ಕೋಮುವಾದ–ಅಭಿವೃದ್ಧಿ ನಡುವಿನ ಹೋರಾಟ

7
ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿಕೆ: ಬೀದರ್‌ನಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌

ಕೋಮುವಾದ–ಅಭಿವೃದ್ಧಿ ನಡುವಿನ ಹೋರಾಟ

Published:
Updated:

ಬೀದರ್‌: ‘ರಾಜ್ಯದಲ್ಲಿ ನಡೆಯುತ್ತಿರುವುದು ರಾಹುಲ್‌ ಹಾಗೂ ಮೋದಿ ನಡುವಿನ ಚುನಾವಣೆ ಅಲ್ಲ, ಆರ್‌ಎಸ್‌ಎಸ್‌ ವಿಚಾರಧಾರೆ, ಕೋಮುವಾದ ಹಾಗೂ ಅಭಿವೃದ್ಧಿ ನಡುವಿನ ಹೋರಾಟವಾಗಿದೆ. ರಾಜ್ಯದ ಜನತೆಯನ್ನು ಒಂದುಗೂಡಿಸುವ ಚುನಾವಣೆ ಇದಾಗಿದೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದರು.

ನಗರದ ಕರ್ನಾಟಕ ಫಾರ್ಮಸಿ ಕಾಲೇಜಿನ ಮೈದಾನದಲ್ಲಿ ಗುರುವಾರ ಕಾಂಗ್ರೆಸ್‌ ಅಭ್ಯರ್ಥಿ ರಹೀಂ ಖಾನ್‌ ಪರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿ ಕರ್ನಾಟಕದ ಮೇಲೆ ನಾಗಪುರ ಮೂಲದ ವಿಚಾರಧಾರೆಗಳನ್ನು ಒತ್ತಾಯ ಪೂರ್ವಕವಾಗಿ ಹೇರಲು ಪ್ರಯತ್ನಿಸುತ್ತಿದೆ. ನರೇಂದ್ರ ಮೋದಿ ಅವರು ಭ್ರಷ್ಟರನ್ನು ತಮ್ಮೊಂದಿಗೆ ಇಟ್ಟಿಕೊಂಡು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ದೇಶದಲ್ಲಿ ಮಹಿಳೆಯರು ಸುರಕ್ಷಿತ ವಾಗಿಲ್ಲ ಎಂದು ವಿದೇಶದಲ್ಲಿ ಪ್ರಧಾನಿಗೆ ಪ್ರಶ್ನಿಸಲಾಗುತ್ತಿದೆ. ಹೀಗಾಗಿ ಅಂತರ ರಾಷ್ಟೀಯ ಮಟ್ಟದಲ್ಲಿ ಭಾರತೀಯರು ಮುಜುಗರ ಪಡುವಂತಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಬಿಜೆಪಿಯವರು ದೇಶದಲ್ಲಿ ಕೋಮು ಭಾವನೆ ಕೆರಳಿಸಿ ಏನೋ ಸಾಧನೆ ಮಾಡುತ್ತಿ‌ದ್ದೇವೆ ಎಂದು ಭಾವಿಸುತ್ತಿದ್ದಾರೆ. ಇಂತಹವರ ಬಗ್ಗೆ ಎಚ್ಚರ ವಹಿಸಬೇಕು. ಸತ್ಯದ ಪರವಾಗಿ ಹೋರಾಟ ನಡೆಸುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು’ ಎಂದರು.

ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಬೀದರ್‌ ಶಾಸಕ ರಹೀಂ ಖಾನ್, ಬೀದರ್‌ ದಕ್ಷಿಣ ಶಾಸಕ ಅಶೋಕ ಖೇಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಇದ್ದರು.

ಔರಾದ್ ವರದಿ: ಸಮಾವೇಶ ಪಕ್ಕದಲ್ಲೇ ಎರಡು ಹೆಲಿಕಾಪ್ಟರ್‌ ಇಳಿಯಲು ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಗಿತ್ತು.ಒಂದರಲ್ಲಿ ರಾಹುಲ್ ಗಾಂಧಿ, ಬಿ.ಕೆ. ಹರಿಪ್ರಸಾದ, ಈಶ್ವರ ಖಂಡ್ರೆ ಆಗಮಿಸಿದರು. ಮತ್ತೊಂದು ಹೆಲಿಕಾಪ್ಟರ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ ಇದ್ದರು.

ವೇದಿಕೆಯಲ್ಲಿ ಕಾಣಿಸಿಕೊಳ್ಳದ ಅಭ್ಯರ್ಥಿಗಳು

ಬೀದರ್‌: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಪ್ರಚಾರ ಸಭೆ ನಡೆಸಿದರೂ ಅಭ್ಯರ್ಥಿಗಳು ವೇದಿಕೆಗಳಲ್ಲಿ ಕಾಣಿಸಿಕೊಳ್ಳಲಿಲ್ಲ.

ಔರಾದ್‌ನಲ್ಲಿ ವಿಜಯಕುಮಾರ ಕೌಡಾಳೆ ಹೆಲಿಪ್ಯಾಡ್‌ನಲ್ಲಿ ರಾಹುಲ್‌ ಗಾಂಧಿ ಅವರನ್ನು ಸ್ವಾಗತಿಸಿ ಕ್ಷೇತ್ರಕ್ಕೆ ಬರಮಾಡಿಕೊಂಡರೂ ಪ್ರಚಾರಸಭೆಯ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಭಾಲ್ಕಿಯಲ್ಲಿ ಈಶ್ವರ ಖಂಡ್ರೆ, ಹುಮನಾಬಾದ್‌ನಲ್ಲಿ ರಾಜಶೇಖರ ಪಾಟೀಲ ಅವರೂ ವೇದಿಕೆಯಲ್ಲಿ ಕಾಣಲಿಲ್ಲ.

ಚುನಾವಣಾ ಅಧಿಕಾರಿಗಳ ತಂಡ ಕಾರ್ಯಕ್ರಮದ ಮೇಲೆ ನಿಗಾ ಇಟ್ಟಿದ್ದ ಕಾರಣ ಅಭ್ಯರ್ಥಿಗಳ ಚುನಾವಣಾ ವೆಚ್ಚದಲ್ಲಿ ಸಮಾರಂಭಕ್ಕೆ ಖರ್ಚಾದ ಮೊತ್ತವನ್ನು ಸೇರಿಸಬಹುದು ಎನ್ನುವ ಭಯದಿಂದ ಅಭ್ಯರ್ಥಿಗಳು ವೇದಿಕೆಯಿಂದ ದೂರ ಉಳಿದಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ತಿಳಿಸಿದರು

.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry