ಹಾವೇರಿಯಲ್ಲಿ ಪ್ರಚಾರ ಬಿರುಸು

7

ಹಾವೇರಿಯಲ್ಲಿ ಪ್ರಚಾರ ಬಿರುಸು

Published:
Updated:

ಹಾವೇರಿ: ಕ್ಷೇತ್ರದಲ್ಲಿ ಶಾಂತಿ, ನೆಮ್ಮದಿ, ಸಾಮರಸ್ಯದ ಬದುಕಿಗಾಗಿ ಬಿಜೆಪಿ ಮತ್ತು ಇತರ ಪಕ್ಷದಲ್ಲಿರುವ ಪ್ರಮುಖ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ತಟಸ್ಥ ಮತದಾರರು ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ ಹೇಳಿದರು.

ತಾಲ್ಲೂಕಿನ ನದಿನೀರಲಗಿ, ಕಾಟೇನಹಳ್ಳಿ, ಹನುಮನಹಳ್ಳಿ, ಚಿಕ್ಕಮರಳಿಹಳ್ಳಿ, ಹೊಸಮೇಲ್ಮುರಿ, ಹಳೇಮೇಲ್ಮುರಿ, ಹಂದಿಗನೂರ ಹಾಗೂ ಕೊರಡೂರ ಗ್ರಾಮಗಳಲ್ಲಿ ಈಚೆಗೆ ಪ್ರಚಾರ ನಡೆಸಿದ ಅವರು, ಮಾತನಾಡಿದರು.

ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಶಾಂತಿ– ನೆಮ್ಮದಿ ಕಾಪಾಡಿಕೊಂಡು ಬಂದಿದ್ದೇನೆ. ಅದಕ್ಕೂ ಪೂರ್ವದಲ್ಲಿ ಕ್ಷೇತ್ರದಲ್ಲಿ ದರ್ಪ –ದಬ್ಬಾಳಿಕೆ ಗದ್ದಲದಿಂದ ಬೇಸತ್ತ ಜನತೆ ಮತ್ತೆ ನನ್ನನ್ನು ಬೆಂಬಲಿಸುವ ಭರವಸೆ ನೀಡಿದ್ದಾರೆ ಎಂದರು.

ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವಾಸ ಕಳೆದುಕೊಂಡಿದ್ದಾರೆ. ಅಲ್ಲದೇ, ಬಿಜೆಪಿ ಮುಖಂಡರು ಅಧಿಕಾರ ಇಲ್ಲದಾಗ ಒಂದು ರೀತಿ, ಅಧಿಕಾರ ಬಂದಾಗ ಇನ್ನೊಂದು ರೀತಿ ವರ್ತಿಸುವ ಧೋರಣೆಯಿಂದ ಜನತೆ ಬೇಸತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಬೆಂಬಲಿಸಿದ್ದಾರೆ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಮುಖಂಡ ಈರಪ್ಪ ಲಮಾಣಿ, ಎಸ್.ಎಫ್.ಎನ್. ಗಾಜಿಗೌಡ್ರ, ಎಂ.ಎಂ.ಹಿರೇಮಠ, ಮಾದೇಗೌಡ ಗಾಜಿಗೌಡ್ರ, ಎಚ್.ಎಫ್.ನೆಗಳೂರ ಇದ್ದರು.

ಸಂಜಯ ಡಾಂಗೆ ಮತಯಾಚನೆ

ಹಾವೇರಿ: ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಡಾ.ಸಂಜಯ ಡಾಂಗೆ ಇಲ್ಲಿನ ಅಶ್ವಿನಿ ನಗರ, ಹಾನಗಲ್ ರಸ್ತೆ ಆಸುಪಾಸು, ತಾಜ್ ನಗರ, ಕಲ್ಲು ಮಂಟಪ ರಸ್ತೆಯಲ್ಲಿನ ಮನೆಗಳಿಗೆ ಗುರುವಾರ ತೆರಳಿ ಮತಯಾಚಿಸಿದರು.

ಅಲ್ಲಿ ಮಾತನಾಡಿದ ಅವರು, ಜಿಲ್ಲಾ ಕೇಂದ್ರ ಬೆಳೆಯುತ್ತಲೇ ಕೊಳೆಯುತ್ತಿದೆ. ಹೆಸರಿಗಷ್ಟೆ ಜಿಲ್ಲಾ ಕೇಂದ್ರವಾಗಿದ್ದು, ಯಾವುದೇ ಬೃಹತ್‌ ಕೈಗಾರಿಗೆ, ಉದ್ಯಮ ಸ್ಥಾಪನೆಯಾಗಿಲ್ಲ. ಅಲ್ಲದೇ, ಕುಡಿಯುವ ನೀರಿನ ಸಮಸ್ಯೆ ಮಾತ್ರ ಬಹುದೊಡ್ಡದಾಗಿದೆ ಎಂದರು.

ಪಕ್ಷದ ನಗರ ಘಟಕದ ಅಧ್ಯಕ್ಷ ವೀರಣ್ಣ ಪಟ್ಟಣಶೆಟ್ಟಿ, ಜಿಲ್ಲಾ ವಕ್ತಾರ ಮಹಾಂತೇಶ ಬೆವಿನಹಿಂಡಿ, ಸುನೀಲ ದಂಡೆಮ್ಮನವರ, ಜಯಶ್ರಿ ಕರಿಗೌಡ್ರ, ಅಮೀರಜಾನ್ ಬೇಫಾರಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry