ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌಷ್ಟಿಕ ಆಹಾರ ಲಭಿಸಲಿ

Last Updated 3 ಮೇ 2018, 19:40 IST
ಅಕ್ಷರ ಗಾತ್ರ

ನಮ್ಮಲ್ಲಿ ಬಹಳಷ್ಟು ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದರೂ ಅಂಗನವಾಡಿಗಳಲ್ಲಿ ಮಕ್ಕಳಿಗೆ ಯಾವ ಆಹಾರ ಉಣಿಸಬೇಕು ಎಂಬ ವಿಷಯದ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಾಧ್ಯವಾಗಿಲ್ಲ ಎಂಬುದು ದುರಂತ.

ಶಾಲೆ ಮತ್ತು ಅಂಗನವಾಡಿಗಳಲ್ಲಿ ಮಕ್ಕಳಿಗೆ ಎಷ್ಟು ಆಹಾರ ನೀಡಲಾಗುತ್ತದೆ ಎನ್ನುವುದಕ್ಕಿಂತ, ಆಹಾರದ ಗುಣಮಟ್ಟ ಹೇಗಿದೆ ಮತ್ತು ಅದರಲ್ಲಿ ಎಷ್ಟು ಪೌಷ್ಟಿಕಾಂಶಗಳಿವೆ ಎನ್ನುವುದು ಮುಖ್ಯ. ಮಕ್ಕಳಿಗೆ ಅಲ್ಲೇ ಬೇಯಿಸಿದ ಆಹಾರ ನೀಡಬೇಕೇ ಅಥವಾ ಮೊದಲೇ ತಯಾರಿಸಿಟ್ಟ ಆಹಾರವನ್ನು ಪ್ಯಾಕೆಟ್‍ಗಳ ರೂಪದಲ್ಲಿ ಪೂರೈಸಬೇಕೇ ಎನ್ನುವ ಬಗ್ಗೆ ಒಂದು ನಿರ್ಧಾರಕ್ಕೆ ಬರಲು ಇಲಾಖೆಗೆ ಇನ್ನೂ ಸಾಧ್ಯವಾಗಿಲ್ಲ.

‘ಚಿಕ್ಕ ಮಕ್ಕಳಿಗೆ ಸಮೃದ್ಧ, ಶುದ್ಧ ಮತ್ತು ತಾಜಾ ಆಹಾರ ನೀಡಬೇಕಲ್ಲದೆ, ಹಾಲುಣಿಸುವ ತಾಯಂದಿರ ಮನೆಗಳಿಗೆ ಹಾಲು, ಗೋಧಿ ಮತ್ತು ಬೇಳೆಕಾಳುಗಳಿಂದ ಕೂಡಿದ ಆಹಾರವನ್ನು ತಲುಪಿಸಬೇಕು’ ಎಂದು ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಸಲಹೆ ಮಾಡಿದ್ದಾರೆ. ಆದರೆ ಅವರದೇ ಇಲಾಖೆಗೆ ಸೇರಿದ ಅಧಿಕಾರಿಗಳು ಮತ್ತು ಕೆಲವು ರಾಜಕಾರಣಿಗಳು ಈ ಸಲಹೆಯನ್ನು ತಿರಸ್ಕರಿಸಿದ್ದಾರೆ. ಮೆಕ್ಕೆಜೋಳದಿಂದ ಮಾಡಿದ ಬಿಸ್ಕತ್ ಮತ್ತು ಬ್ರೆಡ್ ಉತ್ಪಾದಿಸುವ ದೊಡ್ಡ ಮಟ್ಟದ ಗುತ್ತಿಗೆದಾರರು ತಮ್ಮ ಉತ್ಪನ್ನಗಳನ್ನು ಸರ್ಕಾರದ ಯೋಜನೆಯ ಮೂಲಕ ಮಾರಾಟ ಮಾಡಲು ಹವಣಿಸುತ್ತಿದ್ದಾರೆ. ಕೆಲವು ರಾಜಕಾರಣಿಗಳು ಸಹ ಇವರೊಂದಿಗೆ ಶಾಮೀಲಾಗಿರುವಂತಿದೆ.

ಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಅಪೌಷ್ಟಿಕತೆಯಿಂದ ಮಕ್ಕಳು ಸಾವಿಗೀಡಾದಾಗ ಅಲ್ಲಿಯ ಸರ್ಕಾರವು ಮಕ್ಕಳಿಗೆ ಹಾಲು ಮತ್ತು ಬೇಳೆಕಾಳುಗಳ ಪುಡಿಯಿಂದ ಕೂಡಿದ ತಾಜಾ ಪೌಷ್ಟಿಕ ಆಹಾರ ನೀಡಲು ಮುಂದಾಗಿತ್ತು. ಆದರೆ ಸಿದ್ಧ ಆಹಾರಗಳನ್ನು ತಯಾರಿಸಿ ಸರ್ಕಾರಕ್ಕೆ ಮಾರುವ ಬಲಾಢ್ಯ ಗುತ್ತಿಗೆದಾರರು ಸರ್ಕಾರದ ಈ ಯೋಜನೆಗಳನ್ನು ಯಶಸ್ವಿಯಾಗದಂತೆ ತಡೆದರು. ಇಂಥವರನ್ನು ಎದುರುಹಾಕಿಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗದೇ ಇರುವುದು ವಿಪರ್ಯಾಸವೇ ಸರಿ.

ಮಕ್ಕಳ ಆರೋಗ್ಯದ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಗುತ್ತಿಗೆದಾರರಿಗೆ ತಲೆಬಾಗದೇ ಮಕ್ಕಳಿಗೆ ಶುದ್ಧ ಪೌಷ್ಟಿಕ ಆಹಾರ ಒದಗಿಸುವ ಯೋಜನೆಯನ್ನು ಸರ್ಕಾರ ಇನ್ನಾದರೂ ರೂಪಿಸಬೇಕು.

–ಪಂಪಾಪತಿ ಹಿರೇಮಠ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT