ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಸೇವೆಯೇ ನನ್ನ ಗುರಿ

Last Updated 6 ಮೇ 2018, 10:13 IST
ಅಕ್ಷರ ಗಾತ್ರ

ಜನ ನಿಮ್ಮನ್ನೇ ಯಾಕೆ ಆಯ್ಕೆ ಮಾಡಬೇಕು?

ಹೆಣ್ಣುಮಕ್ಕಳೆಲ್ಲ ಪ್ರಾಮಾಣಿಕರು. ಯಾವುದೇ ಕ್ಷೇತ್ರವಿರಲಿ ನಿಷ್ಠೆ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತೀವಿ. ಮರ್ಯಾದೆಗೆ ಅಂಜುತ್ತೀವಿ. ಪುರುಷ ಪ್ರಧಾನ ಸಮಾಜದಲ್ಲಿ ಜನ ಆಡಿಕೊಳ್ಳಬಾರದು ಅನ್ನುವ ಕಾಳಜಿಯಿಂದಲೇ ಪ್ರತಿ ಹೆಜ್ಜೆಯನ್ನ ಇಡ್ತೀವಿ. ವಕೀಲಳಾಗಿ ಹತ್ತು ಹಲವು ಕೇಸ್‌ಗಳನ್ನು ಪ್ರಾಮಾಣಿಕಳಾಗಿ ನಿಭಾಯಿಸಿದ್ದೀನಿ. ನನ್ನ ಜತೆ ಕೆಲಸ ಮಾಡ್ತ ಇದ್ದ ಇಪ್ಪತ್ತು ಜನ ಕಿರಿಯ ವಕೀಲರನ್ನು ಬಿಟ್ಟು ಸಮಾಜ ಸೇವೆ ಮಾಡಬೇಕೆಂಬ ಉದ್ದೇಶದಿಂದಲೇ ಚುನಾವಣೆ ಎದುರಿಸ್ತಾ ಇದ್ದೀನಿ.

ಯಾವ ವಿಷಯಗಳನ್ನು ಮುಂದಿಟ್ಟುಕೊಂಡು ಮತದಾರರನ್ನು ಎದುರಿಸುತ್ತೀರಿ?

ಮೂಲಸೌಲಭ್ಯಗಳ ಕೊರತೆ ಇದೆ. ರಸ್ತೆಗಳೆಲ್ಲ ಗುಂಡಿ ಬಿದ್ದಿವೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕಿದೆ. ಮಾಯಕೊಂಡದಲ್ಲಿ ಅಷ್ಟೆ ಅಲ್ಲದೇ ಎಲ್ಲ ಕಡೆಗಳಲ್ಲಿಯೂ ಹೆಣ್ಣುಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ನರಳುತ್ತಿದ್ದಾರೆ. ಅದನ್ನು ನೀಗಿಸುವ ಕೆಲಸ ಮಾಡಬೇಕಿದೆ. ರೈತರ ಶ್ರೇಯೋಭಿವೃದ್ಧಿಗಾಗಿ ಯೋಜನೆಗಳನ್ನು ಕಾರ್ಯಗತಗೊಳಿಸುವ ನಿರ್ಧಾರ ಮಾಡಲಾಗಿದೆ. ಇವುಗಳನ್ನು ಮುಂದಿಟ್ಟುಕೊಂಡೇ ಮತ ಕೇಳುತ್ತೇನೆ.

ಆಯ್ಕೆ ಆದರೆ ಮಾಡುವ ಮೊದಲು ಕೆಲಸ ಏನು?

ಕ್ಷೇತ್ರದಲ್ಲಿ ಇರುವ ನಿರುದ್ಯೋಗಿ ಯುವಕ–ಯುವತಿಯರಿಗೆ ಉದ್ಯೋಗ ಕೊಡಿಸುವ ಯೋಜನೆಗಳನ್ನು ಜಾರಿಗೆ ತರಲಾಗುವುದು. ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳಿಗೆ ಸಂಘ ಸಂಸ್ಥೆಗಳ ಮೂಲಕ ಸ್ವಯಂ ಉದ್ಯೋಗವನ್ನು ಸೃಷ್ಟಿಸುವ ಕೆಲಸ ಆಗಬೇಕು. ತಾಲ್ಲೂಕು ಕೇಂದ್ರಗಳಲ್ಲಿ ಉತ್ತಮ ಆಸ್ಪತ್ರೆಗಳಿಲ್ಲ. ಒಂದು ಅಪಘಾತ ಆದರೂ ಮಣಿಪಾಲ ಆಸ್ಪತ್ರೆಗೆ ಹೋಗಬೇಕಿದೆ. ಹೈಟೆಕ್‌ ಆಸ್ಪತ್ರೆಗಳನ್ನು  ಈ ಭಾಗದಲ್ಲಿ ನಿರ್ಮಾಣ ಮಾಡಬೇಕಿದೆ.

ಗೆದ್ದು ಬಂದರೆ ನಿಮ್ಮ ಕ್ಷೇತ್ರಕ್ಕೆ ಮಾಡುವ ಕೆಲಸ ಏನು?

ಈ ಭಾಗದಲ್ಲಿ ಪದವಿ ಕಾಲೇಜುಗಳು ಕಡಿಮೆ ಇವೆ. ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲ. ದಿನೇ ದಿನೇ ಖಾಸಗಿ ಬಸ್‌ಗಳ ಹಾವಳಿ ಜಾಸ್ತಿ ಆಗಿದೆ. ಒಬ್ಬ ವಿದ್ಯಾರ್ಥಿ ಶಿಕ್ಷಣದ ಸಲುವಾಗಿ ದಾವಣಗೆರೆಯಿಂದ ಚನ್ನಗಿರಿಗೆ ಖಾಸಗಿ ಬಸ್‌ನಲ್ಲಿ ಹೋಗಬೇಕಾದರೆ ತಿಂಗಳಿಗೆ ₹ 3,000 ತೆರಬೇಕಾಗುತ್ತದೆ. ಬಡ ವಿದ್ಯಾರ್ಥಿಗಳಿಗೆ ಇದು ದೊಡ್ಡ ಹೊರೆ. ಹಾಗಾಗಿ ಪದವಿ ಕಾಲೇಜು ನಿರ್ಮಾಣಕ್ಕೆ ಆದ್ಯತೆ ನೀಡುತ್ತೇನೆ.

ಸದ್ಯಕ್ಕೆ ನಿಮಗಿರುವ ಕನಸುಗಳೇನು?

ಸೂಳೆಕೆರೆಯನ್ನು ಅಭಿವೃದ್ಧಿ ಮಾಡಿ, ನೀರು ತುಂಬಿಸುವ ಕೆಲಸ ಆಗಬೇಕು. ಇದರಿಂದ ರೈತರಿಗೆ ವಿವಿಧ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ. ಕ್ಷೇತ್ರದಲ್ಲಿರುವ ಕೆರೆ ಕಾಲುವೆಗಳನ್ನು ತುಂಬಿಸುವ ಕೆಲಸ ಆಗಬೇಕು.

ಕಾಲೆಳೆಯುವವರ ಬಗ್ಗೆ ಏನ್‌ ಹೇಳ್ತೀರಿ?

ರಾಜಕೀಯ ಇರಲಿ ಅಥವಾ ಇತರೆ ಯಾವುದೇ ಕ್ಷೇತ್ರವಿರಲಿ ಹೆಣ್ಣುಮಕ್ಕಳ ಉದ್ಧಾರ ಸಹಿಸದವರ ಸಂಖ್ಯೆ ಹೆಚ್ಚಿದೆ. ತುಳಿಯುವವರೇ ಹೆಚ್ಚಿದ್ದಾರೆ. ನಾನು ವಕೀಲೆಯಾಗಿದ್ದರೂ ಇದನ್ನು ಎದುರಿಸುವಾಗ ತುಸು ಕಷ್ಟವೇ ಆಯಿತು. ಮೂರ್ನಾಲ್ಕು ವರ್ಷಗಳಿಂದ ಹೇಗಾದರೂ ಮಾಡಿ ನನಗೆ ಟಿಕೆಟ್‌ ತಪ್ಪಿಸಬೇಕೆಂಬುದು ಬಹಳ ಪ್ರಯತ್ನ ಪಡಲಾಯಿತು. ‘ಬಿ’ ಫಾರಂ ಸಲ್ಲಿಸಿದ ಮೇಲೂ ನನ್ನ ಟಿಕೆಟ್‌ ಕಸಿದುಕೊಳ್ಳಲು ಪ್ರಯತ್ನಿಸಲಾಯಿತು. ಆದರೆ ತಂತ್ರ ಫಲಿಸಲಿಲ್ಲ ಅಷ್ಟೆ. ನಾನು ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತೆ. ಅವಕಾಶ ಸಿಗಲಿಲ್ಲವೆಂದು ಕಾಂಗ್ರೆಸ್‌, ಬಿಜೆಪಿ, ಜೆಡಿಯುಗೆ ವಲಸೆ ಹೋದವಳಲ್ಲ. ಯಾವುದೇ ಆಮಿಷಕ್ಕೆ ಒಳಗಾಗದೇ ಸಮಾಜ ಸೇವೆಯನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡ್ತಾ ಇದ್ದೀನಿ.

ಶೀಲಾ ನಾಯ್ಕ್ ಅವರು 20 ವರ್ಷಗಳ ಕಾಲ ವಕೀಲರಾಗಿ ಹೆಸರು ಮಾಡಿದ್ದಾರೆ. 12 ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಜೆಡಿಎಸ್‌ ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಅವರು ಪ್ರಧಾನ ಕಾರ್ಯದರ್ಶಿ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಜತೆಗೆ ಬಂಜಾರ ವಿವಿಧೋದ್ದೇಶ ಸಂಘದ ಮಹಿಳಾ ಅಧ್ಯಕ್ಷೆಯಾಗಿಯೂ ಕೆಲಸ ಮಾಡಿದ್ದು, ಈ ಬಾರಿ ಮಾಯಕೊಂಡ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕಿಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT