗಳು ನನಗೆ ಪುಸ್ತಕ ಬರೆಯುವ ಅವಕಾಶ ಕೊಟ್ಟರು.

ಪುಸ್ತಕ ರಚನೆಗೆ ರಾಜ್‌ ಮತ್ತು ಅವರ ಕುಟುಂಬದ ಅನುಮತಿ ಪಡೆಯಬೇಕಿತ್ತು. ಅದಕ್ಕಾಗಿ ಇಲಾಖೆಯ ಹಿರಿಯ ಅಧಿಕಾರಿಗಳು ರಾಜ್‌ ಮನೆಗೆ ಹೋಗಿ ಮಾಹಿತಿ ನೀಡಿದರು. ಇದಕ್ಕೆ ಸಮ್ಮತಿ ನೀಡಿದ ಪಾರ್ವತಮ್ಮ ರಾಜ್‌ಕುಮಾರ್‌, ಪುಸ್ತಕ ಬರೆಯಲು ಯಾವುದೇ ಅಭ್ಯಂತರವಿಲ್ಲ. ಆದರೆ ಅದು ಉತ್ಪ್ರೇಕ್ಷೆಯಿಂದ ಕೂಡಿರಬಾರದು ಎಂದು ಹೇಳಿದ್ದರು. ನಾನು 190 ಪುಟಗಳ ‘ಬಂಗಾರದ ಮನುಷ್ಯ’ ಪುಸ್ತಕ ಬರೆದೆ. ಅದರಲ್ಲಿ ರಾಜ್‌ ಅಭಿನಯಿಸಿದ್ದ ಪೌರಾಣಿಕ, ಐತಿಹಾಸಿಕ, ಭಕ್ತಿ ಪ್ರಧಾನ, ಜಾನಪದ, ಕಾದಂಬರಿ ಆಧರಿಸಿದ, ಪತ್ತೇದಾರಿ ಹಾಗೂ ಸಾಮಾಜಿಕ ಚಿತ್ರಗಳ ಕುರಿತು ಮಾಹಿತಿ ಮತ್ತು ವಿವರಣೆ ನೀಡಿದ್ದೇನೆ. ಅಲ್ಲದೆ ರಾಜ್‌ ಅವರ ಪ್ರಮುಖ ಭಾವಚಿತ್ರಗಳನ್ನು ಹೊಂದಿದ್ದು, ಕನ್ನಡ ನಾಡು ನುಡಿಗಾಗಿ ಅವರು ಮಾಡಿದ ಸೇವೆ, ಪಡೆದ ಪುರಸ್ಕಾರಗಳು, ವೀರಪ್ಪನ್‌ ಅಪಹರಣ ಮಾಡಿದಾಗ ಅನುಭವಿಸಿದ ವನವಾಸದ ಕುರಿತ ಮಾಹಿತಿ ನೀಡಿದ್ದೇನೆ.

‘ಬಂಗಾರದ ಮನುಷ್ಯ’ ಪುಸ್ತಕವನ್ನು ಆಗಿನ ಮುಖ್ಯಮಂತ್ರಿ ಧರ್ಮಸಿಂಗ್‌ ಬಿಡುಗಡೆ ಮಾಡಿದರು. ಆಗ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದರು. ಇದರ ಮೊದಲ ಆವೃತ್ತಿ ಕೇವಲ ಮೂರು ತಿಂಗಳಲ್ಲಿ ಖಾಲಿ ಆಯಿತು. ನಂತರ ಇದು ನಾಲ್ಕು ಆವೃತ್ತಿಗಳನ್ನು ಕಂಡಿದ್ದು, ಈಗ ಮಾರುಕಟ್ಟೆಯಲ್ಲಿ ಈ ಪುಸ್ತಕ ಲಭ್ಯವಿಲ್ಲ. ಅದರ ಇನ್ನೊಂದು ಆವೃತ್ತಿ ಮುದ್ರಿಸುವ ಯತ್ನದಲ್ಲಿ ಇದ್ದೇನೆ.

ಬಿಡುಗಡೆಯಾದ ಮೂರು ನಾಲ್ಕು ದಿನಗಳಲ್ಲಿಯೇ ರಾಜ್‌ ಅವರು ಪುಸ್ತಕ ಓದಿದ್ದರು. ಅವರ ಸಮೀಪವರ್ತಿ ಚನ್ನ ನನಗೆ ಕರೆ ಮಾಡಿ, ಪಾರ್ವತಮ್ಮನವರಿಗೆ ನೀಡಿದರು. ‘ರಾಜಕುಮಾರ್ ಅವರು ಪುಸ್ತಕ ಓದಿ ಖುಷಿಪಟ್ಟಿದ್ದಾರೆ. ನೀವು ಕುಟುಂಬ ಸಮೇತ ನಮ್ಮ ಮನೆಗೆ ಬರಬೇಕು ಅಂತ ಆಹ್ವಾನಿಸಿದ್ದಾರೆ. ಬೆಳಿಗ್ಗೆ ತಿಂಡಿಗೆ ಇಲ್ಲಿಗೆ ಬನ್ನಿ’ ಎಂದು ಫೋನ್‌ನಲ್ಲಿ ಹೇಳಿದ್ದರು.

ನಾನು, ಪತ್ನಿ ಮಲ್ಲಿಕಾ, ಮಕ್ಕಳಾದ ಭಾರ್ಗವ್, ಗೌತಮ್ ಹಾಗೂ ತಮ್ಮ ಪ್ರಕಾಶ್ ಜೊತೆ ಬೆಳಿಗ್ಗೆ 10 ಗಂಟೆಯೊಳಗೆ ಅಣ್ಣಾವ್ರ ಮನೆ ತಲುಪಿದೆವು. ರಾಜ್‌ ಕುಟುಂಬ ನಮ್ಮನ್ನು ಬರಮಾಡಿಕೊಂಡಿತು. ಬೆಳಿಗ್ಗೆ ಉಪಹಾರವನ್ನು ಅವರೊಂದಿಗೆ ಮಾಡಿದೆವು. ಅವರು ಪುಸ್ತಕದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಸಾಕಷ್ಟು ವಿಷಯಗಳನ್ನು ಮಾತನಾಡಿದರು.

‘ಕಾಡಿನಲ್ಲಿ ವೀರಪ್ಪನ್‌ ನನ್ನನ್ನು ಚೆನ್ನಾಗಿಯೇ ನೋಡಿಕೊಂಡ. ಅವನು ನನ್ನನ್ನು ಇಟ್ಟಿದ್ದ, ಕರೆದುಕೊಂಡು ಹೋಗಿದ್ದ ಸ್ಥಳಗಳಿಗೆಲ್ಲಾ ನಿಮ್ಮನ್ನೂ ಕರೆದುಕೊಂಡು ಹೋಗುತ್ತೇನೆ’ ಎಂದು ಹೇಳಿದ್ದರು. ತಮ್ಮ ರಂಗಭೂಮಿ ದಿನಗಳನ್ನು ನೆನಪು ಮಾಡಿಕೊಂಡು ಕೋಲಾರದ ಕ್ಯಾಂಪ್ ಬಗ್ಗೆ ಹೇಳಿದರು. ಪಾರ್ವತಮ್ಮ ರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಎಲ್ಲರೂ ನಮ್ಮ ಕುಟುಂಬವನ್ನು ಆತ್ಮೀಯವಾಗಿ ನೋಡಿಕೊಂಡರು.ಮಧ್ಯದಲ್ಲಿ ಮನೆಗೆ ಬಂದ ವರದಣ್ಣನವರು ಸ್ವಲ್ಪ ಕಾಲ ನಮ್ಮೊಂದಿಗೆ ಮಾತನಾಡಿದರು.

ಮಧ್ಯಾಹ್ನ ನಮ್ಮನ್ನು ಬೀಳ್ಕೊಡಲು ಇಡೀ ಕುಟುಂಬ ಬಂದಿತ್ತು. ರಾಜ್‌ ಅವರಿಗೆ ನಮ್ಮನ್ನು ಮನೆಗೆ ಕಳುಹಿಸಲು ಇಷ್ಟವಿರಲಿಲ್ಲ. ಇನ್ನಷ್ಟು ಮಾತನಾಡಬೇಕು ಎಂದು ಇತ್ತು. ಆದರೆ ಅವರನ್ನು ನೋಡಲು ವೈದ್ಯರು ಬರುತ್ತಾರೆ ಎಂಬ ಮಾಹಿತಿ ನಮಗೆ ಮೊದಲೇ ಇದ್ದುದರಿಂದ ನಾವು ಹೆಚ್ಚು ಹೊತ್ತು ಅಲ್ಲಿ ಇರುವುದು ಸರಿಯಲ್ಲ ಎಂದು ಹೊರಟೆವು. ಈ ವೇಳೆ ಅಣ್ಣಾವ್ರು ನನ್ನ ಬಳಿ ಬಂದು, ನಿಮ್ಮ ಹತ್ತಿರ ಇನ್ನೂ ಸಾಕಷ್ಟು ಮಾತನಾಡಬೇಕು. ಮನೆಗೆ ಹೊಂದಿಕೊಂಡಂತಿರುವ ಪಾರ್ಕ್‌ನಲ್ಲಿ ಕುಳಿತಿರಿ. ವೈದ್ಯರು ಹೋದ ನಂತರ ಅಲ್ಲಿಗೆ ಬರುತ್ತೇನೆ ಎಂದಿದ್ದರು. ಆದರೆ ಅವರಿಗೆ ವಿಶ್ರಾಂತಿ ಅಗತ್ಯವಿರುವುದನ್ನು ತಿಳಿದಿದ್ದ ನಾನು, ‘ನೀವು ವಿಶ್ರಾಂತಿ ತೆಗೆದುಕೊಳ್ಳಿ, ಇನ್ನೊಮ್ಮೆ ನಾನು ಬರುತ್ತೇನೆ’ ಎಂದು ಹೊರಟೆ.

ಇದಾದ ಕೆಲ ತಿಂಗಳ ನಂತರ ಪಾರ್ವತಮ್ಮ ರಾಜ್‌ಕುಮಾರ್‌ ಅವರಲ್ಲಿ ಇನ್ನೊಂದು ಪುಸ್ತಕ ಬರೆಯುವ ಪ್ರಸ್ತಾಪ ಇರಿಸಿದೆ. ರಾಜ್‌ ಅವರ ಬಗ್ಗೆ ಪಾರ್ವತಮ್ಮನವರ ನೆನಪುಗಳನ್ನು ದಾಖಲಿಸುವ ಪುಸ್ತಕ ಇದಾಗಿತ್ತು. ಈ ಸಂಬಂಧ ಅವರ ಮನೆಗೆ ಮೂರು ಬಾರಿ ಭೇಟಿ ನೀಡಿ ಅವರ ನೆನಪುಗಳನ್ನು ‘ಪ್ರಾಣಪದಕ’ ಪುಸ್ತಕದಲ್ಲಿ ದಾಖಲಿಸಿದೆ. ಬಳಿಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಅಮೃತ ಮಹೋತ್ಸವ ಪುಸ್ತಕ ಮಾಲೆ ಹೊರತಂದಿತು. ಅದರಲ್ಲಿ ನಾನು ರಚಿಸಿದ ‘ಡಾ. ರಾಜ್‌ಕುಮಾರ್‌’ ಪುಸ್ತಕವೂ ಇತ್ತು.

ಶ್ರೇಷ್ಠ ನಟನನ್ನು ಕನ್ನಡೇತರರಿಗೆ ಮತ್ತು ವಿದೇಶಿಯರಿಗೆ ಪರಿಚಯಿಸಬೇಕು ಎಂಬ ಒತ್ತಾಯಗಳು ಹಲವರಿಂದ ಬಂದವು. ನನ್ನ ‘ಬಂಗಾರದ ಮನುಷ್ಯ’ ಪಸ್ತಕವನ್ನು ಇಂಗ್ಲಿಷ್‌ಗೆ ಭಾಷಾಂತರಿಸಲು ಅನುಮತಿ ನೀಡಿದೆ. ಅಲ್ಲಾಡಿ ಜಯಶ್ರೀ ಮತ್ತು ಪ್ರೊ. ಸಿ.ಎನ್‌.ರಾಮಚಂದ್ರನ್‌ ಅವರು ಇದನ್ನು ಭಾಷಾಂತರಿಸಿದರು. ‘ಡಾ.ರಾಜ್‌ಕುಮಾರ್: ದಿ ಇನಿಮಿಟೆಬಲ್ ಆಕ್ಟರ್ ವಿತ್ ಗೋಲ್ಡನ್ ವಾಯ್ಸ್’ ಹೆಸರಿನಲ್ಲಿ ಸಪ್ನ ಪ್ರಕಾಶನ ಪುಸ್ತಕವನ್ನು ಪ್ರಕಟಿಸಿತು. ಅಮೆರಿಕದ ನ್ಯೂಜರ್ಸಿ ನಗರದಲ್ಲಿ ಕನ್ನಡ ಸಂಘಗಳು ಪುಸ್ತಕವನ್ನು ಬಿಡುಗಡೆ ಮಾಡಿದವು. ನಾನು ಅತಿಥಿಯಾಗಿ ಪಾಲ್ಗೊಂಡಿದ್ದೆ. ಬಂಗಾರದ ಮನುಷ್ಯ ಪುಸ್ತಕವನ್ನು ದುಬೈ ಹಾಗೂ ಲಂಡನ್ ನಗರಗಳಲ್ಲೂ ಅಲ್ಲಿನ ಕನ್ನಡ ಸಂಘಗಳು ಬಿಡುಗಡೆ ಮಾಡಿದವು.

ಪ್ರಹ್ಲಾದರಾವ್‌ ಪರಿಚಯ

ಅ.ನಾ.ಪ್ರಹ್ಲಾದರಾವ್‌ ಅವರು ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದವರು. ಕೋಲಾರ ಮೂಲದ ಅವರು ಪತ್ರಕರ್ತರಾಗಿ ವೃತ್ತಿ ಆರಂಭಿಸಿದರು. ವಾರ್ತಾ ಇಲಾಖೆ ಸೇರ್ಪಡೆ ನಂತರ ಮಂಡ್ಯ ಜಿಲ್ಲಾ ವಾರ್ತಾಧಿಕಾರಿಗಳಾಗಿ, ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಜಲಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ ಸಚಿವರ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿದ್ದಾರೆ. ಪದಬಂಧ, ಚಿತ್ರಬಂಧಗಳ ಮೂಲಕವೇ ಹೆಸರುವಾಸಿ ಆಗಿರುವ ಅವರು ಭಾರತದಲ್ಲೇ ಅತಿ ಹೆಚ್ಚು ಪದಬಂಧಗಳನ್ನು ರಚಿಸುವ ಮೂಲಕ ಲಿಮ್ಕಾ ದಾಖಲೆಯ ಗೌರವ ಪಡೆದಿದ್ದಾರೆ. 15 ಪದಬಂಧ ಪುಸ್ತಕಗಳನ್ನು ಪ್ರಕಟಿಸಿರುವ ಅವರು ‘ಬೆಳ್ಳಿತೆರೆ ಬೆಳಗಿದವರು’, ‘ರಜನಿಕಾಂತ್ ವಿಭಿನ್ನ ದಾರಿ’, ‘ದಣಿವಿಲ್ಲದ ಧಣಿ ಪಂತುಲು’ ಮುಂತಾದ ಪುಸ್ತಕಗಳನ್ನು ಬರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry