ಭಾನುವಾರ, ಮಾರ್ಚ್ 7, 2021
31 °C

ಯಾವ ಜೀವದ ಹಾದಿ ಎಲ್ಲೆಲ್ಲಿ ತೆರೆವುದೋ...

ಪ್ರಕಾಶ್ ರೈ Updated:

ಅಕ್ಷರ ಗಾತ್ರ : | |

ಯಾವ ಜೀವದ ಹಾದಿ ಎಲ್ಲೆಲ್ಲಿ ತೆರೆವುದೋ...

ಮರಗಳ ಬಗ್ಗೆ ಯೋಚಿಸುತ್ತಿದ್ದೆ. ಚಾಮರಾಜನಗರದ ನಿಬಿಡಾರಣ್ಯದ ನಡುವೆ ನೋಡಿದ ದೊಡ್ಡ ಸಂಪಿಗೆ ಮರ ನೆನಪಾಯಿತು. ಆ ಮರದ ಕೆಳಗೆ ಒಂದಷ್ಟು ಪುಟ್ಟ ಮರಗಳು, ಅದರ ಕೆಳಗೆ ಗಿಡಬಳ್ಳಿಗಳು, ಪೊದೆಗಳು, ಹಾವಸೆ, ಹುಲ್ಲು, ಭೂಮಿಯ ಸಾರವನ್ನೆಲ್ಲ ಹೀರಿಕೊಳ್ಳುತ್ತಾ ಬೆಳೆದ ತುಂಬೆ ಹೂವಿನ ಗಿಡಗಳು, ಮೇಲೂ ಕೆಳಗೂ ಬೆಳೆದ ಅಣಬೆ, ಮರಕ್ಕೆ ಅಂಟಿಕೊಂಡೇ ಬೆಳೆದಿರುವ ಸೀತಾಳೆ ಹೂವು.

ಮರದ ಕೊಂಬೆಯಲ್ಲಿ ಜೇನುಗೂಡು, ಗೀಜಗ, ಗುಬ್ಬಿ, ಪೊಟರೆಯಲ್ಲೊಂದು ಅಳಿಲು, ಹೂವಿನ ಅಂಚಲ್ಲೊಂದು ದುಂಬಿ, ಹಾರಾಡುತ್ತಿರುವ ಹಳದಿ ಚಿಟ್ಟೆಗಳು, ಸಂಪಿಗೆ ಮರದ ಒಂದು ಬದಿಗೆ ಯಾವುದೋ ಕಾಡಾನೆಯ ದಂತ ಉಜ್ಜಿಕೊಂಡು ಹೋಗಿ, ಸಿಪ್ಪೆ ಕಿತ್ತು ಬಂದು ನುಣುಪಾಗಿರುವ ಜಾಗದಲ್ಲಿ ಮೆಲ್ಲಗೆ ತೆವಳುತ್ತಿರುವ ಬಸವನಹುಳು...

ಎಂಥಾ ಸಾಮರಸ್ಯ! ಎಂಥ ಸಮನ್ವಯ! ಘರ್ಷಣೆಯೇ ಇಲ್ಲ. ದೊಡ್ಡವರಿಗೂ ಸಣ್ಣವರಿಗೂ ಅಲ್ಲಿ ಅವರದೇ ಆದ ಸ್ಥಾನ- ಮಾನ. ಎಲ್ಲರಿಗೂ ಸಮಾನ ಗಮನ.

ಇಂಥ ಸಾವಿರಾರು ಮರಗಳ ಹತ್ತಾರು ಸ್ತರಗಳ ಕಾಡು. ಯಾರೂ ಒಳಗೆ ಕಾಲಿಡದ, ಮನುಷ್ಯನ ಹಸ್ತಕ್ಷೇಪವಿಲ್ಲದ ಕಾಡಿನಲ್ಲಿ ಎಲ್ಲವೂ ಸೌಹಾರ್ದದಿಂದ ಬದುಕುವುದಕ್ಕೆ ಸಾಧ್ಯವಾಗುತ್ತಿದೆಯಲ್ಲ? ಅದು ಹೇಗೆ?

ನಾವೂ ಅದೇ ಪ್ರಕೃತಿಯ ಭಾಗ ಅಲ್ಲವೇ? ಮನುಷ್ಯರಲ್ಲಿ ಯಾಕೆ ಇದು ಸಾಧ್ಯವಾಗುತ್ತಿಲ್ಲ? ಮನುಷ್ಯ ಮಾತ್ರ ಇಲ್ಲಿ ‘ನನ್ನ ಜಾತಿಯೊಂದೇ ಇರಬೇಕು. ನನ್ನ ಕುಲ, ನನ್ನ ಪಂಗಡ, ನನ್ನ ವಂಶ’ ಎಂದೇಕೆ ಹೊಡೆದಾಡುತ್ತಿದ್ದಾನೆ? ತೆಲುಗು ಕವಿಯೊಬ್ಬ ಬರೆದ ಸಾಲು ನೆನಪಾಗುತ್ತಿದೆ. ‘ಇಡೀ ಜಗತ್ತೇ ನನ್ನ ಕುಟುಂಬ, ಆದರೂ ನಾನು ಏಕಾಂಗಿ’ ಅಂತ ಸೂರ್ಯನನ್ನು ಕುರಿತು ಹೇಳುತ್ತಾನೆ ಆ ಕವಿ.

ನಾವೆಲ್ಲರೂ ಅದೇ. ಅಂತರಾಳದಲ್ಲಿ ನಾವೆಲ್ಲ ಏಕಾಂಗಿಗಳೇ ನಿಜ. ಆದರೆ ಇಡೀ ಜಗತ್ತೇ ನಮ್ಮದು ಅನ್ನುವುದೂ ನಿಜವೇ. ಹಾಗೇ, ‘ನಾನು ನಿನ್ನವನೆಂಬ ಹೆಮ್ಮೆಯ ತೃಣವು ಮಾತ್ರವೇ ನನ್ನದು’ ಎಂಬ ಸಾಲುಗಳಲ್ಲಿ ಎಂಥ ಅಗಾಧವಾದ ಅರ್ಥ ಅಡಗಿದೆ ನೋಡಿ. ನಾನು ನಿನ್ನವನು, ನೀನು ನನ್ನವನು ಎಂಬ ಹೆಮ್ಮೆಯಲ್ಲಿಯೇ ನಿಜವಾಗಬೇಕಾದ ಮನುಷ್ಯನು, ಜಾತಿ– ಕುಲ, ಪಂಗಡಗಳ ಹೆಸರಲ್ಲಿ ಒಂದಾಗಲು ಹವಣಿಸುತ್ತಿದ್ದಾನೆ.

ಎಲ್ಲರೂ ಪ್ರೀತಿಸುವ, ಎಲ್ಲರನ್ನೂ ಪೊರೆಯುವ ಸೂರ್ಯನಿಗೆ ಇಲ್ಲದ, ಎಲ್ಲರ ಉಸಿರಾಗಿರುವ ಗಾಳಿಗಿಲ್ಲದ, ಎಲ್ಲರ ಹಸಿವನ್ನು ನೀಗಿಸಬಲ್ಲ ಹಣ್ಣಿಗಿಲ್ಲದ ಸ್ವಾರ್ಥ, ಕೇಡು ಮನುಷ್ಯನೊಳಗೆ ಮಾತ್ರ ಯಾಕಿದೆ?

ಮೈಗೆ ಆದ ಗಾಯ ವಾಸಿಯಾಗುತ್ತದೆ. ಆದರೆ ಜನಾಂಗೀಯ ಗಾಯದ ಗುರುತುಗಳು ದಶಕಗಳು ಕಳೆದರೂ ಮಾಯುವುದಿಲ್ಲ. ತನ್ನ ಜನಾಂಗ ಮಾತ್ರ ಇರಬೇಕು ಎಂದು ತನ್ನವರಲ್ಲದೇ ಇದ್ದ ಎಲ್ಲರನ್ನೂ ಅಳಿಸಿಹಾಕಲು ಹೊರಟ ಹಿಟ್ಲರ್ ಮಾಡಿದ ಅಪರಾಧಕ್ಕೆ, ಜರ್ಮನಿ ಇವತ್ತೂ ಜಗತ್ತಿನ ಎದುರು ತಲೆತಗ್ಗಿಸಿ ನಿಂತು ಕ್ಷಮೆ ಕೇಳಬೇಕಾದ ಅನಿವಾರ್ಯ ಅಸಹಾಯಕತೆಯಲ್ಲಿದೆ. ಒಬ್ಬನ ಕ್ರೌರ್ಯದ ಮಸಿ ಇಡೀ ಜನಾಂಗಕ್ಕೆ ಮೆತ್ತಿಕೊಳ್ಳುತ್ತದೆ. ‘ನಿಮ್ಮವರು ಹೀಗೆ ಮಾಡಿದರು’ ಅಂತ ಮುಂದಿನ ತಲೆಮಾರು ಪಿಸುಗುಡುತ್ತದೆ. ವ್ಯಕ್ತಿ ಅಳಿಯುತ್ತಾನೆ, ಗಾಯದ ಗುರುತು ಮಾತ್ರ ಉಳಿಯುತ್ತದೆ.

ಮರಗಳ ಕುರಿತು ಮಾತಾಡುತ್ತಿದ್ದೆ. ಅದು ಮನುಷ್ಯರ ಕುರಿತ ಮಾತಾಯಿತು. ಪ್ರಕೃತಿಯ ಬಗ್ಗೆ ಹೇಳುವಾಗೆಲ್ಲ ನಮ್ಮ ಬಗ್ಗೆ ಹೇಳಿಕೊಂಡಂತೆಯೇ ಅಲ್ಲವೇ? ನಾವೂ ಪ್ರಕೃತಿಯ ಒಂದು ಭಾಗ. ಈ ಪರಿಸರ, ನಿಸರ್ಗ ನಮ್ಮನ್ನು ಎಷ್ಟು ನಿಷ್ಪಕ್ಷಪಾತವಾಗಿ ನೋಡುತ್ತದೆ ಅನ್ನುವುದಕ್ಕೊಂದು ಕತೆ ನೆನಪಾಗುತ್ತಿದೆ.

ಜಮೀನ್ದಾರನ ಹಿತ್ತಲಲ್ಲೊಂದು ನೇರಳೆ ಹಣ್ಣಿನ ಮರವಿತ್ತು. ಅದು ರುಚಿರುಚಿಯಾದ ರಸಭರಿತ ಹಣ್ಣುಗಳನ್ನು ಕೊಡುತ್ತಿತ್ತು. ಆ ಮರವನ್ನು ಜಮೀನ್ದಾರ ತುಂಬ ಪ್ರೀತಿಸುತ್ತಿದ್ದ. ಆ ಮರದ ಜೊತೆ ಮಾತಾಡುತ್ತಿದ್ದ. ಮರಕ್ಕೆ ಮನುಷ್ಯರ ಮಾತು ಅರ್ಥವಾಗುತ್ತಿತ್ತು. ಊರಿನ ಎಲ್ಲ ಮಕ್ಕಳೂ ಆ ಮರದ ಬುಡದಲ್ಲಿ ನಿಂತು ‘ಹಣ್ಣು ಕೊಡು’ ಅನ್ನುತ್ತಿದ್ದರು. ಮರ ಅವರಿಗೆಲ್ಲರಿಗೂ ತಿನ್ನುವಷ್ಟು ಹಣ್ಣು ಕೊಡುತ್ತಿತ್ತು.

ಒಂದು ದಿನ ಜಮೀನ್ದಾರ ಸತ್ತು ಹೋದ. ಅವನ ಮಗ ಜಮೀನ್ದಾರನಾದ. ಒಂದು ದಿನ ಅವನು, ನೇರಳೆ ಮರದ ಬುಡದಲ್ಲಿ ಊರ ಮಕ್ಕಳೆಲ್ಲ ಸೇರಿ ನೇರಳೆ ಹಣ್ಣು ತಿನ್ನುವುದನ್ನು ನೋಡುತ್ತಿದ್ದ. ಅವನ ಮನಸ್ಸು ಒಂದು ಕ್ಷಣ ಕಳಂಕಿತವಾಯಿತು. ‘ನಮ್ಮ ನೇರಳೆ ಮರದ ಹಣ್ಣುಗಳನ್ನು ನಮ್ಮ ಮಕ್ಕಳು ಮಾತ್ರ ತಿನ್ನಬೇಕು. ಊರವರಿಗೆಲ್ಲ ಯಾಕೆ ಕೊಡಬೇಕು’ ಅಂತ ತೀರ್ಮಾನಿಸಿ, ಅವನು ನೇರಳೆ ಮರದ ಬಳಿಗೆ ಹೋಗಿ ‘ಎಲೈ ನೇರಳೇ ಮರವೇ, ಇನ್ನು ಮೇಲೆ ನನ್ನ ಮಕ್ಕಳಿಗೆ ಮಾತ್ರ ಹಣ್ಣು ಕೊಡು. ಬೇರೆ ಮಕ್ಕಳಿಗೆ ಕೊಡಕೂಡದು’ ಎಂದು ಆಜ್ಞಾಪಿಸಿದ.

ಮಾರನೇ ದಿನ ಜಮೀನ್ದಾರನ ಮಕ್ಕಳು ಮರದ ಬಳಿಗೆ ಹೋದರೆ ಮರದಲ್ಲಿ ಹಣ್ಣುಗಳೇ ಇರಲಿಲ್ಲ. ಮಕ್ಕಳು ಅಪ್ಪನ ಬಳಿ ಬಂದು ದೂರಿತ್ತವು. ಜಮೀನ್ದಾರ ಹೋಗಿ ನೇರಳೆ ಮರದ ಬಳಿ ಕೇಳಿದ. ನೇರಳೆ ಮರ ಹೇಳಿತು; ‘ನೀನು ಬೇರೆ ಮಕ್ಕಳಿಗೆ ಹಣ್ಣು ಕೊಡಬೇಡ, ನಿನ್ನ ಮಕ್ಕಳಿಗೆ ಮಾತ್ರ ಹಣ್ಣು ಕೊಡು ಎಂದು ಹೇಳಿದೆ. ನನ್ನ ಬಳಿಗೆ ಬಂದ ಮಕ್ಕಳೆಲ್ಲರೂ ಒಂದೇ ಥರ ಇದ್ದರು. ಕಪ್ಪು ಕೂದಲು, ಹೊಳಪುಗಣ್ಣು, ಮುಗ್ಧ ಮುಗುಳ್ನಗೆ, ಚುರುಕು ನಡಿಗೆ, ಚಿಮ್ಮುವ ಉತ್ಸಾಹ, ನಿಷ್ಕಪಟ ಮನಸ್ಸಿನ ಮಕ್ಕಳ ಪೈಕಿ ನಿನ್ನ ಮಕ್ಕಳು ಯಾರು, ನಿನ್ನವರಲ್ಲದ ಮಕ್ಕಳು ಯಾರು ಎಂದು ನಾನು ಹೇಗೆ ಗುರುತಿಸಲಿ? ನನಗೆ ಎಲ್ಲರೂ ಒಂದೇ ರೀತಿ ಕಾಣಿಸುತ್ತಿದ್ದಾರೆ. ಹೀಗಾಗಿ ಯಾರಿಗೆ ಹಣ್ಣು ಕೊಡಬೇಕು ಅಂತ ಗೊತ್ತಾಗುತ್ತಿಲ್ಲ. ಅದಕ್ಕೇ ನಾನು ಹಣ್ಣು ಕೊಡುವುದನ್ನೇ ನಿಲ್ಲಿಸಿದೆ’.

ಭೇದ ಇರುವುದು ನಮ್ಮೊಳಗೆ. ಗೋಡೆಗಳನ್ನು ಕಟ್ಟುವವರು ನಾವೇ. ಬೇಲಿಗಳನ್ನು ಹಾಕುವವರಿಗೆ ಈ ದೇಶದ ವೈವಿಧ್ಯ ಅರ್ಥವಾಗುವುದು ಸಾಧ್ಯವೇ ಇಲ್ಲ. ‘ನನ್ನ ನದಿ ಪವಿತ್ರ, ಇದಕ್ಕೆ ಬೇರೆ ಉಪನದಿಗಳ ನೀರು ಹರಿಯಲೇಬಾರದು’ ಎಂದು ಹೇಳುತ್ತಾ ಕೂತರೆ ಕೊನೆಗೆ ನಮ್ಮ ನದಿಯೇ ಬತ್ತಿಹೋಗುತ್ತದೆ. ನದಿಯೊಂದು ವಿಶಾಲವೂ ಆಳವೂ ಆಗುವುದು ಉಪನದಿಗಳು ಸೇರಿದಾಗಲೇ. ಬೇರೆ ಬೇರೆ ಉಪನದಿಗಳ ನೀರಿನ ರುಚಿ, ಅವು ಹೊತ್ತು ತರುವ ಬೇರೆ ಬೇರೆ ಪ್ರದೇಶದ ಮಣ್ಣು, ಬೇರೆ ಬೇರೆ ಸೆಳೆತಗಳು ಸೇರಿದಾಗಲೇ ಒಂದು ನೈಲ್, ಒಂದು ಗಂಗೆ, ಒಂದು ಕಾಳಿ ನದಿಯಾಗುತ್ತದೆ. ನದಿಯ ಗುಣ ಇಲ್ಲದ ದೇಶವಾಗಲೀ ಧರ್ಮವಾಗಲೀ ಬಹಳ ಕಾಲ ಬಾಳಲಾರದು.

ನಾವು ಪರಿಣಾಮಗಳ ಕುರಿತು ಯೋಚಿಸುವುದನ್ನು ಬಿಟ್ಟೇಬಿಟ್ಟಿದ್ದೇವೆ. ಈ ಕ್ಷಣದ ಆಕ್ರೋಶ, ಆವೇಶಗಳೇ ನಮ್ಮನ್ನು ಆಳುತ್ತಿವೆ. ನೂರಾರು ಜಾತಿ, ನೂರಾರು ದೇವರು, ನೂರಾರು ಭಾಷೆ- ಹಾಗಿರುವುದರಿಂದಲೇ ನಮ್ಮ ದೇಶ ಶ್ರೀಮಂತ. ಹಾಡು ಬೇಕಿದ್ದರೆ ಗಜಲ್, ಹಿಂದೂಸ್ತಾನಿ, ಕರ್ನಾಟಕಿ, ಪರ್ಷಿಯನ್, ಪಾಪ್, ಸೂಫಿ- ಎಲ್ಲವೂ ನಮ್ಮದೇ. ತಿನಿಸು ಬೇಕಿದ್ದರೆ ಇಟಾಲಿಯನ್, ಅಫಘನಿ, ಬ್ರಿಟಿಷ್, ಕಾಂಟಿನೆಂಟಲ್, ಪಂಜಾಬಿ... ವಾಸ್ತುಶಿಲ್ಪ ನೋಡಿದರೆ ಅಲ್ಲೂ ನೂರೆಂಟು ವೈವಿಧ್ಯ. ಇಂಥ ಸೊಬಗು ಮತ್ತೆಲ್ಲಿ ಕಂಡೀತು ನಮಗೆ? ಏಕಮುಖೀ ಚಿಂತನೆ ಆಯಾ ದೇಶಗಳನ್ನು ಎಂಥ ಬಡತನದಲ್ಲಿ, ದುಸ್ಥಿತಿಯಲ್ಲಿ ಇಟ್ಟಿದೆ ಅನ್ನುವುದನ್ನು ನೋಡಿ.

ನನಗೆ ಅಚ್ಚರಿಯಾಗುತ್ತದೆ. ಯಾವಾಗ ಗೋವು ಹಿಂದೂಗಳ ಪ್ರಾಣಿಯಾಗಿ, ಕುರಿ ಮುಸ್ಲಿಮರ ಪ್ರಾಣಿಯಾಯಿತು? ಯಾವಾಗ ಕೇಸರಿ ಮತ್ತು ಹಸುರು ಬಣ್ಣಗಳು ಒಂದೊಂದು ಪಂಗಡಕ್ಕೆ ಸೇರ್ಪಡೆಯಾದವು? ಹೀಗೆ ಎಲ್ಲವನ್ನೂ ನಾವು ವಿಂಗಡಿಸುವುದನ್ನು ಕಲಿತದ್ದಾದರೂ ಯಾವಾಗ?

‘ವಸುಧೈವ ಕುಟುಂಬಕಂ’ ಅನ್ನುತ್ತದೆ ಹಿಂದೂ ಧರ್ಮ. ಜಗತ್ತೇ ನನ್ನ ಕುಟುಂಬ ಅನ್ನುವುದು ಅದರ ಅರ್ಥ. ಅದರೊಟ್ಟಿಗೇ ಬರುವ ಮತ್ತೊಂದು ಸಾಲು- ‘ಸರ್ವೇ ಜನಾಃ ಸುಖಿನೋ ಭವಂತು’. ಎಲ್ಲರೂ ಸುಖವಾಗಿರಲಿ ಎಂಬ ಸದಾಶಯ. ಇವು ಎಲ್ಲ ಧರ್ಮಗಳ ಆಶಯಗಳೂ ಹೌದು. ಕವಿರಾಜ ಮಾರ್ಗ ಓದಿದರೆ ಕನ್ನಡ ಜಗತ್ತು ‘ವಸುಧಾ ವಲಯ ವಿಲೀನ’ ಅನ್ನುವ ಸಾಲು ಬರುತ್ತದೆ. ಇಡೀ ಜಗತ್ತನ್ನೇ ತನ್ನೊಳಗೆ ವಿಲೀನ ಮಾಡಿಕೊಂಡ ನಾಡು ನಮ್ಮದು. ಹಾಗಿರುವುದಕ್ಕೇ ನಾವು ಶ್ರೇಷ್ಠರು. ಒಂದಾಗಿದ್ದರೇನೇ ಬಲಿಷ್ಠರು.

ಗಿರೀಶ ಕಾರ್ನಾಡರ ನಾಟಕದಲ್ಲಿ ಬರುವ ಸಂಭಾಷಣೆಯೊಂದು ಮನದಲ್ಲಿ ಸುಳಿಯಿತು. ಬಸವಣ್ಣನನ್ನು ಕುರಿತು ಬಿಜ್ಜಳ ಹೇಳುವ ಮಾತಿದು:

‘ನನ್ನ ಈ ಅರವತ್ತೆರಡು ವರ್ಷದ ಆಯಸ್ಸಿನಾಗ ಜಾತಿಯ ಹಂಗಿಲ್ಲದೇ ನನ್ನನ್ನು ಕಣ್ಣಾಗ ಕಣ್ಣಿಟ್ಟು ನೋಡಿದವ ಅಂದ್ರ ಬಸವಣ್ಣ. ಅವನು ಮತ್ತು ಅವನ ಶರಣರು. ತಾಯಾಣೆ ಹೇಳತೀನಿ. ಅವರು ಮಾತಾಡಿದರ ನಾನೂ ಒಬ್ಬ ಮನುಷ್ಯ ಅನ್ನಿಸತೈತಿ. ಜಾತಿ ಪದ್ಧತಿಯನ್ನು ಈ ನಾಡಿನಿಂದ ಸವರಿ ಬಿಡತೀನಿ ಅನ್ನತಾನ. ವರ್ಣಾಶ್ರಮ ಧರ್ಮ ಬೇರುಸಹಿತ ಕಿತ್ತು ಹಾಕತೀನಿ ಅನ್ನತಾನ. ಎಂಥ ಕನಸದು, ಎಂಥ ಎದಿಗಾರಿಕಿ. ಅಷ್ಟ ಅಲ್ಲ. ತನ್ನ ಸುತ್ತುಮುತ್ತ ಎಂಥೆಂಥಾ ಮಂದೀನ ಕೂಡಿ ಹಾಕ್ಯಾನಂದೀ. ಅಲ್ಲಮ... ಅವ ಮಾತಾಡೋದು ಕನ್ನಡ ಅಲ್ಲ, ಅಮೃತದ ಸೆಲಿ. ಚೆನ್ನಯ್ಯ, ಜೇಡದ ದಾಸಿಮಯ್ಯ, ಅಕ್ಕಮಹಾದೇವಿ. ಒಬ್ಬರ ಇಬ್ಬರಾ... ಎಲ್ಲ ಒತ್ತಟ್ಟಿಗೆ ಕೂಡತಾರ... ಹಾಡತಾರ... ಹಾಕ್ಯಾಡತಾರ... ಇನ್ಯಾರ ಕೈಲಿ ಇದು ಸಾಧ್ಯ ಇತ್ತು. ಮತ್ತಿದನ್ನೆಲ್ಲ ಎಲ್ಲಿ ಮಾಡ್ಯಾನಂದೀ. ಬಿಜ್ಜಳನ ಕಲ್ಯಾಣದಾಗ. ಕಾಶ್ಮೀರದ ಅರಸ ಇಲ್ಲಿ ಬಂದರ ನನ್ನ ಓಲಗಕ್ಕೆ ಬರೂದಿಲ್ಲ. ನೆಟ್ಟಗೆ ಬಸವಣ್ಣನ ಮಹಾಮನಿಗೆ ಹೋಕ್ಕಾನು.

ಸಣ್ಣ ಮಾತಾತ?’

ಎಂಥ ಅನುಭವ ಮಂಟಪವೊಂದು ಹನ್ನೆರಡನೆಯ ಶತಮಾನದಲ್ಲೇ ಕಟ್ಟಲ್ಪಟ್ಟಿತ್ತು. ಬಿಜ್ಜಳ ದೊರೆಯಾಗಿದ್ದರೂ ಎಷ್ಟು ಉದಾರಿಯಾಗಿದ್ದ. ಅವನು ಹೇಗೆ ಆ ಸಾಮರಸ್ಯವನ್ನು ಸವಿಯಬಲ್ಲವನಾಗಿದ್ದ. ನಾವು ಮಾತೆತ್ತಿದರೆ ‘ದಂಡೆತ್ತಿ ಬಂದವರ’ ಬಗ್ಗೆ, ‘ಗಾಯ ಮಾಡಿದವರ’ ಬಗ್ಗೆ ಮಾತಾಡುತ್ತೇವೆ.

ಮಾತಾಡಬೇಕಾದದ್ದು ಸೇತುವೆ ಕಟ್ಟಿದವರ ಕುರಿತು, ಗಾಯಗಳಿಗೆ ಮುಲಾಮು ಹಚ್ಚಿದವರ ಕುರಿತು, ಆಕ್ರೋಶದ ಆರ್ತನಾದದ ಎದುರಿಗೆ ಮಧುರ ಪಲ್ಲವಿಗಳನ್ನು ನುಡಿಸಿದವರ ಕುರಿತು, ಮನುಷ್ಯರ ಕುರಿತು. ಬುದ್ಧ, ಬಸವ, ಅಲ್ಲಮ, ಗಾಂಧಿ, ಅಂಬೇಡ್ಕರರಂಥ ಜೀವನ್ಮುಖಿಗಳ ಕುರಿತು.

ಮರಗಳ ಕುರಿತು. ಅಮರತ್ವದ ಕುರಿತು...

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.