ಮಂಗಳವಾರ, ಮಾರ್ಚ್ 9, 2021
23 °C

‘ಪ್ರೀತಿ’ಯ ಯೋಗ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪ್ರೀತಿ’ಯ ಯೋಗ...

ಯೋಗಾಭ್ಯಾಸ ಉಸಿರಿನಷ್ಟೇ ಸಲೀಸಾಗಿ ಮತ್ತು ನಿರಂತರವಾಗಿರಬೇಕು ಎನ್ನುವ ನಂಬಿಕೆ ಇರುವ ಪ್ರೀತಿ ಹರಿಯಾಣದ ಯುವತಿ. ಬೆಂಗಳೂರಿಗರಿಗೆ ಶುಲ್ಕವಿಲ್ಲದೆ ಕಬ್ಬನ್‌ ಉದ್ಯಾನದಲ್ಲಿ ಯೋಗ ಕಲಿಸುತ್ತಿದ್ದಾರೆ. ಬೆಳಗಿನ ನಡಿಗೆಗೆ ಬರುವವರಲ್ಲಿ ಕೆಲವರು ಈಗಾಗಲೇ ಇವರನ್ನು ಅನುಸರಿಸುವ ಮೂಲಕ ಕಾಯಂ ಯೋಗ ಪಟುಗಳಾಗಿದ್ದಾರೆ. ಶುಲ್ಕ ನೀಡಿ, ಯೋಗ ಕಲಿಯಲಾಗದವರಿಗೆ, ಅದಕ್ಕೆಂದೇ ಸಮಯ ಮೀಸಲಿಡಲು ಆಗದವರಿಗೆ ದಿನದ ನಡಿಗೆಯ ಸಂದರ್ಭದಲ್ಲಿಯೇ ಈ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಪ್ರೀತಿ.

ಕಳೆದ ಜನವರಿ 26ರಂದು. ಒಬ್ಬರೇ ತಮ್ಮ ಪಾಡಿಗೆ ಯೋಗಾಸನಗಳನ್ನು ಹಾಕುತ್ತಲೇ ಉದ್ಯಾನದ ನಡಿಗೆದಾರರನ್ನು, ವಾಯುವಿಹಾರಿಗಳ ಗಮನ ಸೆಳೆದ ಪ್ರೀತಿ ಈಗ ನೂರಾರು ಮಂದಿಯನ್ನು ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ. ಕೆಲ ನಿಯಮಗಳನ್ನು ಅನುಸರಿಸಿ ಶ್ರದ್ಧೆಯಿಂದ ಯೋಗಾಭ್ಯಾಸ ಮಾಡಿದರೆ ಕಾಯಿಲೆಗಳಿಂದ ದೂರವಿರಬಹುದು ಹಾಗೂ ಇರುವ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಡುವುದು ಪ್ರೀತಿ ಅವರ ಉದ್ದೇಶ.

ಅಂತರರಾಷ್ಟ್ರೀಯ ಮಾನ್ಯತೆ ಹೊಂದಿರುವ ಥೌಸಂಡ್ಸ್‌ ಯೋಗ ಕೇಂದ್ರದಲ್ಲಿ ಯೋಗ ತರಬೇತಿ ಪಡೆದ ಪ್ರೀತಿ ಅವರಿಗೆ ಯೋಗ ಶಿಕ್ಷಣ ಇವರ ವೃತ್ತಿಯೂ, ಪ್ರವೃತ್ತಿಯೂ ಹೌದು. ಉಚಿತ ಶಿಕ್ಷಣ ನೀಡಲು ಪ್ರೇರಣೆಯಾಗಿದ್ದು ಗುರೂಜಿಯೊಬ್ಬರ ಮಾತುಗಳಂತೆ.

‘ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಇಲ್ಲಿನ ಜನ ಜೀವನವು ಅಷ್ಟೇ ವೇಗವಾಗಿ ಓಡುತ್ತಿರುವುದರಿಂದ ಅವರು ಒತ್ತಡದಲ್ಲಿದ್ದಾರೆ. ಇಲ್ಲಿನವರಿಗೆ ಯೋಗದ ಅವಶ್ಯಕತೆ ಇದೆ ಎಂಬುದನ್ನು ಅರಿತು ಈ ನಗರವನ್ನು ಆಯ್ಕೆ ಮಾಡಿಕೊಂಡೆ.’ ‘ಯೋಗ ಎಂದರೆ ನಮ್ಮನ್ನು ನಾವು ಗಟ್ಟಿಗೊಳಿಸಿಕೊಳ್ಳುವ ಅಸ್ತ್ರ. ಯೋಗ ದೈಹಿಕವಾಗಿ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವುದರ ಜತೆಗೆ ಮಾನಸಿಕವಾಗಿ ಸಮತೋಲನ ಕಾಪಾಡುತ್ತದೆ. ಯೋಗ ಕಲಿಸುತ್ತಲೇ ಯೋಗದ ಮಹತ್ವವನ್ನು ಇನ್ನೂ ಹೆಚ್ಚು ಜನರಿಗೆ ತಲುಪಿಸುವ ಕನಸಿದೆ.

ಆ ಕನಸಿನ ಮೊದಲ ಹಂತ ಇದು. ಉಚಿತವಾಗಿ ಯೋಗ ಹೇಳಿಕೊಡುತ್ತೇನೆ ಎಂದರೂ ಪ್ರಾರಂಭದಲ್ಲಿ ಯಾರೂ ಮುಂದೆ ಬರಲಿಲ್ಲ. ಇದರಿಂದ ಬೇಸರವಾಯಿತು ಆದರೂ ಛಲ ಬಿಡಲಿಲ್ಲ. 3 ತಿಂಗಳವರೆಗೆ ಒಬ್ಬಳೆ ನಿತ್ಯ ಬೆಳಿಗ್ಗೆ 5ರಿಂದ 7ರ ವರೆಗೆ ಯೋಗಾಭ್ಯಾಸ ಮಾಡುತ್ತಿದ್ದೆ. ಕ್ರಮೇಣ ನನ್ನನ್ನು ಗುರುತಿಸಿದ ಕೆಲವರು ಯೋಗ ಕಲಿಯಲು ಮುಂದೆ ಬಂದರು. ಈಗ ನೂರಕ್ಕೂ ಅಧಿಕ ಮಂದಿಗೆ ಯೋಗ ಹೇಳಿಕೊಡುತ್ತಿದ್ದೇನೆ. ಈ ಸಂಖ್ಯೆಯನ್ನು ಸಾವಿರದ ಗಡಿ ದಾಟಿಸಬೇಕು ಎಂಬುದೇ ನನ್ನ ಗುರಿ. 8 ರಿಂದ 80 ವರ್ಷದವರು ಯೋಗ ಕಲಿಯುತ್ತಿದ್ದಾರೆ.’

ಯೋಗವೇ ಬದುಕು: ಸಕಾರಾತ್ಮಕ ಚಿಂತನೆಗಳ ಬಗ್ಗೆ, ಮಿತ ಆಹಾರ ಸೇವನೆ ಹಾಗೂ ಜೀವನ ಶೈಲಿ ಬಗ್ಗೆ ತಿಳಿಸಿಕೊಡುವೆ. ಪ್ರಾಣಾಯಾಮ ಸೇರಿದಂತೆ ವಿವಿಧ ಆಸನಗಳ ಬಗ್ಗೆ ಹೇಳಿಕೊಡುತ್ತಿದ್ದೇನೆ. ನಗರದ ಪ್ರಮುಖ ಸ್ಥಳಗಳಲ್ಲಿ ಯೋಗ ಹೇಳಿಕೊಡುತ್ತಿದ್ದೇನೆ. ಅದರಿಂದ ಬರುವ ಹಣದಿಂದ ಜೀವನ ನಿರ್ವಹಣೆ ಮಾಡುತ್ತಿದ್ದೇನೆ. ಖುಷಿ ಹಾಗೂ ನೆಮ್ಮದಿ ಸಿಗುತ್ತಿರುವ ಉದ್ದೇಶದಿಂದ ಉಚಿತವಾಗಿ ಯೋಗ ಹೇಳಿಕೊಡುತ್ತಿದ್ದೇನೆ. ಯಾರು ಬೇಕಾದರೂ ಯೋಗ ಕಲಿಯಲು ಬರಬಹುದು. ಪ್ರೀತಿಯೇ ಶುಲ್ಕ ಎನ್ನುತ್ತಾರೆ ಅವರು.

ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಮಾನಸಿಕವಾಗಿ ಖಿನ್ನತೆಗೆ ಒಳಗಾದವರು ಯೋಗಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿಗೆ ಬಂದ ಬಳಿಕ ಅವರಿಗೆ ತಮ್ಮ ಪರಿಸ್ಥಿತಿಯಲ್ಲಿ ಉತ್ತಮವೆನಿಸತೊಡಗಿದೆ. ಗೊತ್ತುಗುರಿಯಿಲ್ಲದ ಈ ಊರಿನಲ್ಲಿ ನನ್ನವರು ಯಾರೂ ಇಲ್ಲ ಎಂಬ ಕೊರಗನ್ನು ನನ್ನ ಬಳಿ ಯೋಗ ಕಲಿಯುವವರು ನೀಗಿಸಿದ್ದಾರೆ ಎನ್ನುತ್ತಾರೆ ಪ್ರೀತಿ.

ಒಳಿತಾದವರ ಮಾತು

‘ನಾನು ಸೀರೆ ವ್ಯಾಪಾರಿ. ಅವೆನ್ಯೂ ರಸ್ತೆಯಲ್ಲಿ ನಮ್ಮ ಮಳಿಗೆ ಇದೆ. ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದೆ. ಇದೇ ಕಾರಣಕ್ಕೆ ನಿತ್ಯವೂ 6 ಮಾತ್ರೆ ತಿನ್ನುತ್ತಿದ್ದೆ. ಪ್ರೀತಿ ಅವರ ಮಾರ್ಗದರ್ಶದಂತೆ ಯೋಗಾಭ್ಯಾಸ ಶುರು ಮಾಡಿದೆ. ಈಗ ರಕ್ತದೊತ್ತಡ ಹಾಗೂ ಮಧುಮೇಹ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ. ಸ್ಥೂಲಕಾಯದವನಾಗಿದ್ದೆ. ತೂಕ ಕಡಿಮೆಯಾಗಿದೆ’ ಎನ್ನುತ್ತಾರೆ ಬಟ್ಟೆ ವ್ಯಾಪಾರಿ ಜ್ಞಾನಮೂರ್ತಿ.

‘ಇಲ್ಲಿ ತರಬೇತಿ ಪಡೆಯುವುದಕ್ಕಿಂತ ಮೊದಲು ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಿದ್ದೆ. ಈಗ ಅದು ನಿಯಂತ್ರಣಕ್ಕೆ ಬಂದಿದೆ. ಮುಖ ಗಂಟಿಕ್ಕಿಕೊಂಡು ಬಂದಿದ್ದವರು ಮೊಗದಲ್ಲೀಗ ನಗು ಮೂಡಿದೆ. ಮನಸ್ಸನ್ನು ಪ್ರಶಾಂತವಾಗಿರಿಸಲು ಯೋಗ ಸಹಕಾರಿ ಎಂದು ಹೇಳಿದರು.

ಖಾಸಗಿ ಕಂಪನಿಯೊಂದರ ಉನ್ನತ ಹುದ್ದೆಯಲ್ಲಿರುವುದರಿಂದ ನನಗೆ ಕೆಲಸದೊತ್ತಡ ಹೆಚ್ಚಿರುತ್ತದೆ. ಇದು ಸಹಜವಾಗಿ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತಿತ್ತು. ಜತೆಗೆ ಮೊಣಕಾಲು ನೋವು ಹಾಗೂ ಮಧುಮೇಹವೂ ಇತ್ತು. ಯೋಗದ ಬಗ್ಗೆ ನಂಬಿಕೆ ಇರಲಿಲ್ಲ. ಹೀಗಾಗಿ, ಪ್ರೀತಿ ಉಚಿತವಾಗಿ ಯೋಗ ಹೇಳಿಕೊಡುತ್ತಿದ್ದರೂ ಆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದೆ. ಕ್ರಮೇಣ ಯೋಗಾಭ್ಯಾಸದ ಬಗ್ಗೆ ಒಲವು ಮೂಡಿತು. ಪ್ರೀತಿ ಬಳಿ ನನ್ನ ಸಮಸ್ಯೆಗಳನ್ನು ಹೇಳಿಕೊಂಡೆ. ಅದಕ್ಕೆ ಅನುಗುಣವಾಗಿ ಅವರು ಯೋಗತರಬೇತಿ ಆರಂಭಿಸಿದರು. ಸದ್ಯ ಆರಾಮವಾಗಿದ್ದೇನೆ. ಕೆಲಸದೊತ್ತಡ ಎಷ್ಟೇ ಇದ್ದರೂ ಅವುಗಳನ್ನು ಶಾಂತಚಿತ್ತದಿಂದ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ. ಇದಕ್ಕೆಲ್ಲ ಕಾರಣ ಪ್ರೀತಿ ಅವರ ಯೋಗ ತರಬೇತಿ ಎನ್ನುತ್ತಾರೆ ಬಾಲು.

*

ಯೋಗ ಎಂದರೆ ವ್ಯಾಯಾಮ ಎಂದಷ್ಟೇ ತಿಳಿದಿದ್ದಾರೆ. ಯೋಗವನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ,ಆರೋಗ್ಯವಂತನಾಗಿರಲು ಬೇಕಾದ ಎಲ್ಲ ಚಿಕಿತ್ಸೆ ನಮ್ಮ ದೇಹದಲ್ಲಿ ತನ್ನಷ್ಟಕ್ಕೆತಾನೇ ಆಗುತ್ತದೆ.

–ಪ್ರೀತಿ

ಮಾಹಿತಿಗೆ: 85488 87531

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.