ಅತ್ಯಾಚಾರ, ದೌರ್ಜನ್ಯ ನಿಯಂತ್ರಿಸಲು ಒತ್ತಾಯ

7
ತಂಜಿಮುಲ್ ಮುಸ್ಲಿಮೀನ್‌ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ

ಅತ್ಯಾಚಾರ, ದೌರ್ಜನ್ಯ ನಿಯಂತ್ರಿಸಲು ಒತ್ತಾಯ

Published:
Updated:
ಅತ್ಯಾಚಾರ, ದೌರ್ಜನ್ಯ ನಿಯಂತ್ರಿಸಲು ಒತ್ತಾಯ

ಲಿಂಗಸುಗೂರು: ‘ಜಮ್ಮುಕಾಶ್ಮೀರ, ಉತ್ತರ ಪ್ರದೇಶ, ಗುಜರಾತ್, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ತೋರಿವೆ’ ಎಂದು ಆರೋಪಿಸಿ ತಂಜಿಮುಲ್‌ ಮುಸ್ಲಿಮೀನ್‌ ಸಮಿತಿ ನೇತೃತ್ವದಲ್ಲಿ ಮುಸ್ಲಿಮರು ಗುರುವಾರ ಪ್ರತಿಭಟನೆ ನಡೆಸಿದರು.

ಶುಕ್ರವಾರ ಜಾಮೀಯಾ ಮಸೀದಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಗಡಿಯಾರ ವೃತ್ತ, ಪೊಲೀಸ್‌ ಠಾಣೆ, ಶಾಸಕರ ಶಾಲೆ ಮಾರ್ಗವಾಗಿ ಹೊಸ ಬಸ್‌ ನಿಲ್ದಾಣ ತಲುಪಿತು. ಬಸ್‌ ನಿಲ್ದಾಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಟೈರ್‌ಗಳಿಗೆ ಬೆಂಕಿ ಹಚ್ಚಿದ ಯುವಕರು ಧಿಕ್ಕಾರದ ಜೊತೆಗೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು. ತಹಶೀಲ್ದಾರ್‌ ಎಂ.ಎ.ಎಸ್‌ ಭಾಗವಾನರಿಗೆ ಮನವಿ ಸಲ್ಲಿಸಿದರು.

‘ಮಹಿಳೆಯರ ಮೇಲೆ ನಡೆಯುತ್ತಿರುವ ಪೈಶಾಚಿಕ ಕೃತ್ಯಗಳಿಗೆ ಆಯಾ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದೆ ಹೋಗಿರುವುದು ನೋವಿನ ಸಂಗತಿ. ಅತ್ಯಾಚಾರ, ಕೊಲೆ ಆರೋಪಿಗಳಿಗೆ ಕ್ರಮ ಕೈಗೊಂಡಿದ್ದರೆ ಇಂತಹ ದುಸ್ಥಿತಿ ಬರುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಸರ್ಕಾರಗಳು ಕಾನೂನು ಕ್ರಮಕ್ಕೆ ಮುಂದಾಗದಿದ್ದಲ್ಲಿ, ದೇಶದಾದ್ಯಂತ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಮೌಲ್ವಿ ಅಬುಸಯೀದ್‌ ಮಾತನಾಡಿ, ‘ದೇಶದೆಲ್ಲೆಡೆ ನಡೆಯುತ್ತಿರುವ ಅತ್ಯಚಾರ, ಕೊಲೆ ಪ್ರಕರಣಗಳಲ್ಲಿ ಪೊಲೀಸರು ಮತ್ತು ನ್ಯಾಯಾಲಯಗಳು ತುರ್ತು ವಿಚಾರಣೆ ನಡೆಸಿ ಕಠಿಣ ಶಿಕ್ಷೆ ವಿಧಿಸಬೇಕು.ಆಗ ಇಂತಹ ಕೃತ್ಯಗಳನ್ನು ಮಾಡುವ ವಿಕೃತರಿಗೆ ಭಯ ಹುಟ್ಟುತ್ತದೆ. ಎಂದು ತಿಳಿಸಿದರು. ಒತ್ತಾಯಿಸಿದರು.

ಮುಖಂಡ ಅಮ್ಜದ್ ಹಟ್ಟಿ, ಪತ್ರಕರ್ತ ಬಸವರಾಜ ನಂದಿಕೋಲಮಠ ಮಾತನಾಡಿದರು. ಲಾಲ ಅಹ್ಮದಸಾಬ, ಖಾದರಪಾಷಾ, ಭೂಪನಗೌಡ, ಪ್ರಭು ಲಿಂಗ ಮೇಗಳಮನಿ, ಅಸ್ಕಿಹಾಳ ನಾಗರಾಜ, ಸೈಯದ್‌ ಯುನೂಸ್‌, ಖಾಜಾ ಹುಸೇನ ಫೂಲವಾಲೆ, ಡಾ. ಜಾವೀದ, ರಾಜಾ ಹುಸೇನ ಪೇಸ್‌ ಇಮಾಮ್‌, ಅಹ್ಮದ, ಫಯಾಜ್‌ಅಹ್ಮದ, ಬಾಬಾ ಖಾಜಿ, ರೌಫ್‌ ಗ್ಯಾರಂಟಿ, ದಾದಾ ಟೇಲರ್‌, ಪಾಷ ಹಟ್ಟಿ, ಅಕ್ತರ್‌ ಪಟೇಲ್‌, ಅಮೀರ ಬೇಗ ದಲಿತ ಸಂಘರ್ಷ ಸಮಿತಿ, ಅಂಗವಿಕಲರ ಸಂಘ, ಸಿಐಟಿಯು ಮುಖಂಡರು ಇದ್ದರು.

ಮಹಿಳೆಯರಿಗೆ ಹಿಂಸೆ: ಖಂಡನೆ

ಮಸ್ಕಿ: ‘ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಸರ್ಕಾರಗಳ ನಿರ್ಲಕ್ಷ್ಯತನದಿಂದ ದೇಶದಲ್ಲಿ ದಿನದಿಂದ ದಿನಕ್ಕೆ ಬಾಲಕಿಯರ ಹಾಗೂ ಮಹಿಳೆಯರ ಮೇಲೆ ಪೈಶಾಚಿಕ ಕೃತ್ಯಗಳು ಹೆಚ್ಚುತ್ತಿವೆ’  ಎಂದು ಜಮೀಅತ್ ಉಲಮಾ-ಎ-ಹಿಂದ್ನ ತಾಲ್ಲೂಕು ಘಟಕದ ಅಧ್ಯಕ್ಷ ಮೌಲಾನಾ ಸಮೀರ್ ಆರೋಪಿಸಿದರು.

ಜಮ್ಮು ಕಾಶ್ಮೀರದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದನ್ನು ಖಂಡಿಸಿ ಪಟ್ಟಣದ ಹಳೆಯ ಬಸ್‌ ನಿಲ್ದಾಣದ ಬಳಿ ಮುಸ್ಲಿಮರು ಕೈಗೊಂಡ ಪ್ರತಿಭಟನೆಯ ನೇತೃತ್ವ ವಹಿಸಿ 'ಶೋಷಿತರು, ದಲಿತರ ಹಾಗೂ ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ಕೊಲೆಗಳನ್ನು ಮಾಡುವ ಹೇಯ ಕೃತ್ಯಗಳು ಜರುಗುತ್ತಿವೆ. ದೇವಸ್ಥಾನದಂತಹ ಪವಿತ್ರ ಸ್ಥಳದಲ್ಲಿ ಅತ್ಯಾಚಾರ, ಕೊಲೆ ನಡೆದಿರುವುದು ಹೇಯ ಕೃತ್ಯ’ ಎಂದರು.

ಹೋರಾಟಗಾರ ನೀಲಕಂಠಪ್ಪ ಭಜಂತ್ರಿ ಮಾತನಾಡಿ 'ದೇಶದಲ್ಲಿ ಇತ್ತಿಚೆಗೆ ಬಾಲಕಿಯರ ಮೇಲೆ ಅತ್ಯಾಚಾರ ಹಾಗೂ ಕೊಲೆಗಳಂತಹ ಭೀಕರ ಕೃತ್ಯಗಳು ನಡೆಯುತ್ತಿವೆ. ಅಂತಹ ಕೃತ್ಯಗಳಲ್ಲಿ ತೊಡಗಿಕೊಂಡವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದರು.

ಅಬ್ದುಲ್ ಗನಿ, ಪ್ರಸನ್ನ ಪಾಟೀಲ, ಮಸೂದಪಾಷ ಮಾತನಾಡಿದರು. ನಂತರ ಮನವಿ ಪತ್ರವನ್ನು ಉಪ ತಹಸೀಲ್ದಾರ ಪ್ರಕಾಶ ಬುಳ್ಳಾ ಅವರಿಗೆ ಸಲ್ಲಿಸಿದರು.  ಇದಕ್ಕೂ ಮುನ್ನ ಪಟ್ಟಣದ ಕನಕ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಬಿಲಾಲ್ ಮಸೀದಿ, ತೇರ್ ಬಜಾರ್, ದೈವದಕಟ್ಟೆ, ಮೇನ್ ಬಜಾರ್, ಡಾ. ಖಲೀಲ್ ಅಹ್ಮದ್ ವೃತ್ತ, ಅಗಸಿ, ಅಶೋಕ ವೃತ್ತದ ಮೂಲಕ ಸಾಗಿ ಹಳೆ ಬಸ್ ನಿಲ್ದಾಣದ ಹತ್ತಿರದ ಡಾ. ಅಂಬೇಡ್ಕರ್ ಪ್ರತಿಮೆ ಸಾಗಿ ಬಂತು. ಮುಖಂಡರಾದ ಅಬ್ದುಲ್ ಅಜೀಜ್, ಇಕ್ಬಾಲ್ಸಾಬ್, ಅಬ್ದುಲ್ ರಜಾಕ್, ಮೊಹ್ಮದ್ಹುಸೇನ್ ಶೇಡ್ಮಿ, ಶೆಬ್ಬಿರ್ ಚೌದ್ರಿ, ಅಜ್ಮಿರ್, ಹುಸೇನ್ ಪಟೇಲ್, ನಜೀರ್, ಫಕೀರಸಾಬ್, ನಬೀಸಾಬ್ ಮೆಕ್ಯಾನಿಕ್  ಇದ್ದರು.

**

ಹಿಂದು–ಮುಸ್ಲಿಂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ, ಕೊಲೆ ಪ್ರಕರಣಗಳಿಂದ ದೇಶದ ಘನತೆಗೆ ಕುತ್ತು ಬಂದಿದೆ – ಲಾಲಅಹ್ಮದಸಾಬ, ಅಧ್ಯಕ್ಷರು, ತಂಜಿಮುಲ್‌ ಮುಸ್ಲಿಮೀನ್‌ ಸಮಿತಿ.

**

ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸರ್ಕಾರಗಳೇ ಅವರ ರಕ್ಷಣೆಯ ಜವಬ್ದಾರಿ ಹೊರಬೇಕು; ಕಾನೂನು ಮತ್ತು ಸುವ್ಯವಸ್ಥೆ ನೀಡಬೇಕು. ಎಲ್ಲರಿಗೂ ರಕ್ಷಣೆ ನೀಡಬೇಕು – ಅಬ್ದುಲ್ ಗನಿ, ಮುಖಂಡ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry