ಶುಕ್ರವಾರ, ಫೆಬ್ರವರಿ 26, 2021
29 °C

ಆಟದ ವಸ್ತು ಆಟದ ವಿಷಯವಲ್ಲ!

ಜೆಸ್ಸಿ. ಪಿ.ವಿ Updated:

ಅಕ್ಷರ ಗಾತ್ರ : | |

ಆಟದ ವಸ್ತು ಆಟದ ವಿಷಯವಲ್ಲ!

ಮನೆಯಲ್ಲಿ ಸಣ್ಣ ಮಕ್ಕಳಿದ್ದರೆ ಅವರಿಗೆ ಆಡಲು ವಿವಿಧ ಬಣ್ಣದ ವೈವಿಧ್ಯಮಯ ಆಟಿಕೆಗಳನ್ನು ಹೆತ್ತವರು ಕೊಡಿಸುತ್ತಿರುತ್ತಾರೆ; ನೆಂಟರಿಷ್ಟರು  ಕೂಡ ಉಡುಗೊರೆಯಾಗಿ ನೀಡುತ್ತಿರುತ್ತಾರೆ.

ಮಕ್ಕಳಿಗೆ ಆಟಿಕೆಗಳು ಇಷ್ಟವಾಗುವುದು ಸಹಜ. ಆಟಿಕೆಗಳು ಮಕ್ಕಳ ಬೆಳವಣಿಗೆಗೆ ಪೂರಕ. ಆದರೆ ಅವುಗಳ ಆಯ್ಕೆ ಸರಿ ಇಲ್ಲದಿದ್ದರೆ ಅವೇ ಮಕ್ಕಳಿಗೆ ಮಾರಕವೂ ಆಗಬಹುದು.

ಹೀಗಾಗಿ ಆಟಿಕೆಗಳನ್ನು ಖರೀದಿಸುವಾಗ ಈ ಅಂಶಗಳನ್ನು ಗಮನದಲ್ಲಿಡಿ:

* ಮಗುವಿನ ಪ್ರಾಯಕ್ಕೆ ತಕ್ಕ ಆಟಿಕೆ ಖರೀದಿಸಿ.

* ‘Non Toxic’ ಎಂಬ ಬರಹವಿರುವ ಆಟಿಕೆಗಳನ್ನೇ ಆಯ್ದುಕೊಳ್ಳಿ.

* ಅತ್ಯಂತ ಮೃದು ಬಣ್ಣಗಳ, ಉತ್ತಮ ಗುಣಮಟ್ಟದ ವಸ್ತುಗಳಿಂದ ತಯಾರಿಸಿದ, ಮನೋವೈಜ್ಞಾನಿಕ ನೆಲೆಗಟ್ಟಲ್ಲಿ ತಯಾರಾದ ಆಟಿಕೆಗಳನ್ನು ಖರೀದಿಸಿ.

* ಬಟ್ಟೆಯಿಂದ ಮಾಡಿದ ಆಟಿಕೆಗಳನ್ನು ಕೊಳ್ಳುವಾಗ ಅದರಲ್ಲಿ ‘ಬೆಂಕಿ ನಿರೋಧಕ’ ಎಂಬ ಲೇಬಲ್ ಇದೆಯೇ ನೋಡಿ.

* ಟೆಡ್ಡಿಬೇರ್‌ನಂತಹ ಸ್ಟಫ್ಡ್ ಟಾಯ್ಸ್ ತೊಳೆಯಬಹುದಾದುದ್ದೇ ಎಂದು ಲೇಬಲ್ ಪರೀಕ್ಷಿಸಿ.

* ತೀರಾ ಸಣ್ಣ ಮಕ್ಕಳಿಗೆ ನೀಡುವ ಆಟಿಕೆಗಳು ಕನಿಷ್ಠ ಮೂರು ಸೆಂಟಿಮೀಟರ್ ಅಗಲ, ಆರು ಸೆಂಟಿಮೀಟರ್ ಉದ್ದ ಹೊಂದಿರಬೇಕು. ಹೀಗಿದ್ದರೆ ಅಕಸ್ಮಾತ್ ಮಗು ಆಟಿಕೆ ಬಾಯಿಗೆ ಹಾಕಿದರೂ ಗಂಟಲಿಗೆ ಸಿಕ್ಕಿ ಉಸಿರುಗಟ್ಟುವ ಸಾಧ್ಯತೆ ಕಡಿಮೆ.

* ಗೋಲಿಗಳು, ನಾಣ್ಯಗಳು, ಸಣ್ಣ ಬಟನ್ ಅಥವಾ ಆ ಮಾದರಿಯ ಸಣ್ಣ ವಸ್ತುಗಳನ್ನು ಮಗುವಿಗೆ ಆಡಲು ಕೊಡಬಾರದು.

* ಬ್ಯಾಟರಿ ಚಾಲಿತ ಆಟಿಕೆಗಳ ಬ್ಯಾಟರಿ ಕೇಸ್ ಸ್ಕ್ರೂ ಸಹಿತ ಮುಚ್ಚಳದಿಂದ ಭದ್ರಪಡಿಸಿರಬೇಕು. ಮಗುವಿನ ಕೈಗೆ ಆ ಬ್ಯಾಟರಿಗಳು ಸಿಕ್ಕಿ ಅವರು ಅದನ್ನು ಜಗಿದರೆ ಅಥವಾ ನುಂಗಿದರೆ ಅಪಾಯ.

* ಜಗಿದರೆ, ಕಚ್ಚಿದರೆ, ಕೆಳಗೆ ಬಿದ್ದರೆ ತುಂಡಾಗದ ಹಾಗೂ ಪುಡಿಯಾಗದ ಆಟಿಕೆಗಳನ್ನು ಖರೀದಿಸಿ.

* ಆಟಿಕೆಗಳಲ್ಲಿ ಚೂಪು ಅಥವಾ ಮೊನಚು ಭಾಗಗಳಿಲ್ಲದಂತೆ ಗಮನ ವಹಿಸಿ.

* ಆಟಿಕೆಗಳಲ್ಲಿ ಕೊಳೆಯಾಗಿದ್ದರೆ ಕಾಲಕಾಲಕ್ಕೆ ಸ್ವಚ್ಛಗೊಳಿಸಿ.

* ಮುರಿದ, ಒಡೆದು ಗೀರು ಬಿದ್ದ ಆಟಿಕೆಗಳನ್ನು ಆಡಲು ಕೊಡಬೇಡಿ.

* ಆಟಿಕೆಗಳು ಹೊರಡಿಸುವ ಶಬ್ದ ಮೆಲುದನಿಯದ್ದಾಗಿರಲಿ. ಇಲ್ಲದಿದ್ದರೆ ಮಗುವಿನ ಕಿವಿಗೆ ಹಾನಿಯಾಗುತ್ತದೆ; ಅದಕ್ಕೆ ಕಿರಿಕಿರಿಯೂ ಆಗುತ್ತದೆ.

* ಮೂರು ವರ್ಷದ ನಂತರದ ಮಕ್ಕಳಿಗೆ ಬಿಲ್ಡಿಂಗ್ ಬ್ಲಾಕ್ಸ್ ಕೊಡಿಸುವುದರಿಂದ ಅವರ ಕಲ್ಪನಾಶಕ್ತಿ ವಿಕಾಸವಾಗುತ್ತದೆ. ಏಕಾಗ್ರತೆ ಹೆಚ್ಚುತ್ತದೆ.

* ಮಕ್ಕಳಲ್ಲಿ ದ್ವೇಷ ಭಾವನೆ ತುಂಬುವ ಗನ್, ಪಿಸ್ತೂಲ್ ರೀತಿಯ ಆಟಿಕೆಗಳನ್ನು  ಕೊಡಬೇಡಿ.

* ವಿವಿಧ ಗಾತ್ರದ ಚೆಂಡು ಎಲ್ಲ ಪ್ರಾಯದ ಮಕ್ಕಳಿಗೂ ಪ್ರಿಯವಾದ ಆಟಿಕೆ.

* ಸ್ವಲ್ಪ ದೊಡ್ಡ ಮಕ್ಕಳಿಗೆ ಲೂಡೋ, ಹಾವು ಮತ್ತು ಏಣಿ, ಚೆಸ್, ಕೇರಂ – ಹೀಗೆ ಒಳಾಂಗಣ ಆಟದ ವಸ್ತುಗಳನ್ನು ಒದಗಿಸಿ.

* ದೊಡ್ಡ ಮಕ್ಕಳಿಗೆ ಹೊರಗೆ ಆಡಲು ಬ್ಯಾಟ್, ಬಾಲ್, ಬ್ಯಾಡ್ಮಿಂಟನ್ ರಾಕೆಟ್ ಕೊಡಿಸಿ.

* ಸಣ್ಣ ಮಕ್ಕಳಿಗೆ ಟ್ರೈಸೈಕಲ್, ದೊಡ್ಡ ಮಕ್ಕಳಿಗೆ ಸೈಕಲ್ ಕೊಡಿಸಿ. ಅದನ್ನವರು ತುಂಬಾ ಇಷ್ಟಪಟ್ಟು ಅನುಭವಿಸುತ್ತಾರೆ.

* ಸಣ್ಣ ಮಕ್ಕಳಿಗೆ ಸ್ಕೂಟರ್, ಕಾರ್ ಇತ್ಯಾದಿ ಮಾದರಿಯ ಕುಳಿತು ಸೈಕಲಿನಂತೆ ಓಡಿಸಬಹುದಾದ ಆಟಿಕೆ  ಸಿಗುತ್ತದೆ.

* ನೈಸರ್ಗಿಕ ಬಣ್ಣಗಳನ್ನು ಹಚ್ಚಿದ ಮರದ ಆಟಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವು ಅತ್ಯಂತ ಸುರಕ್ಷಿತವೂ ಚಂದವೂ ಆಗಿರುತ್ತವೆ.

* ಹೆಣ್ಣುಮಕ್ಕಳಿಗೆ ಗೊಂಬೆಗಳು, ಟೆಡ್ಡಿಬೇರ್‌ನಂತಹ ಆಟಿಕೆಗಳು ಇಷ್ಟ.

* ಗಂಡುಮಕ್ಕಳಿಗೆ ರೂಪದಲ್ಲಿರುವ ಆಟಿಕೆಗಳು ಇಷ್ಟ.

* ಮೂರು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ತಮ್ಮ ಆಟದ ಬಳಿಕ ಆಟಿಕೆಗಳನ್ನು ಜಾಗೃತೆಯಿಂದ ನಿರ್ದಿಷ್ಟ ಜಾಗದಲ್ಲಿ ಎತ್ತಿಡಲು ಅಭ್ಯಾಸ ಮಾಡಿಸಿ. ಇದರಿಂದ ಮನೆ ಅಸ್ತವ್ಯಸ್ತವಾಗಿರುವುದನ್ನು ತಪ್ಪಿಸಬಹುದು. ಮಕ್ಕಳು ಅಚ್ಚುಕಟ್ಟುತನವನ್ನೂ ಕಲಿಯುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.