ಚುನಾವಣೆಯಲ್ಲಿ ಪ್ರತಿ ಮತವೂ ಅಮೂಲ್ಯ

7
ವೋಟಾಟ ಸಮಾರೋಪ ಸಮಾರಂಭದಲ್ಲಿ ಸ್ವೀಪ್ ಸಮಿತಿ ರಾಯಭಾರಿ ಮಹೇಶ ಜೋಷಿ ಅಭಿಪ್ರಾಯ

ಚುನಾವಣೆಯಲ್ಲಿ ಪ್ರತಿ ಮತವೂ ಅಮೂಲ್ಯ

Published:
Updated:

ಹಾವೇರಿ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಮತವೂ ಅತ್ಯಮೂಲ್ಯ. ಕೇವಲ ಒಂದು ಮತ ಕಡಿಮೆ ಪಡೆದು ಶಾಸಕರಾಗುವ, ಮುಖ್ಯಮಂತ್ರಿಯಾಗುವ ಅವಕಾಶಗಳನ್ನು ಕಳೆದುಕೊಂಡ ಉದಾಹಣೆ ದೇಶದಲ್ಲಿ ಸಾಕಷ್ಟಿವೆ’ ಎಂದು ಜಿಲ್ಲಾ ಸ್ವೀಪ್ ಸಮಿತಿ ರಾಯಭಾರಿ ಮಹೇಶ ಜೋಷಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಶನಿವಾರ ರಾತ್ರಿ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಂಣದಲ್ಲಿ ನಡೆದ ‘ವೋಟಾಟ ಸಮಾರೋಪ ಸಮಾರಂಭ’ದಲ್ಲಿ ಅವರು ಮಾತನಾಡಿದರು.

ಕಳೆದ 2004ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಂತೆಮಾರನಹಳ್ಳಿ ಕ್ಷೇತ್ರದಿಂದ ಓರ್ವ ಅಭ್ಯರ್ಥಿ ಕೇವಲ ಒಂದು ಮತದಿಂದ ಸೋಲು ಅನುಭವಿಸಿದ್ದನು. ಹೀಗಾಗಿ, ನಮ್ಮ ಒಂದು ಮತವು ಎಷ್ಟು ಅತ್ಯಮೂಲ್ಯ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಪ್ರಜಾಪ್ರಭುತ್ವದ ಸದೃಢತೆಗೆ ನಾವೆಲ್ಲರೂ ಮತದಾನದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದರು.

ಕಳೆದ 2013ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಮತದಾನ ಶೇ 71 ರಷ್ಟಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಶೇ 100ರಷ್ಟಾಗಬೇಕು ಎಂದರು.

ರಣಜಿ ಕ್ರಿಕೆಟ್‌ ಪಟು ಎಂ.ಸಿ.ಅಯ್ಯಪ್ಪ ಮಾತನಾಡಿ, ದೈಹಿಕ ಸದೃಢತೆಗೆ ಕ್ರೀಡೆ ಅತ್ಯವಶ್ಯ. ಪ್ರಜಾಪ್ರಭುತ್ವದ ಸದೃಢತೆಗೆ ಮತದಾನ ಅವಶ್ಯ. ಎಲ್ಲ ಯುವ ಸಮೂಹ ಕ್ರೀಡಾ ಸ್ಫೂರ್ತಿಯಿಂದ ಮತದಾನ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಮಾತನಾಡಿ, ಪ್ರಜಾಪ್ರಭುತ್ವದ ಯಶಸ್ವಿಗೆ ಪ್ರತಿಯೊಬ್ಬ ಮತದಾರರು ಮತದಾನದಲ್ಲಿ ಭಾಗವಹಿಸಬೇಕು. ವಿಶೇಷವಾಗಿ ಯುವ ಸಮೂಹ, ಮುಖ್ಯ ವಾಹಿನಿಂದ ಹಿಂದುಳಿದ ಸಮೂಹ ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸಬೇಕು. ಯುವ ಸಮೂಹ, ಸುಶಿಕ್ಷಿತ ಸಮೂಹ ಮತದಾನದ ಪ್ರಕ್ರಿಯೆಯಿಂದ ದೂರ ಉಳಿಯುವುದೇ ಮತದಾನದ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ ಎಂದರು.

ಗಮನ ಸೆಳೆದ ನೃತ್ಯ:

ವೋಟಾಟದ ಅಂಗವಾಗಿ ಆಯೋಜಿಸಲಾದ ವೀರಗಾಸೆ ಕುಣಿತ ಎಲ್ಲರ ಗಮನಸೆಳೆಯಿತು. ಅಕ್ಕಿಆಲೂರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಪ್ರದರ್ಶಿಸಿದ ಸಾಂಪ್ರದಾಯಿಕ ಯಕ್ಷಗಾನದ ಚೌಕಟ್ಟಿನಲ್ಲಿ ಮತದಾನದ ಮಹತ್ವ, ಮತಗಟ್ಟೆಯಲ್ಲಿ ಮಹಿಳೆಯರಿಗೆ, ಅಂಗವಿಕಲರಿಗೆ ಕಲ್ಪಿಸಿರುವ ವಿಶೇಷ ಸೌಲಭ್ಯಗಳ ಕುರಿತಂತೆ ಅತ್ಯಂತ ಪರಿಣಾಮಕಾರಿಯಾಗಿ ವೀರಗಾಸೆ ಕುಣಿತದ ಮೂಲಕ ಮನವರಿಕೆ ಮಾಡಿಕೊಟ್ಟರು.

ವೋಟಾಟ:

ಮತದಾನ ಜಾಗೃತಿಗಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ವೋಟಾಟ ಸ್ಪರ್ಧೆಗಳಲ್ಲಿ ಮಹಿಳಾ ಕಬ್ಬಡ್ಡಿ: ರಾಣೆಬೆನ್ನೂರ ಪ್ರಥಮ, ಸವಣೂರ ದ್ವಿತೀಯ ಸ್ಥಾನವನ್ನು ಪಡೆದವು. ಪುರುಷರ ವಿಭಾಗದಲ್ಲಿ ಶಿಗ್ಗಾವಿ –ಪ್ರಥಮ ಹಾಗೂ ಹಾವೇರಿ ದ್ವಿತೀಯ ಸ್ಥಾನ ಪಡೆದುಕೊಂಡವು. ಹಗ್ಗಜಗ್ಗಾಟದಲ್ಲಿ ಹಾವೇರಿ ಪ್ರಥಮ ಹಾಗೂ ಶಿಗ್ಗಾವಿ ದ್ವಿತೀಯ ಸ್ಥಾನ ಪಡೆದುಕೊಂಡವು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ, ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಶಶಿಧರ, ಸಹಕಾರ್ಯದರ್ಶಿ ಜಾಫರ್‌ ಸುತಾರ ಇದ್ದರು.

ಕ್ರಿಕೆಟಿಗ ಎಂ.ಸಿ. ಅಯ್ಯಪ್ಪ ಚಾಲನೆ

ಹಾವೇರಿ: ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ಸಹಯೋಗದಲ್ಲಿ ಮತದಾರರ ಜಾಗೃತಿಗಾಗಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ‘ವೋಟಾಟ –2018, ವೋಟಾಥಾನ್ ಓಟ’ಕ್ಕೆ ರಣಜಿ ಕ್ರಿಕೆಟ್ ಆಟಗಾರ ಎಂ.ಸಿ.ಅಯ್ಯಪ್ಪ ಚಾಲನೆ ನೀಡಿದರು.

ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ವೋಟಾಥಾನ್ ಓಟವು ಜೆ.ಎಚ್. ಪಟೇಲ್ ವೃತ್ತ, ಜೆ.ಪಿ. ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಕ್ರೀಡಾಂಗಣಕ್ಕೆ ಬಂದು ಸೇರಿತು. ಚಂದನ ವಾಹಿನಿಯ ನಿವೃತ್ತ ಮಹಾ ನಿರ್ದೇಶಕ ಮಹೇಶ್ ಜೋಷಿ, ರಣಜಿ ಆಟಗಾರ ಎಂ.ಸಿ.ಅಯ್ಯಪ್ಪ, ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಪಾಲ್ಗೊಂಡಿದ್ದರು.

ಕ್ರೀಡಾಪಟುಗಳು ಮತದಾನ ಜಾಗೃತಿ ಫಲಕಗಳನ್ನು ಹಾಗೂ ಘೋಷಣೆಗಳನ್ನು ಹಾಕುತ್ತಾ ಮತದಾನದ ಕುರಿತು ಜಾಗೃತಿ ಮೂಡಿಸಿದರು.

ಜಿಲ್ಲಾ ಮಟ್ಟದ ವೋಟಾಟ:

ತಾಲ್ಲೂಕು ಮಟ್ಟದಲ್ಲಿ ಆಯ್ಕೆಯಾದ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ವೋಟಾಟ ಕ್ರೀಡಾಕೂಟದಲ್ಲಿ ಪಾಲ್ಗೊಂಡರು. ವಾಲಿಬಾಲ್, ಕಬಡ್ಡಿ, ಹಗ್ಗ–ಜಗ್ಗಾಟ, ಸಂಗೀತ ಕುರ್ಚಿ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.

ಮಹೇಶ್ ಜೋಷಿ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಸ್ವೀಪ್ ಸಮಿತಿ ಜಿಲ್ಲಾ ನೋಡಲ್ ಅಧಿಕಾರಿ ಜಾಫರ್ ಸುತಾರ ಮತ್ತಿತರು ಇದ್ದರು

**

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ವಿಶ್ವದಲ್ಲೇ ಅನನ್ಯವಾದಂತಹ ಆಡಳಿತ ವ್ಯವಸ್ಥೆಯಾಗಿದ್ದು, ಈ ವ್ಯವಸ್ಥೆಯನ್ನು ರೂಪಿಸಲು ಎಲ್ಲ ಪ್ರಜೆಗಳು ಕಾರಣರಾಗಿದ್ದಾರೆ

– ಡಾ.ವೆಂಕಟೇಶ್ ಎಂ.ವಿ, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry