ಬಿರುಗಾಳಿ–ಮಳೆ ಆರ್ಭಟ ಹೆಚ್ಚಳ: ಎಚ್ಚರಿಕೆ

7
ಮೃತರ ಸಂಖ್ಯೆ ಏರಿಕೆ; ಆಗ್ರಾ ವಲಯದಲ್ಲಿ ಹೆಚ್ಚು ಹಾನಿ

ಬಿರುಗಾಳಿ–ಮಳೆ ಆರ್ಭಟ ಹೆಚ್ಚಳ: ಎಚ್ಚರಿಕೆ

Published:
Updated:
ಬಿರುಗಾಳಿ–ಮಳೆ ಆರ್ಭಟ ಹೆಚ್ಚಳ: ಎಚ್ಚರಿಕೆ

ನವದೆಹಲಿ: ಉತ್ತರಪ್ರದೇಶ, ಒಡಿಶಾ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಸಿಡಿಲು, ಬಿರುಗಾಳಿಯ ಆರ್ಭಟ ಹೆಚ್ಚಾಗಲಿದೆ ಎಂದು ಗೃಹ ಸಚಿವಾಲಯ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಕಳೆದ ಎರಡು ದಿನಗಳಿಂದ ಗುಡುಗು, ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ 124 ಜನರು ಪ್ರಾಣ ಕಳೆದುಕೊಂಡಿದ್ದು, 300ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಗರಿಷ್ಠ 73 ಜನರು ಸಾವನ್ನಪ್ಪಿದ್ದರೆ, 91 ಜನ ಗಾಯಗೊಂಡಿದ್ದಾರೆ. ಆಗ್ರಾ ವಲಯದಲ್ಲಿ ಅತಿ ಹೆಚ್ಚು ಸಾವು–ನೋವು ಸಂಭವಿಸಿದೆ ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ರಾಜಸ್ಥಾನದಲ್ಲಿ 35 ಜನರು ಮೃತಪಟ್ಟಿದ್ದು, 206 ಮಂದಿ ಗಾಯಗೊಂಡಿದ್ದಾರೆ. ತೆಲಂಗಾಣದಲ್ಲಿ 8, ಉತ್ತರಾಖಂಡ–6 ಹಾಗೂ ಪಂಜಾಬ್‌ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ತೆಲಂಗಾಣ, ಉತ್ತರಾಖಂಡ ಹಾಗೂ ಪಂಜಾಬ್‌ನಲ್ಲಿ 100ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದೂ ತಿಳಿಸಿದ್ದಾರೆ.

ನೈಸರ್ಗಿಕ ವಿಕೋಪಕ್ಕೆ ತುತ್ತಾಗಿರುವ ಈ ರಾಜ್ಯಗಳಲ್ಲಿ ನೂರಾರು ಮರಗಳು ಧರೆಗುರುಳಿವೆ. 12 ಸಾವಿರಕ್ಕೂ ಅಧಿಕ ವಿದ್ಯುತ್‌ ಕಂಬಗಳು ಬಿದ್ದಿದ್ದರೆ, 2.500 ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟುಹೋಗಿವೆ.

ಉತ್ತರ ಪ್ರದೇಶ: ಉತ್ತರಪ್ರದೇಶದ ಪೂರ್ವ ಮತ್ತು ಪಶ್ಚಿಮ ಭಾಗದ ಒಟ್ಟು 32 ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ಬರುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಪ್ರಾಣ ಹಾನಿ ತಡೆಗಟ್ಟುವುದು ಸೇರಿದಂತೆ ಸಂಭಾವ್ಯ ಅವಘಡ ಎದುರಿಸಲು ಸನ್ನದ್ಧರಾಗಿರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry