ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಗೆ ಹಣ್ಣುಗಳ ರಾಜ ಲಗ್ಗೆ

ಹಣ್ಣು ಪ್ರಿಯರಿಗೆ ನಿರಾಸೆ ಮೂಡಿಸಿದ ದುಪ್ಪಟ್ಟು ದರ
Last Updated 7 ಮೇ 2018, 11:39 IST
ಅಕ್ಷರ ಗಾತ್ರ

ಹಾಸನ : ನಗರದ ಮಾರುಕಟ್ಟೆಗೆ ಹಣ್ಣುಗಳ ರಾಜ ಮಾವು ಲಗ್ಗೆ ಇಟ್ಟಿದೆ. ಆದರೆ, ಹಣ್ಣಿನ ಬೆಲೆ ದುಬಾರಿಯಾಗಿರುವುದು ಮಾವು ಪ್ರಿಯರಿಗೆ ನಿರಾಸೆ ಮೂಡಿಸಿದೆ.

ನಗರದ ಕಟ್ಟಿನ ಕರೆ ಮಾರುಕಟ್ಟೆ, ಆರ್. ಸಿ.ರಸ್ತೆ, ಸಾಲಗಾಮೆ ರಸ್ತೆ, ಸಂತೆಪೇಟೆ, ತಣ್ಣೀರುಹಳ್ಳ, ಭಗತ್ ಸಿಂಗ್ ವೃತ್ತ, ಜಿಲ್ಲಾ ಆಸ್ಪತ್ರೆ ರಸ್ತೆ ಹಾಗೂ ರಸ್ತೆ ಬದಿ ಹಣ್ಣುಗಳ ಮಾರಾಟ ಮಾಡಲಾಗುತ್ತಿದೆ.

ಆಪೂಸ್‌, ತೊತಾಪುರಿ, ಕಲಮಿ, ಬಗನ್‌ಪಲ್ಲಿ, ಮಲ್ಲಿಕಾ, ರತ್ನಗಿರಿ ಆಪೂಸ್‌, ಮಲ್ಗೊವಾ, ರಸಪೂರಿ, ಬಾದಾಮಿ ತಳಿಯ ಮಾವಿನ ಹಣ್ಣು ಲಭ್ಯವಿದೆ.

ರಸಪೂರಿ ಮಾವಿನ ಹಣ್ಣು ಕೆ.ಜಿಗೆ ₹ 80, ಬಾದಾಮಿ ಕೆ. ಜಿ ಗೆ ₹ 120, ಮಲ್ಲಿಕಾ ₹ 80ರಂತೆ ಮಾರಾಟವಾಗುತ್ತಿದೆ.
ಹಾಸನ ಮಾರುಕಟ್ಟೆಗೆ ರಾಮನಗರದಿಂದ ಪ್ರತಿನಿತ್ಯ ಅಂದಾಜು 4 ಟನ್‌ ಮಾವಿನಹಣ್ಣು ಆಮದು ಆಗುತ್ತಿದೆ. ಜಿಲ್ಲೆಯಲ್ಲಿ ಮಾವು ಬೆಳೆಯುವ ಪ್ರಮಾಣ ಕಡಿಮೆ. ಹಾಸನದ ಮಾವಿನಹಣ್ಣು ಮಾರುಕಟ್ಟೆಗೆ ಬರಲು ಇನ್ನು 15 ದಿನ ಬೇಕಾಗುತ್ತದೆ. ಸದ್ಯಕ್ಕೆ ರಾಮನಗರದಿಂದ ಮಧ್ಯವರ್ತಿಗಳು ಹಣ್ಣನ್ನು ತರಿಸುತ್ತಿದ್ದಾರೆ. ವಾರದ ನಂತರ ತಮಿಳುನಾಡಿನ ಸೇಲಂ, ಕೃಷ್ಣಗಿರಿ ಭಾಗದಿಂದ ನೀಲಂ ತಳಿ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣು ಮಾರುಕಟ್ಟೆಗೆ ಆಗಮಿಸಲಿದೆ.

‘ಈ ಬಾರಿ ರಾಜ್ಯದ ವಿವಿಧ ಭಾಗಗಳಲ್ಲಿ ಅಕಾಲಿಕ ಮತ್ತು ಅಲಿಕಲ್ಲು ಮಳೆಯಾಗಿದ್ದು, ಇದರಿಂದ ಮಾವಿನ ಫಸಲಿಗೆ ಹಾನಿಯಾಗಿದೆ. ಆದ್ದರಿಂದ ಈ ಬಾರಿ ಮಾವಿನಹಣ್ಣಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಮನ್ಸೂರ್‌.

ಮಾವಿನಹಣ್ಣು ಮಕ್ಕಳಿಂದ ವಯಸ್ಕರ ವರೆಗೂ ಎಲ್ಲರೂ ಇಷ್ಟ ಪಡುತ್ತಾರೆ. ಮೊದಲು ಕಾಯಿ ಬಲಿತ ನಂತರ ಕಿತ್ತು ನೈಸರ್ಗಿಕವಾಗಿ ಹಣ್ಣು ಮಾಡಲಾಗುತ್ತಿತ್ತು. ಈಗ ಅವಧಿ ಪೂರ್ವದಲ್ಲೇ ಹಣ್ಣು ಮಾಗಿಸಲು ರಾಸಾಯನಿಕ ದ್ರವ (ಕಾರ್ಬೈಡ್‌) ಹಾಗೂ ಪೌಡರ್‌ ಬಳಸಲಾಗುತ್ತದೆ. ಅವಧಿಗೆ ಮೊದಲೇ ಮಾಗಿಸಿದ ಹಣ್ಣುಗಳು ನೋಡಲು ಆಕರ್ಷಕವಾಗಿ ಕಂಡರೂ ತಿನ್ನಲು ಯೋಗ್ಯವಲ್ಲ. ಈ ಬಗ್ಗೆ ಎಚ್ಚರಿಕೆಯಿಂದ ಹಣ್ಣಿನ ರುಚಿ, ಬಣ್ಣ ಮತ್ತು ಗಾತ್ರ ಪರಿಕ್ಷಿಸಿ ಖರೀದಿಸಬೇಕಾಗಿದೆ.

‘ಕಳೆದ ವರ್ಷ ತೋಟಗಾರಿಕೆ ಇಲಾಖೆ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನೈಸರ್ಗಿಕವಾಗಿ ಹಣ್ಣು ಮಾಡಿದ ಮಾವಿನ ಮೇಳ ಏರ್ಪಡಿಸಿತ್ತು. ಈ ರೀತಿಯ ಮೇಳಗಳನ್ನು ಏರ್ಪಡಿಸುವ ಅಗತ್ಯವಿದೆ’ ಎನ್ನುತ್ತಾರೆ ಹೇಮಾವತಿನಗರ ನಿವಾಸಿ ಮಂಜುಳ.

ಜೆ.ಎಸ್‌.ಮಹೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT