ಭಾನುವಾರ, ಮಾರ್ಚ್ 7, 2021
21 °C

‘ಸುಳ್ಳು ಹೇಳುವ ಪ್ರಧಾನಿಯನ್ನು ಕಂಡಿರಲಿಲ್ಲ': ಮಾಜಿ ಸ್ಪೀಕರ್‌ ಮೀರಾ ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸುಳ್ಳು ಹೇಳುವ ಪ್ರಧಾನಿಯನ್ನು ಕಂಡಿರಲಿಲ್ಲ': ಮಾಜಿ ಸ್ಪೀಕರ್‌ ಮೀರಾ ಕುಮಾರ್‌

ಹುಬ್ಬಳ್ಳಿ: ‘ನಿರಂತರವಾಗಿ ಇಷ್ಟೊಂದು ಸುಳ್ಳುಗಳನ್ನು ಹೇಳುವ ಪ್ರಧಾನಿಯನ್ನು ನಾನು ಇದುವರೆಗೆ ಕಂಡಿರಲಿಲ್ಲ’ ಎಂದು ಲೋಕಸಭೆ ಮಾಜಿ ಸ್ಪೀಕರ್‌, ದಲಿತ ನಾಯಕ ಬಾಬು ಜಗಜೀವನರಾಂ ಪುತ್ರಿ ಮೀರಾ ಕುಮಾರ್‌ ಟೀಕಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕರ್ನಾಟಕವು ಅಭಿವೃದ್ಧಿ ಪಥದಲ್ಲಿ ಮುನ್ನಡೆದಿದೆ. ಇಲ್ಲಿನ ಜನರು ಶಾಂತಿ ಪ್ರಿಯರು, ಕೋಮು ಸೌಹಾರ್ದತೆಗೆ ಹೆಸರಾದವರು. ಆದರೆ, ಪ್ರಧಾನಿ ಮೋದಿ ಅವರು ಬೆಂಗಳೂರಿನ ಪ್ರತಿಷ್ಠೆಗೆ ಧಕ್ಕೆ ತರುವ ಮಾತುಗಳನ್ನಾಡಿದ್ದಾರೆ. ನನ್ನ ತಂದೆಯ ಕಾಲದಿಂದಲೂ ಬೆಂಗಳೂರಿನೊಂದಿಗೆ ಉತ್ತಮ ಒಡನಾಟ ಇದೆ. ಇಲ್ಲಿನ ಪರಿಸರ ಒಳ್ಳೆಯದು, ಜನಗಳು ಒಳ್ಳೆಯವರು’ ಎಂದರು.

‘ಬಿಜೆಪಿ ಯಾವಾಗಲೂ ಕೋಮು ಧೃವೀಕರಣದ ರಾಜಕೀಯ ಮಾಡುತ್ತಿದೆ. ದೇಶದಲ್ಲಿ ಎಂಟು ಪ್ರಮುಖ ಧರ್ಮಗಳಿದ್ದು, ಆ ಧರ್ಮೀಯರು, ವಿವಿಧ ಜಾತಿಗಳ ಮಧ್ಯೆ ಸಹಬಾಳ್ವೆ ಮೂಡಿಸಬೇಕಾದುದು ಚುನಾಯಿತ ಸರ್ಕಾರಗಳ ಕರ್ತವ್ಯ. ಅದನ್ನು ಬಿಟ್ಟು ಕೇಂದ್ರದ ಬಿಜೆಪಿ ಸರ್ಕಾರ ಧರ್ಮಗಳ ಮಧ್ಯೆ ಒಡಕು ಮೂಡಿಸಲು ಯತ್ನಿಸುತ್ತಿದೆ. ಅತ್ಯಾಚಾರದಂತಹ ಪ್ರಕರಣಗಳನ್ನು ತಡೆಯುವಲ್ಲಿ ಕೇಂದ್ರ ವಿಫಲವಾಗಿದ್ದು, ಕಠುವಾದ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯಿಂದಾಗಿ ದೇಶದ ಜನತೆ ತಲೆ ತಗ್ಗಿಸುವಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಧರ್ಮದ ವಿಭಜನೆ ಮಾಡಿಯೇ ಆಡಳಿತ ನಡೆಸುವ ಬಿಜೆಪಿಯನ್ನು ಶಾಂತಿ ಬಯಸುವ ರಾಜ್ಯದ ಜನತೆ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ತರಬಾರದು. ತಂದರೆ ನಿತ್ಯ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಕೆಲಸಗಳು ನಡೆಯಲಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಪ್ರಧಾನಿಗೆ ನೆನಪಿನ ಶಕ್ತಿ ಕಡಿಮೆ: ದಲಿತ ವ್ಯಕ್ತಿಯನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು ತಮ್ಮದೇ ಸರ್ಕಾರ ಎನ್ನುವ ಮೋದಿ ಅವರಿಗೆ ನೆನಪಿನ ಶಕ್ತಿ ಕಡಿಮೆ ಇದ್ದಂತಿದೆ ಎಂದು ಮೀರಾ ಕುಮಾರ್‌ ಕುಟುಕಿದರು.

ದಲಿತ ಸಮುದಾಯದ ಕೆ.ಆರ್‌. ನಾರಾಯಣನ್‌ ಅವರು ರಾಮನಾಥ ಕೋವಿಂದ್‌ಗಿಂತ ಮೊದಲೇ ರಾಷ್ಟ್ರಪತಿಯಾಗಿದ್ದರು. ಅಲ್ಲದೇ, ಕಾಂಗ್ರೆಸ್‌ ಡಾ. ಅಂಬೇಡ್ಕರ್‌ ಅವರನ್ನು ಎಂದೂ ಅವಮಾನಿಸಿಲ್ಲ. ಜವಹರಲಾಲ್‌ ನೆಹರೂ ಅಂಬೇಡ್ಕರ್‌ ಅವರನ್ನು ಮೊದಲ ಕಾನೂನು ಸಚಿವರನ್ನಾಗಿ ನೇಮಕ ಮಾಡಿದ್ದರು. ಸಂವಿಧಾನ ಕರಡು ರಚನಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದರು. ಪ್ರಧಾನಿ ಮೋದಿ ಇಂಥ ಸುಳ್ಳುಗಳನ್ನು ಹೇಳಬಾರದು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.