ಮದುವೆ ಮನೆಯಲ್ಲಿ ಬಾಲಕಿಯರ ಅತ್ಯಾಚಾರ

7
ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು

ಮದುವೆ ಮನೆಯಲ್ಲಿ ಬಾಲಕಿಯರ ಅತ್ಯಾಚಾರ

Published:
Updated:
ಮದುವೆ ಮನೆಯಲ್ಲಿ ಬಾಲಕಿಯರ ಅತ್ಯಾಚಾರ

ಇಟಾವ: ಉತ್ತರ ಪ್ರದೇಶದ ಇಟಾವ ಮತ್ತು ಛತ್ತೀಸಗಡದಲ್ಲಿ ಗುರುವಾರ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದೆ.

ಇಟಾವದ ಅಲಿಗಂಜ್ ಪ್ರದೇಶದಲ್ಲಿ ಗುರುವಾರ ರಾತ್ರಿ ವಿವಾಹ ಸಮಾರಂಭವೊಂದರಲ್ಲಿ ಅಡುಗೆ ಸಹಾಯಕನೊಬ್ಬ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಹತ್ಯೆ ಮಾಡಿದ್ದಾನೆ.

ಮದುವೆ ಮನೆಯಲ್ಲಿ ಮಗಳು ಕಾಣೆಯಾದ ಬಗ್ಗೆ ಆಕೆಯ ತಂದೆ ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬಹಿರಂಗಗೊಂಡಿದೆ.

ಮದುವೆ ಮನೆ ಸಮೀಪ ಶುಕ್ರವಾರ ಬೆಳಗಿನ ಜಾವ 3 ಗಂಟೆಗೆ ಬಾಲಕಿ ಶವ ಪತ್ತೆಯಾಗಿದೆ. ಈ ಸಂಬಂಧ ಅಡುಗೆ ಸಹಾಯಕ ಪಿಂಟು ಕುಮಾರ್ (25) ಎಂಬುವನನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

ಛತ್ತೀಸಗಡದ ಕಬೀರ್‌ಧಾಮ ಜಿಲ್ಲೆಯಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ವರನ ಸ್ನೇಹಿತ ಉತ್ತಮ್ ಸಾಹು (25) ಎಂಬಾತ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದಾನೆ.

ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಅತ್ಯಾಚಾರ ಎಸಗಿದ ನಂತರ ಬಾಲಕಿಯ ತಲೆಗೆ ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದಾಗಿ ಸಾಹು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಹಮದಾಬಾದ್ ವರದಿ: ಸೂರತ್‌ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗುಜರಾತ್ ಪೊಲೀಸರು ರಾಜಸ್ಥಾನದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಬಾಲಕಿಯ ಶವ ಪತ್ತೆಯಾದ ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕಪ್ಪು ಬಣ್ಣದ ಕಾರೊಂದು ಆ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಓಡಾಡಿದ್ದು ಪತ್ತೆಯಾಯಿತು. ಆ ಕಾರಿನ ಮಾಲೀಕನನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದಾಗ, ಆತನ ತಮ್ಮ ಕಾರನ್ನು ರಾಜಸ್ಥಾನಕ್ಕೆ ಕೊಂಡೊಯ್ದಿದ್ದು ತಿಳಿಯಿತು. ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ಶವ ಪತ್ತೆಯಾದ ಸ್ಥಳದ ಸಮೀಪವೇ ಮಹಿಳೆಯೊಬ್ಬರ ಶವವೂ ಪತ್ತೆಯಾಗಿತ್ತು. ಆ ಮಹಿಳೆ ಆ ಬಾಲಕಿಯ ತಾಯಿಯಿರಬಹುದು. ಇಬ್ಬರನ್ನೂ ಆರೋಪಿ ಕೊಂದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಸಂಬಂಧಿಯಿಂದಲೇ ಹೇಯ ಕೃತ್ಯ

ಒಡಿಶಾ: ಕಾಳಹಂಡಿ ಜಿಲ್ಲೆಯಲ್ಲಿ ಆರನೇ ತರಗತಿಯ ಬಾಲಕಿಯ ಮೇಲೆ ಆಕೆಯ ಸಂಬಂಧಿಯೇ ಅತ್ಯಾಚಾರ ಎಸಗಿದ್ದಾನೆ.

ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಈ ಬಾಲಕಿ ಸಂಬಂಧಿಕರ ಮನೆಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ರಾತ್ರಿ ಮನೆಗೆ ಮರಳುವ ಸಂದರ್ಭ ಆಕೆಯ ದೂರದ ಸಂಬಂಧಿ ಮುನಾ ನಾಯ್ಕ್ (35) ಎಂಬಾತ ಬಾಲಕಿಯನ್ನು ಬಲವಂತವಾಗಿ ತನ್ನ ಮನೆಗೆ ಕರೆದೊಯ್ದಿದ್ದಾನೆ.

ಎರಡು ದಿನ ಆಕೆಯನ್ನು ವಶದಲ್ಲಿಟ್ಟುಕೊಂಡು ಅತ್ಯಾಚಾರ ಎಸಗಿರುವ ಆತ, ಗುರುವಾರ ರಾತ್ರಿ ಬಾಲಕಿಯನ್ನು ಬಿಡುಗಡೆ ಮಾಡಿದ್ದಾನೆ.

ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 342, 363, 376(2)(ಐ) ಹಾಗೂ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ಮೇಲೆ ಅತ್ಯಾಚಾರ

ಕೆ.ಆರ್.ಪೇಟೆ: ತಾಲ್ಲೂಕಿನ ಗ್ರಾಮವೊಂದರಲ್ಲಿ ಸಂಬಂಧಿಗಳೇ ತಮ್ಮ ಮನೆಯಲ್ಲಿ ಸಾಕಿದ್ದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿರುವ ಕುರಿತು ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಾಲಕಿಯ ತಂದೆ ನಿಧನರಾಗಿದ್ದರಿಂದ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಈಕೆಯನ್ನು ಅವರ ದೊಡ್ಡಪ್ಪನ ಮನೆಯಲ್ಲಿ ಬಿಡಲಾಗಿತ್ತು. ತಾಯಿ ತವರು ಮನೆಯಲ್ಲಿದ್ದರು. ದೊಡ್ಡಪ್ಪ, ಆತನ ಮಗ ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧ ಬೆರೆಸಿ 3 ತಿಂಗಳಿಂದ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದರು ಎನ್ನಲಾಗಿದೆ. ವಿಷಯವನ್ನು ಬಾಲಕಿ ತನ್ನ ತಾತನಿಗೆ ತಿಳಿಸಿದಾಗ, ಅವರು ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣ ಆರೋಪಿಗಳನ್ನು ಬಂಧಿಸಿ, ಅಪ್ಪ, ಮಗನನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಪಟ್ಟಣ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry