ಮಂಗಳವಾರ, ಮಾರ್ಚ್ 2, 2021
24 °C
ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಕ್ಷೇತ್ರ ಸುತ್ತಾಟ

ಜಯಕಾರ, ರೋಡ್ ಶೋ ನಡುವೆ ದಣಿವರಿಯದ ಪ್ರಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಯಕಾರ, ರೋಡ್ ಶೋ ನಡುವೆ ದಣಿವರಿಯದ ಪ್ರಚಾರ

ಚಿತ್ರದುರ್ಗ: ರಾತ್ರಿ 4ಗಂಟೆಯಷ್ಟೇ ನಿದ್ದೆ. ಬೆಳಿಗ್ಗೆ 6ಕ್ಕೆ ಏಳುವ ಹೊತ್ತಿಗೆ ಮನೆ ಬಾಗಿಲಲ್ಲಿ ಕ್ಷೇತ್ರದ ಕಾರ್ಯಕರ್ತರ ದಂಡು. ಕಾರ್ಯಕರ್ತರೊಂದಿಗೆ ವಾಕಿಂಗ್ ಮಾಡುತ್ತಲೇ ಆ ದಿನದ ಪ್ರಚಾರದ ನೀಲ ನಕ್ಷೆ ಸಿದ್ದಪಡಿಸಿದರು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ.

ನಗರದ ನಿಜಲಿಂಗಪ್ಪ ರಸ್ತೆಯಲ್ಲಿರುವ ನಿವಾಸದ ಎದುರಿನ ತೋಟಗಾರಿಕಾ ಇಲಾಖೆ ಆವರಣದಲ್ಲಿ ವಾಯು ವಿಹಾರ ಮಾಡುತ್ತಾ ಕಾರ್ಯಕರ್ತರೊಂದಿಗೆ ಚರ್ಚೆ ಮಾಡುತ್ತಿದ್ದರು. ಉಪಹಾರ ಮುಗಿಸಿ, ಕಪ್ಪು ವಾಸ್ ಕೋಟ್ ಏರಿಸಿಕೊಂಡ ಬೆಳಿಗ್ಗೆ 8.30ಕ್ಕೆ ಕಪ್ಪು ಬಣ್ಣದ ಇನೋವಾ ಕಾರು ಏರಿ ಪ್ರಚಾರಕ್ಕೆ ಹೊರಟರು.

’ಪ್ರಚಾರ ಮುಗಿಸಿ ಮಲಗುವ ಹೊತ್ತಿಗೆ ರಾತ್ರಿ ಎರಡು ಗಂಟೆಯಾಗುತ್ತೆ. ನಿದ್ದೆಗೂ ಸಮಯವಿಲ್ಲ. ನಿತ್ಯ 25 ರಿಂದ 30 ಹಳ್ಳಿಗಳನ್ನು ತಲುಪುತ್ತೇನೆ. ಎಲ್ಲರನ್ನೂ ಭೇಟಿಯಾಗಿ, ಮಾತಾಡಬೇಕು. ಹೀಗೆ ನಡೀತಿದೆ ಚುನಾವಣೆ’ – ವಾಹನದಲ್ಲಿ ಕುಳಿತಿದ್ದ ನಮ್ಮೊಂದಿಗೆ ಸಚಿವ ಆಂಜನೇಯ ಪ್ರಚಾರದ ಶೈಲಿಯೊಂದಿಗೆ ಮಾತಿಗಿಳಿದರು.

‘ವರ್ಷಕ್ಕೆ ಮುನ್ನವೇ ಪ್ರಚಾರ ಆರಂಭಿಸಬೇಕಿತ್ತು. ಏನ್ ಮಾಡೋದು, ಸಚಿವ ಸ್ಥಾನದ ಜವಾಬ್ದಾರಿ. ರಾಜ್ಯದಾದ್ಯಂತ ಪ್ರವಾಸ. ಆದರೂ, ಕ್ಷೇತ್ರದ ಯಾವ ಹಳ್ಳಿಯನ್ನೂ ಬಿಟ್ಟಿಲ್ಲ, ಎಲ್ಲರಿಗೂ ಸೌಲಭ್ಯ ಕೊಟ್ಟಿದ್ದೇನೆ’ ಎನ್ನುತ್ತಾ ಹಳ್ಳಿಗಳ ಪಟ್ಟಿ ಹೇಳಿದ ಅವರು ‘ಆದರೂ ವಿರೋಧ ಪಕ್ಷವರು ತಪ್ಪು ಮಾಹಿತಿ ಕೊಡ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಮಾತು ಮುಗಿಯುವುದರೊಳಗೆ, ಕಾರು ಹೊಳಲ್ಕೆರೆ ರಸ್ತೆಯಲ್ಲಿ ಸಾಗಿ, ಜಾನಕೊಂಡ, ಚಿತ್ರಹಳ್ಳಿ ಗೇಟ್ ದಾಟಿ, ಶಿವಗಂಗ ಬಳಿ ನಿಂತಿತು. ಸಚಿವರ ವಾಹನ ಊರಿಗೆ ಬರುತ್ತಿದ್ದಂತೆ ಕಾರ್ಯಕರ್ತರು ಜಯಕಾರ ಹಾಕಿದರು. ಕಾರಿನಿಂದ ಇಳಿದು ಬಂದ ಸಚಿವರನ್ನು ಇಬ್ಬರು ಕಾರ್ಯಕರ್ತರು ಕೈ ಹಿಡಿದು ವಾಹನದೊಳಕ್ಕೆ ಕರೆದುಕೊಂಡರು. ಅಲ್ಲಿಂದ ’ರೋಡ್ ಷೋ’ ಶುರುವಾಯಿತು.

ಶಿವಗಂಗ ದಾಟಿ, ಹಳೇಗೊಲ್ಲರಹಟ್ಟಿ, ಮದ್ದೇರು, ತಾಳ್ಯ, ಹೊನ್ನಯ್ಯನಹಟ್ಟಿ, ನೇರಲಕಟ್ಟೆ, ಗಟ್ಟಿಹೊಸಳ್ಳಿ.. ಹೀಗೆ ಸಾಲು ಸಾಲು ಹಳ್ಳಿಗಳಲ್ಲೂ ರೋಡ್ ಶೋ ನಡೆಸಿ, ಪ್ರಚಾರ ವಾಹನದಲ್ಲೇ ನಿಂತು ಭಾಷಣ ಮಾಡಿದರು. ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಎಸ್. ಆರ್. ಗಿರೀಶ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಸವಿತಾ ರಘು ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾಥ್ ನೀಡುತ್ತಿದ್ದರು. ಪ್ರತಿ ಗ್ರಾಮಕ್ಕೆ ಬಂದಾಗ ಕಾರ್ಯಕರ್ತರು ಪಟಾಕಿ ಸಿಡಿಸಿ, ಸ್ವಾಗತಿಸಿದರು. ಪ್ರಚಾರ ವಾಹನದ ಎದುರು ತಮಟೆಯ ಸದ್ದು ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸುತ್ತಿತ್ತು. ಬಿಸಿಲಿಗೆ ಬಳಲಿದಂತೆ ಕಂಡ ಆಂಜನೇಯ ಕಾರು ಏರಿ ಕುಳಿತು, ಪುನಃ ಪ್ರಚಾರದ ಬಗ್ಗೆ ಮಾತು ಆರಂಭಿಸಿದರು.

‘ಎಲ್ಲ ಕಡೆ ನಮ್ಮ ಸ್ಥಳೀಯ ಲೀಡರ್‌ಗಳು ಪ್ರಚಾರ ಮಾಡ್ತಿದ್ದಾರೆ. ನಾನು ಎಲ್ಲಿ ಹೋಗಬೇಕು ಅಂತ ಅವರು ನಿರ್ಧಾರ ಮಾಡಿ, ಪ್ರಚಾರದ ವ್ಯವಸ್ಥೆ ಮಾಡ್ತಾರೆ' ಎನ್ನುತ್ತಿದ್ದಂತೆ, ಕಾರಿನ ಕಿಟಕಿ ಬಳಿ ಬಂದ ಗ್ರಾಮಸ್ಥರು 'ನಮ್ಮೂರಿಗೆ ಬನ್ನಿ' ಎಂದರು. 'ಬರ್ತೀನಿ ನಡಿಯಣ್ಣ' ಎಂದರು.

ಕ್ಷೇತ್ರದ ಬಗ್ಗೆ ಮಾತನಾಡಿದ ಆಂಜನೇಯ, 'ಕ್ಷೇತ್ರಕ್ಕೆ ಹೋದಾಗ, ಜನ ನೀರು, ರಸ್ತೆ, ಸೌಲಭ್ಯ ಕೊಟ್ಟಿಲ್ಲ ಅಂತ ಕೇಳ್ತಾರೆ. ನಾನು ಎಂಎಲ್‌ಎ, ಮಿನಿಸ್ಟ್ರು ಅಲ್ವಾ. ನನ್ನನ್ನು ಕೇಳದೇ, ಬಿಜೆಪಿಯವರನ್ನು ಕೇಳೋಕೆ ಆಗುತ್ತಾ’ ಎಂದು ಕೇಳಿದರು. ‘ಎಲ್ಲರಿಗೂ ಸೌಲಭ್ಯ ಬೇಕು. ಪದೇ ಪದೇ ಊರಿಗೆ ಬರಬೇಕು. ಇದೆಲ್ಲ ಸಾಧ್ಯವಾ ? ಹಾಗೆ ಸೌಲಭ್ಯ ಸಿಕ್ಕದವರು, ಸಾಮಾನ್ಯವಾಗಿ ಏರು ದನಿಯಲ್ಲಿ ಕೇಳುತ್ತಾರೆ. ಅದನ್ನೇ ‘ಆಂಜನೇಯನಿಗೆ ವಿರೋಧ’ ಅಂತ ಬಿಂಬಿಸಿದರೆ ಹೇಗೆ ?’ – ಎನ್ನುತ್ತಾ ಬೇಸರದಿಂದಲೇ ಪ್ರಶ್ನಿಸಿದರು.

ನೋಡಿ, ನಮ್ಮ ಕ್ಷೇತ್ರದಲ್ಲಿ ಎಲ್ಲ ಹಳ್ಳಿಗಳಿಗೂ ಅನುದಾನ ನೀಡಿದ್ದೇನೆ. ಈ ಪಟ್ಟಿ ನೋಡಿ’ ಎನ್ನುತ್ತಾ ಕರಪತ್ರ ನಮ್ಮ ಕೈಗಿಟ್ಟರು. ಅಷ್ಟು ಹೊತ್ತಿಗೆ ಕಾರ್ಯಕರ್ತರು ಕಾರಿಗೆ ಕೈ ಅಡ್ಡ ಹಾಕಿ, ‘ನೇರಲಕಟ್ಟೆ ಗ್ರಾಮಕ್ಕೆ ಬರಬೇಕು’ ಎಂದು ಒತ್ತಾಯಿಸಿದರು. ‘ಸರಿ ನಡೀರಪ್ಪ ಹೋಗೋಣ’ ಎನ್ನುತ್ತಾ, ಚಾಲಕ ಕಾರನ್ನು ಆ ಊರಿನತ್ತ ತಿರುಗಿಸಿದ.

ಮಾತು – ಪ್ರಚಾರದ ಜತೆ ಗಟ್ಟಿಹೊಸಹಳ್ಳಿ, ಕುಮ್ಮಿನಘಟ್ಟದತ್ತ ಸಾಗುತ್ತಾ, ಕಾರ್ಯಕರ್ತರ ಮನೆಯಲ್ಲಿಯೇ ಮಧ್ಯಾಹ್ನದ ಊಟ ಮುಗಿಸಿ ಎನ್ ಜಿ ಹಳ್ಳಿಯತ್ತ ಪ್ರಚಾರ ಮುಂದುವರಿಸಿದರು. 15ರಿಂದ 20 ನಿಮಿಷಕ್ಕೆ ಒಂದು ಹಳ್ಳಿಯಂತೆ ಸುಮಾರು 30 ಹಳ್ಳಿ ಮುಗಿಸಬೇಕು ಎಂದು ಸಚಿವರ ಸಹಚರ ಲೆಕ್ಕ ಹಾಕುತ್ತಿದ್ದ.

ನಾಲ್ಕು ದಶಕಗಳ ರಾಜಕಾರಣಿ..

ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಕಾರ್ಯಕರ್ತನಿಂದ ಸಚಿವ ಸ್ಥಾನದವರೆಗೆ ಅನೇಕ ಹಂತಗಳಲ್ಲಿ ಸಚಿವ ಆಂಜನೇಯ ಕೆಲಸ ಮಾಡಿದ್ದಾರೆ. ಅದೆಷ್ಟೋ ಚುನಾವಣೆಗಳಿಗೆ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ‘ಪಕ್ಷ ಹೇಳಿದರೆ, ನಾನು ಬ್ಯಾನರ್, ಬಂಟಿಗ್ ಕಟ್ಟಿ ಪ್ರಚಾರ ಮಾಡಲೂ ಸಿದ್ದ’ ಎಂದು ಹೇಳಿಕೊಂಡಿದ್ದರು.

ಕಾರ್ಯಕರ್ತರಾಗಿದ್ದ ಆಂಜನೇಯ, 1994ರಿಂದ ಭರಮಸಾಗರದಿಂದ ವಿಧಾನಸಭೆ ಕಣಕ್ಕಿಳಿದರು, ಮಧ್ಯೆ ಒಮ್ಮೆ ಪಕ್ಷ ಬದಲಿಸಿ ಜೆಡಿಯುನಿಂದ ಶಾಸಕರಾಗಿದ್ದರು. ನಂತರ ಕಾಂಗ್ರೆಸ್‌ಗೆ ಮರಳಿ, ಆಯ್ಕೆಯಾಗಿ, ಈಗ ಸಚಿವರು ಆಗಿದ್ದಾರೆ. ಸರ್ಕಾರದ ಸಚಿವ ಸಂಪುಟದಲ್ಲಿ ಪ್ರಮುಖರಾಗಿದ್ದ ಅವರು, ಈ ಬಾರಿ ಪುನರಾಯ್ಕೆ ಬಯಸಿ ಕಣದಲ್ಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.