ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ಪಟ್ಟದ್ದೇವರು

7
ಚನ್ನಬಸವ ಪಟ್ಟದ್ದೇವರ 19ನೇ ಸ್ಮರಣೋತ್ಸವ, ವಚನ ಜಾತ್ರೆ ಇಂದು; ಭಾಲ್ಕಿಯಲ್ಲಿ ಮನೆ ಮಾಡಿದ ಹಬ್ಬದ ಸಂಭ್ರಮ

ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ಪಟ್ಟದ್ದೇವರು

Published:
Updated:

ಭಾಲ್ಕಿ: ಲಿಂ.ಚನ್ನಬಸವ ಪಟ್ಟದ್ದೇವರ 19ನೇ ಸ್ಮರಣೋತ್ಸವ, ವಚನ ಜಾತ್ರೆ ಶನಿವಾರ (ಏ.21) ನಡೆಯಲಿದ್ದು, ಪಟ್ಟಣದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರಮುಖ ವೃತ್ತಗಳಲ್ಲಿ ಶರಣರ ನೂರಾರು ಕಟೌಟ್‌, ಕಮಾನುಗಳು ರಾರಾಜಿಸುತ್ತಿವೆ.

ಸಮಾಜ ಯಾರನ್ನು ಮುಟ್ಟಬಾರದೆಂದು ಊರಿನಿಂದ ಹೊರಗಿಟ್ಟಿತ್ತೋ ಅವರನ್ನು ಚನ್ನಬಸವ ಪಟ್ಟದ್ದೇವರು ಪ್ರೀತಿಯಿಂದ ಮುಟ್ಟಿ, ಆಲಂಗಿಸಿ ಸಾಮಾಜಿಕ ಸಮಾನತೆಗೆ ಜೀವನ ಪರ್ಯಂತ ಎಡೆಬಿಡದೆ ಶ್ರಮಿಸಿದ್ದರು.

ಬಾಲ್ಯ ಜೀವನ: ಡಾ. ಚನ್ನಬಸವ ಪಟ್ಟದ್ದೇವರು ಜನಿಸಿದ್ದು 1890ರ ಡಿಸೆಂಬರ್‌ 22ರಂದು. ಔರಾದ್‌ ತಾಲ್ಲೂಕು ಕಮಲನಗರದ ಬುಳ್ಳಾ ಮನೆತನದ ಸಂಗಮ್ಮ, ರಾಚಪ್ಪ ದಂಪತಿಗಳ ಪ್ರೀತಿಯ ಪುತ್ರರಾಗಿದ್ದ ಅವರ ಮೂಲ ಹೆಸರು ಮಹಾರುದ್ರ. ಔರಾದ್‌ನ ಗಳಂಗಳಪ್ಪ ಕನ್ನಡ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರೈಸಿದ್ದರು. ಆಗಿನ ಪೀಠಾಧಿಪತಿ ಆಗಿದ್ದ ಸಿದ್ಧಬಸವ ಸ್ವಾಮೀಜಿ ಅವರು ಚನ್ನಬಸವ ಎಂದು ಕರೆದರು. 1924 ರಲ್ಲಿ ಹಾನಗಲ್ಲ ಕುಮಾರ ಸ್ವಾಮೀಜಿ ಅವರ ನೇತೃತ್ವದಲ್ಲಿ ಭಾಲ್ಕಿಯ ಐತಿಹಾಸಿಕ ಹಿರೇಮಠಕ್ಕೆ ಪೀಠಾಧಿಪತಿ ಆದರು.

ಸಾಮಾಜಿಕ ಕಾರ್ಯ: ಜಾತಿ ವ್ಯವಸ್ಥೆಯಲ್ಲಿ ನಂಬಿಕೆ ಇಡದ ಶ್ರೀಗಳು ಎಲ್ಲ ಜನಾಂಗದವರನ್ನು ಶರಣರ ಪ್ರತಿರೂಪ ಎಂದು ಭಾವಿಸಿದ್ದರು. 1948ರಲ್ಲಿ ಹಿರೇಮಠದ ಬಾವಿಯನ್ನು ಹರಿಜನರಿಗಾಗಿ ಮುಕ್ತ ಮಾಡಿದ್ದರು. 15 ಹರಿಜನ ವಿದ್ಯಾರ್ಥಿಗಳಿಗೆ ಲಿಂಗಧಾರಣೆ ಮಾಡಿಸಿ ಹಿರೇಮಠದಲ್ಲಿ ಇಟ್ಟುಕೊಂಡಿದ್ದರು.

1972–73ರಲ್ಲಿ ಬೀದರ್‌ನ ಬಸವ ಮಂಟಪದಲ್ಲಿ ಓರ್ವ ಲಿಂಗಧಾರಿ ಶಿಕ್ಷಕನೊಂದಿಗೆ–ಸಮಗಾರ ಹೆಣ್ಣು ಮಗಳಿಗೆ ದೀಕ್ಷೆ ಕೊಟ್ಟು ವಿವಾಹವನ್ನು ನೇರವೇರಿಸಿದ್ದರು. ಜಿಲ್ಲೆಯ ಹುಮನಾಬಾದ್‌ ಪಟ್ಟಣದ ಜಂಗಮ ಹುಡುಗನಿಗೆ ಮುಸ್ಲಿಂ ಹುಡುಗಿಯೊಂದಿಗೆ ಮದುವೆ ಮಾಡಿಸಿದ್ದರು. ಜಾತೀಯತೆಯನ್ನು ತೊಡೆದು ಹಾಕಲು ಇಂತಹ ಅಸಂಖ್ಯ ಕಾರ್ಯಗಳನ್ನು ಮಾಡಿದ್ದಾರೆ ಎಂದು ರಮೇಶ ಪಟ್ನೆ ತಿಳಿಸಿದ್ದಾರೆ.

ಶೈಕ್ಷಣಿಕ ಕಾರ್ಯ: ಏಳು ದಶಕಗಳ ಹಿಂದೆ ಹೈದರಾಬಾದ್‌ ಕರ್ನಾಟಕ ಪ್ರಾಂತ್ಯದಲ್ಲಿ ಅದರಲ್ಲೂ ವಿಶೇಷವಾಗಿ ಬೀದರ್‌ನಲ್ಲಿ ಕನ್ನಡ ಓದು, ಬರಹ ಬಲ್ಲವರು ಸಿಗದಂಥ ಸ್ಥಿತಿ ಇತ್ತು.ಇದನ್ನು ಕಂಡು ಕೇವಲ ಮಠದ ಪೀಠಾಧಿಪತಿಯಾಗಿ ಪ್ರವಚನ ಮಾಡಿದರೆ ಸಾಲದು ಎಂದುಕೊಂಡ ಪೂಜ್ಯರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ದೃಢ ಸಂಕಲ್ಪ ತೊಟ್ಟರು.

ಅನೇಕ ಕಷ್ಟ ಕಾರ್ಪಣ್ಯಗಳ ನಡುವೆಯೇ ಈಗಿನ ತೆಲಂಗಾಣದ ‘ಮೋರಗಿ’ಯಲ್ಲಿ ಹಿರೇಮಠ ಸಂಸ್ಥಾನ ವತಿಯಿಂದ 1936 ರಲ್ಲಿ ಪ್ರಥಮ ಕನ್ನಡ ಶಾಲೆಯಾಗಿ ‘ಶಾಂತಿವರ್ಧಕ ಗುರುಕುಲಾಶ್ರಮ’ವನ್ನು ಸ್ಥಾಪಿಸಿ ಜಿಲ್ಲೆಯಲ್ಲಿ ಕನ್ನಡ ಶಾಲೆಗಳಿಗೆ ಬುನಾದಿ ಹಾಕಿದರು.

ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಕನ್ನಡದ ಉಳಿವು, ಏಳಿಗೆಗಾಗಿ ದುಡಿದರು. ಗಂಧದಂತೆ ತಮ್ಮ ಬದುಕನ್ನು ಸವೆಸಿ ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಕನ್ನಡ ಭಾಷೆಯನ್ನು ಜೀವಂತವಾಗಿರಿಸಿದರು.

ನೂತನ ಅನುಭವ ಮಂಟಪದ ರೂವಾರಿ: 12ನೇ ಶತಮಾನದಲ್ಲಿ ಜಾತ್ಯತೀತ, ಸರ್ವ ಸಮಾನತೆ ವ್ಯವಸ್ಥೆ ಮೇಲೆ ರಚಿತವಾಗಿದ್ದ ಅನುಭವ ಮಂಟಪ ಜಾತಿವಾದಿಗಳ ಕುತಂತ್ರಕ್ಕೆ ಬಲಿಯಾಗಿ ವಿನಾಶ ಕಂಡಿತ್ತು.ಮಾದರಿಯ ಮಂಟಪವನ್ನು ಕಲ್ಯಾಣ ನಗರದಲ್ಲಿ ಕಟ್ಟಬೇಕು ಎನ್ನುವ ಮಹದಾಸೆ ಶರಣರದಾಗಿತ್ತು. ಅವರ ಆಸೆ ಈಡೇರಿಸುವಲ್ಲಿ ಅನೇಕ ಸಮಸ್ಯೆ ಬಂದರೂ ಧೃತಿಗೆಡದೆ ಜಿಲ್ಲೆಯ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಿಸಲು ಜೀವನದ ಬಹುಭಾಗವನ್ನು ಪಟ್ಟದ್ದೇವರು ಸಮರ್ಪಣೆ ಮಾಡಿದ್ದರು.

ಸ್ತ್ರೀ ಸ್ವಾತಂತ್ರ್ಯ, ಜಾತ್ಯತೀತ ಗುಣಗಳ ಪ್ರತೀಕವಾಗಿದ್ದ, ಮಂಟಪವನ್ನು ಕಟ್ಟಲು 1955ರಲ್ಲಿ ಸಂಗನಬಸವ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಮೈಸೂರಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ ಶಂಕುಸ್ಥಾಪನೆ ನೆರವೇರಿಸಿದ್ದರು. 1966ರಲ್ಲಿ ಅಂದಿನ ಬಸವ ಸಮಿತಿ ಅಧ್ಯಕ್ಷರಾಗಿದ್ದ ಬಿ.ಡಿ.ಜತ್ತಿ ಗುದ್ದಲಿ ಪೂಜೆ ನೆರವೇರಿಸಿದರು.

ಆದರೆ, ಮಂಟಪದ ಕಾರ್ಯ ಪೂರ್ಣವಾಗಿರಲಿಲ್ಲ. ಅಪೂರ್ಣವಾಗಿ ನಿಂತಿದ್ದ ಕಟ್ಟಡ ಪೂರ್ಣ ಮಾಡಲು ಹಲವು ಅಡ್ಡಿ ಆತಂಕಗಳಿದ್ದವು. ಆದರೂ, ಛಲಬಿಡದ ವಿಕ್ರಮನಂತೆ 1981ರಲ್ಲಿ ಮೂರ್ತರೂಪಕ್ಕೆ ತಂದರು ಎಂದು ಸಾಹಿತಿ ಗಣಪತಿ ಭೂರೆ ಹೇಳುತ್ತಾರೆ.

ಅವರ ವಿಶಿಷ್ಟ ಕಾರ್ಯಗಳನ್ನು ಗುರುತಿಸಿ ಗುಲಬರ್ಗಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪದವಿ ನೀಡಿದೆ. ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವ, ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಿದೆ.

ಚನ್ನಬಸವ ಪಟ್ಟದ್ದೇವರ ತಕ್ಕ ಶಿಷ್ಯರಾಗಿ ಬಸವಲಿಂಗ ಪಟ್ಟದ್ದೇವರು ಅನ್ನದಾಸೋಹ, ಜ್ಞಾನದಾಸೋಹ, ಅನುಭಾವ, ಮುಂತಾದ ಉತ್ಕೃಷ್ಟ ಮಾನವೀಯ ವಿಚಾರಗಳ ಮೂಲಕ ಸಮಾಜದ ಅನಾಥ, ವಿಧವೆಯರ ಏಳಿಗೆಗೆ ಸತತ ಮೂರು ದಶಕಗಳಿಂದ ಶ್ರಮಿಸುತ್ತಿದ್ದಾರೆ.

ಪಟ್ಟಣದ ಡೊಂಬರಾಟ ಓಣಿಯ 40 ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ತಂದೆ– ತಾಯಿಗೆ ಬೇಡೆಂದು ತಿಪ್ಪೆಯಲ್ಲಿ ಬೀಸಾಡಿದ 50 ಮಕ್ಕಳನ್ನು ರಕ್ಷಿಸಿ, ಮಾತೃ–ಪಿತೃ ವಾತ್ಸಲ್ಯವನ್ನು ನೀಡಿ ಬೆಳೆಸುತ್ತಿದ್ದಾರೆ.

ಶರಣರ ಮೌಲಿಕ ತತ್ವಗಳು ಎಲ್ಲೆಡೆ ಹರಡಲಿ ಎಂಬ ಸದ್ದುದ್ದೇಶದಿಂದ ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಲ್ಲಿ ಬಸವ ಪರಿಷತ್‌ ಆರಂಭಿಸಿ ಮರಾಠಿ, ತೆಲಗು, ಹಿಂದಿ, ಇಂಗ್ಲಿಷ್‌ ಭಾಷೆಗಳಲ್ಲಿ ವಚನ ಸಾಹಿತ್ಯ ರಚಿಸಿ, ಭಾಷಾಂತರಿಸಿ ಮಾನವೀಯ ಧರ್ಮ ಪ್ರಸಾರ ಕಾರ್ಯದಲ್ಲಿ ತೊಡಗಿದ್ದಾರೆ.

ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ ಅಡಿಯಲ್ಲಿ ಒಟ್ಟು 40 ಅಂಗ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. 1000 ಶಿಕ್ಷಕರು, ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ.

ಗುರುಬಸವ ಪಟ್ಟದೇವರು:

ಕ್ರಿಯಾಶೀಲ ಪೀಠಾಧಿಪತಿ ಆಗಿರುವ ಗುರುಬಸವ ಪಟ್ಟದ್ದೇವರು ಪೂಜ್ಯರಿಬ್ಬರು ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿದ್ದಾರೆ.

ಜನರಲ್ಲಿರುವ ದುಶ್ಚಟ, ದುರ್ಗುಣಗಳನ್ನು ತೊಲಗಿಸಲು ಹಳ್ಳಿ– ಹಳ್ಳಿಗಳಿಗೆ ತೆರಳಿ ದುಶ್ಚಟಗಳ ಜೋಳಿಗೆ ಹಿಡಿದು ಜನರನ್ನು ವ್ಯಸನಮುಕ್ತರನ್ನಾಗಿಸಿ ಆರೋಗ್ಯಪೂರ್ಣ ವ್ಯಕ್ತಿಗಳನ್ನಾಗಿ ಮಾಡುತ್ತಿದ್ದಾರೆ. ಬಸವಲಿಂಗ ಪಟ್ಟದ್ದೇವರ ಎಲ್ಲ ಕಾರ್ಯಗಳಿಗೆ ಬೆನ್ನೆಲುಬಾಗಿ ಕೆಲಸ ನಿರ್ವಹಿಸುತ್ತ ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಚನ ಜಾತ್ರೆಯ ಉದ್ದೇಶ:

ವಚನ ಎಂದರೆ ಸತ್ಯದ ನುಡಿ, ಸದಾಚಾರದ ನಡೆ, ಅನುಭಾವದ ಸೆಲೆ. ಜಾತಿ, ವಗ೯, ವಣ೯ ರಹಿತ ಸಂಸ್ಕಾರಯುತ ಸಮಾಜ ನಿಮಾ೯ಣದ ಸಂವಿಧಾನ. ಎಲ್ಲ ಕಾಯಕ ಜೀವಿಗಳ ಜೀವನಾನುಭವದ ಮೊತ್ತ.

ಸಾಮಾಜಿಕ ಸಾಮರಸ್ಯ, ಧಮ೯ ನಿರಪೇಕ್ಷೆಯ ಪ್ರತೀಕ. ವಚನ ಕೇವಲ ಸಾಹಿತ್ಯವಲ್ಲ. ಅದು ಒಂದು ಚಳುವಳಿ. ಕನ್ನಡದ ಉಪನಿಷತ್ತು ಕೂಡ ಹೌದು. ಹಾಗಾಗಿ ವಚನ ಜಾತ್ರೆಯನ್ನು ಬಸವ ತತ್ವ, ಕಾಯಕ ಜೀವಿಗಳ, ಮಾನವೀಯ ಅತಃಕರಣದ, ಮಾನವ ಹಕ್ಕುಗಳ, ಅರಿವಿನ, ಮಾನವ ಕುಲದ ವಿಕಾಸದ ಜಾತ್ರೆ ಎಂದು ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ಎನ್ನುತ್ತಾರೆ ಬಸವಲಿಂಗ ಪಟ್ಟದ್ದೇವರು.

ಜಾತ್ರೆಯಲ್ಲಿ ಇಂದು

ಸಾಮೂಹಿಕ ಇಷ್ಟಲಿಂಗ ಯೋಗ ಕಾರ್ಯಕ್ರಮ, ಸ್ಥಳ– ಹಿರೇಮಠ, ಬೆಳಿಗ್ಗೆ 8 ಚನ್ನಬಸವ ಪಟ್ಟದ್ದೇವರ 19ನೇ ಸ್ಮರಣೋತ್ಸವ ಕಾರ್ಯಕ್ರಮ: ಉದ್ಘಾಟನೆ– ಸಂಸದ ವೀರಪ್ಪ ಮೊಯ್ಲಿ, ಸಾನ್ನಿಧ್ಯ– ಅಭಿನವ ಷಣ್ಮುಖ ಸ್ವಾಮೀಜಿ, ಸಿದ್ಧಬಸವ ಕಬೀರ ಸ್ವಾಮೀಜಿ, ಬಸವರಮಾನಂದ ಸ್ವಾಮೀಜಿ, ಶರಣಬಸವ ಸ್ವಾಮೀಜಿ, ಅತಿಥಿ– ಸಚಿವ ಈಶ್ವರ ಖಂಡ್ರೆ, ಸಂಸದ ಭಗವಂತ ಖೂಬಾ, ಕಬೀರ್ ಇಬ್ರಾಹಿಂ ಸುತಾರ್‌ ಅವರಿಗೆ ಗೌರವ ಸಲ್ಲಿಕೆ, ಬೆಳಿಗ್ಗೆ 10 , ಸಾಧಕರಿಗೆ ವಿವಿಧ ಪ್ರಶಸ್ತಿ ಪ್ರದಾನ: ಸಂಜೆ 4 ಟೆನ್ನಿಸ್ ಕೃಷ್ಣ ಅವರಿಂದ ಹಾಸ್ಯ ಕಾರ್ಯಕ್ರಮ, ನೂಪುರ ನೃತ್ಯ ಅಕಾಡೆಮಿ ಉಷಾ ಪ್ರಭಾಕರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ. ಸಂಜೆ 4

– ಬಸವರಾಜ್‌ ಎಸ್‌.ಪ್ರಭಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry