ನನ್ನನ್ನು ಯಾವಾಗ ಮುಖ್ಯಮಂತ್ರಿ ಮಾಡಬೇಕು ಎಂಬುದು ಪಕ್ಷಕ್ಕೆ ಚೆನ್ನಾಗಿ ಗೊತ್ತಿದೆ: ಆರ್.ಅಶೋಕ

7

ನನ್ನನ್ನು ಯಾವಾಗ ಮುಖ್ಯಮಂತ್ರಿ ಮಾಡಬೇಕು ಎಂಬುದು ಪಕ್ಷಕ್ಕೆ ಚೆನ್ನಾಗಿ ಗೊತ್ತಿದೆ: ಆರ್.ಅಶೋಕ

Published:
Updated:
ನನ್ನನ್ನು ಯಾವಾಗ ಮುಖ್ಯಮಂತ್ರಿ ಮಾಡಬೇಕು ಎಂಬುದು ಪಕ್ಷಕ್ಕೆ ಚೆನ್ನಾಗಿ ಗೊತ್ತಿದೆ: ಆರ್.ಅಶೋಕ

ಬೆಂಗಳೂರು: ‘ನನ್ನನ್ನು ಯಾವಾಗ ಮುಖ್ಯಮಂತ್ರಿ ಮಾಡಬೇಕು ಎಂಬುದು ಪಕ್ಷಕ್ಕೆ ಚೆನ್ನಾಗಿ ಗೊತ್ತಿದೆ’ ಎಂದು ಬಿಜೆಪಿ ಶಾಸಕ ಆರ್.ಅಶೋಕ ಹೇಳಿದರು.

ಶನಿವಾರ ಬೆಂಗಳೂರು ಪ್ರೆಸ್ ಕ್ಲಬ್‌ ಆಯೋಜಿಸಿದ್ದ ‘ಚಿಂತನ ಮಂಥನ’ ಮಾಧ್ಯಮ ಸಂವಾದದಲ್ಲಿ ಮಾತನಾಡಿ, ‘ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ನಾನಷ್ಟೇ ಅಲ್ಲ. ಪಕ್ಷದ ಯಾವುದೇ ಕಾರ್ಯಕರ್ತ ಕೂಡಾ ಈ ರಾಜ್ಯದ ಮುಖ್ಯಮಂತ್ರಿ ಆಗಬಹುದು. ಅಷ್ಟಕ್ಕೂ ಮುಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಂದು ಈಗಾಗಲೇ ಪಕ್ಷವು ಅಧಿಕೃತವಾಗಿ ಘೋಷಿಸಿದೆ’ ಎಂದರು.

‘ಒಂದು ವೇಳೆ ಸಮ್ಮಿಶ್ರ ಸರ್ಕಾರ ರಚನೆ ಪರಿಸ್ಥಿತಿ ಬಂದರೆ ನೀವೂ ಮುಖ್ಯಮಂತ್ರಿ ಅಭ್ಯರ್ಥಿಯೇ’ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಬಿಜೆಪಿಯೇ ಸ್ಪಷ್ಟ ಬಹುಮತ ಗಳಿಸುತ್ತದೆ. ಸಮೀಕ್ಷೆಗಳೂ ಇದನ್ನೇ ಹೇಳುತ್ತಿವೆ. ಕಾದು ನೋಡಿ’ ಎಂದರು.

‘ಕುಮಾರಸ್ವಾಮಿ ಲೇ ಔಟ್‌ನಲ್ಲಿ ಮತದಾರರಿಗೆ ಕುಕ್ಕರ್ ಹಂಚಿದ್ದೀರಿ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆಯೆಲ್ಲಾ’ ಎಂಬ ಪ್ರಶ್ನೆಗೆ ‘ಈ ಸಂಬಂಧ ನನಗಿನ್ನೂ ನೋಟಿಸ್ ಬಂದಿಲ್ಲ’ ಎಂದರು.

‘ಲೊಟ್ಟೆಗೊಲ್ಲಹಳ್ಳಿ ಅಕ್ರಮ ಡಿನೋಟಿಫೈ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ತಾನೆ ನಿಮಗೆ ಹೈಕೋರ್ಟ್‌ ತುರ್ತು ನೋಟಿಸ್ ಜಾರಿಗೊಳಿಸಿದೆಯೆಲ್ಲಾ’ ಎಂಬುದಕ್ಕೆ, ‘ಈ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಇದನ್ನು ಲೋಕಾಯುಕ್ತ ನ್ಯಾಯಾಲಯ ಮಾನ್ಯ ಮಾಡಿದೆ. ಇದೊಂದು ಮುಗಿದ ಅಧ್ಯಾಯ. ಎರಡು ವರ್ಷಗಳಾದ ಮೇಲೆ ಇದನ್ನು ಪುನಃ ಕೆದಕಲಾಗಿದೆ. ಇವೆಲ್ಲಾ ಚುನಾವಣೆ ವೇಳೆ ಸುದ್ದಿ ಮಾಡಲು ಹಾಕಿರುವ ಅರ್ಜಿಗಳು’ ಎಂದು ಉತ್ತರಿಸಿದರು.

‘ಸಿದ್ದರಾಮಯ್ಯ ವಿರುದ್ಧ 47 ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ ಒಂದೇ ಒಂದು ಪ್ರಕರಣದಲ್ಲೂ ತನಿಖೆ ನಡೆದಿಲ್ಲ. ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಹೀಗಿರುವಾಗ ಸಿದ್ದರಾಮಯ್ಯ ತಮ್ಮ ವಿರುದ್ಧ ಯಾವ ಪ್ರಕರಣವೂ ಇಲ್ಲ ಎಂದು ಹೇಗೆ ಹೇಳುತ್ತಾರೆ’ ಎಂದು ಪ್ರಶ್ನಿಸಿದರು.

‘ನಿಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಷ್ಟು ಜನ ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಲಾಗುತ್ತದೆ’ ಎಂಬ ಪ್ರಶ್ನೆಗೆ, ‘ಹೌದು. ನಮ್ಮ ಪಕ್ಷ ಆಡಳಿತ ಇರುವ ಕಡೆ ಉಪ ಮುಖ್ಯಮಂತ್ರಿಗಳಿದ್ದಾರೆ. ಆದಾಗ್ಯೂ ಈ ವ್ಯವಸ್ಥೆ ಪಕ್ಷದ ತೀರ್ಮಾನಕ್ಕೆ ಬಿಟ್ಟದ್ದು’ ಎಂದರು.

‘ನನ್ನ ಕ್ಷೇತ್ರದಲ್ಲಿ 80 ಸಾವಿರಕ್ಕೂ ಹೆಚ್ಚು ಲೀಡ್‌ನಿಂದ ಗೆಲ್ಲುತ್ತೇನೆ’ ಎಂದ ಅವರು, ‘ಬೆಂಗಳೂರು ಮಹಾನಗರಕ್ಕಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು’ ಎಂದರು.

‘ಸಂಸದ ವೀರಪ್ಪ ಮೊಯಿಲಿ ಸುಳ್ಳಿನ ಸರದಾರ. ಅವರೇ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಸುಳ್ಳು ಹೇಳುವುದಕ್ಕೆ ಕಾಂಗ್ರೆಸ್‌ ಪಕ್ಷದಲ್ಲಿರುವ  ಬ್ರಾಂಡ್‌ ಅವರು. ಅಂಥವರು ಬಿಜೆಪಿ ಸುಳ್ಳಿನ ಸರದಾರರು ಎನ್ನಲು ಯಾವ ನೈತಿಕ ಹಕ್ಕಿದೆ’ ಎಂದು ಕೇಳಿದರು.

‘ಜನಾರ್ದನ ರೆಡ್ಡಿ ನಮ್ಮ ಪಕ್ಷದವರಲ್ಲ. ಅವರಿಗೂ ನಮಗೂ ಯಾವುದೇ ಸಂಬಂಧ ಇಲ್ಲ’ ಎಂದು ಮತ್ತೊಂದು ಪ್ರಶ್ನೆಗೆ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry