ಜ್ಯೋತಿಷ ನೆಪದಲ್ಲಿ ಅತ್ಯಾಚಾರ

7
ಸುದ್ದಿ ವಾಹಿನಿ ಕಾರ್ಯಕ್ರಮದಿಂದ ಪರಿಚಿತವಾದ ಮಹಿಳೆಗೆ ವಂಚನೆ

ಜ್ಯೋತಿಷ ನೆಪದಲ್ಲಿ ಅತ್ಯಾಚಾರ

Published:
Updated:
ಜ್ಯೋತಿಷ ನೆಪದಲ್ಲಿ ಅತ್ಯಾಚಾರ

ಬೆಂಗಳೂರು: ಜ್ಯೋತಿಷ ಕಲಿಸಿಕೊಡುವ ನೆಪದಲ್ಲಿ 28 ವರ್ಷದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿ ಜ್ಯೋತಿಷಿ ದಿನೇಶ್ ಗುರೂಜಿ (43) ಅವರನ್ನು ಗಂಗಮ್ಮನಗುಡಿ ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತೆ ನೀಡಿದ್ದ ದೂರಿನನ್ವಯ ಅತ್ಯಾಚಾರ ಹಾಗೂ ವಂಚನೆ ಆರೋಪದಡಿ ಜ್ಯೋತಿಷಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ. ಅವರನ್ನು ಶುಕ್ರವಾರ ರಾತ್ರಿಯೇ ಬಂಧಿಸಿದ್ದೇವೆ. ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದ್ದು, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರನ್ನು ಕೋರಲಿದ್ದೇವೆ ಎಂದು ಪೊಲೀಸರು ತಿಳಿಸಿದರು.

ಗಂಗಮ್ಮನಗುಡಿ ಬಳಿಯ ಅಬ್ಬಿಗೇರಿ ನಿವಾಸಿಯಾದ ದಿನೇಶ್, ನಗರದ ಕೆಲವೆಡೆ ಜ್ಯೋತಿಷ ತರಬೇತಿ ಕೇಂದ್ರಗಳನ್ನು ನಡೆಸುತ್ತಿದ್ದಾರೆ. ಜ್ಯೋತಿಷ್ಯ ಸಂಬಂಧ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ನಿತ್ಯವೂ ನೇರಪ್ರಸಾರ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು.

ಜ್ಯೋತಿಷದಲ್ಲಿ ನಂಬಿಕೆ ಇಟ್ಟುಕೊಂಡಿರುವ ಸಂತ್ರಸ್ತೆಯು 2017ರ ಏಪ್ರಿಲ್‌ನಲ್ಲಿ ನೇರಪ್ರಸಾರಕಾರ್ಯಕ್ರಮಕ್ಕೆ ಕರೆ ಮಾಡಿದ್ದರು. ತಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದರು. ಕೆಲ ನಿಮಿಷ ಮಹಿಳೆಯೊಂದಿಗೆ ಮಾತನಾಡಿದ್ದ ಆರೋಪಿ, ಆ ನಂತರ ಕರೆ ಕಡಿತಗೊಳಿಸಿದ್ದರು. ನಂತರ ಮಹಿಳೆ, ಸುದ್ದಿ ವಾಹಿನಿ ಸಿಬ್ಬಂದಿಯಿಂದ ಜ್ಯೋತಿಷಿ ಮೊಬೈಲ್ ನಂಬರ್ ಪಡೆದುಕೊಂಡು ಸಂಪರ್ಕಿಸಿದ್ದರು.

‘ನಾನು ಜ್ಯೋತಿಷ ಕಲಿಯಬೇಕು’ ಎಂದು ಮಹಿಳೆ ಹೇಳಿಕೊಂಡಿದ್ದರು. ಆಗ ಆರೋಪಿ, ‘ನೀನು ಮೊದಲು ನನ್ನ ಶಿಷ್ಯೆ ಆಗು. ಆ ಬಳಿಕ ನಿನಗೆ ಶಾಸ್ತ್ರ ಹೇಳಿಕೊಡುತ್ತೇನೆ’ ಎಂದಿದ್ದರು. ಅದಕ್ಕೆ ಒಪ್ಪಿದ್ದ ಸಂತ್ರಸ್ತೆ, ಶಿಷ್ಯೆಯಾಗಿ ಜ್ಯೋತಿಷಿಯ ಜತೆಗೆ ಓಡಾಡುತ್ತಿದ್ದರು. ಅವರು ಹೋಗುತ್ತಿದ್ದ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಿದ್ದರು ಎಂದು ಪೊಲೀಸರು ಹೇಳಿದರು.

ಪತ್ನಿ ಇಲ್ಲದ ವೇಳೆ ಮನೆಗೆ ಕರೆಸಿ ಕೃತ್ಯ: ‘ಆರೋಪಿಗೆ ಮದುವೆಯಾಗಿದ್ದು, ಅಬ್ಬಿಗೇರಿಯಲ್ಲಿರುವ ಮನೆಯಲ್ಲಿ ದಂಪತಿ ವಾಸವಿದ್ದಾರೆ. 2017ರ ಜೂನ್‌ನಲ್ಲಿ ಪತ್ನಿಯು ಕೆಲಸ ನಿಮಿತ್ತ ಬೇರೆ ಊರಿಗೆ ಹೋಗಿದ್ದರು. ಅದೇ ವೇಳೆ ಮಹಿಳೆಯನ್ನು ಮನೆಗೆ ಕರೆಸಿದ್ದ ಆರೋಪಿ, ಅತ್ಯಾಚಾರ ಎಸಗಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ. ಆ ನಂತರವೂ ಆರೋಪಿ ಮಹಿಳೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಯ ಮನೆಗೆ ಹೋಗಿ ಪರಿಶೀಲನೆ ಮಾಡಿದ್ದೇವೆ. ಅಕ್ಕ– ಪಕ್ಕದ ಮನೆಯವರಿಂದಲೂ ಮಾಹಿತಿ ಪಡೆದುಕೊಂಡಿದ್ದೇವೆ. ಜತೆಗೆ, ಆರೋಪಿಯು ನಡೆಸುತ್ತಿದ್ದ ಜ್ಯೋತಿಷ ತರಬೇತಿ ಕೇಂದ್ರಗಳಿಗೂ ಭೇಟಿ ನೀಡುತ್ತಿದ್ದೇವೆ’ ಎಂದರು.

ಹಲವು ಮಹಿಳೆಯರಿಗೆ ವಂಚನೆ: ‘ಆರೋಪಿಯು ಹಲವು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದಾನೆ. ಈ ಬಗ್ಗೆ ಸಂತ್ರಸ್ತೆಯು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

‘ವಂಚನೆಗೀಡಾಗಿದ್ದ ಮಹಿಳೆಯರು, ಜ್ಯೋತಿಷಿ ವಿರುದ್ಧ ದೂರು ನೀಡಲು ಮುಂದಾಗಿದ್ದರು. ಅದಕ್ಕೆ ಹೆದರಿದ್ದ ಆರೋಪಿ, ಸಂತ್ರಸ್ತೆಯಿಂದ ₹50 ಲಕ್ಷ ಪಡೆದುಕೊಂಡು ಆ ಮಹಿಳೆಯರಿಗೆ ಪರಿಹಾರವಾಗಿ ಕೊಟ್ಟಿದ್ದಾರೆ. ಅದನ್ನು ಪಡೆದಿದ್ದ ಮಹಿಳೆಯರೆಲ್ಲ ಸದ್ಯನಾಪತ್ತೆಯಾಗಿದ್ದಾರೆ. ಅವರನ್ನುಹುಡುಕುತ್ತಿದ್ದೇವೆ. ಸಿಕ್ಕ ಬಳಿಕ ಅವರ ಹೇಳಿಕೆ ಪಡೆದುಕೊಂಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಿದ್ದೇವೆ’ ಎಂದು ಹೇಳಿದರು.

‘₹50 ಲಕ್ಷ ವಾಪಸ್‌ ಕೊಡುವಂತೆ ಸಂತ್ರಸ್ತೆಯು ಜ್ಯೋತಿಷಿಯನ್ನು ಕೇಳಿದ್ದರು. ಸಂತ್ರಸ್ತೆಯನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಆರೋಪಿ, ಜೀವ ಬೆದರಿಕೆವೊಡ್ಡಿದ್ದಾರೆ’ ಎಂದರು.

ಕಂಟಕವೆಂದು ಪೊಲೀಸರನ್ನೇ ಹೆದರಿಸಿದ!

ದೂರು ದಾಖಲಾಗುತ್ತಿದ್ದಂತೆ ಜ್ಯೋತಿಷಿ ದಿನೇಶ್ ಗುರೂಜಿ ಅವರನ್ನು ಬಂಧಿಸಲು ಪೊಲೀಸರ ತಂಡ, ಅವರ ಮನೆಗೆ ಹೋಗಿತ್ತು. ‘ನಿನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಬಂಧಿಸುತ್ತಿದ್ದೇವೆ’ ಎಂದು ಪೊಲೀಸರು ಹೇಳಿದ್ದರು. ಆಗ ಆರೋಪಿ, ‘ನೀವು ದಾರಿ ತಪ್ಪಿ ಬಂದಿದ್ದೀರಿ. ನನ್ನನ್ನು ಬಂಧಿಸಿದರೆ, ನಿಮಗೆ ಕಂಟಕ ನಿಶ್ಚಿತ. ನಿಮ್ಮ ಕೆಲಸವೇ ಹೋಗುತ್ತದೆ. ಕುಟುಂಬದಲ್ಲಿ ಅಶಾಂತಿ ನಿರ್ಮಾಣವಾಗುತ್ತದೆ’ ಎಂದು ಹೆದರಿಸಿದ್ದ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry