ಶುಕ್ರವಾರ, ಫೆಬ್ರವರಿ 26, 2021
26 °C

ವೈದ್ಯರೇ ಬೇಡವೆನ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈದ್ಯರೇ ಬೇಡವೆನ್ನಿ

ಕಾಯಿಲೆಯೇ ಬಾರದಿದ್ದರೆ ವೈದ್ಯರನ್ನು ಭೇಟಿಯಾಗುವ ಜರೂರತ್ತು ಇರದು. ಕಾಯಿಲೆ ಬರದಂತೆ ತಡೆಯುವುದು ಜಾಣ್ಮೆ ಮತ್ತು ಬದುಕುವ ಕಲೆಗಾರಿಕೆ. ಪ್ರತಿ ದಿನವನ್ನು ಲೆಕ್ಕಾಚಾರದಿಂದ ಬದುಕುವುದೆಂದರೆ ಕಸೂತಿಯಲ್ಲಿನ ಕಸುಬುದಾರಿಕೆಯನ್ನು ಸಿದ್ಧಿಸಿಕೊಂಡಂತೆ. ಇಷ್ಟು ನೀರು, ಇಷ್ಟೇ ಊಟ, ಇಂತಿಷ್ಟು ಹಣ್ಣು, ಮತ್ತೊಂದಿಷ್ಟು ತರಕಾರಿ, ಜೊತೆಗಿಷ್ಟು ಕಾಳು, ಅಗತ್ಯವಿರುವಷ್ಟೇ ಬೇಳೆ!

ದಿನಕ್ಕೆಷ್ಟು ನೀರು ಸೇವಿಸಬೇಕು ಎಂದು ಯೋಚಿಸುವಾಗ ಸ್ವಲ್ಪವಾದರೂ ಬೆವರು ಹರಿದುಹೋಗುವಂತೆ ಉಪಾಯ ಕಂಡುಕೊಳ್ಳಬೇಕು. ಬೆಳಿಗ್ಗೆಯೋ ಸಂಜೆಯೋ ಅರ್ಧ ಗಂಟೆಯಾದರೂ ವಾಕಿಂಗ್‌ ಮಾಡಲೇಬೇಕು. ಶುದ್ಧ ಗಾಳಿ ಸೇವನೆ ಮಾಡಬೇಕು, ನಡಿಗೆಯೋ, ಓಡುನಡಿಗೆಯೋ ಮಾಡಲೇಬೇಕು. ಅಂತೂ ನಡಿಗೆ ಕಡ್ಡಾಯ ಎಂಬುದು ವೈದ್ಯರ ಸಲಹೆ.

‘ಬೆಳಿಗ್ಗೆ ಮನೆ ಮತ್ತು ಮನೆಯವರ ಸಮಸ್ತ ಉಸಾಬರಿಗಳನ್ನು ಮುಗಿಸಿ ಸಮಯಕ್ಕೆ ಸರಿಯಾಗಿ ಕಚೇರಿ ತಲುಪಿದರೆ ಸಾಕು ಎಂದು ಇರುವವರು ನಾವು, ಇನ್ನು ವಾಕಿಂಗ್‌ ಹೋಗುವ ಮಾತು ಎಲ್ಲಿಂದ?’ ಎಂಬುದು ಗೃಹಿಣಿಯರ ಕೊರಗು.

ಕಚೇರಿಯಲ್ಲೇ ವಾಕ್‌ ಮಾಡಿ. ಊಟದ ವಿರಾಮ ಅರ್ಧ ಗಂಟೆ ಎಂದಿಟ್ಟುಕೊಳ್ಳಿ. ಊಟಕ್ಕೆ ಐದು ನಿಮಿಷ ಸಾಕು ಎಂದಾದರೆ ಇನ್ನೂ 25 ನಿಮಿಷ ಮಿಕ್ಕುತ್ತದೆ. ಕಚೇರಿಯಿಂದಾಚೆ 15 ನಿಮಿಷ ನಡೆದುಹೋಗಿ. ಬಿರುಬಿಸಿಲು ಮಳೆ, ಚಳಿಗಾಳಿ ಎಂಬ ಕುಂಟುನೆಪವೊಡ್ಡದಿದ್ದರಾಯಿತು.

ನಿಮ್ಮ ವಿಭಾಗ ನಾಲ್ಕನೇ ಮಹಡಿಯಲ್ಲಿದೆಯೇ? ಲಿಫ್ಟ್‌ಗೆ ಬೆನ್ನುಹಾಕಿ ಮೆಟ್ಟಿಲಿನತ್ತ ಮುಖ ಮಾಡಿ. ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ನೆಲಮಹಡಿಯಿಂದ ನಿಮ್ಮ ಮಹಡಿಗೆ ಹೋಗಲೇಬೇಕಾಗುತ್ತದೆ. ಆ ಎರಡೂ ಸಲವೂ ಮೆಟ್ಟಿಲಿನ ಮೂಲಕವೇ ಹತ್ತಿರಿ, ಇಳಿಯಿರಿ! ಸ್ವಲ್ಪವಾದರೂ ಬೆವರು ಹುಟ್ಟಿಕೊಳ್ಳುತ್ತದೆ. ಕಾಲುಗಳಿಗೆ ವ್ಯಾಯಾಮ ಸಿಗುತ್ತದೆ. ಮಂಡಿ, ಬೆನ್ನು, ಬೆನ್ನುಮೂಳೆ ನೋವಿದ್ದವರು ವೈದ್ಯರ ಸಲಹೆಯನ್ನೂ ತೆಗೆದುಕೊಳ್ಳಿ.

ನಡಿಗೆಗೆ ಸಮಯಾವಕಾಶ ಸಿಗುವುದಿಲ್ಲ ಎಂದು ಸಬೂಬು ಹೇಳುವವರು ಉಪಾಯಗಳನ್ನು ಕಂಡುಕೊಳ್ಳುವುದು ಸೂಕ್ತ. ಕಚೇರಿ ತಲುಪಲು ಕಾರು ಬಳಸುತ್ತಿರುವಿರಾ? ಬಸ್‌ ಬಗ್ಗೆ ಯೋಚಿಸಿ. ಒಂದು ಸ್ಟಾಪ್ ಮುಂದೆಯೋ–ಹಿಂದೆಯೋ ಇಳಿದರೆ ತಾನಾಗಿಯೇ ವಾಕಿಂಗ್‌ ಆಗುತ್ತದೆ. ಜೀವನಶೈಲಿಯಲ್ಲಿ ಸಣ್ಣಪುಟ್ಟ ತಿದ್ದುಪಡಿ ಮಾಡಿಕೊಂಡರೆ ವೈದ್ಯರು, ಔಷಧಗಳಿಂದ ದೂರವಿರಬಹುದು.

ಶಿಕ್ಷಕಿಯಾಗಿರುವ ಸ್ನೇಹಿತೆ, ಮನೆ ಕಟ್ಟಿಕೊಂಡಾಗ ಮೂರನೇ ಮಹಡಿಯನ್ನು ತಮ್ಮ ಸ್ವಂತಕ್ಕಾಗಿ ವಿನ್ಯಾಸಗೊಳಿಸಿದಳು. ಆಕೆಯ ಗಂಡ ಮತ್ತು ಮಕ್ಕಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಅವಳು, ಜಂಜಡದ ಬದುಕಿನಲ್ಲಿ ವ್ಯಾಯಾಮಕ್ಕೆ ಸಿಗುವ ಅಪೂರ್ವವಾದ ಅವಕಾಶ ಅದು ಎಂಬುದನ್ನು ಮನವರಿಕೆ ಮಾಡಿಕೊಟ್ಟಾಗ ಅವರೆಲ್ಲರೂ ಸಮ್ಮತಿ ಸೂಚಿಸಿದರು. ಅವಳ ಯೋಚನೆ ಅಷ್ಟಕ್ಕೇ ನಿಲ್ಲಲಿಲ್ಲ. ಬೆಳಿಗ್ಗೆ ಐದೂಕಾಲಕ್ಕೆ ಎದ್ದು ಅವಳು ನೆಲಮಹಡಿಯಿಂದ ನಾಲ್ಕನೇ ಮಹಡಿ ಮೇಲಿರುವ ತಾರಸಿವರೆಗೆ ಕನಿಷ್ಠ ಐದು ಬಾರಿ ಹತ್ತಿ ಇಳಿಯುತ್ತಾಳೆ.

ತಾರಸಿಯಿಂದ ನೆಲಮಹಡಿವರೆಗೂ ತರಕಾರಿ, ಸೊಪ್ಪು ಮತ್ತು ಹೂಗಳನ್ನು ಕುಂಡಗಳಲ್ಲಿ ಬೆಳೆಸಿದ್ದಾಳೆ. ಬೆಳಿಗ್ಗೆ ಹತ್ತಿ ಇಳಿಯುವ ಆಟದ ಮಧ್ಯೆ ಗಿಡಗಳಿಗೆ ನೀರುಣಿಸುತ್ತಾಳೆ. ಪೈಪ್‌ನಲ್ಲಿ ನೀರು ಹಿಡಿಯುವುದೆಂದರೆ ವ್ಯಾಯಾಮದ ಬಾಬತ್ತಲ್ಲ ಎಂದು, ಪೈಪ್‌ನಲ್ಲಿ ಬಕೆಟ್‌ಗೆ ನೀರು ತುಂಬಿಸಿಕೊಂಡು ಮಗ್‌ನಿಂದ ಎತ್ತಿ ನೀರು ಉಣಿಸುತ್ತಾಳೆ. ಮನೆಯಲ್ಲೇ ಸಿಗುವ ತ್ಯಾಜ್ಯ ವಸ್ತುಗಳನ್ನು ಗೊಬ್ಬರವಾಗಿಸಿಕೊಂಡು ಗಿಡಗಳನ್ನು ಪೋಷಿಸುವ ಕಾರಣ ರಾಸಾಯನಿಕಮುಕ್ತ ತರಕಾರಿ ಮತ್ತು ಸೊಪ್ಪು ಊಟೋಪಹಾರಕ್ಕೆ ಸಿಗುತ್ತದೆ. ಇಷ್ಟೂ ಕೆಲಸಗಳಿಗೆ ಆಕೆಗೆ ಬೇಕಾಗುವುದು ಕೇವಲ 35 ನಿಮಿಷ.

ರಕ್ತದಲ್ಲಿನ ಗ್ಲುಕೋಸ್‌ ಅಂಶ ಅಧಿಕಗೊಳ್ಳುತ್ತಿದೆ, ಮಧುಮೇಹದ ‘ಬಾರ್ಡರ್‌ ಲೈನ್‌’ನಲ್ಲಿದ್ದೀರಿ, ದೇಹದಲ್ಲಿ ಕೊಬ್ಬಿನಂಶ (ಬಿಎಂಐ) ಹೆಚ್ಚಾಗಿದೆ ಎಂಬ ಸೂಚನೆ ಸಿಕ್ಕಿದ ಕ್ಷಣದಿಂದಲಾದರೂ ಸಕ್ಕರೆ ಹಾಗೂ ಸಿಹಿ ಸೇವನೆಗೆ ಕಡಿವಾಣ ಹಾಕದಿದ್ದರೆ ಹೇಗೆ ಅಲ್ವೇ? ಮಿತಿ ಮೀರಿದ ಕೋಪತಾಪಕ್ಕೆ ಕಡಿವಾಣ ಹಾಕಿದರೆ ಹೃದಯ ತಂಪಾಗಿರುತ್ತದೆ, ಮಿದುಳಿನ ಮೇಲೆಯೂ ಒತ್ತಡ ಬೀಳದು. ಪ್ರಾಣಾಯಾಮದ ಮೊರೆಹೋದರೆ ನಮ್ಮೊಳಗಿನ ನಿಗ್ರಹಶಕ್ತಿ ಹೆಚ್ಚಿಸಿಕೊಳ್ಳಬಹುದು.

ಏನೇ ತಿಂದರೂ ಅರಗದವರು, ಸದಾ ಕಾಲ ಗ್ಯಾಸ್‌ ಟ್ರಬಲ್‌ನಿಂದ ಬಳಲುವವರು ಬಿಸಿನೀರನ್ನೇ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಬಹುದು. ಒಂದು ಲೋಟ ಬಿಸಿನೀರಿಗೆ ಓಂ ಕಾಳು ಹಾಕಿ ಮುಚ್ಚಿಟ್ಟು ಕುಡಿಯುವುದು, ಎರಡು ಎಸಳು ಬೆಳ್ಳುಳ್ಳಿ ಜಗಿದು ತಿಂದು ಬಿಸಿ ನೀರು ಕುಡಿಯುವುದು, ಬೇಳೆ ಮತ್ತು ಆಲೂಗಡ್ಡೆಯಂತಹ ಪದಾರ್ಥ ಸೇವಿಸದೇ ಇರುವುದು, ಊಟ ಮಾಡಿದ ಮೇಲೆ ಸ್ವಲ್ಪ ನಡೆಯುವುದು...

ಅಬ್ಬಾ... ವೈದ್ಯರಿಂದ ದೂರವಿರಲು ಎಷ್ಟೊಂದು ಸುಲಭೋಪಾಯಗಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.